Horoscope Today June 27, 2024: ಗುರುವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

2024 ಜೂನ್ 27 ದಿನ ಭವಿಷ್ಯ: ಗುರುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today June 27, 2024: ಗುರುವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Jun 26, 2024 | 9:49 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಗುರುವಾರ (ಜೂನ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಪ್ರೀತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 14:13 ರಿಂದ 15:50ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 6:08 ರಿಂದ ಬೆಳಿಗ್ಗೆ 7:45ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 9:22 ರಿಂದ 10:59ರ ವರೆಗೆ.

ಮೇಷ ರಾಶಿ :ಇಂದು ನೀವು ಎಲ್ಲ ಕಾರ್ಯವನ್ನೂ ಶಿಸ್ತಿನಿಂದ ಮಾಡಲು ಬಯಸುವಿರಿ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಉತ್ತಮವಾದ ಮಾರ್ಗಾನ್ವೇಷಣೆಯಲ್ಲಿ ಇರಿ. ಸಲ್ಪ ಅಂತರದಲ್ಲಿ ನಿಮಗೆ ಸಿಗಬೇಕಾದ ಆಸ್ತಿಯು ಬೇರೆಯವರ ಕೈ ಸೇರುವುದು. ವಾಹನ ರಿಪೇರಿಗೆ ಹಣವು ಖರ್ಚಾಗಬಹುದು. ಎಂತಹ ಒತ್ತಡದಲ್ಲಿಯೂ ಅದನ್ನು ಸಡಿಲಿಸಿಕೊಳ್ಳುವ ಅರಿವು ನಿಮಗೆ ಗೊತ್ತಿದೆ. ಅವರಿಗೆ ಕೊಟ್ಟುಬಿಡಿ. ಮತ್ತೂ ಅತಿಯಾದ ಅನಗತ್ಯ ಬಯಕೆಯೂ ನಿಮ್ಮ ನಿತ್ಯ ಜೀವನಕ್ಕೆ ಒಳ್ಳೆಯದಲ್ಲ. ಅವಶ್ಯಕತೆಗಳನ್ನು ಪೂರೈಸಿಕೊಳ್ಳ ನಿಮ್ಮ ಹಣದ ವಿನಿಯೋಗವಾಗಲಿ. ಬಂದ ಹಣವು ಮತ್ತಾವುದೋ ರೀತಿಯಲ್ಲಿ ಹೋಗಲಿದೆ. ನಿಮಗೆ ಯಾರಾದರೂ ಏನಾದರೂ ಮಾಡಿಸಿದ್ದಾರೇನೋ ಎನ್ನುವ ಅನುಮಾನವೂ ಕಾಡಬಹುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು. ಇನ್ನೊಬ್ಬರ ಸಲಹೆಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಿರಿ.

ವೃಷಭ ರಾಶಿ :ಇಂದು ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ತಂದೆಯಿಂದ ಬರುವ ಧನವು ವಿಳಂಬವಾಗಿ ಬರಬಹುದು. ಸ್ನೇಹಿತರ ಜೊತೆ ಸೇರಿ ಖರ್ಚನ್ನು ಮಾಡುವಿರಿ. ಯಾರಾದರೂ ನಿಮ್ಮನ್ನು ಅಳೆಯಬಹುದು. ಅದಕ್ಕೆ ಸರಿಯಾಗಿ ಉತ್ತರಿಸಿ. ಕಾಣುವಷ್ಟು ಸುಲಭವಾಗಿ ಯಾವುದೂ ಇಲ್ಲವೆಂಬುದು ಗೊತ್ತಾಗಲಿದೆ. ಅಗೌರವ ಸಿಗುವ ಕಡೆ ಸುಮ್ಮನೆ ಹೋಗಬೇಡಿ. ಆಸ್ತಿಯ ವಿಚಾರದಲ್ಲಿ ಯಾರೋ ಮಧ್ಯಸ್ತಿಕೆ ವಹಿಸಿಕೊಳ್ಳಲು ಬರಬಹುದು. ಕಛೇರಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ಕಷ್ಟವಾದೀತು. ಪರರ ಭಾವನೆಗೆ ಅನಾದರ ತೋರುವುದು ಬೇಡ. ನಿಮ್ಮಷ್ಟಕ್ಕೆ ನೀವು ಹೇಗೋ ಇರುವಿರಿ. ಸಹೋದರರ‌ ನಡುವೆ ಸೌಹಾರ್ದತೆ ಇರಲಿದೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.

