
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Numerology) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 22ರಿಂದ 27ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಸುತ್ತ ಮುತ್ತ ಆಗಿರುವಂಥ ಬದಲಾವಣೆಗಳನ್ನು ತುಂಬ ಸೂಕ್ಷ್ಮವಾಗಿ ಗಮನಿಸಲಿದ್ದೀರಿ. ಈಗಾಗಲೇ ನೀಡಿದ್ದಂಥ ಜವಾಬ್ದಾರಿಗಳಲ್ಲಿ ಅದಲು ಬದಲು ಮಾಡುವ ತೀರ್ಮಾನ ಕೈಗೊಳ್ಳಲಿದ್ದೀರಿ. ನೀವು ಏನು ಆಲೋಚನೆ ಮಾಡುತ್ತಿದ್ದೀರಿ, ಯಾಕೆ ಈ ರೀತಿ ನಿರ್ಧಾರ ಕೈಗೊಳ್ಳುತ್ತಿದ್ದೀರಿ ಎಂದು ಅಂದಾಜು ಮಾಡುವುದಕ್ಕೆ ಸಾಧ್ಯವೇ ಇಲ್ಲದಂತಾಗುತ್ತದೆ. ನೇರವಂತಿಕೆ ಹಾಗೂ ಪಾರದರ್ಶಕತೆ ಹೊಸ ಹುದ್ದೆ- ಜವಾಬ್ದಾರಿಗಳನ್ನು ನಿಮಗೆ ದೊರಕಿಸಿ ಕೊಡಲಿದೆ. ಅಬ್ಬರದ ಮಾತುಗಳನ್ನು ಆಡುವ ಮೂಲಕ, ಎಲ್ಲೆಲ್ಲಿಯದೋ ಉದಾಹರಣೆಗಳನ್ನು ನೀಡುವುದರೊಂದಿಗೆ ಭಯ ಸೃಷ್ಟಿ ಮಾಡಬೇಕು ಎಂದು ನಿಮ್ಮ ಬಳಿ ಬರಲಿದ್ದಾರೆ. ನೀವು ಅಚಲವಾಗಿ ನಂಬಿಕೊಂಡ ಸಂಗತಿಗಳಿಗೆ ಬದ್ಧರಾಗಿರಿ. ನಿಮ್ಮ ಸಾಮರ್ಥ್ಯದ ಸಂಪೂರ್ಣ ಬಳಕೆ ಅಗತ್ಯವೇ ಇಲ್ಲದೆ ದೊಡ್ಡ ಕಾರ್ಯಗಳನ್ನು ಪೂರ್ಣ ಮಾಡುವುದಕ್ಕೆ ನಿಮಗೆ ಸಾಧ್ಯವಾಗಲಿದೆ. ಹೊಟ್ಟೆಯುಬ್ಬರ, ಎದೆಯುರಿ, ಕಣ್ಣು ಕೆಂಪಗಾಗುವುದು ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಲಿದ್ದು, ವ್ಯಾಪಾರಸ್ಥರಿಗೆ ವಿಚಿತ್ರ ಪದಾರ್ಥಗಳಿಗೆ ಬೇಡಿಕೆ ಪ್ರಸ್ತಾವ ಬರಲಿದೆ.
ಸಮಸ್ಯೆಯ ಮೂಲ ಎಲ್ಲಿದೆ ಎಂದು ಗುರುತಿಸುವಲ್ಲಿ ಯಶ ಕಾಣುತ್ತೀರಿ. ನಿಮಗೆ ಬೇಡ ಎನಿಸಿದ್ದನ್ನು ನೇರವಾಗಿ ಹೇಳುವುದರಿಂದ ಹೆಚ್ಚಿನ ಅನುಕೂಲ ಇದೆ. ಸಂಕೋಚಕ್ಕೆ ಸಿಲುಕಿಕೊಂಡು, ಎಲ್ಲರ ಬಳಿಯೂ ಚೆನ್ನಾಗಿರುವ ಪ್ರಯತ್ನ ಮಾಡಿದಲ್ಲಿ ಆ ನಂತರ ಪರಿತಪಿಸುವಂತೆ ಆಗಲಿದೆ. ಹವಾಮಾನ ವೈಪರೀತ್ಯದಿಂದ ನಿಮಗೆ ಸ್ವಲ್ಪ ಪ್ರಮಾಣದಲ್ಲಿ ನಷ್ಟ ಆಗುತ್ತದೆ. ರಾಜಕೀಯ ಬೆಳವಣಿಗೆಗಳಿಂದ ದೂರ ಇರುವುದು ಕ್ಷೇಮ.
ನೀವೇ ಹೀಗೆ ಮಾತನಾಡುತ್ತಿರುವುದಾ ಎಂದು ಇತರರು ಅಚ್ಚರಿ ಪಡುವಷ್ಟರ ಮಟ್ಟಿಗೆ ಬದಲಾವಣೆ ಆಗಲಿದೆ. ನಿಮಗೆ ಬರಬೇಕಾದ ಹಣವನ್ನು ಸಹ ನಿರ್ದಾಕ್ಷಿಣವಾಗಿ ವಸೂಲಿ ಮಾಡಲಿದ್ದೀರಿ. ಇತರರು ನಿಮ್ಮ ಮೇಲೆ ಹಿಡಿತ ಸಾಧಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದಲ್ಲಿ ಅಂಥವರಿಗೆ ಎಚ್ಚರಿಕೆ ನೀಡಲಿದ್ದೀರಿ. ರಾತ್ರಿ- ಹಗಲು ಎನ್ನದೆ ಒಂದು ಕೆಲಸವನ್ನು ಗಡುವಿನೊಳಗೆ ಪೂರ್ಣ ಮಾಡಬೇಕು ಎಂಬ ಒತ್ತಡದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಲಿದೆ.
ಸಣ್ಣ ಅವಕಾಶವನ್ನು ಸಹ ದೊಡ್ಡ ಮಟ್ಟದ ಹೆಸರು ತರುವಂತೆ ಮಾಡಿಕೊಳ್ಳುವಲ್ಲಿ ಸಫಲರಾಗುತ್ತೀರಿ. ನಿಮ್ಮ ಜೊತೆಗೆ ಬಹಳ ಆಪ್ತರಾಗಿರುವವರ ಸಮಸ್ಯೆಯೊಂದನ್ನು ನಿವಾರಿಸಲು ಬಹಳ ಶ್ರಮ ಹಾಕುತ್ತೀರಿ. ಪೋಷಕರಿಗೆ ಇಷ್ಟು ಸಮಯ ಹೇಳದೇ ಇದ್ದ ವಿಚಾರವೊಂದನ್ನು ಅವರ ಬಳಿ ತಿಳಿಸುವುದರಿಂದ ನಿಮ್ಮ ಮೇಲೆ ಅವರಿಗೆ ಇರುವ ವಿಶ್ವಾಸ- ನಂಬಿಕೆ ಹೆಚ್ಚಾಗಲಿದೆ. ಎನ್ ಸಿಸಿ, ಸ್ಕೌಟ್ ಇಂಥವುಗಳಿಗಾಗಿ ಪ್ರಯಾಣಕ್ಕೆ ತೆರಳುವ ಯೋಗ ಇದೆ.
ನಿಮ್ಮ ಸಹೋದರ ಅಥವಾ ಸಹೋದರಿ ಬಳಸುವಂಥ ಕೆಲ ಪದಗಳಿಂದ ಆಕ್ರೋಶ ಹೆಚ್ಚಾಗುತ್ತದೆ. ಇದೇ ರೀತಿ ಅನುಭವ ಸೋದರ ಸಂಬಂಧಿಗಳಿಂದ ಸಹ ಆಗಬಹುದು. ಈ ಹಿಂದೆ ಯಾವಾಗಲೋ ನೀವು ಆಡಿದ್ದ ಮಾತನ್ನು ಈಗ ದೊಡ್ಡ ವಿಷಯ ಮಾಡಿ, ಆಕ್ಷೇಪ- ನಿಂದನೆ ಮಾಡಲಿದ್ದಾರೆ. ಗೃಹಾಲಂಕಾರ ವಸ್ತುಗಳ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡುತ್ತೀರಿ.
