ಇದೇ ಜನವರಿ 17ನೇ ತಾರೀಕಿಗೆ ಮಕರ ರಾಶಿಯಿಂದ ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶ. 2025ನೇ ಇಸವಿಯ ಮಾರ್ಚ್ ತನಕ ಶನಿ ಸಂಚಾರ ಕುಂಭದಲ್ಲಿ ಆಗಲಿದೆ. ಸಾಮಾನ್ಯವಾಗಿ ಶನಿ ಗ್ರಹವು ಒಂದು ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತದೆ. ಅಂದಹಾಗೆ ಮಕರ, ಕುಂಭ ರಾಶಿಗಳು ಶನಿ ಗ್ರಹದ ಸ್ವಕ್ಷೇತ್ರಗಳು. ತುಲಾ ರಾಶಿಯು ಶನಿಯ ಉಚ್ಚ ಕ್ಷೇತ್ರವಾದರೆ, ಮೇಷ ರಾಶಿ ಶನಿಗೆ ನೀಚ ಕ್ಷೇತ್ರ.
ಕುಂಭ ರಾಶಿಗೆ ಶನಿ ಪ್ರವೇಶ ಆಗುತ್ತಿದ್ದಂತೆ ಕನ್ಯಾ, ಧನುಸ್ಸು, ಮೇಷ ರಾಶಿಯವರು ಉತ್ತಮ ಫಲಗಳನ್ನು ನಿರೀಕ್ಷೆ ಮಾಡಬಹುದು. ಉಳಿದಂತೆ ಮಕರ, ಕುಂಭ, ಮೀನ ರಾಶಿಯವರಿಗೆ ಸಾಡೇಸಾತ್ (ಏಳರಾಟ ಶನಿ), ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ, ತುಲಾ ರಾಶಿಯವರಿಗೆ, ಪಂಚಮ ಶನಿ ಹಾಗೂ ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಮ ಇರುತ್ತದೆ. ಅಂದ ಹಾಗೆ, ಈ ಆರು ರಾಶಿಯವರು ಶನಿಯ ಆರಾಧನೆ ಮಾಡುವುದು ಬಹಳ ಮುಖ್ಯ.
ಯಾರಿಗೆ ಜನ್ಮ ಜಾತಕದಲ್ಲಿ ಶನಿಯು ದುರ್ಬಲ, ನೀಚ ಸ್ಥಿತಿಯಲ್ಲಿ ಇರುತ್ತಾನೋ ಅಂಥವರಿಗೆ ಗೋಚಾರದಲ್ಲೂ ಕ್ರೂರವಾದಾಗ ಪರಿಸ್ಥಿತಿ ಹೆಚ್ಚು ಬಿಗಡಾಯಿಸುತ್ತದೆ. ಶನಿ ಸಂಚಾರ ನಿಮ್ಮ ರಾಶಿಗೆ ಎಷ್ಟನೇ ಮನೆಯಲ್ಲಿ ಆಗಲಿದೆ ಎಂಬುದನ್ನು ಗಮನಿಸಿ.
ಮೇಷದಿಂದ ಮೀನದ ತನಕ ಹನ್ನೆರಡು ರಾಶಿಯವರಿಗೆ ಕುಂಭ ರಾಶಿಯಲ್ಲಿನ ಶನಿ ಸಂಚಾರದ ಫಲ ಏನು ಎಂಬುದನ್ನು ತಿಳಿಯಿರಿ.
ಮೇಷ ರಾಶಿ
ಈ ರಾಶಿಗೆ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಇದರಿಂದ ನಿಮಗೆ ಉತ್ತಮ ಫಲಗಳು ದೊರೆಯುತ್ತವೆ. ಈ ಹಿಂದೆ ಮಾಡಿದ್ದ ಹಣದ ಹೂಡಿಕೆಗಳು ಈಗ ಲಾಭ ನೀಡುತ್ತವೆ. ವ್ಯಾಪಾರದಲ್ಲಿ, ಉದ್ಯಮದಲ್ಲಿ ಹಾಗೂ ವ್ಯವಹಾರಗಳಲ್ಲಿ ಯಶಸ್ಸು ದೊರೆಯಲಿದೆ. ಆದರೆ ಬರಬೇಕಾದ ಲಾಭ ಬರುವುದು ನಿಧಾನ ಆಗಲಿದೆ. ಈ ಅವಧಿಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಈಗ ಸಾಲಗಳು ಇದ್ದಲ್ಲಿ ತೀರಿಸಿಕೊಳ್ಳಿ. ಹಣದ ಹರಿವು ಚೆನ್ನಾಗಿದೆಯಲ್ಲಾ ಎಂದು ಎಲ್ಲವನ್ನೂ ಹೂಡಿಕೆ ಮಾಡೋಣ ಎಂದುಕೊಳ್ಳಬೇಡಿ.