ಮಿಥುನ ರಾಶಿ :ಇಂದು ತಂದೆಯು ಯಾವುದೋ ಕಾರ್ಯಕ್ಕೆ ಧನವನ್ನು ನಿರೀಕ್ಷಿಸಬಹುದು. ಕುಟುಂಬದ ಸಮಸ್ಯೆಯನ್ನು ಬಗೆಹರಿಸಲಾಗದೇ ಇಂದು ಕೈಚೆಲ್ಲಿ ಕುಳಿತುಕೊಳ್ಳುವಿರಿ. ಹಣದ ವಿಚಾರದಲ್ಲಿ ನಿಮ್ಮನ್ನು ವಂಚಿಸುವರು. ನಿಮ್ಮ ತಪ್ಪೇ ನಿಮಗೆ ಮುಳ್ಳದೀತು. ಸ್ತ್ರೀಯರಿಗೆ ವಿನಾಕಾರಣ ಅಪವಾದ ಬಂದೀತು. ಹೊಸ ಕೆಲಸದ ಉತ್ಸಾಹದಲ್ಲಿ ಇರುವಿರಿ. ಸಂಪಾದನೆಯು ಅಲ್ಪವೆನಿಸಿ ಆದಾಯದ ಮೂಲವನ್ನು ಬದಲಿಸಬೇಕಾಗಬಹುದು. ನೂತನ ವಾಹನವನ್ನು ಖರೀದಿಸಿದ ಖುಷಿ ಇರಲಿದೆ. ಸಂಗಾತಿಯ ಜೊತೆ ಇಂದು ಕಛೇರಿಯ ವಿಚಾರವನ್ನು ಹಂಚಿಕೊಳ್ಳುವಿರಿ. ಸಹೋದರರ ನಡುವೆ ಮನೆಯ ಬಗ್ಗೆ ಚರ್ಚಿಸುವಿರಿ. ದಿನದ ಕೊನೆಯಲ್ಲಿ ಸಂತೃಪ್ತಿ ಇರಲಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ನಿಮ್ಮ ನೋವಿಗೆ ಯಾರಾದರೂ ಸ್ಪಂದಸುವರು. ಕಷ್ಟಕ್ಕೆ ಸ್ಪಂದಿಸುವ ಮನೋಭಾವವಿರಲಿ. ಸಂಗಾತಿಯ ಖರ್ಚನ್ನು ನಿಭಾಯಿಸುವ ಜವಾಬ್ದಾರಿಯನ್ನು ನೀವೇ ಹೊರಬೇಕಾದೀತು.

ಕಟಕ ರಾಶಿ :ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ. ನಿಮ್ಮ ಸ್ಪಷ್ಟ ನಿರ್ಧಾರವನ್ನು ಮನೆಯಲ್ಲಿ ಹೇಳಿ. ಗೊಂದಲವನ್ನು ಮಾಡಿಕೊಂಡು ಇರಬೇಡಿ. ಬುದ್ಧಿವಂತರೆಂಬ ಅಹಂಕಾರ ಬೇಡ. ಎಡವಿ ಬೀಳುವ ಮೊದಲು ಎಚ್ಚರವಹಿಸಿ. ನಿಮ್ಮ ಪ್ರೇಮ ವಿಚಾರವನ್ನು ಕೇಳಿ ಮನೆಯಲ್ಲಿ ಆಶ್ಚರ್ಯವಾಗಬಹುದು. ಅವರು ಇದನ್ನು ಒಪ್ಪದೇ ಇರಬಹುದು. ಅದಕ್ಕಾಗಿ ನಿಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವಾತಾವರಣ ತಿಳಿಯಾದಮೇಲೆ ಆ ಬಗ್ಗೆ ಚರ್ಚಿಸಿ. ನೀವಿಂದು ಅಪರಿಚಿತರಿಗೆ ಸಹಾಯಮಾಡಲಿದ್ದೀರಿ. ರಾಜಕೀಯ ವ್ಯಕ್ತಿಗಳಿಗೆ ಜನಮನ್ನಣೆಯು ಹೆಚ್ಚಾಗುವುದು. ಅತಿಯಾಗಿ ಯಾವುದು ಸಿಕ್ಕರೂ ಅದು ತೊಂದರೆಯೇ. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆಯನ್ನು ಕಡಿಮೆ ಮಾಡಿಕೊಳ್ಳಿ.

ಸಿಂಹ ರಾಶಿ :ಇಂದು ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದು ಎನಿಸುವುದು. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು. ವಿದೇಶದ ವ್ಯಾಪಾರದ ಕುರಿತು ಚರ್ಚಿಸುವಿರಿ. ನಿಮ್ಮ ಭೂಮಿಯು ಸರ್ಕಾರದ ಪಾಲಾಗಬಹುದು. ಅಧಿಕಾರಿಗಳು ನಿಮ್ಮ ಆದಾಯವನ್ನು, ವೃತ್ತಿಯನ್ನು ವಿಚಾರಿಸಯಾರು. ಸರಿಯಾದ ಮಾಹಿತಿ ನೀಡಿ. ಇನ್ನೊಬ್ಬರ ಬಗ್ಗೆ ನಿಮ್ಮ ಭಾವನೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮಗೆ ಸಂಬಂಧವಿಲ್ಲದ ಕಾರ್ಯವನ್ನೇ ಮಾಡಬೇಕಾಗುವುದು. ಬೆಳಗಿನಿಂದ ಕೆಲಸ ಮಾಡುತ್ತಿದ್ದರೂ ಇನ್ನೂ ಮುಗಿದಿಲ್ಲ ಆತಂಕ ಇರಲಿದೆ. ಏಕಾಂತವನ್ನು ಇಂದು ಬಹಳ‌ ಇಷ್ಟಪಡುವಿರಿ.‌ ಉದ್ಯೋಗದಿಂದ ಬಂದವರೇ ಉದ್ಯಾನವನಕ್ಕೆ ಹೋಗಿ ಧ್ಯಾನಸ್ಥರಾಗುವಿರಿ. ಹಳೆಯ ಸ್ನೇಹಿತರು ಅಕಸ್ಮಾತ್ ಸಿಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಲೆಕ್ಕಪತ್ರದ ವ್ಯವಹಾರದಲ್ಲಿ ಕಲಹವಾಗವುದು. ಯಾರನ್ನೂ ನಿಂದಿಸುವ ಮನೋಭಾವ ಬೇಡ.

ಕನ್ಯಾ ರಾಶಿ :ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಬೇಕಾದ ಪರಿಹಾರವೂ ಅಗತ್ಯ. ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಆಪ್ತರ ಜೊತೆ ಹಣದ ವಿಚಾರವಾಗಿ ಕಲಹವಾಗಲಿದೆ. ಬಂಗಾರವನ್ನು ಪತ್ನಿಗೋಸ್ಕರ ಖರೀದಿಸುವಿರಿ. ಮೋಸಗಾರರು ನಿಮ್ಮ ಜೊತೆಗೇ ಇರುವರು, ಗುರುತಿಸಿಕೊಳ್ಳಿ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳು ಸಹಾಯ ಮಾಡುವರು. ಎಲ್ಲವನ್ನು ದೈವದಿಂದ ಮಾಡಲಾಗದು. ನಿಮ್ಮ ಪ್ರಯತ್ನವೂ ಬೇಕು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ನಿಮ್ಮ ತಪ್ಪಿಗೆ ಮತ್ಯಾರನ್ನೋ ತೋರಿಸುವಿರಿ. ಆರೋಗ್ಯವು ಹದ ತಪ್ಪಬಹುದು. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ. ನಿಮ್ಮ ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು. ಆಸ್ತಿಯ ಬಗ್ಗೆ ಬಿಸಿ ಮಾತು ಕೇಳುವುದು.

