Venus transit in Capricorn: ಮಕರ ರಾಶಿಯಲ್ಲಿ ಶುಕ್ರ ಸಂಚಾರ; ಯಾವ್ಯಾವ ರಾಶಿಗೆ ತರಲಿದೆ ಅದೃಷ್ಟ?

ಇದೇ ಫೆಬ್ರವರಿಯ11ನೇ ತಾರೀಕು ಮಕರ ರಾಶಿಗೆ ಶುಕ್ರ ಗ್ರಹ ಪ್ರವೇಶ ಆಗಲಿದೆ. ಅಲ್ಲಿಂದ ಮಾರ್ಚ್ 6ನೇ ತಾರೀಕಿನ ಮಕರ ರಾಶಿಯಲ್ಲೇ ಇರುತ್ತದೆ. ಸದ್ಯಕ್ಕೆ ಮಕರ ರಾಶಿಯಲ್ಲಿ ಶುಕ್ರ ಸಂಚಾರ ಇರುವ ತನಕ ಮೇಷ ರಾಶಿಯಿಂದ ಮೀನ ರಾಶಿಯ ಜಾತಕರಿಗೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Venus transit in Capricorn: ಮಕರ ರಾಶಿಯಲ್ಲಿ ಶುಕ್ರ ಸಂಚಾರ; ಯಾವ್ಯಾವ ರಾಶಿಗೆ ತರಲಿದೆ ಅದೃಷ್ಟ?
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 10, 2024 | 5:06 PM

ಇದೇ ಫೆಬ್ರವರಿಯ11ನೇ ತಾರೀಕು ಮಕರ ರಾಶಿಗೆ ಶುಕ್ರ ಗ್ರಹ ಪ್ರವೇಶ ಆಗಲಿದೆ. ಅಲ್ಲಿಂದ ಮಾರ್ಚ್ 6ನೇ ತಾರೀಕಿನ ಮಕರ ರಾಶಿಯಲ್ಲೇ ಇರುತ್ತದೆ. ಆ ನಂತರ, ಅಂದರೆ ಮಾರ್ಚ್ ಏಳನೇ ತಾರೀಕು ಕುಂಭ ರಾಶಿಗೆ ಶುಕ್ರ ಪ್ರವೇಶ ಆಗುತ್ತದೆ. ಈ ಬಾರಿಯ ವಿಶೇಷ ಏನೆಂದರೆ, ಹತ್ತಿರ ಹತ್ತಿರ ನಲವತ್ತೆಂಟು ಗಂಟೆಗಳ ಕಾಲ ಮಕರ ರಾಶಿಯಲ್ಲಿ ತ್ರಿಗ್ರಹ ಯೋಗ ಏರ್ಪಡುತ್ತದೆ. ಶುಕ್ರ, ರವಿ ಹಾಗೂ ಕುಜ ಈ ಮೂರು ಗ್ರಹ ಮಕರ ರಾಶಿಯಲ್ಲೇ ಇರುತ್ತವೆ. ಅಂದ ಹಾಗೆ ಮಕರ ರಾಶಿಯು ಕುಜನಿಗೆ ಉಚ್ಚ ಕ್ಷೇತ್ರ.

ಉಳಿದಂತೆ ಶುಕ್ರನ ಬಗ್ಗೆ ಸಾಮಾನ್ಯ ಮಾಹಿತಿ ಹೇಳಬೇಕು ಅಂದರೆ, ವೃಷಭ ಹಾಗೂ ತುಲಾ ರಾಶಿಗೆ ಶುಕ್ರ ಅಧಿಪತಿ. ಇನ್ನು ಯಾರ ಜಾತಕದಲ್ಲಿ ಶುಕ್ರ ಮೀನ ರಾಶಿಯಲ್ಲಿ ಇರುತ್ತದೋ ಅಂಥವರಿಗೆ ಶುಕ್ರನ ಅದ್ಭುತ ಅನುಗ್ರಹ ಇರುತ್ತದೆ. ಏಕೆಂದರೆ ಮೀನ ರಾಶಿಯು ಶುಕ್ರನಿಗೆ ಉಚ್ಚ ಸ್ಥಿತಿ ಮತ್ತು ಯಾರ ಜಾತಕದಲ್ಲಿ ಶುಕ್ರ ಕನ್ಯಾ ರಾಶಿಯಲ್ಲಿ ಇರುತ್ತದೋ ಆಗ ನೀಚ ಸ್ಥಿತಿ ಆಗುತ್ತದೆ.