ಆಲೋಚನೆಗಳ ಅಕ್ಷಯಪಾತ್ರೆ ಈ ವಾರ ನೀವಾಗಿರುತ್ತೀರಿ. ಹೊಸ ವ್ಯಾಪಾರ- ವ್ಯವಹಾರ ಆರಂಭಿಸುವುದಕ್ಕೆ ನಾನಾ ರೀತಿಯ ಬಜೆಟ್- ಪ್ಲ್ಯಾನಿಂಗ್ ಇಂಥವುಗಳಿಗೆ ಹೆಚ್ಚು ಸಮಯ ಇಡಲಿದ್ದೀರಿ. ಭೂಮಿ- ಜಮೀನು, ಸೈಟಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುವುದಕ್ಕೆ ಹಣವನ್ನು ಖರ್ಚು ಮಾಡಲಿದ್ದೀರಿ. ಕುಟುಂಬ ಸದಸ್ಯರು ಕೆಲವು ವಿಚಾರಗಳಿಗೆ ನಿಮ್ಮನ್ನೇ ಹೆಚ್ಚು ಅವಲಂಬಿಸುತ್ತಾರೆ. ದೂರದ ಊರುಗಳಿಗೆ ತೆರಳುವ ಯೋಗ ಇದೆ. ನಿಮಗೆ ಸಿಗಲೇಬೇಕಿತ್ತು ಎಂದುಕೊಂಡಿದ್ದ ಆರ್ಡರ್ ಕೊನೆ ಕ್ಷಣದಲ್ಲಿ ಬೇರೆಯವರ ಪಾಲಾಗಲಿದೆ. ಅಧಿಕಾರ- ಪ್ರಭಾವದ ಬಗ್ಗೆ ನಿಮಗಿರುವ ಚಿಂತನೆಯೇ ಬದಲಾಗುವಂಥ ಸಮಯ ಇದಾಗಿರಲಿದೆ. ಜ್ವರ, ತಲೆನೋವು, ಕೀಲು ನೋವಿನ ಸಮಸ್ಯೆ ಬಾಧಿಸಲಿದೆ. ಕೆಲವು ಸಮಯದಿಂದ ನಿಮ್ಮ ಬಳಿಯೇ ಕಾಪಾಡಿಕೊಂಡು ಬಂದಿದ್ದ ರಹಸ್ಯವನ್ನು ಹೇಳಿಬಿಡುತ್ತೀರಿ. ಇದರಿಂದ ನಿಮ್ಮ ವರ್ಚಸ್ಸಿಗೆ ಹಾನಿ ಆಗಲಿದೆ. ಭವಿಷ್ಯಕ್ಕೆ ಎಷ್ಟು ಹಣ ಕೂಡಿಟ್ಟುಕೊಳ್ಳಬೇಕು, ಅದಕ್ಕಾಗಿ ಏನೇನು ಯೋಜನೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಆರ್ಥಿಕ ಸಲಹೆಗಾರರ ನೆರವು ಪಡೆದುಕೊಳ್ಳುತ್ತೀರಿ.
ನಿಮ್ಮ ಆದಾಯದಲ್ಲಿ ಸ್ಥಿರತೆ ತಂದುಕೊಳ್ಳುವುದಕ್ಕೆ ಈಗ ಮಾಡುತ್ತಿರುವ ಕೃಷಿ ಹಾಗೂ ಇತರ ಚಟುವಟಿಕೆಗೆ ಜೊತೆಗೆ ಹೊಸದಾದ ಕೆಲವು ಸಂಗತಿಗಳನ್ನು ಅಳವಡಿಸಿಕೊಳ್ಳಲಿದ್ದೀರಿ. ನಿಮ್ಮ ಸೋದರ ಸಂಬಂಧಿಗಳು ತಮ್ಮ ಜಮೀನನ್ನೂ ನೀವೇ ನಿರ್ವಹಣೆ ಮಾಡಿಕೊಡಿ ಎಂದು ಪ್ರಸ್ತಾವ ಮುಂದಿಡಲಿದ್ದಾರೆ. ತೋಟಗಾರಿಕೆ ಬೆಳೆಗಳನ್ನು ಆದಾಯದ ಮೂಲ ಮಾಡಿಕೊಂಡವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಹಣ ಕೈ ಸೇರದ ಕಾರಣಕ್ಕೆ ಆತಂಕ ಉಂಟಾಗುತ್ತದೆ.
ನೀವು ಹೇಳಿದ್ದೇ ಅಂತಿಮ ಎಂಬಷ್ಟರ ಮಟ್ಟಿಗೆ ಇತರರು ವಿಶ್ವಾಸ ಇಡಲಿದ್ದಾರೆ. ಬಹಳ ಸಮಯದಿಂದ ತಲುಪಬೇಕು ಎಂದುಕೊಂಡಿದ್ದ ಕೆಲವು ಗುರಿಗಳನ್ನು ಈ ವಾರ ತಲುಪಲಿದ್ದೀರಿ. ವಿನಾಕಾರಣ ನಿಮ್ಮ ಮೇಲೆ ಸಿಟ್ಟಿನಿಂದ ಕುದಿಯುತ್ತಿದ್ದ ಕೆಲವರು ತಾವಾಗಿಯೇ ರಾಜೀ- ಸಂಧಾನ ಮಾಡಿಕೊಳ್ಳುವುದಕ್ಕೆ ಮುಂದಾಗಲಿದ್ದಾರೆ. ಪ್ರೀತಿಪಾತ್ರರು ನಿಮಗೆ ಬೆಲೆ ಬಾಳುವ ಉಡುಗೊರೆಗಳನ್ನು ನೀಡುವ ಯೋಗ ಇದೆ.
ಈ ವಾರ ಯಾವ ಕಾರಣಕ್ಕೂ ಮುಖ್ಯ ತೀರ್ಮಾನಗಳನ್ನು ಆತುರದಲ್ಲಿ ಮಾಡಬೇಡಿ. ಗ್ಯಾಜೆಟ್- ಲ್ಯಾಪ್ ಟಾಪ್ ಖರೀದಿಯಂಥದ್ದೇ ಇರಬಹುದು ಅಥವಾ ವಾಹನ ಕೊಳ್ಳುವ ವಿಚಾರ ಇರಬಹುದು, ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೈಗೊಳ್ಳುವಂತಹ ತೀರ್ಮಾನ ಏನೇ ಇದ್ದರೂ ಸಮಾಧಾನದಿಂದ ಆಲೋಚಿಸಿ ಮುಂದಕ್ಕೆ ಹೆಜ್ಜೆ ಇಡಿ. ವಾಹನ ಚಾಲನೆ ಮಾಡುವ ವೇಳೆಯಲ್ಲಿ ರಸ್ತೆಯಲ್ಲಿನ ಹಳ್ಳಗಳ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ.
ನಿಮ್ಮ ಆಪ್ತರು ನೀಡಿದಂಥ ಎಚ್ಚರಿಕೆಗಳು ಮತ್ತು ಹೇಳಿದಂಥ ಜಾಗ್ರತೆ ಮಾತುಗಳ ಬಗ್ಗೆ ಉದಾಸೀನ ಮಾಡಬೇಡಿ. ವಸ್ತ್ರಾಭರಣ ಖರೀದಿ ಮಾಡುವಾಗ ಖರ್ಚಿನ ಮೇಲೆ ನಿಗಾ ಇರಿಸಿಕೊಳ್ಳಿ. ಕಂತಿನಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ಅಳತೆ ಮೀರಿ ವೆಚ್ಚ ಮಾಡಬೇಡಿ. ಸಣ್ಣ ಸಣ್ಣ ಹೂಡಿಕೆ ಆರಂಭಿಸುವ ಯೋಗ ಈ ವಾರ ಇದೆ. ಇದಕ್ಕೆ ಸಂಗಾತಿಯ ಸಹಕಾರವೂ ಇರುತ್ತದೆ.