ತುಲಾ ರಾಶಿ :ಆಳವನ್ನು ಅರಿಯದೇ ನೀರಿಗೆ ಇಳಿದರೆ ಏನಾಗಬಹುದು? ಎಲ್ಲವೂ ಹಾಗೆಯೇ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಧನಸಂಗ್ರಹದ ವಿಚಾರ ನಿಮ್ಮ ದಾರಿಯು ಸರಿಯಾಗಿದೆ ಎಂದು ನಿಮ್ಮವರಿಗೆ ಅನ್ನಿಸಬಹುದು. ಕಷ್ಟದಿಂದ ಸಂಪಾದಿಸಿದ ಹಣದ ಸ್ವಲ್ಪ ಭಾಗವು ಖರ್ಚಾಗಲಿದೆ. ಹಣವೊಂದೇ ಮುಖ್ಯ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಯಾರಾದರೂ ಕಾನೂನು ಬಾಹಿರ ಕಾರ್ಯಕ್ಕೆ ಪ್ರಲೋಭನೆ ಕೊಡಬಹುದು. ಮಾತಿನ ಬಗ್ಗೆ ಆದಷ್ಟು ಗಮನವಿರಲಿ. ಏನನ್ನಾದರೂ ಹೇಳಿ ಅಪಮಾನಕ್ಕೆ ಸಿಲುಕಬಹುದು. ಮನೆಯಲ್ಲಿಯೇ ಕುಳಿತು ಬೇಸರವಾದೀತು. ಪ್ರತಿಕಾರ ಬುದ್ಧಿಯನ್ನು ಬಿಡುವುದು ಉತ್ತಮ.‌ ನಿಮ್ಮ ಕೆಲಸದ ಕಡೆ ಗಮನ ಹೆಚ್ಚಿರಲಿ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂಬ ಆತುರ ಬೇಡ. ನಿಮ್ಮನ್ನು ದ್ವೇಷಿಸುವ ಜನರನ್ನು ನೀವು ನಿರ್ಲಕ್ಷಿಸಿ ಮುನ್ನಡೆಯಿರಿ. ನಿಮಗೆ ಏನಾದರೂ ಉಪಯೋಗವಿದ್ದರೆ ಮಾತ್ರ ಇಂದು ಬರುವ ಕಾರ್ಯವನ್ನು ಮಾಡಿ.

