
2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮ ರಾಶಿಗೆ 4ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 7ನೇ ಮನೆ, ಅಂದರೆ ಕಳತ್ರ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ಆಯುಷ್ಯ ಸ್ಥಾನ, ಅಂದರೆ 8ನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು, ಪಿತೃ ಸ್ಥಾನ- ಅದೃಷ್ಟ ಸ್ಥಾನ, ಅಂದರೆ 9ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 3ನೇ ಮನೆ ಆಗುವಂಥ ಕುಂಭದಲ್ಲಿಯೂ ಹಾಗೂ ಕೇತು ಗ್ರಹವು 9ನೇ ಮನೆ, ಅಂದರೆ ಸ್ಥಾನದಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು 2ನೇ ಮನೆಯಾದ ಮಕರ ರಾಶಿಗೂ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 8ನೇ ಮನೆಗೂ ಪ್ರವೇಶಿಸುತ್ತದೆ.
ಮೂಲಾ ನಕ್ಷತ್ರದ ನಾಲ್ಕೂ ಪಾದ, ಪೂರ್ವಾಷಾಢ ನಕ್ಷತ್ರದ ನಾಲ್ಕೂ ಪಾದ, ಉತ್ತರಾಷಾಢ ನಕ್ಷತ್ರದ ಒಂದನೇ ಪಾದ ಸೇರಿ ಧನುಸ್ಸು ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಗುರು.
ನಿಮ್ಮ ರಾಶಿಗೆ ಧನ ಸ್ಥಾನ ಹಾಗೂ ಸಾಧನೆ ಸ್ಥಾನದ ಅಧಿಪತಿ ಆಗುವಂಥ ಶನಿ ಗ್ರಹವು ನಾಲ್ಕನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇದನ್ನು ಅರ್ಧಾಷ್ಟಮ ಎಂದು ಸಹ ಹೇಳಲಾಗುತ್ತದೆ. ಅಂದರೆ ಶನೈಶ್ಚರ ಎಂಟನೇ ಮನೆಯಲ್ಲಿ ಸಂಚರಿಸುವಾಗ ಏನು ತೊಂದರೆ- ತಾಪತ್ರಯಗಳನ್ನು ನೀಡುತ್ತಾನೋ ಅದರ ಅರ್ಧದಷ್ಟು ಸಮಸ್ಯೆಗಳನ್ನು ಈ ಸಂಚಾರದ ವೇಳೆ ಕಾಣುವಂತೆ ಆಗುತ್ತದೆ. ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ಬಳಸುವ ಪದಗಳು ಯಾವ ಅಭಿಪ್ರಾಯ ಮೂಡಿಸಬಹುದು ಎಂಬ ಬಗ್ಗೆ ಆಲೋಚಿಸುವುದು ಮುಖ್ಯ. ನಿಮ್ಮ ಮಾತಿನಿಂದಲೇ ಹಣಕಾಸಿನ ಹರಿವಿಗೆ ಸಮಸ್ಯೆ ಮಾಡಿಕೊಳ್ಳುವಂತೆ ಆಗಲಿದೆ. ಈ ಹಿಂದೆ ನೀವು ಮಾಡಿದಂಥ ಸಹಾಯ, ಅದರಿಂದ ಆದಂಥ ಉಪಕಾರದ ಬಗ್ಗೆ ಹೆಚ್ಚಿನ ಸಂಖ್ಯೆಯ ಜನರು ಸೇರಿರುವಂಥ ಕಡೆ ಮಾತನಾಡುವುದಕ್ಕೆ ಹೋಗಬೇಡಿ. ಈ ಅವಧಿಯಲ್ಲಿ ವಿರೋಧಿಗಳ ಸಂಖ್ಯೆ ಹೆಚ್ಚಾಗಲಿದೆ. ತಾಯಿ ಅಥವಾ ತಾಯಿ ಸಮಾನರಾದವರು ನಿಮ್ಮ ಬಗ್ಗೆ ತೆಗೆದುಕೊಳ್ಳುವಂಥ ನಿಲುವಿನಿಂದ ಬೇಸರ ಆಗುತ್ತದೆ. ಆದಾಯದಲ್ಲಿ ಗಣನೀಯ ಇಳಿಕೆ ಆಗಿ, ಅದರಿಂದ ಆತಂಕಕ್ಕೆ ಒಳಗಾಗುವಂತೆ ಆಗಲಿದೆ. ಆರೋಗ್ಯದಲ್ಲಿ ಪದೇಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಾಲಗಾರರಿಂದ ಅವಮಾನಗಳನ್ನು ಎದುರಿಸುವಂತೆ ಆಗಲಿದೆ. ಈ ಅವಧಿಯಲ್ಲಿ ನಿಮ್ಮಿಂದ ಸಾಧ್ಯವಿಲ್ಲದ್ದರ ಬಗ್ಗೆ ಮಾತು ನೀಡುವುದಕ್ಕೆ ಹೋಗಬೇಡಿ. ವಿದ್ಯಾರ್ಥಿಗಳಿಗೆ ಆಲಸ್ಯ ಹೆಚ್ಚಾಗುತ್ತದೆ. ನೀವು ಹೇಳುವ ವಿಚಾರವನ್ನು ಎದುರಿಗೆ ಇರುವವರು ತಪ್ಪಾಗಿ ಗ್ರಹಿಸಿ, ಅವಕಾಶಗಳನ್ನು ಕಳೆದುಕೊಳ್ಳುವಂತೆ ಆಗಲಿದೆ.
ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಏಳನೇ ಮನೆಯಲ್ಲಿ ಗುರು ಸಂಚರಿಸುವಾಗ ವಿವಾಹ ವಯಸ್ಕರು ಮದುವೆಗಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯಲಿದೆ. ವಿದೇಶಗಳಲ್ಲಿ ಉದ್ಯೋಗ- ವ್ಯಾಸಂಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಅದು ಸಾಧ್ಯವಾಗಲಿದೆ. ಪಾರ್ಟನರ್ ಷಿಪ್ ವ್ಯವಹಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ಇಬ್ಬರು ಸ್ನೇಹಿತರು ಸೇರಿ, ಸೈಟು ಖರೀದಿಸಿ, ಅಲ್ಲಿ ಮನೆ ಕಟ್ಟಬೇಕು ಎಂದುಕೊಳ್ಳುತ್ತಾ ಇದ್ದಲ್ಲಿ ಅದು ಸಾಧ್ಯವಾಗಲಿದೆ. ಒಂದು ವೇಳೆ ದಂಪತಿ ಮಧ್ಯೆ, ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ದೀರ್ಘ ಕಾಲದಿಂದ ಬಾಕಿ ಉಳಿದುಹೋಗಿದ್ದ ಒಪ್ಪಂದಗಳು ಸಲೀಸಾಗಿ ಮುಗಿಯಲಿವೆ. ಮನೆ ನಿರ್ಮಾಣ, ಕಟ್ಟಿರುವ ಮನೆ ಖರೀದಿ, ಸ್ಕೂಟರ್- ಕಾರು ಖರೀದಿ, ಮನೆ ರಿನೊವೇಷನ್, ಚಿನ್ನಾಭರಣ ಖರೀದಿ ಹೀಗೆ ನಾನಾ ಶುಭ ವಿಚಾರಗಳು ಈ ಅವಧಿಯಲ್ಲಿ ನಿರೀಕ್ಷೆ ಮಾಡಬಹುದು. ಜೂನ್ ಒಂದರಿಂದ ಅಕ್ಟೋಬರ್ ಮೂವತ್ತೊಂದನೇ ತಾರೀಕಿನವರೆಗೆ ಎಂಟರಲ್ಲಿ ಗುರು ಸಂಚರಿಸುವಾಗ ಆರೋಗ್ಯ, ಆರ್ಥಿಕ ವಿಚಾರ, ಕೋರ್ಟ್- ಕಚೇರಿ ವ್ಯಾಜ್ಯಗಳು ನಿಮ್ಮ ನೆಮ್ಮದಿಯನ್ನು ಹಾಳು ಮಾಡುತ್ತವೆ. ನಿಮಗಿಂತ ಬಲಿಷ್ಠರನ್ನು ಎದುರು ಹಾಕಿಕೊಳ್ಳುವುದರಿಂದ ಕೆಲಸ- ಕಾರ್ಯಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಒಂಬತ್ತನೇ ಮನೆಯಲ್ಲಿ ಗುರು ಸಂಚರಿಸುವಾಗ ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಬಗೆಹರಿಯಲಿವೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಂಗಾತಿ ಕಡೆಯಿಂದ ಹಣಕಾಸಿನ ಅನುಕೂಲಗಳು ಒದಗಿ ಬರುತ್ತವೆ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ಮೂರನೇ ಮನೆಯಲ್ಲಿ ರಾಹು ಸಂಚರಿಸುವಾಗ ಭೂಮಿ ಲಾಭ ಆಗುವ ಯೋಗ ಇರುತ್ತದೆ. ಸೋದರ- ಸೋದರಿಯರ ಜತೆಗೆ ಇರುವಂಥ ಭೂಮಿ ವ್ಯಾಜ್ಯಗಳು ಬಗೆಹರಿಯುತ್ತವೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುತ್ತದೆ. ದಿಢೀರ್ ಎಂದು ಜನಪ್ರಿಯರಾಗುತ್ತೀರಿ. ಅದು ಒಳ್ಳೆಯ ಕಾರಣಕ್ಕೋ ಅಥವಾ ಬೇಡದ ಕಾರಣಕ್ಕೋ ಪ್ರಖ್ಯಾತಿಯನ್ನಂತೂ ಪಡೆದುಕೊಳ್ಳುತ್ತೀರಿ. ಏನೇ ಕೆಲಸ- ಕಾರ್ಯ ಕೈಗೆತ್ತಿಕೊಂಡರೂ ವಿಪರೀತ ಧೈರ್ಯ ಇರುತ್ತದೆ. ಹೂಡಿಕೆಗೆ, ವ್ಯಾಪಾರ- ವ್ಯವಹಾರಗಳಿಗೆ ಹಣಕಾಸು ಹೊಂದಿಸುವುದಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಷೇರು- ಸಟ್ಟಾ ವ್ಯವಹಾರಗಳಲ್ಲಿ ಆಕ್ರಮಣಕಾರಿಯಾಗಿ ಹಣ ಹಾಕುವುದಕ್ಕೆ ಹೋಗಬೇಡಿ. ಒಂಬತ್ತನೇ ಮನೆಯಲ್ಲಿ ಕೇತು ಸಂಚರಿಸುವಾಗ ತಂದೆ- ತಂದೆ ಸಮಾನರಾದವರ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಮತ್ತು ಅಭಿಪ್ರಾಯ ಭೇದ- ಮನಸ್ತಾಪದಿಂದ ಮಾತು ಬಿಡುವಂತೆ ಆಗುತ್ತದೆ. ಬೆಟ್ಟಿಂಗ್ ಆಡುವ ಆಲೋಚನೆ ಸಹ ಮಾಡುವುದಕ್ಕೆ ಹೋಗಬೇಡಿ. ಇದರಿಂದ ದೊಡ್ಡ ಮೊತ್ತದ ಹಣ ಕಳೆದುಕೊಳ್ಳುವಂತೆ ಆಗುತ್ತದೆ.
ಪರಿಹಾರ: ಶನೈಶ್ಚರ ಆರಾಧನೆ ಮಾಡಿಕೊಳ್ಳಿ. ಗಣಪತಿ ದೇವಸ್ಥಾನಕ್ಕೆ ನಿಯಮಿತವಾಗಿ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.