ಇಪ್ಪತ್ತನೇ ನಕ್ಷತ್ರ ಪೂರ್ವಾಷಾಢಾ. ಇದರ ದೇವತೆ ಜಲ. ಧನೂರಾಶಿಯಲ್ಲಿರುವ ಈ ನಕ್ಷತ್ರ ಮನುಷ್ಯ ಗಣಕ್ಕೆ ಸೇರಿದ್ದು. ಆನೆಯ ದಂತ ಅಥವಾ ಮೊರದ ಆಕೃತಿಯಲ್ಲಿ ಖಗೋಳದಲ್ಲಿ ನಾಲ್ಕು ನಕ್ಷತ್ರಗಳು ಹೊಳೆಯುತ್ತವೆ. ಮಧ್ಯ ನಾಡಿಯಾಗಿರುವ ನಕ್ಷತ್ರದಲ್ಲಿ ಬು ಧ ಭ ಢ ಎನ್ನುವುದು ನಕ್ಷತ್ರಾಕ್ಷರವಾಗಿದೆ. ಇದು ಅನೇಕ ಶುಭ ಕರ್ಮಗಳಿಗೆ ಉಪಯುಕ್ತ. ವಿಶೇಷವಾಗಿ ನೀರಿಗೆ ಸಂಬಂಧಿಸಿದ ಕಾರ್ಯವನ್ನು ಮಾಡಲು ಖ್ಯಾತವಾಗಿದೆ. ಬಾವಿ ತೆಗೆಯಲು ಇದು ಪ್ರಶಸ್ತ ನಕ್ಷತ್ರ. ಹೊಸ ಮನೆಯ ಪ್ರವೇಶಕ್ಕೆ ಯೋಗ್ಯವಾದುದುದು. ಈ ನಕ್ಷತ್ರದವರು ವಜ್ರವನ್ನು ಮಾಲೆಯಲ್ಲಿ ಅಥವಾ ಉಂಗುರವಾಗಿಯೂ ಬಳಸಬಹುದು. ಈ ನಕ್ಷತ್ರದಲ್ಲಿ ಹುಣ್ಣಿಮೆಯಾದರೆ ಆಷಾಢ ಮಾಸವಾಗುತ್ತದೆ.
ಇನ್ನು ಈ ರಾಶಿಯಲ್ಲಿ ಜನಿಸಿದವರು ಅಥವಾ ಜನಿಸುವವರು ಹೇಗಲ್ಲ ಇರಬಹುದು ಎನ್ನುವುದನ್ನು ನೋಡೋಣ.
ಪೂರ್ವಪುಣ್ಯದ ಫಲವನ್ನು ಈ ನಕ್ಷತ್ರದವರು ಅನುಭವಿಸುವರು. ಸುಖ, ನೆಮ್ಮದಿ, ಅಂದುಕೊಂಡ ಕಾರ್ಯದ ಸಫಲತೆ ಇದೆಲ್ಲ ಇರಲಿದೆ. ದೈವ ಇವರ ಕೈಬಿಡದು.
ಇದು ನೀರಿನ ನಕ್ಷತ್ರವಾದ ಕಾರಣ ಅದನ್ನು ಹೆಚ್ಚು ಇಷ್ಟಪಡುವರು. ನೀರನ್ನು ಅಧಿಕವಾಗಿ ಪಾನ ಮಾಡುವರು. ನೀರಿನ ಬಳಕೆ ಅಧಿಕ. ನದಿ, ಸಮುದ್ರ ಸರೋವರದಲ್ಲಿ ಆಸಕ್ತಿ.
