AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 14ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜೀವನದ ಸವಾಲುಗಳನ್ನು ಎದುರಿಸಲು ಈ ಭವಿಷ್ಯ ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Dec 14, 2025 | 12:14 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಈ ದಿನ ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ವೃತ್ತಿಜೀವನದಲ್ಲಿ ತಿರುವು ಬರುವ ಸಾಧ್ಯತೆ ಇದೆ. ಮನೆಗೆ ಸಂಬಂಧಿಸಿದಂತೆ ಬಾಕಿ ಕೆಲಸಗಳನ್ನು ಪೂರ್ಣ ಮಾಡುವುದಕ್ಕೆ ಇದು ಉತ್ತಮ ದಿನ ಆಗಿರುತ್ತದೆ. ಸಮಾರಂಭ- ಗೆಟ್ ಟು ಗೆದರ್ ಗಳಿಗೆ ಸಂಬಂಧಿಕರಿಂದ ಆಹ್ವಾನ ಬರಬಹುದು. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆ ಅವಶ್ಯ; ಹೊಸ ಸಾಲ ತೆಗೆದುಕೊಳ್ಳುವ ನಿರ್ಧಾರ ಸಾಧ್ಯವಾದಷ್ಟೂ ಮಟ್ಟಿಗೆ ಬೇಡ. ಅನಿರೀಕ್ಷಿತವಾಗಿ ವಾಹನದ ರಿಪೇರಿ ಅಥವಾ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ಬರಬಹುದು. ಪ್ರೀತಿಯಲ್ಲಿ ಇರುವವರಿಗೆ ಜತೆಯಾಗಿ ಸಮಯ ಕಳೆಯುವಂಥ ಯೋಗ ಇದ್ದು, ಭವಿಷ್ಯದಲ್ಲಿನ ಯೋಜನೆಗಳ ಬಗ್ಗೆ ತುಂಬ ಗಹನವಾದ ಚರ್ಚೆಯನ್ನು ಮಾಡಲಿದ್ದೀರಿ. ಅದು ಆತ್ಮೀಯವಾದ ಸಂಭಾಷಣೆ ಆಗಲಿದೆ. ವಿದ್ಯಾರ್ಥಿಗಳಿಗೆ ಹಿರಿಯರೊಬ್ಬರಿಂದ ಪರಿಚಯ ಆಗುವ ಹೊಸ ಕಲಿಕಾ ವಿಧಾನ ಉತ್ಸಾಹವನ್ನು ನೀಡುತ್ತದೆ. ಯೋಗ–ಧ್ಯಾನ ಮಾಡುವುದರಿಂದ ಮನೋಬಲ ಹೆಚ್ಚುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮಗೆ ಬಹಳ ದಿನಗಳಿಂದ ಬಾಕಿ ಉಳಿದುಹೋಗಿದ್ದ ಮಾಹಿತಿ ಅಥವಾ ಹಣ ನಿಮ್ಮ ಕಡೆ ಬರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಮಹತ್ವ ಸಿಗುತ್ತದೆ. ಮನೆ ಬದಲಾವಣೆ ಮಾಡಬೇಕು ಎಂದಿರುವವರು ಅಥವಾ ಮನೆಯ ಜಾಗಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ. ನವ ವಿವಾಹಿತರಾಗಿದ್ದಲ್ಲಿ ಸಂಗಾತಿಯೊಂದಿಗೆ ದೂರ ಪ್ರಯಾಣಕ್ಕೆ ತೆರಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ವಿದ್ಯಾರ್ಥಿಗಳು ಏನಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾ ಇದ್ದಲ್ಲಿ, ನೀವು ಮಾಡುವ ಪ್ರಯತ್ನಕ್ಕೆ ಒಳ್ಳೆಯ ಫಲಿತಾಂಶ ಸಿಗುವ ಸೂಚನೆ ದೊರೆಯುತ್ತದೆ. ಆರೋಗ್ಯದಲ್ಲಿ ಕೆಲವು ಏರುಪೇರು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ತಲೆಸುತ್ತು– ಕಣ್ಣಿನ ರೆಪ್ಪೆ ಭಾರವಾದಂತೆ ಆಗುವುದು ಈ ರೀತಿ ತೊಂದರೆ ಆಗಬಹುದು, ಹೂಡಿಕೆ ಬಗ್ಗೆ ಮುಖ್ಯವಾದ ತೀರ್ಮಾನಗಳನ್ನು ಈ ದಿನ ತೆಗೆದುಕೊಳ್ಳದಿರುವುದು ಉತ್ತಮ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನೀವು ದಿನವನ್ನು ಆರಂಭಿಸುವ ರೀತಿಯೇ ಉತ್ಸಾಹಭರಿತವಾಗಿ ಇರುತ್ತದೆ. ನಿಮ್ಮ ಮನಸ್ಸಿಗೆ ಅನಿಸಿದಂಥ ಕೆಲವು ಕೆಲಸಗಳನ್ನು ತಕ್ಷಣವೇ ಪೂರ್ಣ ಮಾಡುವುದಕ್ಕೆ ಆದ್ಯತೆಯನ್ನು ನೀಡಿ. ಆದರೆ ಮುಖ್ಯವಾದ ವಿಚಾರವೊಂದರ ಬಗ್ಗೆ ತಕ್ಷಣವೇ ನಿರ್ಧಾರ ಹೇಳಬೇಕು ಎಂಬ ಒತ್ತಡ ಹೇರಿದಲ್ಲಿ ಅದಕ್ಕಾಗಿ ಸಮಯವನ್ನು ಕೇಳಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಗಳ ಜೊತೆಗೆ ಸಣ್ಣ–ಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಯಾರನ್ನೋ ಸಮಾಧಾನ ಮಾಡಬೇಕು- ಮನವೊಲಿಸುವ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸನ್ನು ವ್ಯರ್ಥವಾಗಿ ವೆಚ್ಚ ಮಾಡುವುದಕ್ಕೆ ಹೋಗಬೇಡಿ. ಕುಟುಂಬದಲ್ಲಿನ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮನಸ್ಸಿಗೆ ತೃಪ್ತಿ- ಸಮಾಧಾನ ದೊರೆಯಲಿದೆ. ಸ್ನೇಹಿತರು ನೀಡುವ ಸಲಹೆಯನ್ನು ಅಳವಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಿ. ಕತ್ತು–ಭುಜದ ನೋವು ಸಣ್ಣ ಪ್ರಮಾಣದಲ್ಲಿಯಾದರೂ ತೊಂದರೆ ಮಾಡಬಹುದು. ವಾಹನ ಓಡಿಸುವಾಗ ಎಚ್ಚರಿಕೆ ಅಗತ್ಯ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಈ ದಿನ ನಿಧಾನವಾಗಿ ಶುರುವಾಯಿತು ಎಂದೆನಿಸಿದರೂ ಮಧ್ಯಾಹ್ನದಿಂದ ನಿಮ್ಮ ಚಟುವಟಿಕೆ ಹೆಚ್ಚಾಗುತ್ತದೆ. ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದ್ದು, ಹೊಸ ಕೆಲಸ- ಕಾರ್ಯಗಳ ಕಡೆಗೆ ಗಮನ ನೀಡಲು ಅವಕಾಶ ದೊರೆಯಲಿದೆ. ಈಗಾಗಲೇ ಕೆಲಸ ಮಾಡಿಕೊಟ್ಟಿದ್ದೀರಿ, ಹಿಂದಿನ ಬಾಕಿ ಬಿಲ್‌ಗಳು ಉಳಿದುಹೋಗಿವೆ ಎಂದಾದಲ್ಲಿ ಅದರ ವಸೂಲಾತಿಗೆ ಏನು ಮಾಡಬೇಕು ಎಂಬ ಬಗ್ಗೆಯೇ ನಿಮ್ಮ ಗಮನ ನೀಡಲಿದ್ದೀರಿ. ಇನ್ನು ನೀವು ಬೇರೆಯವರಿಗೆ ಕೊಡಬೇಕಾದ ಹಣ ಉಳಿದು ಹೋಗಿದ್ದಲ್ಲಿ ಸಮಯಕ್ಕೆ ಪಾವತಿಸುವುದು ಒಳ್ಳೆಯದು. ಕುಟುಂಬದಲ್ಲಿ ಮಕ್ಕಳ ವಿಚಾರವಾಗಿ ಸಂತಸದ ಸುದ್ದಿ ಬರುತ್ತದೆ. ಸಂಗಾತಿಗೆ ಜತೆಗೆ ಚಿಕ್ಕ- ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ ಉಂಟಾದರೂ ಸಂಜೆ ವೇಳೆಗೆ ಸರಿಯಾಗಲಿದೆ. ನಿಮ್ಮ ಹಳೆಯ ಸ್ನೇಹಿತರು ಮತ್ತೆ ಸಂಪರ್ಕಕ್ಕೆ ಬರಲಿದ್ದಾರೆ. ಒಂದು ವೇಳೆ ಗ್ಯಾಜೆಟ್‌ಗಳ ಖರೀದಿ ಮಾಡಬೇಕು ಎಂದಿದ್ದಲ್ಲಿ ಆತುರ ಮಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಒಂದಲ್ಲಾ ಒಂದು ಕಾರಣಕ್ಕಾಗಿ ನೀವು ಮಾಡಬೇಕು ಎಂದುಕೊಂಡ ಕೆಲವು ಕೆಲಸಗಳು ವಿಳಂಬ ಆಗುವ ಸಾಧ್ಯತೆ ಇದೆ. ಹಾಗಂತ ಆತುರ ಮಾಡುವ ಅಗತ್ಯವಿಲ್ಲ. ಹಣಕಾಸು ವಿಷಯದಲ್ಲಿ ಎಲ್ಲರೂ ನೀಡುವ ಸಲಹೆಯನ್ನು ಪಾಲಿಸಬೇಕು ಎಂದೇನೂ ಇಲ್ಲ. ಒಂದು ವೇಳೆ ಅವು ಪ್ರಯೋಜನಕ್ಕೆ ಬಾರದು ಎಂದೆನಿಸಿದಲ್ಲಿ ಕೇಳಿಸಿಕೊಳ್ಳುವ ಅಗತ್ಯವೂ ಇಲ್ಲ. ಮನೆಯಲ್ಲಿ ಇರುವ ಮಹಿಳಾ ಕುಟುಂಬ ಸದಸ್ಯರಿಗೆ ಆರೋಗ್ಯದ ವಿಚಾರಕ್ಕೆ ನೀವು ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ಪ್ರೀತಿಯಲ್ಲಿ ಇದ್ದೀರಿ ಅಂತಾದಲ್ಲಿ ಸಂಗಾತಿಯ ಕಾಳಜಿಯ ಮಾತುಗಳಿಂದ ಸಂತೋಷ ಆಗಲಿದೆ. ಉದ್ಯೋಗದಲ್ಲಿ ಹಿರಿಯ ಸಹೋದ್ಯೋಗಿಗಳ ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳುವ ಯೋಗ ಇದೆ. ವ್ಯಾಪಾರಿಗಳಿಗೆ ಹೊಸ ಒಪ್ಪಂದದ ಚರ್ಚೆ ಯಶಸ್ವಿ ಆಗಲಿದೆ. ಸ್ನೇಹಿತರ ಜೊತೆಗೆ ಅನವಶ್ಯಕ ವಾದ- ವಿವಾದ ಮಾಡಿಕೊಳ್ಳಬೇಡಿ. ಆಹಾರದಲ್ಲಿ ವಿಪರೀತ ಸಿಹಿ– ವಿಪರೀತ ಕಾರದ ಪದಾರ್ಥ ಎರಡೂ ಬೇಡ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತಡ ನಿಮ್ಮ ಮೇಲೆ ಬೀಳಲಿದೆ. ಮೇಲಿಂದ ಮೇಲೆ ಫೋನ್ ಕಾಲ್ ಗಳು, ಕೆಲವು ತಾಂತ್ರಿಕ ಸಮಸ್ಯೆಗಳನ್ನು ನೀವೇ ಬಗೆಹರಿಸಬೇಕು ಎಂದು ಕೇಳಿಕೊಳ್ಳುವುದು ಬಿಡುವಿಲ್ಲದಷ್ಟು ಕೆಲಸಗಳು ಮೈ ಮೇಲೆ ಬರುವಂತೆ ಮಾಡಲಿದೆ. ಹೂಡಿಕೆ ವಿಚಾರಗಳಲ್ಲಿ ದಿಢೀರ್ ನಿರ್ಧಾರಗಳನ್ನು