ಶುಕ್ರ ಗ್ರಹ ಅಂದರೆ ಹಣಕಾಸು ವಿಚಾರಗಳನ್ನು ಸೂಚಿಸುತ್ತದೆ. ಇದರ ಜತೆಗೆ ದಾಂಪತ್ಯ, ಅಲಂಕಾರ, ವಿಲಾಸಿ ಮನೆಗಳು, ಸ್ತ್ರೀ ಸಂಬಂಧಿ ಸಂಗತಿಗಳು, ವಿಲಾಸಿ ಕಾರುಗಳು, ಮದುವೆ, ಲೈಂಗಿಕ ವಿಚಾರಗಳು, ಸ್ತ್ರೀ ಸಂಬಂಧ, ಆಕರ್ಷಣಾ ಶಕ್ತಿ, ಸಿನಿಮಾ ರಂಗದಲ್ಲಿನ ಅವಕಾಶ ಹಾಗೂ ಏಳ್ಗೆ, ಷೇರು ಮಾರುಕಟ್ಟೆಯಲ್ಲಿನ ಲಾಭ- ನಷ್ಟ, ವ್ಯವಹಾರ- ವ್ಯಾಪಾರದಲ್ಲಿನ ಯಶಸ್ಸು ಇತ್ಯಾದಿಗಳನ್ನು ಶುಕ್ರ ಗ್ರಹದಿಂದ ಚಿಂತನೆ ಮಾಡಬಹುದು. ಸದ್ಯಕ್ಕೆ ಮಕರ ರಾಶಿಯಲ್ಲಿ ಶುಕ್ರ ಸಂಚಾರ ಇರುವ ತನಕ ಮೇಷ ರಾಶಿಯಿಂದ ಮೀನ ರಾಶಿಯ ಜಾತಕರಿಗೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮೇಷ: ನಿಮಗೆ ಯಾರಾದರೂ ಕೆಲಸ ಮಾಡಿಕೊಡುವುದಾಗಿ ಹೇಳಿ, ಹಣವನ್ನು ಮುಂಚಿತವಾಗಿ ಕೇಳಿದರೆ ಅದನ್ನು ನೀಡದಿರುವುದು ಕ್ಷೇಮ. ಉದ್ಯೋಗ ಸ್ಥಳದಲ್ಲಿ ಸಾಲ ಕೇಳಿದರೆ ನಿಮ್ಮ ಬಳಿ ಇದ್ದರೂ ಕೊಡಬೇಡಿ. ಸಂಗಾತಿಯ ಮೂಲಕವಾಗಿ ಅವರ ಸಂಬಂಧಿಕರು ನಿಮ್ಮ ಬಳಿ ಹಣವನ್ನು ಕೇಳಬಹುದು. ಒಟ್ಟಾರೆ ಹೇಳಬೇಕು ಅಂದರೆ ಮಕರ ರಾಶಿಯಲ್ಲಿನ ಶುಕ್ರ ಸಂಚಾರದ ಅವಧಿಯಲ್ಲಿ ನೀವು ನೀಡಿದ ಹಣವು ವಾಪಸ್ ಸಿಗುವುದು ಕಷ್ಟ. ಇನ್ನು ಕೆಲವು ವ್ಯಕ್ತಿಗಳನ್ನು ಪ್ರಭಾವಿಗಳು ಅಂತ ಭಾವಿಸಿ, ಅವರ ಜತೆಗೆ ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುವುದಕ್ಕೆ ಮುಂದಾಗಬಹುದು. ನೀವು ಬಾಯಿಬಿಟ್ಟು, ಹಣ ಹೂಡಿಕೆ ಮಾಡುವುದಾಗಿ ಹೇಳುವಂಥ ಸಾಧ್ಯತೆಗಳು ಸಹ ಇವೆ. ಬಣ್ಣದ ಮಾತಿಗೋ ಅಥವಾ ಮೇಲುನೋಟಕ್ಕೆ ಕಾಣುವ ವಿಚಾರಗಳಿಗೋ ಪಿಗ್ಗಿ ಬೀಳಬೇಡಿ. ಅಥವಾ ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ಏನಾದರೂ ನಿಮ್ಮ ಬಳಿ ಇರುವ ಹಣವನ್ನು ನೀಡಿದಿರೋ ಅಥವಾ ಇನ್ನೊಂದು ಕಡೆಯಿಂದ ಕಡಿಮೆ ಬಡ್ಡಿಗೆ ಹಣ ತಂದು, ಅದನ್ನು ಹೆಚ್ಚಿನ ಬಡ್ಡಿಯ ಆಸೆಗೆ ನೀಡಿದಿರೋ ಆ ನಂತರ ಅಸಲು ಬಾರದೆ, ಬಡ್ಡಿ ಸಹ ವಸೂಲಾಗದೆ ಪರಿತಪಿಸುವಂತಾಗುತ್ತದೆ. ಮುಖ್ಯವಾಗಿ ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ನಿಮ್ಮನ್ನು ನೀವೇ ಹೊಗಳಿಕೊಳ್ಳುವ ಭರದಲ್ಲಿ ಇತರರು ಬೀಸುವ ಬಲೆಗೆ ಬಲಿ ಆಗಬೇಡಿ. ಈ ಅವಧಿಯಲ್ಲಿ ಸಾಧ್ಯವಾದಷ್ಟೂ ಮೌನವಾಗಿರಿ. ಹಣಕಾಸಿನ ಲೇವಾದೇವಿ ವ್ಯವಹಾರ ಬೇಡವೇ ಬೇಡ.

ವೃಷಭ: ನಿಮ್ಮ ಮಾತು ಬಹಳ ಪ್ರಭಾವಿ ಆಗಲಿದೆ. ಇತರರಿಗೆ ನಿಮ್ಮ ಶಿಫಾರಸಿನ ಮೂಲಕವಾಗಿ ಕೆಲಸ ದೊರೆಯಬಹುದು. ಇನ್ನು ಇದೇ ವೇಳೆ ಇಷ್ಟು ಸಮಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಅದರಲ್ಲಿ ಚೇತರಿಕೆ ಕಾಣುತ್ತಾ ಬರುತ್ತದೆ. ಯಾವ ಸಮಯದಲ್ಲಿ ಹಾಗೂ ಯಾವ ವ್ಯಕ್ತಿಯ ಜತೆಗೆ ಹೇಗೆ ಮಾತನಾಡಿದರೆ ಕೆಲಸಗಳು ಆಗುತ್ತವೆ ಎಂಬುದನ್ನು ತುಂಬ ಚೆನ್ನಾಗಿ ಗ್ರಹಿಸುತ್ತೀರಿ. ತಂದೆ ಅಥವಾ ತಂದೆ ಸಮಾರಾದವರ ಜತೆಗಿನ ನಿಮ್ಮ ಬಾಂಧವ್ಯ ಗಟ್ಟಿ ಆಗಲಿದೆ. ಅವರು ತಮ್ಮ ಬಳಿ ಇರುವಂಥ ಹಣವನ್ನೋ ಅಥವಾ ಸ್ಥಳವನ್ನೋ ನಿಮ್ಮ ಹೆಸರಿಗೆ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಅದೃಷ್ಟ ಮುಖ್ಯ ಪಾತ್ರ ವಹಿಸುವಂಥ ವ್ಯವಹಾರಗಳಲ್ಲಿ ತೊಡಗಿಕೊಂಡವರು ಅದರಲ್ಲಿ ಯಶಸ್ಸು ನಿರೀಕ್ಷೆ ಮಾಡಬಹುದು. ಷೇರು ಮಾರುಕಟ್ಟೆ, ಕಮಾಡಿಟಿ ಮಾರ್ಕೆಟ್, ಚಿನ್ನ- ಬೆಳ್ಳಿಯಲ್ಲಿ ಹೂಡಿಕೆ ಮಾಡಿರುವಂಥವರಿಗೆ ನಿರೀಕ್ಷೆಯನ್ನು ಮೀರಿದ ಲಾಭ ಆಗಬಹುದು. ಶತ್ರುಗಳಿಂದ ಸಮಸ್ಯೆಗಳು ಏನಾದರೂ ಎದುರಿಸುತ್ತಿದ್ದಲ್ಲಿ ಅದರಿಂದ ಹೊರಬರುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ನಿಮಗೆ ಏನೋ ಸಮಸ್ಯೆ ಮಾಡಬೇಕು ಎಂದು ಯಾರೇ ಪ್ರಯತ್ನ ಪಟ್ಟರೂ ಸ್ವತಃ ಅವರೇ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ನಿಮಗೆ ಇನ್ನು ಆ ಹಣ ಬರುವುದೇ ಇಲ್ಲ ಎಂದು ಎನಿಸಿದಂಥದ್ದು ಈ ಸಮಯದಲ್ಲಿ ವಸೂಲಿ ಆಗುವ ಸಾಧ್ಯತೆಗಳಿವೆ.