ಕುಟುಂಬ ಸದಸ್ಯರ ಜೊತೆ ಸಂತೋಷವಾದ ಸಮಯ ಕಳೆಯುವಂಥ ಯೋಗ ಇದೆ. ಕೆಲವರು ವಿದೇಶ ಪ್ರವಾಸಕ್ಕೆ ತೆರಳುವ ಯೋಗ ಸಹ ಇದೆ. ಆತುರದ ತೀರ್ಮಾನ ಯಾವುದರಲ್ಲೂ ಬೇಡ. ಹೊಸದಾಗಿ ಪರಿಚಯ ಆಗುವ ವ್ಯಕ್ತಿಗಳ ಮೇಲೆ ವಿಪರೀತ ವಿಶ್ವಾಸ ಇಡುವುದು ದುಬಾರಿಯಾಗಿ ಪರಿಣಮಿಸಲಿದೆ. ಹೋಮ್ ಸ್ಟೇ, ಸರ್ವೀಸ್ ಅಪಾರ್ಟ್ ಮೆಂಟ್ ಹೊಂದಿರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಆಗಲಿದೆ. ಭವಿಷ್ಯದ ದೃಷ್ಟಿಯಿಂದ ನೀವು ಕೈಗೊಂಡ ಯೋಜನೆಗಳು ಈ ವಾರ ಕೈ ಹಿಡಿಯಲಿವೆ. ಮನೆ ಇಂಟೀರಿಯರ್ ಡಿಸೈನಿಂಗ್ ವೃತ್ತಿಯನ್ನಾಗಿ ಮಾಡಿಕೊಂಡವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಮುಖ್ಯವಾದ ಕೆಲಸಗಾರರೊಬ್ಬರು ಏನಾದರೊಂದು ಕಾರಣದಿಂದ ಬಾರದೆ ಹೋಗಬಹುದು. ಇದು ನಿಮ್ಮ ಆತಂಕವನ್ನು ಮತ್ತೂ ಹೆಚ್ಚಿಸುತ್ತದೆ. ಬೇರೆಯವರು ಮನವಿ ಮಾಡಿಕೊಂಡ ಕಾರ್ಯಗಳಿಗಾಗಿ ಎದ್ದುಬಿದ್ದು ಪ್ರಯತ್ನ ಮಾಡುವ ಅಗತ್ಯ ಇಲ್ಲ, ನಿಮ್ಮಿಂದ ಸಾಧ‌್ಯವಾದಷ್ಟು ಮಾತ್ರ ಶ್ರಮ ಹಾಕಿ. ನಿಮಗೆ ಅಗತ್ಯ ಇಲ್ಲದ ಕೆಲವು ಗ್ಯಾಜೆಟ್ ಖರೀದಿಸಿ, ಆ ನಂತರ ತುರ್ತಾಗಿ ಹಣ ಬೇಕಾದ ಸಂದರ್ಭದಲ್ಲಿ ಬೇಸರ ಮಾಡಿಕೊಳ್ಳುತ್ತೀರಿ.
ಯೋಜನೆ ಮತ್ತು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಮಹತ್ವ ಹೆಚ್ಚಾಗಿರುತ್ತದೆ. ಬೆಳೆಗಳ ಸಂರಕ್ಷಣೆ ಜೊತೆಗೆ ಮುಂದಿನ ಹಂತದ ಕೃಷಿಗೆ ಸಿದ್ಧತೆ ನಡೆಸುವಿರಿ. ಮಾರುಕಟ್ಟೆಯಲ್ಲಿನ ಬೆಲೆ ನಿಮ್ಮ ನಿರೀಕ್ಷೆಯಷ್ಟು ಇರದ ಕಾರಣಕ್ಕೆ ಸ್ವಲ್ಪ ಅಸಮಾಧಾನ ಆಗಬಹುದು. ನೀರಿನ ವ್ಯವಸ್ಥೆ, ಗೊಬ್ಬರ ಹಾಗೂ ಕಾರ್ಮಿಕ ವೆಚ್ಚದ ಮೇಲೆ ನಿಯಂತ್ರಣ ಅಗತ್ಯ. ತೋಟಗಾರಿಕೆ ಮತ್ತು ಪಶುಸಂಗೋಪನೆ ಮಾಡುವವರಿಗೆ ನಿಧಾನವಾದರೂ ಆದಾಯದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ.
ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿ ನಿರ್ವಹಿಸುವ ಸ್ಥಳದಲ್ಲಿ ನಿಮ್ಮ ನಿರ್ಧಾರಗಳಿಗೆ ಪ್ರಾಮುಖ್ಯ ಸಿಗುತ್ತದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸುವ ಅವಕಾಶ ದೊರೆಯುತ್ತದೆ. ಸಹೋದ್ಯೋಗಿಗಳ ಜತೆಗೆ ಉತ್ತಮ ಹೊಂದಾಣಿಕೆ ಸಾಧಿಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಇರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಗಳನ್ನು ಮಾಡಲಿದ್ದೀರಿ.
ಈ ವಾರ ಏಕಾಗ್ರತೆ ಮುಖ್ಯವಾಗಿರುತ್ತದೆ. ಓದಿನಲ್ಲಿ ಮನಸ್ಸು ತೊಡಗಿಸುವ ಸಾಧ್ಯತೆ ಇದೆಯಾದ್ದರಿಂದ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಕಡೆಗೆ ಗಮನ ಇರಲಿ. ಪರೀಕ್ಷೆ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಆತುರದಲ್ಲಿ ತೆಗೆದುಕೊಳ್ಳಬೇಡಿ. ಅಗತ್ಯ ಕಂಡುಬಂದಲ್ಲಿ ಹಿರಿಯರು ಹಾಗೂ ಶಿಕ್ಷಕರ ಸಲಹೆ ಪಡೆಯುವುದು ಉತ್ತಮ. ಪೋಷಕರು ನೀಡಿದ ಹಣದ ಬಳಕೆಯನ್ನು ಮಾಡುವಾಗಿ ಎಚ್ಚರಿಕೆ ವಹಿಸಬೇಕು.
ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವ ವಾರ ಇದು. ಖರ್ಚಿನ ವಿಷಯದಲ್ಲಿ ನಿಮ್ಮ ಅಜಾಗರೂಕತೆಯಿಂದ ಹೀಗಾಯಿತು ಎಂಬ ಆಕ್ಷೇಪದ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ಸಣ್ಣ ಉಳಿತಾಯ ಅಥವಾ ಹೂಡಿಕೆ ಮಾಡಿದ್ದ ಮೊತ್ತವನ್ನು ಹಿಂತೆಗೆದುಕೊಂಡು, ಚಿನ್ನ ಅಥವಾ ಬೆಳ್ಳಿ ಒಡವೆಗಳ ಖರೀದಿಗಾಗಿ ಬಳಕೆ ಮಾಡಲಿದ್ದೀರಿ. ಸಂಗಾತಿಯ ಸಹಕಾರದಿಂದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ ಎಂಬ ಆಸೆಯಲ್ಲಿ ಹೆಚ್ಚು ರಿಸ್ಕ್ ಇರುವ ಹೂಡಿಕೆಗಳ ಕಡೆಗೆ ನಿಮ್ಮ ಲಕ್ಷ್ಯ ಹೋಗುತ್ತದೆ. ಆ್ಯಪ್ ಗಳು, ಅಡ್ವೈಸರಿ ಸೇವೆಗಳನ್ನು ನೀಡುವ ಬ್ರೋಕರೇಜ್ ಸಂಸ್ಥೆಗಳಿಗೆ ಚಂದಾದಾರಿಕೆ ಪಡೆಯುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಪ್ರಯಾಣ ಮಾಡುವಂಥವರು ನಿಮಗೆ ಅಲರ್ಜಿ ಇರುವಂಥಾದಲ್ಲಿ ಅಗತ್ಯ ಔಷಧಗಳಲ್ಲಿ ಜತೆಯಲ್ಲಿಯೇ ತೆಗೆದುಕೊಂಡು ಹೋಗುವುದು ಕ್ಷೇಮ. ನಿಮ್ಮಲ್ಲಿ ಕೆಲವರು ಪ್ರಯಾಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಬರುವ ಸಾಧ್ಯತೆಯೂ ಹೆಚ್ಚಿದೆ. ಜಮೀನು- ಮನೆ ಇರುವಂಥ ಸ್ವತ್ತು ಖರೀದಿ ಮಾಡಬೇಕು ಎಂದು ಬಹಳ ಸಮಯದಿಂದ ಪ್ರಯತ್ನ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ಶಿಕ್ಷಣ- ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಧ್ಯಯನ ಪ್ರವಾಸಕ್ಕೆ ತೆರಳುವಂತೆ ಸೂಚನೆ ಬರಲಿದೆ.