ವೃಶ್ಚಿಕ ರಾಶಿ :ಇಂದು ನೀವು ಮುಂದೆ ಮಾಡಬೇಕಾದ ಕೆಲವು ಕಾರ್ಯಗಳ ನಿರ್ಧಾರವನ್ನು ಮಾಡುವಿರಿ. ದೂರ ಪ್ರಯಾಣವು ನಿಮಗೆ ಕಷ್ಟವಾಗಬಹುದು. ತಪ್ಪುಗಳು ನಿಮ್ಮ ಸ್ವಭಾವವನ್ನು ತೋರಿಸುವುದು. ನೀವಿಂದು ಕೋಪವನ್ನು ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ.‌ಅಜಾಗರೂಕರಾಗಿರಬೇಡಿ. ಯಾಂತ್ರಿಕತೆಯಿಂದ ನಿಮಗೆ ಬಿಡುಗಡೆ ಬೇಕು ಎನಿಸಬಹುದು. ನಿಮ್ಮನ್ನು ಹತ್ತಾರು ಕಣ್ಣುಗಳು ಗಮನಿಸುತ್ತಿರುತ್ತವೆ. ಸಂಪಾದನೆಗೆ ದಾರಿಗಳು ಅನೇಕವಿದ್ದರೂ ನೀವು ಉತ್ತಮವಾದ ಒಂದನ್ನು ಆರಿಸಿಕೊಂಡು ಮುಂದುವರಿಯಿರಿ. ಒಳ್ಳೆಯದರಲ್ಲಿಯೂ ಕೆಟ್ಟದ್ದನ್ನು ಹುಡುಕುತ್ತ ಇರಬೇಡಿ. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು. ವೇಗದಲ್ಲಿ ಸಿಗುವ ಯಶಸ್ಸೇ ನಿಮಗೆ ತೊಂದರೆ ಕೊಡುವುದು. ಸ್ನೇಹಿತರ ಜೊತೆ ಪ್ರವಾಸ ಹೋಗುವಿರಿ. ನಟರಿಗೆ ಅವಕಾಶವು ಸಿಗಲಿದೆ. ಎಲ್ಲ ಘಟನೆಗಳನ್ನೂ ಒಂದೇ ರೀತಿಯಲ್ಲಿ ನೋಡುವುದು ಸರಿಯಾಗದು.

ಧನು ರಾಶಿ :ಯಾವುದಾದರೂ ಹಣಕಾಸಿನ ಒಪ್ಪಂದವನ್ನು ಮಾಡುವಾಗ ಎಚ್ಚರಿಕೆ ಇರಲಿ. ಭೂಮಿಯ ವ್ಯವಹಾರವು ನಿಮಗೆ ಲಾಭವನ್ನು ತರುವುದು. ಇಂದು ನಿಮ್ಮ ಕೆಲಸದಿಂದ ನಿಮಗೆ ಆಪಮಾನವಾಗಲಿದೆ. ಇದು ನಿಮಗೆ ಬಹಳ ಮುಜುಗರವನ್ನು ತಂದಿದ್ದು, ಸಹಿಸಿಕೊಳ್ಳುವುದು ಕಷ್ಟವಾಗುವುದು. ತಂದೆಯ ವಿಚಾರದಲ್ಲಿ ನಿಮಗೆ ಸಿಟ್ಟಬರಬಹುದು. ಸರಳವಾಗಿ ಸಿಕ್ಕ ಉದ್ಯೋಗವನ್ನು ಬಿಟ್ಟು ನಿಮ್ಮದೇ ಕಲ್ಪನೆಯ ಉದ್ಯೋಗಕ್ಕೆ ಹುಡುಕಾಟ ನಡೆಸುವಿರಿ. ಸರಳ ಜೀವನವು ನಿಮಗೆ ಸಾಕಾಗಿರಬಹುದು. ಇಂದು ಮಾಡುವ ಕೆಲಸವನ್ನು ಮುಂದೂಡಬೇಡಿ. ಅದು ಎಂದೂ ಆಗದೇ ಹೋಗಬಹುದು. ಶತ್ರುವನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನ ಬೇಡ. ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುವಿರಿ‌. ಬೇಕಾದಷ್ಟಕ್ಕೆ ಮಾತ್ರ ಹಣವನ್ನು ಖರ್ಚುಮಾಡಿ. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು.

ಮಕರ ರಾಶಿ :ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಎಲ್ಲವನ್ನೂ ರಾಜಕೀಯ ಬಳಸಿಕೊಳ್ಳುವುದು ಬೇಡ. ನಿಮ್ಮ ಮಾತು ಪ್ರಜೆಗಳ ಮನಸ್ಸಿಗೆ ಮುಟ್ಟಲಿದೆ. ಸಾಲವಾಗಿ ಯಾರಾದರೂ ಹಣವನ್ನು ಕೇಳಿದರೆ ಕೊಡಬೇಡಿ. ಅದು ದುರುಪಯೋಗವಾಗಿ ನಿಮಗೂ ಸಿಗದು. ಸಂಗಾತಿಯಿಂದ ನಿಮಗೆ ಸಂಪತ್ತು ಸಿಗಲಿದೆ. ನೂತನ ವಸ್ತ್ರಗಳನ್ನು ಖರೀದಿಸುವ ಮನಸ್ಸು ಮಾಡುವಿರಿ. ಹೊರಗಡೆ ಸುತ್ತಾಡಲು ಇಚ್ಛಿಸುವಿರಿ. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ‌ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ.