ಮಿಥುನ: ದೊಡ್ಡ ಮೊತ್ತದ ಹಣವನ್ನೇ ಕಳೆದುಕೊಳ್ಳಬೇಕಾಗಬಹುದು, ಇದಕ್ಕೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಸಿದ್ಧವಾಗಿ ಬಿಡೋಣ ಎಂದು ನೀವು ಅಂದುಕೊಳ್ಳುವ ಹೊತ್ತಿಗೆ ನಿಮಗೆ ಆಗಬಹುದಾದ ನಷ್ಟದ ಪ್ರಮಾಣ ಕಡಿಮೆ ಆಗಬಹುದು. ಅದೇ ರೀತಿ ನಷ್ಟವಾಗ ಬೇಕಾದ ಸ‌್ಥಳದಲ್ಲಿ ಲಾಭ ಆಗಬಹುದು. ಇದಕ್ಕೆ ನಿಮ್ಮ ಈ ಹಿಂದಿನ ವರ್ತನೆಗಳಿಂದ ಸಹಾಯ ಆಗಬಹುದು. ಇನ್ನೊಬ್ಬರಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದಂಥ ಕೆಲಸದ ಕಾರಣದಿಂದಾಗಿ ಇತರರು ನಿಮ್ಮ ಬಗ್ಗೆ ಬಹಳ ಗೌರವ ತೋರಿಸಲಿದ್ದಾರೆ. ಅಷ್ಟೇ ಅಲ್ಲ, ನಿಮ್ಮ ಪರವಾಗಿ ಒಳ್ಳೆಯ ಮಾತುಗಳನ್ನು ಆಡಲಿದ್ದಾರೆ. ವಿದೇಶಗಳಿಂದ ಮುಖ್ಯವಾದ ಫಲಿತಾಂಶ ಅಥವಾ ವಾರ್ತೆಯನ್ನು ನಿರೀಕ್ಷೆ ಮಾಡುತ್ತಿದ್ದೀರಿ ಎಂದಾದಲ್ಲಿ ಅದು ಕೇಳಿಬರಲಿದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಬಹಳ ಉತ್ತಮವಾದ ಸಮಯ ಇದು. ನಿಮ್ಮ ಪ್ರೀತಿಪಾತ್ರರಿಗೆ ಅಂತಲೇ ವಾಹನಗಳನ್ನು ಖರೀದಿಸುವ ಯೋಗ ಇದೆ. ಅದನ್ನು ಅವರಿಗೆ ಉಡುಗೊರೆಯಾಗಿ ನೀಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇನ್ನು ಯಾರಿಗೆ ಹೆಣ್ಣುಮಕ್ಕಳಿದ್ದು, ಅವರ ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದರೆ ಮನಸ್ಸಿಗೆ ಒಪ್ಪುವಂಥ ಸಂಬಂಧ ಹುಡುಕಿಕೊಂಡು ಬರಲಿದೆ. ಈ ಹಿಂದೆ ನೋಡಿದ್ದಿರಿ, ಆ ನಂತರ ಆ ಬಗ್ಗೆ ಮಾತು ಮುಂದುವರಿದಿಲ್ಲ ಎಂದಾದರೆ ಈಗ ಆ ಸಂಬಂಧ ಮತ್ತೆ ಬಂದು, ಮದುವೆ ನಿಕ್ಕಿ ಆಗಬಹುದು.

ಕರ್ಕಾಟಕ: ನಿಮ್ಮ ರಾಶಿಯವರಿಗೆ ಸದ್ಯಕ್ಕೆ ಗೋಚಾರ ರೀತಿಯಾಗಿ ಫಲ ಚೆನ್ನಾಗಿಲ್ಲ. ಇದರ ಜತೆಗೆ ಈ ಶುಕ್ರ ಸಂಚಾರ ಕೂಡ ಅಷ್ಟೇನೂ ಉತ್ತಮವಾಗಿಲ್ಲ. ನಿಮಗೆ ಗೊತ್ತಿರಬೇಕಾದದ್ದು ಏನೆಂದರೆ, ಮಕರ ರಾಶಿಯಲ್ಲಿ ಶುಕ್ರ ಸಂಚರಿಸುವಾಗ ಅನಾರೋಗ್ಯ ಸಮಸ್ಯೆಗಳು ತೀವ್ರವಾಗಲಿವೆ. ತುರಿಕೆ, ಕಜ್ಜಿ, ಗುಪ್ತಾಂಗದಲ್ಲಿ ತೊಂದರೆಗಳು, ಉರಿಮೂತ್ರ ಮೊದಲಾದ ಸಮಸ್ಯೆಗಳು ಕಾಡುವ ಸಾಧ್ಯತೆಗಳಿವೆ. ಆಸ್ತಿ ಖರೀದಿ ಅಥವಾ ಮಾರಾಟದಲ್ಲಿ ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಈಗಾಗಲೇ ಅಡ್ವಾನ್ಸ್ ಪಡೆದು ಆಗಿದೆ, ಆದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಕಾರಣಕ್ಕೆ ಮಾತನ್ನು ಮುರಿಯುವುದಕ್ಕೆ ಪ್ರಯತ್ನಿಸಿದರೆ ಕೋರ್ಟ್- ಕಚೇರಿಗಳಿಗೆ ಅಲೆದಾಡುವಂತಾಗುತ್ತದೆ. ಇದರ ಜತೆಗೆ ಶತ್ರುಗಳು ಹೆಚ್ಚಾಗುತ್ತಾರೆ. ನಿಮಗೆ ಬರಬೇಕಾದ ವೇತನ ಹೆಚ್ಚಳ, ಬಡ್ತಿ ಮೊದಲಾದವುಗಳಿಗೆ ನಾನಾ ಅಡೆತಡೆಗಳು ಎದುರಾಗಬಹುದು. ಪ್ರೀತಿ- ಪ್ರೇಮದಲ್ಲಿ ಯಾರಿದ್ದೀರಿ ಅಂಥವರಿಗೆ ಸಣ್ಣ- ಪುಟ್ಟ ವಿಚಾರಗಳಿಗೂ ಸಂದೇಹ- ಅನುಮಾನಗಳು ಕಾಣಿಸಿಕೊಳ್ಳುತ್ತವೆ. ಈಗಾಗಲೇ ನಿಶ್ಚಿತಾರ್ಥ ಆಗಿ, ಇನ್ನೇನು ಮದುವೆಗೆ ಕೆಲವೇ ದಿನ ಇದೆ ಎಂಬಂಥ ಸನ್ನಿವೇಶದಲ್ಲಿ ಇರುವವರಿಗೆ ಹಣಕಾಸು ವಿಚಾರದಲ್ಲಿ ಮಾತಿಗೆ ಮಾತು ಆಗಿ, ಅಥವಾ ಚಿನ್ನ- ಬೆಳ್ಳಿ ಆಭರಣಗಳ ಬಗ್ಗೆ ವೈಮನಸ್ಯ ಬೆಳೆದು, ಮದುವೆ ಮುರಿದುಕೊಳ್ಳುವ ತನಕ ಹೋಗಬಹುದು, ಜಾಗ್ರತೆ.

ಸಿಂಹ: ಉದ್ಯೋಗ ಸ್ಥಳದಲ್ಲಿ ಸ್ತ್ರೀಯರ ಜತೆಗೆ ಮಾತನಾಡುವಾಗ ಜಾಗ್ರತೆಯಿಂದ ಇರಬೇಕು. ನಿಮ್ಮ ಹುದ್ದೆಯ ಕಾರಣಕ್ಕೋ ಅಥವಾ ಪ್ರಭಾವಿ ಎಂಬ ಗುಂಗಿನಲ್ಲೋ ಒಂದು ವೇಳೆ ಅವಮಾನಿಸುವ ಧಾಟಿಯಲ್ಲಿ ಸ್ತ್ರೀಯರ ಜತೆಗೆ ಮಾತನಾಡಿದರೋ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ನಿಮ್ಮ ಹುದ್ದೆಯನ್ನೇ ಕಳೆದುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ನಿಮ್ಮ ಸಾಮರ್ಥ್ಯವನ್ನು ಎಷ್ಟು ದೊಡ್ಡ ಮಟ್ಟದಲ್ಲಿಯಾದರೂ ಭಾವಿಸಿರಬಹುದು. ಆದರೆ ಮಕರದಲ್ಲಿ ಶುಕ್ರ ಸಂಚರಿಸುವ ಅವಧಿ ಭಾರೀ ಸವಾಲಿನಿಂದ ಕೂಡಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವಂಥವರು, ಸಾರ್ವಜನಿಕ ರಂಗದಲ್ಲಿ ಕಾರ್ಯ ನಿರ್ವಹಿಸುವಂಥವರು, ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುವಂಥವರಿಗೆ ಮಾತಿನಿಂದಲೇ ಸಮಸ್ಯೆಗಳು ಎದುರಾಗಿ, ನಿಮ್ಮ ಸ್ಥಾನಕ್ಕೆ ಚ್ಯುತಿ ಬರುವಂಥ ಯೋಗ ಇದೆ. ಉದ್ಯೋಗ ಸ್ಥಳದಲ್ಲಿ ನೀವು ಈಗ ಕೆಲಸ ಮಾಡುತ್ತಿರುವ ವಿಭಾಗದಿಂದ ಏನೇನೂ ಪ್ರಾಮುಖ್ಯ ಇಲ್ಲದಂಥ ವಿಭಾಗಕ್ಕೆ ವರ್ಗಾವಣೆ ಆಗಿಬಿಡಬಹುದು. ಇನ್ನು ಮನೆಯ ಹಿರಿಯರಿಗೆ ಗೌರವಕ್ಕೆ ಚ್ಯುತಿ ಆಗಬಹುದು. ವಿದ್ಯಾರ್ಥಿಗಳಿಗೆ, ಕ್ರೀಡಾ ಪಟುಗಳಿಗೆ ಇಷ್ಟು ಸಮಯ ಕಾಪಾಡಿಕೊಂಡು ಬಂದಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವುದೇ ಕಷ್ಟ ಎಂಬಂತಾಗುತ್ತದೆ. ಆದ್ದರಿಂದ ಯಾವ ಕೆಲಸವೇ ಆಗಲಿ ಪೂರ್ತಿಯಾಗಿ ಮುಗಿಯುವ ತನಕ ಆ ಬಗ್ಗೆ ಹೇಳಿಕೊಂಡು ಬರಬೇಡಿ.

