Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 18ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 18ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಸುಪ್ತ ಮನಸ್ಸು ಏನನ್ನು ಸೂಚಿಸುತ್ತದೆ ಹಾಗೂ ತಿಳಿಸುತ್ತದೆ ಎಂಬ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಬೇಕಾಗುತ್ತದೆ. ವಿದೇಶ ಪ್ರಯಾಣಕ್ಕೋ ಅಥವಾ ನೀವಿರುವ ಸ್ಥಳದಿಂದ ದೂರ ಪ್ರದೇಶಕ್ಕೆ ತೆರಳುತ್ತಿದ್ದೀರಿ ಅಂತಾದಲ್ಲಿ ಪ್ರಯಾಣದ ಮೂಲಕ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬ್ಯಾಂಕ್ ನಲ್ಲಿ ಎಫ್ ಡಿ ಎಂದಿಟ್ಟಿದ್ದಲ್ಲಿ ಅದನ್ನು ಮುರಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅದೇ ಸಮಯದಲ್ಲಿ ಹಣವನ್ನು ಉತ್ತಮ ರಿಟರ್ನ್ ಬರುವ ಕಡೆಗೆ ಹೂಡಿಕೆ ಸಹ ಮಾಡುವ ಕಡೆಗೆ ಚಿಂತಿಸಲಿದ್ದೀರಿ. ತೀರಾ ಆಕ್ರಮಣಕಾರಿಯಾಗಿ ಹಣ ಕೂಡಿಡುವ ಬಗ್ಗೆ ಲೆಕ್ಕಾಚಾರ ಹಾಕಿಕೊಳ್ಳಲಿದ್ದೀರಿ. ಸ್ನೇಹಿತರು- ಸಂಬಂಧಿಕರು ನೀಡುವ ಮಾಹಿತಿ ಬಹಳ ಉಪಯುಕ್ತವಾಗಲಿದೆ. ಸೈಟು- ಮನೆ ಖರೀದಿಗಾಗಿ ಬ್ಯಾಂಕ್ ಗಳಿಂದ ಸಾಲಕ್ಕೆ ಪ್ರಯತ್ನ ಪಡುತ್ತಿದ್ದೀರಿ ಅಂತಾದಲ್ಲಿ ಅಂದುಕೊಂಡಿದ್ದಕ್ಕಿಂತ ಸುಲಭವಾಗಿ ನಿಮ್ಮ ಕೆಲಸ- ಕಾರ್ಯಗಳು ಆಗಲಿವೆ. ಭಾವನಾತ್ಮಕವಾಗಿ ದುರ್ಬಲರಾದ ಸಮಯದಲ್ಲಿ ಇತರರಿಗೆ ಮಾತು ನೀಡುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನೀವೇನಾದರೂ ಒಡವೆ, ಸೈಟು ಅಥವಾ ಮನೆ- ವಾಹನವೂ ಸೇರಿದಂತೆ ವಸ್ತುಗಳನ್ನು ಅಡಮಾನ ಮಾಡಿದ್ದೀರಿ ಅಂತಾದಲ್ಲಿ ಅದು ಹರಾಜಿಗೆ ಬರುವಂಥ ಸಾಧ್ಯತೆಗಳಿವೆ. ವಿಪರೀತ ಕೆಲಸದ ಒತ್ತಡ ಬೀಳಲಿದೆ. ಕೆಲವು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇನ್ನು ಕೆಲವು ಅನಿರೀಕ್ಷಿತವಾಗಿ ತಾವಾಗಿಯೇ ಹುಡುಕಿಕೊಂಡು ಬರಲಿವೆ. ಇತರರಿಗೆ ನೀವು ನೀಡಿದಂಥ ಸಲುಗೆ ಬಗ್ಗೆ ನಿಮಗೆ ಬೇಸರ ಆಗಲಿದೆ. ಇತರರ ಸಾಲಕ್ಕೆ ನೀವು ಶ್ಯೂರಿಟಿಯಾಗಿ ನಿಂತಲ್ಲಿ ಅಥವಾ ಜಾಮೀನಾಗಿ ನಿಂತಲ್ಲಿ ಭವಿಷ್ಯದಲ್ಲಿ ಪರಿತಪಿಸಬೇಕಾಗುತ್ತದೆ. ಆ ಕಾರಣದಿಂದಾಗಿ ಯಾವುದಕ್ಕೆ ಹೌದು ಎನ್ನಬೇಕು ಹಾಗೂ ಯಾವುದಕ್ಕೆ ಇಲ್ಲ ಎನ್ನಬೇಕು ಎಂಬ ಬಗ್ಗೆ ಸ್ಪಷ್ಟತೆಯನ್ನು ಇರಿಸಿಕೊಳ್ಳಿ. ಇತರರ ಸಾಮರ್ಥ್ಯವನ್ನು ನಂಬಿಕೊಂಡು, ಯಾವುದೇ ಕೆಲಸಕ್ಕೆ ಹೂ ಅಂದುಬಿಡಬೇಡಿ. ಯಾವ ವಿಚಾರವಾದರೂ ದುಡ್ಡು- ಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಂಡು, ಮುಂದುವರಿಯಿರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಏಕಾಗ್ರತೆ ಈ ದಿನ ಬಹಳ ಮುಖ್ಯವಾಗುತ್ತದೆ. ಒಂದು ಕೆಲಸ ಮಾಡುವಾಗ ಇತರ ಸಂಗತಿಗಳ ಬಗ್ಗೆಯೂ ಯೋಚನೆ ಮಾಡುತ್ತಾ ಮುಂದುವರಿಸಲ್ಲಿ ಏನಾದರೂ ಸಮಸ್ಯೆ ಆಗುತ್ತದೆ. ಇನ್ನು ಇದೇ ವೇಳೆ ಮನೆಯಲ್ಲಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಮುಖ್ಯವಾಗಿ ಮೊಬೈಲ್ ಫೋನ್ ಚಾರ್ಜಿಂಗ್, ಲ್ಯಾಪ್ ಟಾಪ್ ಚಾರ್ಜಿಂಗ್ ಅಥವಾ ಟ್ಯಾಬ್ ಚಾರ್ಜಿಂಗ್ ಹಾಕುತ್ತಿದ್ದೀರಿ ಎಂದಾದಲ್ಲಿ ತುಂಬ ಹೊತ್ತು ಹಾಗೇ ಹಾಕಿಡದಿರುವುದು ಮತ್ತು ಚಾರ್ಜ್ ಗೆ ಹಾಕಿರುವಾಗಲೇ ಬಳಸುವುದನ್ನು ಮಾಡಬೇಡಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವಂಥವರು ವಾಹನಗಳನ್ನು ಏರುವಾಗ ಹಾಗೂ ಇಳಿಯುವಾಗ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಇಷ್ಟು ಸಮಯ ಹವ್ಯಾಸ ಎಂದಿರುವುದು ನಿಮ್ಮ ಪಾಲಿಗೆ ದೊಡ್ಡ ಆದಾಯ ತರುವ ವೃತ್ತಿಯಾಗಿಯೇ ಮಾರ್ಪಡುವಂಥ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಬ್ಯಾಂಕ್ ವ್ಯವಹಾರಗಳನ್ನು ಮಾಡುವಾಗ ಅತಿಯಾದ ನಿರೀಕ್ಷೆ ಇಟ್ಟುಕೊಂಡು ಮುಂದುವರಿದಲ್ಲಿ ಅಂದುಕೊಂಡಂತೆ ಕೆಲಸ ಆಗದೆ ಬೇಸರಕ್ಕೆ ಕಾರಣ ಆಗಲಿದೆ. ಈಗಾಗಲೇ ಮನೆ ನಿರ್ಮಾಣ ಮಾಡುತ್ತಿದ್ದೀರಿ, ಅದಕ್ಕೆ ಹಣಕಾಸಿನ ಸಮಸ್ಯೆ ಆಗಿದೆ ಎಂದಾದಲ್ಲಿ ಅದು ಉಲ್ಬಣ ಆಗಲಿದೆ. ಸ್ನೇಹಿತರು ಅಥವಾ ಸಂಬಂಧಿಕರು ಅಥವಾ ನೀವು ಬಹಳ ಗೌರವಿಸುವಂಥ ವ್ಯಕ್ತಿಗಳು ಒತ್ತಡ ತಂದರು ಎಂಬ ಕಾರಣಕ್ಕಾಗಿ ಯಾವುದೇ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ನಿಮಗೇ ಸರಿ ಎಂದು