ಯಾವುದನ್ನೂ ಹಾಗೆಯೇ ಸ್ವೀಕರಿಸುವುದಿಲ್ಲ, ನಂಬುವುದಿಲ್ಲ ಕೂಡ. ವಿವೇಕವನ್ನು ಬಳಸಿ, ಬೇಕು ಬೇಡಗಳನ್ನು ನಿರ್ಧರಿಸುವರು. ವೈಚಾರಿಕ ಮನೋಭಾವ ಇವರಲ್ಲಿ ಕಾಣಿಸುತ್ತದೆ. ಆದರೆ ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತರಾಗಿ ಕೆಲಸವನ್ನು ಮಾಡುವರು ಅಥವಾ ಮಾಡಿಸಿಕೊಳ್ಳುವರು.
ಈ ನಕ್ಷತ್ರದಲ್ಲಿ ಜನಿಸಿದವರ ವಿಶೇಷತೆ ಆರ್ಥಿಕ ವಿಚಾರದಲ್ಲಿ ಚಾಣಾಕ್ಷ ಮತಿವರು. ಲಾಭ ನಷ್ಟಗಳನ್ನು ಗ್ರಹಿಸಿ, ಎಲ್ಲ ಕಡೆಯಿಂದ ಲಾಭ ಬರುವಂತೆ ಮಾಡುವರು. ಲಾಭದ ಯೋಜನೆಯನ್ನು ಹಾಕಿಕೊಳ್ಳುವರು ಮತ್ತು ಯಶಸ್ಸು ಕಾಣುವರು.
ಕಲೆ, ರಾಜಕೀಯ, ಉದ್ಯೋಗ, ಸಾಹಿತ್ಯ, ಉದ್ಯಮ, ಆರ್ಥಿಕ, ಸಮಾಜಸೇವೆ ಹೀಗೆ ಯಾವುದಾದರೂ ಒಂದು ವಿಭಾಗದಲ್ಲಿ ಜನಪ್ರಿಯರಾಗುವರು.
ಪರಸ್ಪರ ಇಷ್ಟವಾಗುವ ಹಾಗೂ ಆನಂದದಿಂದ ಇರುವ ಸಂಗಾತಿಯ ಪ್ರಾಪ್ತಿಯಾಗಲಿದೆ. ಒಳ್ಳೆಯ ದಾಂಪತ್ಯ ಜೀವನ ಇರುವುದು.
ಇದನ್ನೂ ಓದಿ: ಈ ರಾಶಿಯವರು ವ್ಯಾಪಾರವನ್ನ ವಿಸ್ತರಿಸಲು ಕುಟುಂಬದ ಸಹಾಯ ತೆಗೆದುಕೊಳ್ಳಬಹುದು
ಈ ನಕ್ಷತ್ರದವರು ಎಲ್ಲರಿಂದ ಗೌರವಕ್ಕೆ ಅರ್ಹರಾಗುವರು, ಪರರನ್ನೂ ಗೌರವಿಸುವರು. ನಿತ್ಯವಾದ ಆನಂದದ ಜೊತೆ ಇರಲಿದ್ದಾರೆ. ದುಃಖ ಉಂಟಾಗುವುದು ಕಡಿಮೆ.
ಬೋಧಕರಾಗಿ ಅಥವಾ ಸಲಹಾಗಾರರ ಸ್ಥಾನವನ್ನು ಪಡೆಯುವರು ಮತ್ತು ಉತ್ತಮ ಸಲಹೆಗಳನ್ನು ಕಾಲಕ್ಕೆ ಸರಿಯಾಗಿ ಕೊಡುವರು. ಇವರು ಸಾಂತ್ವನ ಕೇಂದ್ರವನ್ನು ನಡೆಸುವರು.
ಹೀಗೇ ಅನೇಕ ಅಪರೂಪದ ವಿಶೇಷ ಲಕ್ಷಣಗಳಿಂದ ಕೂಡಿದ ನಕ್ಷತ್ರ ಪೂರ್ವಾಷಾಢಾ.
– ಲೋಹಿತ ಹೆಬ್ಬಾರ್ – 8762924271
ಜ್ಯೋತಿಷ್ಯಅ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