ಕನ್ಯಾ: ನಿಮ್ಮದು ಮೂಲತಃ ಚುರುಕು ಸ್ವಭಾವ. ಆಯಾ ಸನ್ನಿವೇಶಕ್ಕೆ ಹೇಗಿರಬೇಕು ಎಂಬುದನ್ನು ಬಹಳ ಬೇಗ ತೀರ್ಮಾನ ಮಾಡಿಕೊಂಡು ಬಿಡುತ್ತೀರಿ. ಈ ಅವಧಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಚುರುಕುತನಕ್ಕಿಂತ ಹೆಚ್ಚು ನಿಮ್ಮಲ್ಲಿ ಕಂಡುಬರಲಿದೆ. ಆಗಬೇಕಾದ ಕೆಲಸಗಳನ್ನು ಬಹಳ ಬೇಗ ಮಾಡಿಕೊಂಡು ಬರುತ್ತೀರಿ. ಇನ್ನು ಮಾತು ಪ್ರಧಾನವಾದ ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ಭಾರೀ ಆದಾಯ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು. ವಕೀಲರಾಗಿದ್ದು, ಸಂಧಾನ- ರಾಜೀ ಮಾಡಿಸುವಂಥ ವಿಭಾಗದಲ್ಲೋ ಅಥವಾ ಈ ಸಮಯಕ್ಕೆ ವ್ಯಾಜ್ಯ ಪರಿಹಾರಕ್ಕೆ ಅಂತ ಮುಂದಾದಲ್ಲಿ ಯಶಸ್ಸು ಕಾಣಲಿದ್ದೀರಿ. ಹಾಗೂ ಆ ಯಶಸ್ಸಿನ ಮೂಲಕವಾಗಿ ಆದಾಯ ಕೂಡ ಜಾಸ್ತಿ ಆಗಲಿದೆ. ನೀವು ಕಾರ್ಯ ನಿರ್ವಹಿಸುವ ಸಂಸ್ಥೆಯಲ್ಲಿ ಪಾರ್ಟನರ್ ಮಾಡಿಕೊಳ್ಳುವುದಕ್ಕೆ ಪ್ರಸ್ತಾವವನ್ನು ಮುಂದಿಡಬಹುದು. ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತಾದಲ್ಲಿ ಹೊಸ ಪ್ತಾಜೆಕ್ಟ್ ಗಳು ದೊರೆಯುವ ಅವಕಾಶಗಳು ಹೆಚ್ಚಾಗಿವೆ. ನಿಮ್ಮ ಕುಟುಂಬದವರು ಪಿತ್ರಾರ್ಜಿತ ಆಸ್ತಿ ವ್ಯವಹಾರಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿಮಗೆ ಪವರ್ ಆಫ್ ಅಟಾರ್ನಿಯನ್ನು ನೀಡಿ, ಆ ಜವಾಬ್ದಾರಿಯನ್ನು ನಿರ್ವಹಿಸುವ ಕಾರಣಕ್ಕೆ ಅಂತಲೇ ಇಂತಿಷ್ಟು ಮೊತ್ತ ನಿಮಗೆ ನೀಡುವ ಸಾಧ್ಯತೆಗಳಿವೆ. ಸಾಮಾಜಿಕವಾಗಿ ಬಹಳ ಚಟುವಟಿಕೆಯಿಂದ ಇರುತ್ತೀರಿ. ಇದರಿಂದ ಸನ್ಮಾನಗಳು ಆಗುವಂಥ ಯೋಗ ಇದೆ.

ತುಲಾ: ನಿಮ್ಮ ಆಪ್ತರಿಗೆ ಅಸೌಖ್ಯ, ಅಸ್ವಾಸ್ಥ್ಯ ಕಾಡುತ್ತಾ ಇದ್ದು, ಅದು ನಿಮ್ಮ ಚಿಂತೆಗೆ ಕಾರಣವಾಗಿದ್ದಲ್ಲಿ ಅವರು ಚೇತರಿಕೆ ಕಾಣಲಿದ್ದಾರೆ. ಒಂದು ವೇಳೆ ನಿಮ್ಮ ಸಂಗಾತಿಗೋ ಅಥವಾ ಮಕ್ಕಳಿಗೋ ಅನಾರೋಗ್ಯ ಕಾಡುತ್ತಿದ್ದು, ಸೂಕ್ತ ವೈದ್ಯೋಪಚಾರ ಆಗುತ್ತಿಲ್ಲ ಎಂದೇನಾದರೂ ನಿಮ್ಮ ಮನಸ್ಸಲ್ಲಿ ಆತಂಕ ಕಾಡುತ್ತಿದ್ದರೆ ಅದು ಕೂಡ ನಿವಾರಣೆ ಆಗಲಿದೆ. ವಿದೇಶಗಳಲ್ಲಿ ಇರುವಂಥ ಬಂಧುಗಳು ನಿಮಗೆ ಆಹ್ವಾನ ಬರಬಹುದು. ಅಥವಾ ಈ ಸಮಯದಲ್ಲಿ ತವರಿಗೆ ಭೇಟಿ ನೀಡಿ, ಬಂಧು- ಮಿತ್ರ ಜತೆಗೆ ಸಂತೋಷವಾಗಿ ಸಮಯ ಕಳೆಯುವಂಥ ಯೋಗ ಸಹ ನಿಮ್ಮ ಪಾಲಿಗೆ ಇದೆ. ನಿಮ್ಮ ಆಪ್ತರಿಗೆ ಉತ್ತಮ ಹುದ್ದೆ, ಸ್ಥಾನ- ಮಾನಗಳು ದೊರೆಯಲಿದ್ದು, ಅವರ ಮೂಲಕ ನಿಮಗೆ ಕೆಲವು ಅನುಕೂಲಗಳು ಆಗಲಿವೆ. ಈಗಾಗಲೇ ಹಣ ನೀಡಿದ್ದು, ಆಸ್ತಿ ವ್ಯವಹಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದಕ್ಕೆ ಅಡೆತಡೆಗಳು ಎದುರಾಗುತ್ತಿದೆ ಎಂದಿದ್ದಲ್ಲಿ ಅಂಥವರಿಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಜನಬಲ- ಧನಬಲ ಎರಡೂ ಒದಗಿ ಬರಲಿದೆ. ವ್ಯಾಪಾರ- ವ್ಯವಹಾರ ಮಾಡುವಂಥವರಿಗೆ ಬಂಧುಗಳು ನಿಮ್ಮ ಜತೆಗೆ ಸೇರಿಕೊಳ್ಳಲಿದ್ದಾರೆ. ಈ ಹಿಂದೆ ನಿಮಗೆ ಸಹಾಯ ಮಾಡಿದ್ದು, ಅವರಿಗೆ ನೀವು ನೆರವಾಗಬೇಕು ಎಂದು ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದೀರಿ ಎಂದಾದಲ್ಲಿ ಅದು ಕೂಡ ನಿಮ್ಮಿಂದ ಸಾಧ್ಯವಾಗಲಿದೆ.