ವೃಷಭ ರಾಶಿ
ಈ ರಾಶಿಗೆ ಹತ್ತನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಬೇಕು. ನಿಮ್ಮ ವಿರುದ್ಧ ದೂರುಗಳನ್ನು ನೀಡುವವರು ಹೆಚ್ಚಾಗುತ್ತಾರೆ. ಕೈ ಕೆಳಗೆ ಕೆಲಸ ಮಾಡುವವರು ನಿಮ್ಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಿ. ಹೊಸ ಕೆಲಸಗಳಿಗೆ ಬದಲಾವಣೆ ಮಾಡದಿರುವುದು ಉತ್ತಮ. ತಂದೆ- ತಾಯಿ ಆರೋಗ್ಯದ ಮೇಲೆ ಹೆಚ್ಚಿನ ಜಾಗ್ರತೆ ವಹಿಸಿ.
ಮಿಥುನ ರಾಶಿ
ಈ ರಾಶಿಗೆ ಒಂಬತ್ತನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ತಂದೆಯವರ ಆರೋಗ್ಯದ ಬಗ್ಗೆ ಜಾಸ್ತಿ ಜಾಗ್ರತೆ ವಹಿಸಿ. ಅದೃಷ್ಟದ ಅಗತ್ಯ ಇರುವ ಹೂಡಿಕೆ ಬೇಡ. ನಿಮ್ಮ ಜವಾಬ್ದಾರಿ ಬೇರೆಯವರಿಗೆ ಕೊಡಬೇಡಿ. ಈ ಅವಧಿಯಲ್ಲಿ ನಿಮ್ಮ ಸ್ನೇಹಿತರ ಬಗ್ಗೆಯೂ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ವರ್ಚಸ್ಸಿಗೆ ಹಾನಿ ಆಗಲಿದೆ. ಸಾರ್ವಜನಿಕರ ಜೀವನದಲ್ಲಿ ಇರುವವರು ಆರೋಪಗಳನ್ನು ಹೊರಬೇಕಾಗುತ್ತದೆ.
ಕರ್ಕಾಟಕ ರಾಶಿ
ಈ ರಾಶಿಗೆ ಎಂಟನೇ ಮನೆಯಲ್ಲಿ ಶನಿಯ ಸಂಚಾರ ಆಗುತ್ತದೆ. ಎಲ್ಲ ರೀತಿಯಲ್ಲೂ ಜಾಗ್ರತೆಯಿಂದ ಇರಬೇಕಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಕೆಲವರಿಗೆ ಅನಾರೋಗ್ಯ ಸಮಸ್ಯೆಗೆ ಏನು ಕಾರಣ ಎಂಬುದನ್ನು ವೈದ್ಯಕೀಯ ಪರೀಕ್ಷೆಗಳ ಮೂಲಕವಾಗಿ ಪತ್ತೆ ಹಚ್ಚುವುದಕ್ಕೆ ಸಾಧ್ಯ ಆಗದಿರಬಹುದು. ಇದರ ಕಾರಣಕ್ಕೆ ಹೆಚ್ಚು ಹಣ ಖರ್ಚಾಗಲಿದೆ. ಇನ್ನು ಶತ್ರುಗಳು- ಮಿತ್ರರು ಎಂಬ ಭೇದ ಇಲ್ಲದೆ ಅವಮಾನಗಳು ಆಗುತ್ತವೆ. ಪಾಪ ಕರ್ಮಾಸಕ್ತಿ ಹೆಚ್ಚಾಗುತ್ತದೆ. ಒಂದು ವೇಳೆ ಇರುವ ಕೆಲಸ ಬಿಟ್ಟಲ್ಲಿ ಅಥವಾ ಕಳೆದುಕೊಂಡಲ್ಲಿ ಮತ್ತೆ ದೊರೆಯುವುದು ಕಷ್ಟ.