ಅನಿಸುವ ತನಕ ಯಾವ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳದಿರಿ. ಏಕೆಂದರೆ ಮೇಲುನೋಟಕ್ಕೆ ಬಹಳ ಸುಲಭ ಹಾಗೂ ತುಂಬ ಒಳ್ಳೆ ಫಲಿತಾಂಶ ನೀಡುವಂಥದ್ದು ಎಂದೆನಿಸಿದರೂ ಆ ನಂತರ ಗೊಂದಲಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಹೊಸದಾಗಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದೀರಿ ಅಂತಾದರೂ ಒಂದಕ್ಕೆ ನಾಲ್ಕು ಬಾರಿ ಆಲೋಚನೆಯನ್ನು ಮಾಡಿ, ಆ ಹುದ್ದೆಗೆ ಸೂಕ್ತ ಎಂದು ಸಂಪುರ್ಣ ಖಾತ್ರಿ ಆಗುವ ತನಕ ನಿರ್ಧಾರ ತೆಗೆದುಕೊಳ್ಳಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ನಿರ್ಧಾರಗಳ ಬಗ್ಗೆ ನಂಬಿಕೆ ಇರುವುದು ತಪ್ಪಲ್ಲ. ಆದರೆ ಯಾವುದಾದರೂ ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ವಿನಾಕಾರಣದ ಉದ್ವೇಗ ಯಾವುದೇ ರೀತಿಯಲ್ಲೂ ಸರಿಯಲ್ಲ. ಆದ್ದರಿಂದ ಸಾವಧಾನದಿಂದ ಆಲೋಚನೆ ಮಾಡಿದ ಮೇಲಷ್ಟೇ ಅಭಿಪ್ರಾಯವನ್ನಾಗಲೀ ಹಣಕಾಸಿನ ವಿಚಾರಗಳ ಬಗ್ಗೆ ಆಗಲೀ ಮಾತನ್ನು ಶುರು ಮಾಡಿ. ಸಹೋದ್ಯೋಗಿಗಳನ್ನು ತಮಾಷೆಗಾದರೂ ಸರಿ, ಹೀಗಳೆಯುವುದೋ ಅಥವಾ ಮೂದಲಿಸುವುದೋ ಮಾಡಬೇಡಿ. ಇನ್ನು ಅದೇ ರೀತಿ ಕೆಲಸದ ಸ್ಥಳದಲ್ಲಿ ಈ ಹಿಂದೆ ನಡೆದಿದ್ದ ಘಟನೆಯೊಂದಕ್ಕೆ ಬೇರೆಯದೇ ವ್ಯಾಖ್ಯಾನ ಸಿಕ್ಕಿ, ನಿಮಗೆ ಮುಜುಗರ ಮಾಡುವುದಕ್ಕೆ ಪ್ರಯತ್ನಿಸಬಹುದು. ಇಂಥ ಸನ್ನಿವೇಶದಲ್ಲಿ ಆತುರಕ್ಕೆ ಬಿದ್ದು, ಪ್ರತಿಕ್ರಿಯೆ ನೀಡುವುದಕ್ಕೆ ಹೋಗಬೇಡಿ. ಈಗಿರುವ ಉದ್ಯೋಗ ಬದಲಾವಣೆ ಮಾಡಲೇಬೆಕು ಎಂಬ ಸನ್ನಿವೇಶ ಉದ್ಭವಿಸಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಸವಾಲುಗಳು ಎದುರಾಗಲಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮಗೆ ಸರಿ ಎಂದು ತಿಳಿದಿದ್ದರೂ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ನಿರ್ಧಾರವನ್ನು ಅಳೆದು- ತೂಗಿ ನೋಡುವುದು ಉತ್ತಮ. ಅದರಲ್ಲೂ ನೀವೇ ಸರಿ ಎಂಬ ಧೋರಣೆಯಿಂದ ನಿಷ್ಠುರವಾದಿಗಳಂತೆ ನೇರಾನೇರ ಮಾತನಾಡುವುದಕ್ಕೆ ಹೋಗದಿರಿ. ನೀವು ತರ್ಕಬದ್ಧವಾಗಿಯೇ ಮಾತನಾಡಬಹುದು ಹಾಗೂ ನಿರ್ದಿಷ್ಟ ವ್ಯಕ್ತಿಯದೇ ತಪ್ಪು ಸಹ ಇರಬಹುದು. ಆದರೆ ಆ ಕಾರಣಕ್ಕಾಗಿ ಆತ್ಮವಿಶ್ವಾಸವನ್ನು ಕುಗ್ಗಿಸುವ ರೀತಿಯಲ್ಲಿ ಮಾತನಾಡಬೇಡಿ. ಮನೆಯಲ್ಲಿನ ಹಳೆಯ ವಸ್ತುವೊಂದನ್ನು ಮಾರಾಟ ಮಾಡುತ್ತಿದ್ದೀರಿ ಅಂತಾದಲ್ಲಿ ಸರಿಯಾದ ಬೆಲೆ ಏನು ಎಂಬ ಬಗ್ಗೆ ತಿಳಿದುಕೊಳ್ಳುವುದು ಈ ದಿನ ಬಹಳ ಮುಖ್ಯವಾಗುತ್ತದೆ. ಸಾಮಾಜಿಕವಾಗಿ ಹೆಚ್ಚು ತೊಡಗಿಕೊಳ್ಳುತ್ತೀರಿ ಅಂತಾದಲ್ಲಿ ನಿಮ್ಮ ವರ್ಚಸ್ಸಿಗೆ ತಕ್ಕಂತೆ ನಡೆದುಕೊಳ್ಳುವುದು ಉತ್ತಮ. ಮನೆಯ ಹೊರಗಿನ ಊಟ ಮಾಡುವುದು ಅನಿವಾರ್ಯ ಅಲ್ಲ ಅಂತಾದಲ್ಲಿ ಊಟ ಮನೆಯಲ್ಲೇ ಮಾಡುವುದು ಉತ್ತಮ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಎಲ್ಲರನ್ನೂ ನೀವು ಸಮಾನವಾಗಿ ಕಾಣುತ್ತಿಲ್ಲ ಎಂಬ ಆರೋಪವನ್ನು ಹೊತ್ತಿಕೊಳ್ಳಬೇಕಾಗುತ್ತದೆ. ನೀವು ನೀಡುವ ಯಾವ ಸಮಜಾಯಿಷಿಯನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇತರರು ಇರುವುದಿಲ್ಲ. ಈ ಹಿಂದೆ ಯಾವಾಗಲೋ ನೀವಾಡಿದ ಮಾತು, ನಡೆದುಕೊಂಡ ರೀತಿಯನ್ನು ಉದಾಹರಿಸಿ, ನಿಮ್ಮನ್ನು ನಿಂದಿಸುತ್ತಾರೆ. ನೀವು ಯಾರನ್ನು ನೆರವಿಗೆ ಬರಬಹುದು ಎಂದು ಭಾವಿಸಿರುತ್ತೀರೋ ಅವರು ಸಹ ನಿಮ್ಮ ಸಹಾಯಕ್ಕೆ ಬರುವುದಕ್ಕೆ ಆಗಲ್ಲ. ಸಂಬಂಧಿಕರು ನಿಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ಹೀಗಳೆದರೆ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಉತ್ತಮ. ಹಾಗಲ್ಲದೆ ನೀವು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ಸಾಲ ಮಾಡಿ ವಿಲಾಸಿ ವಸ್ತುಗಳನ್ನು ಖರೀದಿ ಮಾಡಿದಿರೋ ಭಾರೀ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದೀರಿ. ನಿಮಗೆ ಗೊತ್ತಿರುವ ಮಾಹಿತಿ ಅಂತಲೇ ಆದರೂ ಯಾರ ಬಳಿಯಾದರೂ ಚರ್ಚೆ ಮಾಡುವುದಕ್ಕೆ ಮುನ್ನ ಮತ್ತೊಮ್ಮೆ ವಿವರಗಳನ್ನು ಖಾತ್ರಿ ಮಾಡಿಕೊಳ್ಳುವುದು ಉತ್ತಮ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ತಂದೆ- ತಾಯಿಯ ಆಶೀರ್ವಾದ ನಿಮ್ಮ ಮೇಲೆ ಅತ್ಯುತ್ತಮವಾಗಿ ಇರಲಿದೆ. ಬಾಹ್ಯದಿಂದ ನಿಮ್ಮ ಮೇಲೆ ಒತ್ತಡ ಬಂದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದೀರಿ. ಸ್ತ್ರೀಶಕ್ತಿ ಸಂಘಗಳಲ್ಲಿ ಇರುವಂಥವರಿಗೆ ನಾಯಕತ್ವ ವಹಿಸುವಂಥ ಅವಕಾಶಗಳಿವೆ. ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗೆ ಇದೆ. ಕರ್ಟನ್ ಮೊದಲಾದ ವಸ್ತುಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಇರುವಂಥವರು ಅಥವಾ ಈಗಾಗಲೇ ಅದೇ ಕಾರಣಕ್ಕೆ ಹೀಗಳೆದವರಿಗೆ ಸರಿಯಾದ ಉತ್ತರವನ್ನು ಕೆಲಸದ ಮೂಲಕವೇ ನೀಡಲಿದ್ದೀರಿ. ಯಾವುದಾದರೂ ಪ್ರಾಜೆಕ್ಟ್ ಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವ ಕುರಿತಂತೆ ಸೂಚನೆ ನೀಡಲಿದ್ದಾರೆ. ಅದೇ ವೇಳೆ ಅಲ್ಪಾವಧಿಗಾದರೂ ತರಬೇತಿ ಪಡೆದುಕೊಳ್ಳಬೇಕು ಎಂಬ ವಿಚಾರವನ್ನು ಸಹ ಹೇಳಲಿದ್ದಾರೆ. ಜವಾಬ್ದಾರಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಿ. ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮಗೆ ಕೀರ್ತಿ- ಪ್ರತಿಷ್ಠೆಗಳು ಹೆಚ್ಚಾಗುವ ಸಮಯ ಇದು. ನೀವು ಸಮಯಸ್ಫೂರ್ತಿಯಿಂದ ತೆಗೆದುಕೊಂಡ ರಿಸ್ಕ್ ಪರಿಣಾಮವಾಗಿ ಇತರರು ಅಚ್ಚರಿಯಿಂದ ನಿಮ್ಮನ್ನು ನೋಡುವಂತೆ ಆಗುತ್ತದೆ. ಆರ್.ಡಿ., ಎಫ್.ಡಿ., ಇಂಥದ್ದನ್ನು ಮಾಡಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ರಾಜಕಾರಣದಲ್ಲಿ ಇರುವಂಥವರು ಸಮಯಕ್ಕೆ ತೆಗೆದುಕೊಳ್ಳಬೇಕಾದ ನಾಯಕತ್ವವನ್ನು ತುಂಬ ಧೈರ್ಯವಾಗಿ ವಹಿಸಿಕೊಳ್ಳಲಿದ್ದೀರಿ. ತುಂಬ ಕಠಿಣ ಎಂದು ಇತರರು ನಿರ್ಧಾರ ಮಾಡಿಯೇ ಬಿಟ್ಟಿದ್ದ ಸಂಗತಿಗಳನ್ನು ಬಹಳ ಸರಳವಾಗಿ ವಿವರಿಸುವುದಕ್ಕೆ ನೀವು ಯಶಸ್ವಿಯಾಗಲಿದ್ದೀರಿ. ವಿಲಾಸಿ ವಾಹನದ ಯೋಗ ನಿಮಗಿದೆ. ಹೊಸ ಬಟ್ಟೆ, ಆಭರಣ- ಅದರಲ್ಲೂ ಬೆಳ್ಳಿ ಆಭರಣವನ್ನು ಖರೀದಿಸುವಂಥ ಯೋಗ ನಿಮಗಿದೆ. ಇನ್ನು ನಿಮಗೆ ಕೆಲವರು ಉಡುಗೊರೆಗಳನ್ನು ನೀಡುವಂಥ ಸಾಧ್ಯತೆ ಇದೆ. ಗೇಟೆಡ್ ಕಮ್ಯುನಿಟಿಯಲ್ಲಿ ನಿವೇಶನ ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ.
ಲೇಖನ- ಎನ್.ಕೆ.ಸ್ವಾತಿ