ವೃಶ್ಚಿಕ: ಸಹೋದರ ಅಥವಾ ಸಹೋದರಿ ಜತೆಗೆ ಅಭಿಪ್ರಾಯ ಭೇದ, ಮನಸ್ತಾಪಗಳು ಈಗಾಗಲೇ ಇದೆ ಎಂದಾದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ವೃತ್ತಿನಿರತರಾದವರಿಗೆ ಅಂದರೆ ಮನೆ ಕಟ್ಟಿಸುವ ಕಾಂಟ್ರಾಕ್ಟ್ ತೆಗೆದುಕೊಳ್ಳುವವರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಸೋದರ ಸಂಬಂಧಿಗಳ ಮೂಲಕ ಕೆಲವು ಕ್ಲೈಂಟ್ ಗಳು ಹಾಗೂ ಪ್ರಾಜೆಕ್ಟ್ ಗಳು ಸಿಗುವಂಥ ಯೋಗ ಇದೆ. ಅದೇ ರೀತಿ ನವ ದಂಪತಿಗೆ ಬಹಳ ಉತ್ತಮವಾದ ಸಮಯ. ಒಂದು ವೇಳೆ ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಯಶಸ್ಸು ಕಾಣಲಿದ್ದೀರಿ. ಉದ್ಯೋಗ ಬದಲಾವಣೆಗೆ ಪ್ರಯತ್ನವನ್ನು ಮಾಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಇಂಟರ್ ವ್ಯೂ ಬರಬಹುದು. ನಿಮ್ಮಲ್ಲಿ ಯಾರು ಎಂಜಿನಿಯರಿಂಗ್ ಮಾಡಿದ್ದೀರಿ ಹಾಗೂ ನೀವು ಶಿಕ್ಷಣ ಪಡೆದಂಥ ವಿಷಯದಲ್ಲೇ ಉದ್ಯೋಗವನ್ನು ಅರಸುತ್ತಾ ಇದ್ದೀರಿ, ಅಂಥವರಿಗೆ ನಿಮ್ಮ ಮನಸ್ಸಿಗೆ ಮೆಚ್ಚುವಂಥ ಉದ್ಯೋಗವೇ ದೊರೆಯಲಿದೆ. ಒಳ್ಳೆ ವೇತನ, ಸವಲತ್ತು ಹಾಗೂ ಸೌಕರ್ಯಗಳ ಜತೆಗೆ ಬೆಳೆಯುವುದಕ್ಕೆ ಒಳ್ಳೆ ಅವಕಾಶ ಇರುವಂಥ ಸಂಸ್ಥೆಗೆ ನೀವು ಆಯ್ಕೆ ಆಗಲಿದ್ದೀರಿ. ಗೇಟೆಡ್ ಕಮ್ಯುನಿಟಿಯಲ್ಲಿ ಸೈಟು ಅಥವಾ ಅಪಾರ್ಟ್ ಮೆಂಟ್ ಗಾಗಿ ಹುಡುಕುತ್ತಾ ಇರುವವರಿಗೆ ಸಹ ಈ ಸಮಯ ಉತ್ತಮವಾಗಿದೆ. ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಆ ಕೆಲಸ ಆಗಲಿದೆ.

ಧನುಸ್ಸು: ಸಂಗಾತಿ ಕಡೆಯಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಬಹುದು. ಅದರಲ್ಲೂ ಆಸ್ತಿ ಬರುವಂಥ ಅಥವಾ ಹಣಕಾಸು ಬರುವ ಅವಕಾಶಗಳು ಹೆಚ್ಚಿಗೆ ಇವೆ. ನಿಮ್ಮ ಮಾತಿನಿಂದ ಪ್ರಭಾವ ಬೀರಿ, ವ್ಯಾಪಾರ- ವ್ಯವಹಾರಗಳಿಗೆ ಲಾಭ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುವಿರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿದ್ದೀರಿ ಅಂದರೆ ಅದರ ವಿಸ್ತರಣೆಗಾಗಿ ಹೂಡಿಕೆ ಮಾಡಲಿದ್ದೀರಿ. ಸುಗಂಧ ದ್ರವ್ಯಗಳ ಮಾರಾಟವನ್ನು ಮಾಡುತ್ತಿರುವವರು, ಸೀರೆ ಮಾರಾಟದಲ್ಲಿ ತೊಡಗಿಕೊಂಡವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ದೀರ್ಘಾವಧಿಗೆ ಆರ್ಡರ್ ಗಳು ಸಹ ಬರಬಹುದು. ಈಗ ಇರುವಂಥ ಗೋಡೌನ್, ವಿತರಣಾ ಜಾಲವನ್ನು ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಉತ್ತಮವಾದ ಸಮಯ ಇದು. ಈಗಾಗಲೇ ಒಂದು ಕಡೆ ಆಸ್ತಿಯ ಖರೀದಿಗಾಗಿ ಮಾತುಕತೆ ನಡೆಸಿದ್ದಿರಿ, ಅದು ಅರ್ಧದಲ್ಲೇ ನಿಂತಿದೆ ಅಥವಾ ಬೇಡ ಅಂದುಕೊಂಡು ಬಂದಿದ್ದೀರಿ ಎಂದಾದರೆ ಆ ಮಾತುಕತೆ ಈ ಅವಧಿಯಲ್ಲಿ ಮುಂದುವರಿಯಲಿದೆ. ಒಂದು ವೇಳೆ ನಿಮಗೆ ಹಣಕಾಸಿನ ಅಗತ್ಯ ತೀವ್ರವಾಗಿದೆ ಅಂತಾದರೆ ಪೋಷಕರೇ ಒಂದು ವ್ಯವಸ್ಥೆ ಮಾಡಿಕೊಡಲಿದ್ದಾರೆ. ಅದನ್ನೂ ಮೀರಿ ಹಣದ ತುರ್ತು ಎದುರಾದಲ್ಲಿ ಸ್ನೇಹಿತರು ನಿಮ್ಮ ನೆರವಿಗೆ ಬರಲಿದ್ದಾರೆ. ಇದು ನಿಮಗೆ ಹೊಸ ಆರಂಭದ ರೀತಿಯಲ್ಲಿ ಇರುತ್ತದೆ. ಇಷ್ಟು ಸಮಯ ಗಂಭೀರವಾಗಿ ಮಾಡಿರದ ಪ್ರಯತ್ನವೊಂದನ್ನು ಈಗ ಮಾಡಲಿದ್ದೀರಿ.