ಬೆಳೆಗಳ ಆರೋಗ್ಯ, ಸದ್ಯಕ್ಕೆ ಇರುವಂಥ ನೀರಾವರಿ ವ್ಯವಸ್ಥೆ ಹಾಗೂ ಗೊಬ್ಬರ ಗುಣಮಟ್ಟವನ್ನು ಮರುಪರಿಶೀಲಿಸುವ ಅಗತ್ಯ ಬರುತ್ತದೆ. ಹವಾಮಾನ ಬದಲಾವಣೆಯಿಂದ ಕೆಲವು ಬೆಳೆಗಳಿಗೆ ತೊಂದರೆ ಕಾಣಿಸಿಕೊಳ್ಳಬಹುದು; ತಕ್ಷಣ ಕ್ರಮ ಕೈಗೊಂಡಲ್ಲಿ ನಷ್ಟ ತಪ್ಪಿಸಬಹುದು. ಮಾರುಕಟ್ಟೆ ಸಂಪರ್ಕ ಹೆಚ್ಚಿಸುವ ಪ್ರಯತ್ನ ಫಲ ನೀಡಲಿದೆ. ಸಹೋದರರು ಅಥವಾ ಪಾಲುದಾರರಿಂದ ಜಮೀನು ನಿರ್ವಹಣೆಗೆ ನೆರವು ಸಿಗಲಿದೆ. ಸಾಲ ಪಾವತಿ ವಿಚಾರದಲ್ಲಿ ಸ್ಪಷ್ಟತೆ ಮುಖ್ಯ; ಹೊಸ ಸಾಲವನ್ನು ಮಾಡಬೇಡಿ.
ಈ ವಾರ ಸಂವಹನದ ಮಹತ್ವ ಹೆಚ್ಚಾಗಿ ಇರುತ್ತದೆ. ಇತರರ ಕೆಲಸ- ಕಾರ್ಯಗಳ ವಿಧಾನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವುದರಿಂದ ಒಟ್ಟಾರೆ ಕೆಲಸಗಳು ವೇಗವಾಗಿ ಮುನ್ನಡೆಯುತ್ತವೆ. ಹೊಸ ಪ್ರಾಜೆಕ್ಟ್ ಅಥವಾ ಹೆಚ್ಚುವರಿ ಜವಾಬ್ದಾರಿ ದೊರೆಯುವ ಸಾಧ್ಯತೆ ಇದೆ. ನೀವು ಯಾರಿಗೆ ರಿಪೋರ್ಟ್ ಮಾಡಿಕೊಳ್ಳುತ್ತೀರೋ ಅವರ ಜತೆಗಿನ ವೃತ್ತಿ ಬಾಂಧವ್ಯ ಸುಧಾರಣೆ ಕಾಣಲಿದೆ. ದಿಢೀರ್ ಎಂದು ಕಾಣಿಸಿಕೊಳ್ಳು ಕೆಲಸದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ.
ಈ ವಾರ ಅಭ್ಯಾಸದ ಕಡೆಗೆ ಮತ್ತು ಪುನರ್ ಮನನ ಮಾಡುವ ಕಡೆಗೆ ಗಮನ ನೀಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಪಠ್ಯಕ್ರಮವನ್ನು ಸಣ್ಣ ಭಾಗಗಳಾಗಿ ಹಂಚಿಕೊಂಡು ಓದಿದರೆ ಏಕಾಗ್ರತೆ ಹೆಚ್ಚುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಶಿಸ್ತು ಅಗತ್ಯ. ಸ್ನೇಹಿತರ ಪ್ರಭಾವದಿಂದ ಗಮನ ಭಂಗ ಆಗುವ ಸಾಧ್ಯತೆ ಇರುವುದರಿಂದ ಟೈಮ್ ಮ್ಯಾನೇಜ್ ಮೆಂಟ್ ಪಾಲಿಸಿ. ಜಂಕ್ ಫುಡ್ ಸೇವನೆಯಿಂದ ದೂರ ಇರುವುದು ಹಾಗೂ ಸ್ಕ್ರೀನ್ ಟೈಮ್ ಕಡಿಮೆ ಮಾಡಿಕೊಳ್ಳುವುದಕ್ಕೆ ಲಕ್ಷ್ಯ ನೀಡಿ.
ನಿಮ್ಮ ಕೆಲಸಗಳನ್ನು ಆದ್ಯತೆ ಮೇಲೆ ವಿಂಗಡಿಸಿಕೊಳ್ಳುವುದು ಬಹಳ ಒಳ್ಳೆಯದು. ಮನೆಯ ಕೆಲಸಗಳ ಕಡೆಗೆ ಹೆಚ್ಚು ಸಮಯವನ್ನು ಇಟ್ಟು, ವೈಯಕ್ತಿಕ ಆಸಕ್ತಿ ಇರುವಂಥದ್ದು ನಿರ್ಲಕ್ಷ್ಯಕ್ಕೆ ಒಳಗಾಗಲಿದೆ. ಮೂರನೇ ವ್ಯಕ್ತಿಗಳ ಒತ್ತಾಯಕ್ಕೆ ಮಣಿದು, ನಿಮ್ಮ ಖರ್ಚಿನ ಪ್ರಮಾಣ ಅಳತೆ ಮೀರಿ ಹೋಗುತ್ತದೆ. ಚಿನ್ನದ ಚೀಟಿ ಅಥವಾ ಬೇರೆ ಯಾವುದಾದರೂ ಚೀಟಿಗೆ ಹಣ ಕಟ್ಟುವುದಕ್ಕೆ ಶುರು ಮಾಡುವ ಆಲೋಚನೆ ಮೂಡಲಿದೆ. ಸುರಕ್ಷತೆಗೆ ನಿಮ್ಮ ಪ್ರಾಶಸ್ತ್ಯ ಇರಲಿ.
ಕೆಲವು ಕಹಿ ಘಟನೆಗಳನ್ನು ಮರೆತು ಮುಂದೆ ಸಾಗುವುದಕ್ಕೆ ಆದ್ಯತೆ ನೀಡಲಿದ್ದೀರಿ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಆತ್ಮವಿಶ್ವಾಸ ಹೆಚ್ಚಾಗುವಂಥ ಬೆಳವಣಿಗೆಗಳು ಆಗಲಿವೆ. ಹೊಸ ಕೋರ್ಸ್ ಗಳಿಗೆ ಸೇರ್ಪಡೆ ಆಗುವುದು, ವಿದೇಶಿ ಭಾಷೆಗಳನ್ನು ಕಲಿಯುವುದು ಈ ರೀತಿಯಾದ ಆಸಕ್ತಿ ನಿಮ್ಮಲ್ಲಿ ಕುದುರಲಿದ್ದು, ಭವಿಷ್ಯದಲ್ಲಿ ಇದರಿಂದ ದೊಡ್ಡ ಅನುಕೂಲ ಆಗಲಿದೆ. ಇತರರಿಗಾಗಿ ಯಾವುದಕ್ಕೂ ಕಾಯಬೇಡಿ. ನಿಮ್ಮ ಜತೆಗೆ ತಾವೂ ಆ ಕೋರ್ಸ್ ಗೆ ಸೇರುವುದಾಗಿ ಹೇಳಿದರು ಎಂಬ ಕಾರಣಕ್ಕೆ ಅವರೂ ಬರಲಿ ಎಂದು ನಿರ್ಧಾರವನ್ನು ಮುಂದಕ್ಕೆ ಹಾಕಬೇಡಿ. ಹೊಸ ವಾಷಿಂಗ್ ಮಶೀನ್, ಡಿಷ್ ವಾಷರ್ ಇಂಥವುಗಳ ಖರೀದಿಗೆ ಹಣ ಹಾಕುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸುವುದು ಉತ್ತಮ. ಪ್ರೀತಿ- ಪ್ರೇಮ ಸಂಬಂಧಗಳಲ್ಲಿ ಅಂದುಕೊಂಡಂತೆಯೇ ಕೆಲವು ಸಕಾರಾತ್ಮಕ ಬೆಳವಣಿಗೆ ಆಗಲಿದೆ. ಬಾಂಧವ್ಯ ಇನ್ನೂ ಗಟ್ಟಿ ಆಗಲಿದೆ.