ಕುಂಭ ರಾಶಿ :ಇಂದು ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳಗಳುವಿರಿ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ಸ್ತ್ರೀಯರು ಇಂದು ನಿಮ್ಮ ಸಹಾಯಕ್ಕೆ ಬರುವರು‌. ಆರೋಗ್ಯದ ಮೇಲೆ ಗಮನವಿಟ್ಟು ಇಂದಿನ ಪ್ರಯಾಣವನ್ನು ಮಾಡಲು ಹೋಗಿ. ಇಷ್ಟು ದಿನದ ರಹಸ್ಯವು ಮನೆಯಲ್ಲಿ ಬಹಿರಂಗವಾದೀತು. ಕೇಳಿದರಷ್ಟೇ ಹೇಳಿ, ಯಾರಿಗೂ ಸುಮ್ಮನೇ ಉಪದೇಶವನ್ನು ಮಾಡಬೇಡಿ.‌ ಬಂಧುಗಳು ನಿಮ್ಮನ್ನು ಅಪಹಾಸ್ಯ ಮಾಡಿಯಾರು. ನಿಮಗೆ ಅಸ್ತಿತ್ವ ಎಷ್ಟು ಮುಖ್ಯ ಎನ್ನುವುದನ್ನು ನೀವು ತಿಳಿಸುವ ಅವಶ್ಯಕತೆ ಇಲ್ಲ. ನಿಧಾನವಾಗಿ ಮುಂದಿನ ಜೀವನದ ಜೀವನದ ಬಗ್ಗೆ ಗಮನಹರಿಸಬೇಕು. ತಾಯಿಯ ಮೇಲೆ ಇಂದು ನೀವು ಸಿಟ್ಟಾಗಬಹುದು. ಖುಷಿಯನ್ನು ನೀವು ಹಂಚಿಕೊಳ್ಳುವ ಮನಸ್ಸು ಮಾಡುವಿರಿ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ.

ಮೀನ ರಾಶಿ :ಇಂದು ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ನಿಮ್ಮ ತಮಾಷೆಯಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಇಂದು ನಿಮ್ಮ ಕೆಲಸವು ಬಹಳ ಶ್ರಮದಿಂದ ಕೂಡಿದ್ದು, ಅದಕ್ಕೆ ತಕ್ಕ ಫಲವು ಸಿಗದೇ ಇರಬಹುದು. ಉದ್ಯೋಗದಲ್ಲಿ ನಿಮಗೆ ಕೊಟ್ಟ ಜವಾಬ್ದಾರಿ ಸ್ಥಾನವವನ್ನು ನೀವಾಗಿಯೇ ಬಿಟ್ಟುಕೊಡಲಿದ್ದೀರಿ. ಎಲ್ಲರನ್ನೂ ಸಮಭಾವದಿಂದ ನೋಡಲು ಆಗದಿದ್ದರೂ ಅದು ಅನಿವಾರ್ಯ ಆಗುವುದು. ಅಕಸ್ಮಾತ್ ಆಗಿ ದೊರೆತ ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ವಾತಾವರಣವು ಬದಲಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗು ಸಾಧ್ಯತೆ ಇದೆ. ನಿಮ್ಮ‌ ಸಾಲವು ತೀರಲು ಬಂಧುಗಳು ಸಹಾಯ ಮಾಡುವರು. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಆರೋಗ್ಯದ ರಹಸ್ಯವನ್ನು ಇತರರಿಗೂ ತಿಳಿಸುವಿರಿ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)