ಮಕರ: ಸಂಸಾರದಲ್ಲಿ ಭಿನ್ನಾಭಿಪ್ರಾಯ ಇದೆ, ನಿಯಂತ್ರಣಕ್ಕೆ ಬಾರದಂಥ ಮಧುಮೇಹ ಇದೆ ಎನ್ನುವಂಥವರಿಗೆ ಎರಡನ್ನೂ ಹತೋಟಿಗೆ ತರುವುದಕ್ಕೆ ಉತ್ತಮ ಅವಕಾಶ ಸೃಷ್ಟಿ ಆಗಲಿದೆ. ಒಂದು, ವೈದ್ಯಕೀಯ ನೆರವು ದೊರೆಯಲಿದೆ. ಇನ್ನೊಂದು ಇಷ್ಟು ಸಮಯ ಅರ್ಥ ಮಾಡಿಸುವುದಕ್ಕೆ ಸಾಧ್ಯವಾಗದಂಥ ವಿಚಾರಗಳನ್ನು ಕುಟುಂಬದಲ್ಲಿ ಅರ್ಥ ಮಾಡಿಸಲಿದ್ದೀರಿ. ಒಂದು ವೇಳೆ ಕೆಲಸ ಇಲ್ಲದೆ ತುಂಬ ಸಮಯ ಆಗಿದೆ, ಎಷ್ಟು ಪ್ರಯತ್ನ ಪಟ್ಟರೂ ಎಲ್ಲಿಂದಲೂ ಸಕಾರಾತ್ಮಕವಾದ ಉತ್ತರ ದೊರೆಯುತ್ತಿಲ್ಲ ಎಂಬ ಸ್ಥಿತಿಯಲ್ಲಿ ಇರುವವರಿಗೆ ಈ ಅವಧಿಯಲ್ಲಿ ಒಳ್ಳೆ ಫಲಿತಾಂಶ ದೊರೆಯಲಿದೆ. ತಕ್ಷಣವೇ ಕೆಲಸಕ್ಕೆ ಬಂದು ಸೇರುವಂತೆ ಹೇಳಬಹುದು. ಇನ್ನು ಯಾರು ಮಕ್ಕಳ ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ, ಅಂಥವರಿಗೆ ಒಳ್ಳೆ ಕಡೆ ಸಂಬಂಧ ದೊರೆಯುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ನೀವು ಮಾಡಿದ ಕೆಲಸದಿಂದ ತೃಪ್ತರಾಗಿದ್ದಂಥ ವ್ಯಕ್ತಿಗಳು ಈಗ ಮತ್ತೆ ಹುಡುಕಿಕೊಂಡು ಬಂದು, ನಿಮ್ಮಿಂದ ಕೆಲವು ಕೆಲಸ ಆಗಬೇಕು ಎಂದು ಹೇಳಲಿದ್ದಾರೆ. ತೀರ್ಥಕ್ಷೇತ್ರಗಳ ದರ್ಶನ ಆಗಲಿದೆ. ಈ ಹಿಂದೆ ನೀವು ಹೊತ್ತುಕೊಂಡಿದ್ದ ಹರಕೆಗಳು ಇದ್ದಲ್ಲಿ ಅವುಗಳನ್ನು ತೀರಿಸಿಕೊಳ್ಳುವುದು ಒಳ್ಳೆಯದು. ಕೃಷಿ ಜಮೀನು ಖರೀದಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ನಿಮ್ಮ ಇಷ್ಟಕ್ಕೆ ತಕ್ಕಂಥ ಸ್ಥಳ ದೊರೆಯುವ ಅವಕಾಶಗಳು ಹೆಚ್ಚಿವೆ. ಸಣ್ಣ- ಪುಟ್ಟ ಗೊಂದಲಗಳು ಆಗಬಹುದು, ಆದರೆ ಅದು ನಿವಾರಣೆ ಆಗಲಿದೆ.