ನಿಮ್ಮ ಸಹನೆ ಹಾಗೂ ಪರಿಶ್ರಮವು ನಿಧಾನವಾಗಿಯಾದರೂ ಫಲವನ್ನು ಕೊಟ್ಟೇ ಕೊಡುತ್ತದೆ. ಆಧುನಿಕ ದಿನಮಾನದ ಬದಲಾವಣೆಗೆ ತಕ್ಕಂತೆ ಕೃಷಿ ಕ್ರಮಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ನೀವು ಬೆಳೆವ ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಸ್ವಲ್ಪ ಏರಿಳಿತ ಕಂಡರೂ ಆತುರದದಿಂದ ಮಾರಾಟ ಮಾಡುವುದು ಒಳ್ಳೆಯ ನಿರ್ಧಾರ ಆಗುವುದಿಲ್ಲ. ಕುಟುಂಬದವರ ಸಲಹೆ ಮತ್ತು ಸಹಕಾರದಿಂದ ಜಮೀನಿನ ನಿರ್ವಹಣೆಗೆ ನೆರವಾಗುತ್ತದೆ. ಪಶುಸಂಗೋಪನೆ ಮತ್ತು ಹಾಲು ಉತ್ಪಾದನೆಯಿಂದ ಆದಾಯ ಹೆಚ್ಚಲಿದೆ.
ಅವಕಾಶಗಳು ಮತ್ತು ಸವಾಲುಗಳು ಎರಡೂ ಜತೆ ಜತೆಯಾಗಿ ಕಾಣಿಸಿಕೊಳ್ಳುತ್ತವೆ. ನಿಮ್ಮ ಕೌಶಲ ಏನು ಹಾಗೂ ಅದರ ಸಾಮರ್ಥ್ಯ ಏನು ಎಂಬುದು ಇತರರಿಗೆ ಮನದಟ್ಟಾಗುವಂತೆ ಮಾಡಲು ಸೂಕ್ತ ವೇದಿಕೆ ದೊರೆಯಲಿದೆ. ಹೊಸ ಪ್ರಾಜೆಕ್ಟ್ ವೊಂದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಲಿದ್ದೀರಿ. ನಿಮ್ಮ ಸ್ನೇಹಿತರೂ ಸಹೋದ್ಯೋಗಿಯೂ ಆದವರಿಗೆ ನೆರವು ನೀಡುವ ಕಾರಣಕ್ಕೆ ಹೆಚ್ಚಿನ ಸಮಯ ಹೋಗಲಿದ್ದು, ಕೌಟುಂಬಿಕ ಅಗತ್ಯಗಳ ಕಡೆಗೆ ಗಮನ ನೀಡುವುದು ಕಷ್ಟವಾಗಲಿದೆ.
ನಿಮ್ಮ ಗುರಿಯನ್ನು ಸ್ಪಷ್ಟ ಮಾಡಿಕೊಳ್ಳುವುದು ಮುಖ್ಯ. ನೀವು ಆಯ್ಕೆ ಮಾಡಿಕೊಂಡಿರುವ ವಿಷಯಗಳಲ್ಲಿ ಯಾವುದಕ್ಕೆ ಎಷ್ಟು ಆದ್ಯತೆಯ ಸಮಯ ನೀಡಬೇಕು ಎಂದು ವೇಳಾಪಟ್ಟಿಯೊಂದನ್ನು ಮಾಡಿಕೊಳ್ಳುವುದು ಒಳ್ಳೆಯದು. ಪ್ರಮುಖ ವ್ಯಕ್ತಿಗಳ ಭೇಟಿ ಮಾಡುವುದರಿಂದ ನಿಮ್ಮ ಜೀವನಶೈಲಿಯಲ್ಲಿಯೇ ದೊಡ್ಡ ಬದಲಾವಣೆ ಆಗಲಿದೆ. ಚಟುವಟಿಕೆಯಿಂದ ಇರಬೇಕು ಎಂಬ ಉದ್ದೇಶಕ್ಕೆ ಜಿಮ್, ಯೋಗ, ಸೈಕ್ಲಿಂಗ್ ಇಂಥವುಗಳನ್ನು ಆರಂಭಿಸುವುದಕ್ಕೆ ನಿರ್ಧರಿಸುತ್ತೀರಿ.
ಮನೆಯಿಂದಲೇ ಮಾಡುವಂಥ ಕೆಲವು ಕೆಲಸಗಳ ಮೂಲಕ ಆದಾಯ ಬರುವುದಕ್ಕೆ ಶುರುವಾಗುತ್ತದೆ. ಬ್ಯೂಟಿಪಾರ್ಲರ್, ಟೈಲರಿಂಗ್, ಚಾಕಲೇಟ್- ಬಿಸ್ಕೆಟ್ ತಯಾರಿಸುವುದು ಇಂಥವುಗಳಿಗೆ ಹೊಸ ವಿಷಯಗಳನ್ನು ಸೇರಿಸಿಕೊಂಡು ನೀವು ಮಾಡುವ ಉದ್ಯಮ ಒಳ್ಳೆ ಆದಾಯ ತಂದುಕೊಡಲಿದೆ. ಇದಕ್ಕೆ ನಿಮ್ಮ ಕುಟುಂಬ ಸದಸ್ಯರು ಸಹ ಬೆಂಬಲ ನೀಡಲಿದ್ದಾರೆ. ಆತ್ಮವಿಶ್ವಾಸ ಹಾಗೂ ಆದಾಯ ಹೆಚ್ಚಾಗಲಿದೆ.
ಯಾವುದೇ ಕಾರ್ಯದ ಬಗ್ಗೆ ಸಾಧಕ- ಬಾಧಕಗಳು ಏನಿರುತ್ತವೆ ಎಂಬ ನಿಮ್ಮ ವಿಶ್ಲೇಷಣೆಯಿಂದಾಗಿ ಹಲವು ರೀತಿಯಲ್ಲಿ ಯಶಸ್ಸನ್ನು ಕಾಣುತ್ತೀರಿ. ಲೇವಾದೇವಿ ವ್ಯವಹಾರ ಮಾಡುತ್ತಾ ಇರುವವರು ನಾಜೂಕಿನ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ಸಮಸ್ಯೆಯಿಂದ ಹೊರಗೆ ಬರುತ್ತೀರಿ. ಇಷ್ಟು ಸಮಯ ಹೆಚ್ಚು ಗಮನ ನೀಡಲು ಸಾಧ್ಯವಾಗದೆ ತಡ ಆಗುತ್ತಿದ್ದ ಕೆಲಸ- ಕಾರ್ಯಗಳಿಗೆ ಆದ್ಯತೆ ನೀಡುವುದಕ್ಕೆ ಆರಂಭಿಸುತ್ತೀರಿ. ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಸಹ ಹೊಂದಿಸಿಕೊಳ್ಳುತ್ತೀರಿ. ಪರ್ಫ್ಯೂಮ್ ಮಾರಾಟಗಾರರು, ಬ್ಯಾಂಗಲ್ ಸ್ಟೋರ್ ನಡೆಸುತ್ತಿರುವವರು, ಚಿನ್ನ- ವಜ್ರಾಭರಣ ಮಳಿಗೆ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಗಣನೀಯವಾದ ಏರಿಕೆ ಕಾಣಲಿದೆ. ಮನೆಯಲ್ಲಿ ಕೆಲವು ಪೂಜೆ- ಪುನಸ್ಕಾರಗಳನ್ನು ಆಯೋಜಿಸುವ ತೀರ್ಮಾನ ಮಾಡಲಿದ್ದು, ಅದರಿಂದಾಗಿ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ.