ಮಾಡುವುದಕ್ಕೆ ಹೋಗಬೇಡಿ. ಸ್ವಲ್ಪ ಹಣವನ್ನು ಕೈಯಿಂದ ಕಳೆದುಕೊಳ್ಳುವಂತೆ ಆಗುತ್ತದೆ. ನಿಮಗೆ ಕುಟುಂಬ ಸದಸ್ಯರ ಪೈಕಿ ಯಾರ ಮೇಲಾದರೂ ಆಕ್ಷೇಪ ಇದ್ದಲ್ಲಿ ಅದನ್ನು ನಯವಾಗಿ ಹೇಳಿ ಮುಗಿಸುವುದಕ್ಕೆ ಪ್ರಯತ್ನಿಸಿ. ನಿಮ್ಮ ಕೆಲವು ಸ್ನೇಹಿತರು ಅನಿರೀಕ್ಷಿತವಾಗಿ ದೊಡ್ಡ ಸಹಾಯವನ್ನು ಮಾಡಲಿದ್ದಾರೆ. ಸಂಗಾತಿಯ ಆರೋಗ್ಯ ವಿಚಾರ ಪ್ರಾಮುಖ್ಯವನ್ನು ಪಡೆಯಲಿದೆ. ಆರಂಭದ ಕೆಲವು ಬೆಳವಣಿಗೆಗಳು ಚಿಂತೆಗೆ ಕಾರಣ ಆಗಲಿವೆ. ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್- ಅಸೈನ್ ಮೆಂಟ್ ಗಳನ್ನು ಏಕಾಗ್ರತೆಯಿಂದ ಪೂರ್ಣಗೊಳಿಸುವ ಕಡೆಗೆ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಕಾರ್ಯನಿರ್ವಹಣೆ ಬಗ್ಗೆ ಎಲ್ಲರೂ ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ. ಇದರಿಂದ ನಿಮಗೂ ಸಂತೋಷ- ಸಮಾಧಾನ ದೊರೆಯಲಿದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಪ್ರೋತ್ಸಾಹ ದೊರೆಯಲಿದೆ. ಉದ್ಯೋಗ- ವೃತ್ತಿ- ವ್ಯವಹಾರ- ವ್ಯಾಪಾರಗಳಲ್ಲಿ ನಿಮ್ಮ ಮಾತಿಗೆ ತೂಕ ಸಿಗುವ ದಿನ ಇದಾಗಿರುತ್ತದೆ. ಕುಟುಂಬದಲ್ಲಿ ಮುಖ್ಯವಾಗಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾದ ವಿಷಯಗಳು ಚರ್ಚೆ ಆಗಲಿವೆ. ಅಲರ್ಜಿ– ಚರ್ಮದ ಸಮಸ್ಯೆಗಳು ಪದೇಪದೇ ಕಾಣಿಸುತ್ತಾ ತೊಂದರೆ ನೀಡುತ್ತಾ ಇದ್ದಲ್ಲಿ ಅಂಥವುಗಳಿಗೆ ಸೂಕ್ತ ವೈದ್ಯೋಪಚಾರ ದೊರೆಯುವ ದಿನ ಇದಾಗಿರುತ್ತದೆ. ಹಣಕಾಸು ವಿಚಾರದಲ್ಲಿ ಹರಿವು ಚೆನ್ನಾಗಿರುತ್ತದೆ. ದೂರದ ಸಂಬಂಧಿಗಳಿಂದ ಸಂತಸದ ಸುದ್ದಿ ಬರುವ ಸಾಧ್ಯತೆ ಇದೆ. ಪ್ರೀತಿಯಲ್ಲಿ ಇರುವವರು ಈ ಬಗ್ಗೆ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಿ, ಮದುವೆಗೆ ಒಪ್ಪಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸಂತೋಷ ಹಾಗೂ ಆತ್ಮವಿಶ್ವಾಸ ಎರಡೂ ಹೆಚ್ಚುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಈ ದಿನ ಕೆಲವು ಹೊಸ ಕೆಲಸ- ಕಾರ್ಯಗಳನ್ನು ಆರಂಭ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮಗೆ ಪದೋನ್ನತಿ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ ಎಂಬ ಮಾಹಿತಿ ದೊರೆಯಲಿದೆ. ಅಥವಾ ಮುಖ್ಯವಾದ ಕೆಲವು ಹೊಸ ಜವಾಬ್ದಾರಿಗಳನ್ನು ನಿಮಗೆ ವಹಿಸಲಿದ್ದಾರೆ. ಕುಟುಂಬ ಸದಸ್ಯರ ಪೈಕಿ ಹಿರಿಯರಾದವರ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ಮಾಡುವುದು ಅವಶ್ಯ ಇರುತ್ತದೆ. ನಿಮ್ಮ ಬಳಿ ಇರುವಂಥ ಉಳಿತಾಯ- ಹೂಡಿಕೆ ಹಣವನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡುವುದಕ್ಕೆ ಇದು ಸೂಕ್ತ ದಿನವಾಗಿರುತ್ತದೆ. ತಾವೊಬ್ಬರೇ ಹೋಗುವುದಕ್ಕಿಂತ ಜತೆಯಲ್ಲಿ ನೀವೂ ಬಂದರೆ ಅನುಕೂಲ ಆಗುತ್ತದೆ ಎಂದು ನಿಮ್ಮ ಸ್ನೇಹಿತರು ಹೇಳುವುದರಿಂದ ದಿಢೀರ್ ಪ್ರಯಾಣ ತೆರಳುವಂತೆ ಆಗಲಿದೆ. ಶೀತ- ಜ್ವರದ ಬಾಧೆ ಅಲ್ಪ ಪ್ರಮಾಣದಲ್ಲಿಯಾದರೂ ಕಾಡಲಿದೆ. ಸಂಜೆ ಹೊತ್ತಿಗೆ ಕೆಲವು ಮನರಂಜನಾ ಕಾರ್ಯಕ್ರಮದಲ್ಲಿ ಭಾಗೀ ಆಗುವಂಥ ಯೋಗ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಈ ದಿನ ನಿಮ್ಮ ಸಂಪರ್ಕ ವಲಯ ವಿಸ್ತರಿಸುವಂಥ ಅವಕಾಶಗಳು ಹೆಚ್ಚಾಗಿವೆ. ಹೊಸ ವ್ಯಕ್ತಿಗಳ ಪರಿಚಯವಾಗಿ, ಅವರಿಂದ ದೀರ್ಘಾವಧಿಗೆ ದೊಡ್ಡ ಅನುಕೂಲಗಳು ಆಗುವ ಸುಳಿವು ಸಿಗಲಿದೆ. ನೀವು ತೊಡಗಿಕೊಂಡ ವ್ಯವಹಾರದಲ್ಲಿ ಆಗುವ ಬೆಳವಣಿಗೆಯಿಂದ ನಿಮಲ್ಲಿ ಹೊಸ ಚೈತನ್ಯ ಮೂಡಲಿದೆ. ಭಾವನಾತ್ನಕ ಕ್ಷಣಗಳಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಮಿತವ್ಯಯದ ಕಡೆಗೆ ಹೆವ್ವು ಗಮನ ನೀಡುವುದು ಅಗತ್ಯ. ನಿಮ್ಮ ಯಾವುದೇ ಕೆಲಸಕ್ಕೆ ಸಂಗಾತಿಯಿಂದ ಪ್ರೋತ್ಸಾಹ ದೊರೆಯಲಿದೆ. ವಿಮರ್ಶಾತ್ಮಕವಾಗಿ ನಿಮ್ಮ ಸ್ನೇಹಿತರು ಹೇಳುವಂಥ ಅಭಿಪ್ರಾಯಗಳನ್ನು ಗೌರವಿಸಿ. ಹೀಗೆ ಮಾಡುವುದರಿಂದ ನಿಮ್ಮ ಮುಂದಿನ ಯೋಜನೆಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಎದೆಯುರಿ- ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ಇನ್ನು ಮನೆಯ ಕೆಲಸ- ಕಾರ್ಯಗಳಲ್ಲಿ ಹಲವಾರು ರೀತಿಯಲ್ಲಿ ಸಹಕಾರ ದೊರೆಯಲಿದೆ. ಈ ಹಿಂದೆ ಆದ ಘಟನೆಗಳ ಬಗ್ಗೆ ಪ್ರಸ್ತಾವ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಬೇಸರ ಕಾಡಬಹುದು.

ಲೇಖನ- ಎನ್‌.ಕೆ.ಸ್ವಾತಿ