ಕುಂಭ: ವಿವಿಧ ಕಡೆಗಳಿಂದ ನಿಮಗೆ ಆಹ್ವಾನಗಳು ಬರಬಹುದು. ಇನ್ನು ಮನೆಯಲ್ಲೇ ಶುಭ ಕಾರ್ಯಗಳನ್ನು ಆಯೋಜನೆ ಮಾಡುವಂಥ ಯೋಗ ಇದೆ. ಮದುವೆ, ಉಪನಯನ ಮೊದಲಾದ ಶುಭ ಸಮಾರಂಭಗಳಲ್ಲಿ ಭಾಗೀ ಆಗಲಿದ್ದೀರಿ ಹಾಗೂ ನೀವೇ ಸ್ವತಃ ಓಡಾಟ ಮಾಡುವಂಥ ಸನ್ನಿವೇಶಗಳು ಕಂಡುಬರುತ್ತಿವೆ. ನೀವು ಏನನ್ನೂ ಅಂದುಕೊಳ್ಳದೆ ದಿಢೀರ್ ವಾಹನಗಳನ್ನು ಖರೀದಿ ಮಾಡಿಬಿಡಬಹುದು. ಅಥವಾ ಸಾಲ ಮಾಡಿಯಾದರೂ ಸೈಟು ಖರೀದಿ ಮಾಡುವ ಸಾಧ್ಯತೆಗಳು ಸಹ ಇವೆ. ಇಷ್ಟು ಸಮಯ ಗೊಂದಲ ಎಂಬಂತೆ ಕಾಡುತ್ತಿದ್ದ ವ್ಯವಹಾರಗಳನ್ನು ಸರಾಗವಾಗಿ ಮುಗಿಸಿಕೊಳ್ಳುವುದಕ್ಕೆ ಪ್ರಭಾವಿಗಳು ಹಾಗೂ ಈ ವಿಚಾರದಲ್ಲಿ ಅಗಾಧ ಜ್ಞಾನ ಇರುವಂಥವರು ಬೆನ್ನಿಗೆ ನಿಲ್ಲಲಿದ್ದಾರೆ. ನಿಮ್ಮಲ್ಲಿ ಯಾರಾದರೂ ಪಾರ್ಟನರ್ ಷಿಪ್ ವ್ಯವಹಾರದಲ್ಲಿ ತೊಡಗಿದ್ದೀರಿ ಅಂತಾದರೆ ಅಂಥವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ಕಮಿಷನ್ ಆಧಾರದಲ್ಲಿ ಆದಾಯ ಪಡೆಯುವಂಥ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಆದಾಯ ಹಾಗೂ ಆದಾಯ ಮೂಲ ಎರಡೂ ಜಾಸ್ತಿ ಆಗಲಿದೆ. ಅದೃಷ್ಟ ನಿಮ್ಮ ಪಾಲಿಗೆ ಜತೆಯಾಗಲಿದ್ದು, ಕ್ಯಾಂಪಸ್ ಇಂಟರ್ ವ್ಯೂಗಳನ್ನು ತೆಗೆದುಕೊಳ್ಳುವಂಥ ವಿದ್ಯಾರ್ಥಿಗಳು ಉತ್ತಮ ಸಂಸ್ಥೆಗಳಿಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಅದರ ಜತೆಗೆ ಒಂದಕ್ಕಂತೂ ಹೆಚ್ಚು ಸಂಸ್ಥೆಗಳಿಂದ ಅವಕಾಶ ಬರಲಿದೆ.

ಮೀನ: ನಿಮ್ಮ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ಜಾಸ್ತಿ ಆಗಲಿದೆ. ಇಷ್ಟು ಸಮಯ ನಿಮ್ಮಲ್ಲೇ ಏನೋ ಸಮಸ್ಯೆ ಇದೆ ಎಂಬಂಥ ಭಾವನೆ ಕಾಡುತ್ತಿದ್ದಲ್ಲಿ ಅದರಿಂದ ಹೊರಬರಲಿದ್ದೀರಿ. ಯಾವುದೇ ಸನ್ನಿವೇಶವನ್ನು ಸಹ ಧೈರ್ಯವಾಗಿ ಎದುರಿಸಲಿದ್ದೀರಿ. ಉದ್ದೇಶಪೂರ್ವಕವಾಗಿ ನಿಮ್ಮನ್ನು ಕುಗ್ಗಿಸುವುದಕ್ಕೆ ಪ್ರಯತ್ನ ಪಡುತ್ತಿದ್ದವರೇ ಕಂಗಾಲಾಗಲಿದ್ದಾರೆ. ಉದ್ಯೋಗ, ವ್ಯಾಪಾರ, ವ್ಯವಹಾರ ಹೀಗೆ ಎಲ್ಲದರಲ್ಲೂ ಜಯ ನಿಮ್ಮ ಪಾಲಿಗೆ ದೊರೆಯಲಿದೆ. ನೀವು ಬಯಸಿದ್ದನ್ನು ಪಡೆಯುವ ಸ್ಥಿತಿಯಲ್ಲಿ ಇರುತ್ತೀರಿ. ಆ ಕಾರಣಕ್ಕೆ ಉದ್ಯೋಗ ಬದಲಾವಣೆ ಮಾಡುತ್ತಿರುವವರು ವೇತನದ ವಿಷಯದಲ್ಲಿ ಸರಿಯಾಗಿ ಮಾತನಾಡಿ, ಪಡೆದುಕೊಳ್ಳಿ. ದಾಕ್ಷಿಣ್ಯ ಮಾಡಿಕೊಳ್ಳದೆ ಮಾತನಾಡಿ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ರೆಫರೆನ್ಸ್ ಮೂಲಕ ಹುಡುಕಿಕೊಂಡು ಬರಬಹುದು. ಇದೇ ಮೊದಲ ಬಾರಿಗೆ ನೀವು ಮಾಡಿದ್ದ ಪ್ರಯತ್ನಗಳಲ್ಲಿ ದೊಡ್ಡ ಯಶಸ್ಸು ದೊರೆಯಲಿದೆ. ಮನೆಗೆ ವಿಲಾಸಿ ವಸ್ತುಗಳನ್ನು ಖರೀದಿಸಲಿದ್ದೀರಿ. ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪದೋನ್ನತಿ ದೊರೆಯಲಿದೆ. ಷೇರು, ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಿದವರಿಗೆ ನಿರೀಕ್ಷೆಗೆ ಮೀರಿದ ಲಾಭ ದೊರೆಯುವ ಅವಕಾಶ ದೊರೆಯಲಿದೆ. ಹೊಸದಾಗಿ ಆರಂಭಿಸಿದ ವ್ಯವಹಾರಗಳಲ್ಲಿ ತಕ್ಷಣದಿಂದಲೇ ಲಾಭ ಸಿಗುವುದಕ್ಕೆ ಶುರುವಾಗುತ್ತದೆ.

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