ಈ ವಾರ ಜಾಗ್ರತೆ ಮತ್ತು ಲೆಕ್ಕಾಚಾರ ಎರಡೂ ಅಗತ್ಯವಾಗಿರುತ್ತದೆ. ಬೆಳೆಗಳಿಗೆ ಸಂಬಂಧಿಸಿದ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದ್ದರೂ ಅದಕ್ಕೆ ತಕ್ಕ ಫಲ ಭವಿಷ್ಯದಲ್ಲಿ ದೊರೆಯಲಿದೆ. ಕೃಷಿ ಉಪಕರಣಗಳು, ಯಂತ್ರೋಪಕರಣಗಳ ರಿಪೇರಿ ಅಥವಾ ಹೊಸದರ ಖರೀದಿ ವಿಚಾರ ಚರ್ಚೆಗೆ ಬರಲಿದೆ. ಸುತ್ತಮುತ್ತಲ ರೈತರ ಜೊತೆಗಿನ ಸಹಕಾರದಿಂದ ಕೆಲವು ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ. ಬೆಳೆ ವಿಮೆ ಅಥವಾ ಸರ್ಕಾರದಿಂದ ಬರಬೇಕಾದ ಸಹಾಯಧನಕ್ಕೆ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
ವೃತ್ತಿಯಲ್ಲಿನ ಒತ್ತಡ ಸ್ವಲ್ಪ ಹೆಚ್ಚಾಗಲಿದೆ. ಆದರೆ ನಿಮ್ಮ ಪರಿಶ್ರಮಕ್ಕೆ ಮನ್ನಣೆ ಸಿಗುವ ಸಮಯ ಇದಾಗಿರುತ್ತದೆ. ನಿಮಗಿಂತ ಮೇಲಿನ ಹುದ್ದೆಯಲ್ಲಿ ಇರುವವರ ಜೊತೆಗೆ ಮಾತುಕತೆ ವೇಳೆ ಸಂಯಮ ಇರಲಿ. ಹೊಸ ಜವಾಬ್ದಾರಿಗಳು ಬಂದರೂ ಅದನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಹಣಕಾಸಿನಲ್ಲಿ ನಿರೀಕ್ಷಿತ ಆದಾಯ ಸಿಗುತ್ತದೆ, ಆದರೆ ಸಾಲ ಅಥವಾ ಕಂತು ಕಟ್ಟುವ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದ ಬೆಂಬಲವು ಕೆಲವು ನಿರ್ಧಾರ ಕೈಗೊಳ್ಳಲು ಮನಸ್ಸಿಗೆ ಧೈರ್ಯ ನೀಡುತ್ತದೆ.
ನೀವು ಎಷ್ಟು ಪರಿಶ್ರಮ ಹಾಕುತ್ತೀರೋ ಅದಕ್ಕೆ ತಕ್ಕಂತೆ ಉತ್ತಮ ಫಲಿತಾಂಶವನ್ನು ಕಾಣುವುದಕ್ಕೆ ಸಾಧ್ಯವಿದೆ. ಯಾವುದಾದರೂ ಕಾರಣದಿಂದಾಗಿ ಹಿಂದೆ ಉಳಿದುಹೋಗಿದ್ದ ಸಬ್ಜೆಕ್ಟ್ ಗಳಲ್ಲಿ ಹಿನ್ನಡೆಯಿಂದ ಆಚೆ ಬರುವುದಕ್ಕೆ ನೆರವು ದೊರೆಯುತ್ತದೆ. ಪರೀಕ್ಷೆ ಬಗ್ಗೆ ಭಯ ಕಾಡುತ್ತಿದ್ದಲ್ಲಿ ಅದರಿಂದ ಹೊರಬರುವುದಕ್ಕೆ ಸಾಧ್ಯವಾಗಲಿದೆ. ಶಿಕ್ಷಕರು- ಉಪನ್ಯಾಸಕರು ನೀಡುವ ಸಲಹೆ, ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿ. ಮನರಂಜನೆ ಬೇಕು ಎಂಬ ಕಾರಣಕ್ಕೆ ಅದಕ್ಕಾಗಿಯೇ ಹೆಚ್ಚಿನ ಸಮಯ ಕೊಡುವುದು ಬೇಡ.
ಈ ವಾರ ಉದ್ಯೋಗ, ವೃತ್ತಿ, ಕುಟುಂಬ ಹೀಗೆ ಯಾವುದೇ ವಿಚಾರದಲ್ಲಿಯೂ ನಿರ್ಧಾರ ತೆಗೆದುಕೊಳ್ಳುವಾಗ ಆತ್ಮವಿಶ್ವಾಸ ಹೆಚ್ಚಾಗಿ ಇರಲಿದೆ. ಮನೆ ಮತ್ತು ಹೊರಗಿನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಹಣಕಾಸಿನ ವಿಷಯದಲ್ಲಿ ವಿವೇಕದಿಂದ ನಡೆದುಕೊಳ್ಳುವುದು ಒಳಿತು. ಇತರರ ಸಾಲಕ್ಕೆ ಜಾಮೀನಾಗಿ ನಿಲ್ಲುವುದು ಒಳ್ಳೆಯ ನಿರ್ಧಾರ ಆಗುವುದಿಲ್ಲ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಕುಟುಂಬದವರ ಬೆಂಬಲ ಇರುತ್ತದೆ. ಥೈರಾಯ್ಡ್, ಕ್ಯಾಲ್ಷಿಯಂ- ವಿಟಮಿನ್ ಕೊರತೆಯಂಥ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ವೈದ್ಯರ ಭೇಟಿ ಆಗಿ.
ಕೆಲವು ಖರ್ಚು- ವೆಚ್ಚಗಳು ನಿಮ್ಮ ಧೈರ್ಯವನ್ನು ನುಂಗಿಹಾಕುವ ಮಟ್ಟಕ್ಕೆ ಬರಲಿವೆ. ಇವುಗಳ ಪೈಕಿ ಹಲವು ನಿರೀಕ್ಷಿತವೇ ಆಗಿದ್ದರೂ ಅದಕ್ಕಾಗಿ ಮೀಸಲಿಟ್ಟಿದ್ದ ಮೊತ್ತದಲ್ಲಿ ಸ್ವಲ್ಪವಾದರೂ ಕೊರತೆ ಕಂಡುಬರಲಿದೆ. ಸಂಬಂಧಿಗಳ ಬಳಿ ಸಾಲ ಕೇಳುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಆಲೋಚಿಸುವುದು ಒಳ್ಳೆಯದು. ಏಕೆಂದರೆ ಇಂಥ ಸನ್ನಿವೇಶದಲ್ಲಿ ಅವಮಾನ- ಮುಜುಗರ ಅನುಭವಿಸುವ ಯೋಗ ಇದೆ. ಹೊಸದಾಗಿ ಉದ್ಯೋಗಕ್ಕೆ ಸೇರಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಉತ್ಸಾಹದಿಂದ ಏನನ್ನೂ ಮಾಡಲು ಸಾಧ್ಯವಾಗದಂತೆ ಗೊಂದಲ ಸೃಷ್ಟಿ ಆಗುತ್ತದೆ. ನೀವು ಇತರರಿಗೆ ನೀಡುವ ಸಲಹೆ- ಸೂಚನೆಗಳನ್ನು ನಿಮಗೆ ಅನ್ವಯ ಮಾಡಿಕೊಳ್ಳುವ ಕಡೆಗೆ ಗಮನವನ್ನು ನೀಡಿದರೆ ಒಳ್ಳೆಯದು. ಬ್ರ್ಯಾಂಡೆಡ್ ವಸ್ತುಗಳ ಖರೀದಿಗೆ ಹೆಚ್ಚಿನ ಹಣವನ್ನು ಹಾಕಬೇಡಿ. ತಾತ್ಕಾಲಿಕವಾದ ಸೆಳೆತಕ್ಕೆ ಸಿಲುಕಿಕೊಂಡರೆ ಆ ನಂತರ ಪರಿತಪಿಸುವಂತೆ ಆಗಲಿದೆ.