ಸಿಂಹ ರಾಶಿ
ಈ ರಾಶಿಗೆ ಏಳನೇ ಮನೆಯಲ್ಲಿ ಶನಿಯ ಸಂಚಾರ ಆಗುತ್ತದೆ. ಸಂಬಂಧಗಳಲ್ಲಿ ಬಿರುಕಿಗೆ ಕಾರಣ ಆಗುತ್ತದೆ. ಕೂತು ಮಾತನಾಡಿ, ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವುದು ಉತ್ತಮ. ಇನ್ನು ಪಾಲುದಾರಿಕೆ ವ್ಯವಹಾರದ ಬಗ್ಗೆ ಆಲೋಚನೆ ಸಹ ಮಾಡಬೇಡಿ. ಈಗಾಗಲೇ ಮಾಡುತ್ತಿದ್ದಲ್ಲಿ ಕಾಗದ- ಪತ್ರಗಳು ಸರಿಯಾಗಿವೆಯೇ ಎಂದು ನೋಡಿಕೊಳ್ಳಿ. ವಿದೇಶ ಪ್ರಯಾಣಗಳು, ವಿದೇಶದಲ್ಲಿ ಕೆಲಸದ ಅವಕಾಶಗಳು ಬಂದವು ಅಂತ ತಕ್ಷಣ ಒಪ್ಪಿಕೊಳ್ಳಬೇಡಿ.
ಕನ್ಯಾ ರಾಶಿ
ಈ ರಾಶಿಗೆ ಆರನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಆದಾಯದಲ್ಲಿ ಹೆಚ್ಚಳ ಆಗಲಿದೆ. ಆದಾಯದ ಮೂಲಗಳನ್ನು ಜಾಸ್ತಿ ಮಾಡಿಕೊಳ್ಳಲಿದ್ದೀರಿ. ಹೊಸ ಹೊಸ ಅವಕಾಶಗಳು ದೊರೆಯಲಿವೆ. ಸದಾ ಜಾಗ್ರತೆಯಿಂದ ಇರುವವರಿಗೆ ಭಯದ ಅಗತ್ಯ ಇಲ್ಲ, ನೆನಪಿನಲ್ಲಿ ಇಟ್ಟುಕೊಳ್ಳಿ. ಶತ್ರುಗಳು ತಾವಾಗಿಯೇ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ, ಶುಲ್ಕಗಳು, ಬ್ಯಾಂಕಿಂಗ್ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ.
ತುಲಾ ರಾಶಿ
ಈ ರಾಶಿಗೆ ಐದನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಪಡೆದ ಸಾಲ, ಕೊಟ್ಟ ಮಾತು ಪೂರೈಸುವ ಕಡೆಗೆ ಗಮನವನ್ನು ನೀಡಿ. ಸಾಲ ತೀರಿಸುವುದಕ್ಕೆ ಪ್ರಯತ್ನಿಸಿ. ನಾನು ಮಾಡಿದ್ದೇ ಸರಿ ಎಂಬ ಧೋರಣೆ ಬಿಟ್ಟುಬಿಡಿ. ನಿಮ್ಮ ಆತ್ಮವಿಶ್ವಾಸ ಕರಗಿ ಹೋಗುವಂತೆ ಆಗುತ್ತದೆ. ಮಕ್ಕಳ ಶಿಕ್ಷಣ, ಭವಿಷ್ಯ, ಮದುವೆ ವಿಚಾರಗಳಲ್ಲಿ ಅಳೆದು- ತೂಗಿ ನಿರ್ಧಾರಗಳನ್ನು ಕೈಗೊಳ್ಳಿ. ಈ ಅವಧಿಯಲ್ಲಿ ಆರೋಗ್ಯ ಸಹ ಕೈ ಕೊಡಬಹುದು. ಅದರಲ್ಲೂ ಹಳೇ ಕಾಯಿಲೆಗಳು ಉಲ್ಬಣ ಆಗಬಹುದು.
ವೃಶ್ಚಿಕ ರಾಶಿ
ಈ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ನಿಮ್ಮ ಮಾತಿನ ಮೂಲಕ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ಆದ್ದರಿಂದ ಮೌನವಾಗಿ ಇರುವುದು ಬಹಳ ಮುಖ್ಯ. ನಿಮಗೆ ಸಂಬಂಧಿಸದ ವಿಷಯದಲ್ಲಿ ಮೂಗು ತೂರಿಸಬೇಡಿ. ನಿಮ್ಮ ತಾಯಿ ಅನಾರೋಗ್ಯವು ಚಿಂತೆಗೆ ಗುರಿ ಮಾಡುತ್ತದೆ. ವಾಹನಗಳನ್ನು ಆಯಾ ಕಾಲಕ್ಕೆ ಸರ್ವೀಸ್ ಮಾಡಿಸಿ. ನಿಮ್ಮ ಕೆಲಸಗಳ ಬಗ್ಗೆ ಟೀಕೆ ಬಂದಾಗ ಸಮರ್ಥನೆಗೆ ನಿಲ್ಲಲೇಬೇಕು ಎಂಬ ಹಠ ಬೇಡ.
