ರಾತ್ರಿ ಸೊಗಸಾದ ನಿದ್ದೆ ಮಾಡಿ, ಬೆಳಗ್ಗೆ ಎದ್ದ ಕೂಡಲೇ ಆಹ್ಲಾದಕರವಾದ ಮನಸ್ಥಿತಿಯಿಂದ ಕೆಲಸದಲ್ಲಿ ತೊಡಗಿಕೊಂಡರೆ ಎಷ್ಟೆಲ್ಲ ಸಮಾಧಾನ? ಇಂಗ್ಲಿಷ್ನಲ್ಲಿ ಒಂದು ಮಾತಿದೆ; ಆರಂಭ ಅದ್ಭುತವಾಗಿದ್ದಲ್ಲಿ ನಾವಂದುಕೊಂಡ ಕೆಲಸ ಅದರಲ್ಲೇ ಅರ್ಧ ಮುಗಿದುಹೋಗುತ್ತದೆ ಅಂತ. ನಿಮ್ಮ ಪೈಕಿ ಅದೆಷ್ಟು ಮಂದಿ ವಾಸ್ತು, ಶಕುನ, ಬೆಳಗ್ಗೆ ಎದ್ದ ತಕ್ಷಣದ ಶುಭ ಸೂಚನೆ ನಂಬುತ್ತೀರೋ ಗೊತ್ತಿಲ್ಲ. ಆದರೆ ನಂಬಿದರೆ ಖಂಡಿತಾ ನಷ್ಟವಂತೂ ಆಗಲ್ಲ. ವಾಸ್ತುಶಾಸ್ತ್ರದ ಪ್ರಕಾರವಾಗಿ ಬೆಳಗ್ಗೆ ಎದ್ದ ಕೂಡಲೇ ಕೆಲವು ವಸ್ತುಗಳನ್ನು ನೋಡಬಾರದು ಎನ್ನಲಾಗುತ್ತದೆ. ಒಂದು ವೇಳೆ ಹಾಗೆ ನೋಡಿದರೆ ಇಡೀ ದಿನದ ಕೆಲಸ ಹಾಳು ಅಂತಾರೆ. ಏನು ಆ ರೀತಿಯ ಅಶುಭ ವಸ್ತುಗಳು? ಯಾವುದನ್ನು ಬೆಳಗ್ಗೆ ಎದ್ದ ತಕ್ಷಣ ಕಣ್ಣಿಗೆ ಕಾಣುವಂತೆ ಅಥವಾ ನೋಡುವಂತೆ ಪರಿಸ್ಥಿತಿ ಇಟ್ಟುಕೊಳ್ಳಬಾರದು? ಅದನ್ನು ತಿಳಿಯಬೇಕು ಅಂದರೆ ಮುಂದೆ ಓದಿ.
ಬೆಳಗ್ಗೆ ಎದ್ದ ತಕ್ಷಣ ಮುರಿದಿರುವ ಅಥವಾ ಒಡೆದು ಹೋಗಿರುವ ಪಾತ್ರೆ- ಪಗಡಗಳನ್ನು ನೋಡಬಾರದು. ಅದೇ ರೀತಿಯಲ್ಲಿ ಬಟ್ಟೆ ಅಥವಾ ಮತ್ಯಾವುದರಿಂದಾದರೂ ಮುಚ್ಚಿರುವ ಗಂಟೆಯನ್ನು ನೋಡುವುದು ಸಹ ಶುಭ ಶಕುನ ಅಲ್ಲ. ಒಂದು ವೇಳೆ ಬೆಳಗ್ಗೆ ಎದ್ದ ಕೂಡಲೇ ಇದನ್ನು ನೋಡಿದರೆ ಇಡೀ ದಿನ ಒಂದು ಬಗೆಯಲ್ಲಿ ಮಾನಸಿಕ ಕಿರಿಕಿರಿ ಆಗುತ್ತಲೇ ಇರುತ್ತದೆ. ಜತೆಗೆ ನೆಮ್ಮದಿ ಇರುವುದಿಲ್ಲ. ಇನ್ನೂ ಕೆಲವರಿಗೆ ಎದ್ದ ತಕ್ಷಣವೇ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವ ತವಕ. ಇದು ಕೂಡ ಒಳ್ಳೆಯದಲ್ಲ. ಹೀಗೆ ಮಾಡಿದರೆ ಇಡೀ ದಿನ ಅಹಿತಕರವಾದ ಘಟನೆಗಳೇ ನಡೆಯುತ್ತವೆ. ಆದ್ದರಿಂದ ನಮ್ಮ ಹಿರಿಯರು ಹೇಳಿಕೊಟ್ಟಿರುವಂತೆ, ಎರಡೂ ಕೈ ಜೋಡಿಸಿ, ಆಯಾ ಧರ್ಮದ ನಂಬಿಕೆ ಅನುಸಾರ (ಒಂದು ವೇಳೆ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇದ್ದಲ್ಲಿ ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೆ ಸರಸ್ವತಿ ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ) ಎಂದು ಎರಡೂ ಅಂಗೈ ಅನ್ನು ನೋಡಿಕೊಳ್ಳಬೇಕು.
ಬೆಳಗ್ಗೆ ಎದ್ದ ತಕ್ಷಣ ಸೂಜಿ, ದಾರ, ಎಣ್ಣೆ ಮತ್ತು ಪಾತ್ರೆಗಳು ನೋಡಬಾರದು. ಇವುಗಳು ಶುಭಸೂಚಕ ವಸ್ತುಗಳಲ್ಲ. ಇನ್ನು ಬೆಳಗ್ಗೆ ನಿಮ್ಮ ನೆರಳನ್ನು ನೋಡುವುದು ಸಹಿತ ಒಳ್ಳೆಯದಲ್ಲ. ಒಂದು ವೇಳೆ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ನಿಮ್ಮ ನೆರಳನ್ನು ಪಶ್ಚಿಮದಲ್ಲಿ ನೋಡಿಕೊಂಡರೆ ಇದರಿಂದ ದೋಷ ಉಂಟಾಗುತ್ತದೆ ಎನ್ನಲಾಗಿದೆ. ಅದೇ ರೀತಿ ಗಲೀಜಾದ ಅಥವಾ ಮುಸುರೆ ಪಾತ್ರೆಗಳನ್ನು ಬೆಳಗ್ಗೆ ನೋಡಬಾರದು. ಆದ್ದರಿಂದ ರಾತ್ರಿಯೇ ಪಾತ್ರೆಗಳನ್ನು ತೊಳೆಯುವುದು ಉತ್ತಮ. ಒಂದು ವೇಳೆ ಇಂಥ ಪಾತ್ರೆಗಳನ್ನು ಬೆಳಗ್ಗೆ ನೋಡಿದಲ್ಲಿ ಅಂಥ ಮನೆಯಲ್ಲಿ ಅಥವಾ ಅಂಥ ವ್ಯಕ್ತಿಗಳಿಗೆ ಹಣಕಾಸಿನ ಕೊರತೆ ಉಂಟಾಗುತ್ತದೆ.
ಇದನ್ನೂ ಓದಿ: ಮನೆಗಳಲ್ಲಿ ಆಕಸ್ಮಿಕವಾಗಿ ಕನ್ನಡಿ ಒಡೆದು ಹೋದರೆ ಅನಿಷ್ಟವೇ? ಇದಕ್ಕೆ ಏಳು ವರ್ಷ ದೋಷ ಇದಿಯಾ?
(Here are the in auspicious things you should avoid to see in the morning according to vastu shastra)