ನೀವು ಗಾಬರಿ ಆಗುವಂತೆ ಆಪ್ತರೇ- ಸ್ನೇಹಿತರೇ ಪದೇ ಪದೇ ಎಚ್ಚರಿಕೆ ಹೇಳುತ್ತಾ ಬಂದರೂ ಆ ಕಡೆಗೆ ನೀವು ಲಕ್ಷ್ಯ ನೀಡುವ ಅಗತ್ಯ ಇಲ್ಲ. ನಿಮ್ಮ ಜ್ಞಾನ, ತಿಳಿವಳಿಕೆ ಹಾಗೂ ಅನುಭವದ ಬಗ್ಗೆ ನಂಬಿಕೆ ಇರಿಸಿಕೊಳ್ಳುವುದು ಅಗತ್ಯ. ಈ ಹಿಂದೆ ನೀವು ಭೂಮಿ ವ್ಯವಹಾರವೊಂದನ್ನು ಮಾಡಿ, ಅದನ್ನು ಅರ್ಧಕ್ಕೇ ನಿಲ್ಲಿಸಿದ್ದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮೂರನೇ ವ್ಯಕ್ತಿಗಳನ್ನು ಮಧ್ಯಕ್ಕೆ ಸೇರಿಸಿಕೊಳ್ಳದೆ ನೀವೇ ನೇರವಾಗಿ ಮಾತಕತೆ ಆಡುವುದರಿಂದ ಎಲ್ಲವೂ ಸರಾಗವಾಗಿ ಪೂರ್ಣಗೊಳ್ಳುತ್ತದೆ.
ಈ ಹಿಂದೆ ನಿಮಗೆ ಅನುಕೂಲ ಮಾಡುವುದಾಗಿ ಮಾತು ನೀಡಿದ್ದ ಸ್ನೇಹಿತರೊಬ್ಬರು ಒಳ್ಳೆ ಕ್ಲೈಂಟ್ ವೊಬ್ಬರ ಕೆಲಸವನ್ನು ಕೊಡಿಸಲಿದ್ದಾರೆ. ಭವಿಷ್ಯದಲ್ಲಿ ಇದು ತುಂಬ ದೊಡ್ಡ ಮಟ್ಟಕ್ಕೆ ಬೆಳೆಯಲಿದೆ ಎಂಬ ವಿಶ್ವಾಸ ನಿಮಗೂ ಮೂಡಲಿದೆ. ಯಾವುದೇ ನಿರ್ಧಾರ ಕೈಗೊಳ್ಳುವಾಗ ಜಿಗುಟುತನ ಬೇಡ. ಸ್ವಲ್ಪ ಮಟ್ಟಿಗೆ ಉದಾರತೆ ತೋರಿಸಿದರೂ ಅದರಿಂದ ದೊರೆಯುವ ಫಲಿತಾಂಶ ನಿರೀಕ್ಷೆಗೂ ಮೀರಿದಂತೆ ಇರಲಿದೆ. ಒಂದು ಪರಿಸ್ಥಿತಿಯೋ ಸನ್ನಿವೇಶವೋ ಏಕಾಏಕಿ ತೀರ್ಮಾನ ತೆಗೆದುಕೊಳ್ಳದೆ ತಾಳ್ಮೆಯಿಂದ ವ್ಯವಹರಿಸಿ.
ಊಟ- ತಿಂಡಿ, ನಿದ್ದೆ, ಮಾತುಕತೆ ಹೀಗೆ ಒಂದೊಂದಾಗಿ ನಿಮ್ಮ ಕೆಲವು ಅಭ್ಯಾಸ, ಹವ್ಯಾಸಗಳನ್ನು ಬದಲಾವಣೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ಸಾಮರ್ಥ್ಯದ ಬಗ್ಗೆ ಇತರರು ಆಡಿದ ಹಗುರವಾದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ, ಇಲ್ಲಿಯ ತನಕ ಯಾವುದು ಮಿತಿಯಾಗಿ ಕಾಡಿತ್ತೋ ಅದರಿಂದ ಹೊರಗೆ ಬರಲಿದ್ದೀರಿ. ಸೋಷಿಯಲ್ ಮೀಡಿಯಾ ಬಳಕೆಯನ್ನು ಕಡಿಮೆ ಮಾಡಿಕೊಳ್ಳಿ. ಕಲೆ- ಸಾಹಿತ್ಯ ಇಂಥದ್ದರ ಬಗ್ಗೆ ನಿಮಗೆ ಇರುವ ಆಸಕ್ತಿಗೆ ಹೆಚ್ಚಿನ ಸಮಯವನ್ನು ಮೀಸಲಿಡಿ.
ಇನ್ನು ನಿಭಾಯಿಸುವುದಕ್ಕೆ ಆಗುವುದಿಲ್ಲ ಎಂದೆನಿಸಿದ ಕೆಲವು ಸಂಬಂಧ- ವ್ಯಕ್ತಿಗಳಿಂದ ಮುಲಾಜಿಲ್ಲದೆ ಅಂತರವನ್ನು ಕಾಯ್ದುಕೊಳ್ಳಲಿದ್ದೀರಿ. ನಿಮ್ಮ ದಿರಿಸು, ಒಡವೆ, ಹೊರಗಿನ ಜನರಿಗೆ ಹೇಗೆ ಕಾಣಿಸಿಕೊಳ್ಳಬೇಕು ಎಂಬ ವಿಚಾರವಾಗಿ ಬಹಳ ಸಮಯದಿಂದ ನೀವು ಅಂದುಕೊಳ್ಳುತ್ತಾ ಇದ್ದಿರೋ ಆ ರೀತಿಯಾಗಿ ಬದಲಾವಣೆ ಅಳವಡಿಸಿಕೊಳ್ಳುವಿರಿ. ಸ್ವಂತ ಉದ್ಯಮ ಆರಂಭ ಮಾಡಬೇಕು ಎಂದುಕೊಂಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಾಡಲಿದೆ.
ಕಾಡಂಚಿನ ಪ್ರದೇಶಗಳಲ್ಲಿ ವಾಸ ಇರುವವರಿಗೆ ಪ್ರಾಣಿಗಳ ದಾಳಿ ತಲೆನೋವಾಗಿ ಮಾರ್ಪಡಲಿದೆ. ನಿಮ್ಮಲ್ಲಿ ಕೆಲವರು ಉದ್ಯೋಗವೋ ಅಥವಾ ಮತ್ತ್ಯಾವುದಾದರೂ ಕಾರಣದಿಂದ ಸ್ಥಳ ಬದಲಾವಣೆ ಮಾಡುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ನೀವು ಮಾಡಿದ ಕೆಲಸ- ಕಾರ್ಯಗಳ ಬಗ್ಗೆ ಹುಡುಕಿಕೊಂಡು ಕೊಂಕು ಹೇಳುವಂಥ ಕೆಲವು ವ್ಯಕ್ತಿಗಳ ಸ್ವಭಾವದ ಬಗ್ಗೆ ಬೇಸರ ಆಗಲಿದ್ದು, ಅದನ್ನು ಸಂಬಂಧಪಟ್ಟವರಿಗೆ ಹೇಳಿಯೂ ಹೇಳುತ್ತೀರಿ. ಮನೆ- ಸೈಟು ಅಥವಾ ಜಮೀನು ಖರೀದಿಗೆ ಮುಂಗಡ ನೀಡುವಂಥವರು ಕಾಗದ- ಪತ್ರಗಳನ್ನು ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಪರಿಶೀಲಿಸಿಕೊಳ್ಳಿ. ಏಕೆಂದರೆ ನಕಲಿ ದಾಖಲೆಗಳನ್ನು ನೀಡಿ, ನಿಮಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ. ಕಡಿಮೆ ಬೆಲೆ ಅಂತಲೋ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಖರೀದಿಗೆ ಆತುರ ಮಾಡುವುದಕ್ಕೆ ಹೋಗಬೇಡಿ.
ಮೀನು- ಮೊಲದ ಸಾಕಣೆ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಕೆಲವು ತಾಂತ್ರಿಕ ಅಗತ್ಯಗಳನ್ನು ಅಳವಡಿಕೆ ಮಾಡಿಕೊಳ್ಳಲು ಹಣವನ್ನು ಹೂಡಿಕೆ ಮಾಡಲಿದ್ದೀರಿ. ಡೇರಿ ಉತ್ಪನ್ನಗಳ ದೊಡ್ಡ ಮಟ್ಟದ ಮಾರಾಟ ಆರಂಭಿಸಬೇಕು ಎಂದು ಇರುವವರಿಗೆ ಸಂಬಂಧಿಗಳೇ ಹೂಡಿಕೆಗೆ ಬೇಕಾದ ಹಣವನ್ನು ನೀಡುವುದಾಗಿ ಮುಂದೆ ಬರಲಿದ್ದಾರೆ. ನಾಲ್ಕಾರು ರೈತರು ಸೇರಿ, ಸಂಘದ ರೂಪ ಕೊಟ್ಟು ಮಾಡಬೇಕು ಎಂದುಕೊಂಡ ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆ ಕಾಣಲಿದ್ದೀರಿ.