ಧನುಸ್ಸು ರಾಶಿ
ಈ ರಾಶಿಗೆ ಸಾಡೇಸಾತ್ ಮುಕ್ತಾಯ ಆಗುತ್ತದೆ. ಮೂರನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಹಣದ ಹರಿವು ಉತ್ತಮಗೊಳ್ಳುತ್ತದೆ. ಇಷ್ಟು ಸಮಯ ಎದುರಿಸಿದ ಅವಮಾನ, ಭಿನ್ನಾಭಿಪ್ರಾಯ ದೂರವಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅವಕಾಶಗಳು ಬಂದಾಗ ಸಮಯ ವ್ಯರ್ಥ ಮಾಡಬೇಡಿ. ಆಸ್ತಿಯನ್ನು ಮಾರಾಟಕ್ಕೆ ಇಟ್ಟವರಿಗೆ ಒಳ್ಳೆ ಬೆಲೆಗೆ ಮಾರಾಟಬ ಆಗುತ್ತದೆ. ಈ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡಿಟ್ಟುಕೊಳ್ಳಿ.
ಮಕರ ರಾಶಿ
ಈ ರಾಶಿಗೆ ಎರಡನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಸಾಂಸಾರಿಕವಾಗಿ ಕಲಹಗಳು, ಮಾನಸಿಕ ಚಿಂತೆಗಳು ಹೆಚ್ಚಾಗುತ್ತವೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಕ್ಕೆ ಪ್ರಯತ್ನಿಸಿ. ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆಗಳು ಇರುವವರು ಜಾಗ್ರತೆ ವಹಿಸಬೇಕು. ಪೂರ್ಣ ಮಾಹಿತಿ ಇಲ್ಲದೆ ಆಡಿದ ಮಾತಿನಿಂದ ಟೀಕೆಗೆ ಗುರಿ ಆಗಲಿದ್ದೀರಿ. ಹೊಸ ವ್ಯಾಪಾರ, ಉದ್ಯಮ ಆರಂಭಿಸುವ ಸಲುವಾಗಿಯೇ ಸಾಲ ಮಾಡದಿರಿ. ಇನ್ನು ಕೆಲಸ ಬದಲಾವಣೆ ಬಗ್ಗೆ ಸದ್ಯಕ್ಕೆ ಆಲೋಚಿಸದಿರುವುದು ಉತ್ತಮ.
ಕುಂಭ ರಾಶಿ
ಜನ್ಮ ರಾಶಿಗೆ ಅಥವಾ ಒಂದನೇ ಮನೆಗೆ ಶನಿ ಸಂಚಾರ ಆಗುತ್ತದೆ. ಖರ್ಚು- ಆದಾಯದ ಲೆಕ್ಕಾಚಾರ ಇಲ್ಲದೆ ಯಾವ ಯೋಜನೆಯಲ್ಲೂ ಮುಂದುವರಿಯಬೇಡಿ.ಈ ಅವಧಿಯಲ್ಲಿ ಮಾನಸಿಕ ಖಿನ್ನತೆ ಕಾಡುತ್ತದೆ. ಯಾವುದೇ ಅನಾರೋಗ್ಯ ಕಾಡಿದಲ್ಲಿ ಆರಂಭದಲ್ಲೇ ಚಿಕಿತ್ಸೆ ಪಡೆಯಿರಿ. ಸಾಲ ಮಾಡದಿರಿ. ವಿದ್ಯಾರ್ಥಿಗಳು ಓದಿನ ಮೇಲೆ ಏಕಾಗ್ರತೆಯನ್ನು ನೀಡಿ, ಉನ್ನತ ಶಿಕ್ಷಣದ ಕೋರ್ಸ್ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಿ.
ಮೀನ ರಾಶಿ
ಈ ರಾಶಿಗೆ ಹನ್ನೆರಡನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಖರ್ಚಿನ ಪ್ರಮಾಣ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತದೆ. ಕುಟುಂಬದವರ ಅನಾರೋಗ್ಯಕ್ಕೆ ಖರ್ಚುಗಳಾಗುತ್ತವೆ. ಹಣಕಾಸು ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು, ಸ್ವಲ್ಪ ನಿರ್ಲಕ್ಷ್ಯವಾದರೂ ಅಸಲಿಗೇ ಮೋಸ ಆಗಬಹುದು. ಸೈಟು, ಜಮೀನು, ಮನೆಗಳ ಖರೀದಿ- ವಿಕ್ರಯ ಏನು ಮಾಡಬೇಕಿದ್ದರೂ ಕಾಗದ- ಪತ್ರಗಳನ್ನು ಸರಿಯಾಗಿ ನೋಡಿಕೊಳ್ಳಿ.
ಲೇಖನ- ಎನ್.ಕೆ. ಸ್ವಾತಿ
Published On - 12:06 pm, Sun, 15 January 23