ನಿಮ್ಮ ಒಪ್ಪಿಗೆ ಪಡೆದು, ಒಂದಕ್ಕೆ ನಾಲ್ಕು ಬಾರಿ ಖಚಿತ ಮಾಡಿಕೊಂಡು ಮುಂದುವರಿದ ವ್ಯವಹಾರಗಳಿಂದ ಕೊನೆ ಕ್ಷಣದಲ್ಲಿ ಬೇಡ ಎಂದು ಹಿಂದಕ್ಕೆ ಸರಿಯುವುದು ಖಂಡಿತಾ ಒಳ್ಳೆ ಲಕ್ಷಣವಲ್ಲ. ಹೀಗೆ ಹೇಳುವುದಕ್ಕೆ ನಿಮಗೆ ಯಾವುದೇ ಕಾರಣ ಇರಬಹುದು. ಆದರೆ ತುಂಬ ಮುಂದುವರಿದ ನಂತರದಲ್ಲಿ ಈ ರೀತಿ ಮಾಡಬೇಡಿ. ತಂತ್ರಜ್ಞಾನಗಳ ಅಳವಡಿಕೆಗೆ ಹೆಚ್ಚು ಹಣವನ್ನು ಖರ್ಚು ಮಾಡಲಿದ್ದೀರಿ. ಇದರ ಅನುಕೂಲ ದೀರ್ಘಾವಧಿಯಲ್ಲಿ ಸಿಗಲಿದೆ. ನಿಮ್ಮ ಜತೆಗೆ ಕಾರ್ಯ ನಿರ್ವಹಿಸುವವರ ಅಭಿಪ್ರಾಯಕ್ಕೂ ಮನ್ನಣೆಯನ್ನು ನೀಡಿ.
ಎಲ್ಲವನ್ನೂ ನಾನೇ ಮಾಡುತ್ತೇನೆ ಎಂದು ಹೊರಡಬೇಡಿ. ಇತರರಿಂದ ನೆರವು ಪಡೆದುಕೊಳ್ಳುವುದರಿಂದ ಒತ್ತಡ ಕಡಿಮೆ ಆಗುತ್ತದೆ ಹಾಗೂ ಇನ್ನೂ ಅಚ್ಚುಕಟ್ಟಾಗಿ ಕೆಲಸ- ಕಾರ್ಯಗಳು ಆಗುತ್ತವೆ. ಪ್ರತಿಷ್ಠಿತ ಸಾಂಸ್ಕೃತಿಕಿ ಸ್ಪರ್ಧೆಗಳು, ಆಟೋಟದಲ್ಲಿ ಭಾಗವಹಿಸುವುದಕ್ಕೆ ನೀವು ಆಯ್ಕೆ ಆಗುವ ಅವಕಾಶಗಳು ಇವೆ. ಇವುಗಳಲ್ಲಿ ಭಾಗವಹಿಸುವುದರಿಂದ ತಪ್ಪಿಸಿಕೊಳ್ಳಬೇಡಿ. ಏಕೆಂದರೆ ನಿಮ್ಮ ಕೀರ್ತಿ- ಪ್ರತಿಷ್ಠೆಗಳು ಹೆಚ್ಚಾಗುವುದಕ್ಕೆ ಸಹಾಯ ಆಗುತ್ತದೆ. ನೀರು- ಆಹಾರ ಸೇವನೆ ವಿಚಾರದಲ್ಲಿ ಸ್ವಚ್ಛತೆಗೆ ಆದ್ಯತೆಯನ್ನು ನೀಡುವುದು ಮುಖ್ಯ.
ನೀವು ಆಡದ ಮಾತುಗಳು ಹಾಗೂ ನೀವು ವ್ಯಕ್ತಪಡಿಸಿದ ಭಾವನೆಗಳು ನಿಮ್ಮ ಮೇಲೆ ಹೇರಿ, ಸ್ನೇಹಿತರು- ಸಂಬಂಧಿಗಳ ಎದುರು ವಿಶ್ವಾಸ ಕುಸಿಯುವಂತೆ ಕೆಲವರು ಮಾಡಲಿದ್ದಾರೆ. ನೀವು ಯಾರನ್ನು ಹಚ್ಚಿಕೊಂಡಿದ್ದೀರಿ, ಹೆಚ್ಚು ಸಮಯ ಯಾರ ಜೊತೆಗೆ ಕಾಣಿಸಿಕೊಳ್ಳುತ್ತೀರಿ ಎಂಬ ಬಗ್ಗೆ ಗಮನ ನೀಡುವುದು ಮುಖ್ಯ. ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ ಇರುವವರಿಗೆ ದೈಹಿಕ- ಮಾನಸಿಕ ದಣಿವು ಕಾಡಲಿದೆ. ಇಷ್ಟು ಸಮಯ ಗೆಳೆತನದಲ್ಲಿ ಇರುವ ವ್ಯಕ್ತಿಯೊಬ್ಬರು ಪ್ರೇಮ ನಿವೇದನೆ ಮಾಡುವ ಸಾಧ್ಯತೆ ಇದೆ.
ನೀವು ಏನನ್ನು ಬಿತ್ತುತ್ತೀರೋ ಅದನ್ನೇ ಬೆಳೆಯುತ್ತೀರಿ ಎಂಬ ಬಗ್ಗೆ ಸ್ಪಷ್ಟತೆಯನ್ನು ಇರಿಸಿಕೊಳ್ಳಿ. ಸಂಬಂಧಗಳಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯಿಂದ ನಡೆದುಕೊಳ್ಳಿ. ಈ ಹಿಂದೆ ಯಾವಾಗಲೋ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಕಹಿಯಾದ ಮಾತುಗಳನ್ನು ಆಡಬೇಡಿ. ಕಡಿಮೆ ಆದಾಯ ಅಥವಾ ರಿಟರ್ನ್ಸ್ ಬರುತ್ತಿರುವ ಹೂಡಿಕೆಯನ್ನು ತೆಗೆದು, ಹೆಚ್ಚಿನ ರಿಟರ್ನ್ಸ್ ತರುವಂಥ ಕಡೆ ಹೂಡಿಕೆ ಮಾಡಲು ಆದ್ಯತೆಯನ್ನು ನೀಡಲಿದ್ದೀರಿ. ಆಹಾರ ಪದಾರ್ಥಗಳ ಉತ್ಪಾದನೆ ಘಟಕವನ್ನು ಶುರು ಮಾಡುವುದಕ್ಕೆ ಹಣ ಹೂಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ರೊಟ್ಟಿ ತಯಾರಿ, ಚಪಾತಿ ಮಾಡುವುದು ಈ ರೀತಿಯ ಘಟಕಗಳನ್ನು ಆರಂಭಿಸುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಿಗಳಿಗೆ ನೀವು ಬಯಸದ ವಿಭಾಗಕ್ಕೆ ಅಥವಾ ಪ್ರದೇಶಕ್ಕೆ ವರ್ಗಾವಣೆ ಆಗಿ, ಅದನ್ನು ರದ್ದು ಮಾಡಿಸಿಕೊಳ್ಳಲು ವಿಪರೀತ ಓಡಾಟ ಆಗಲಿದೆ. ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಶುಭ ಸುದ್ದಿ ದೊರೆಯಲಿದೆ. ಅನವಶ್ಯಕವಾದ ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಅಗತ್ಯ.
ಉಳುಮೆ ಮಾಡಿದ ಹಾಗೇ ಪಾಳು ಬಿದ್ದಿರುವಂಥ ಭೂಮಿಯ ಪೈಕಿ ಕೆಲವಷ್ಟನ್ನು ಮಾರಾಟ ಮಾಡುವುದಕ್ಕೆ ಮುಂದಾಗಲಿದ್ದೀರಿ. ಅದಕ್ಕಾಗಿ ಕುಟುಂಬ ಸದಸ್ಯರ ಸಮ್ಮತಿ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತೀರಿ. ಆಹಾರ ಧಾನ್ಯಗಳ ಬೆಳೆಯನ್ನು ಬೆಳೆಯುತ್ತಾ ಇರುವವರು ಪ್ರತಿಷ್ಠಿತ ಸಂಸ್ಥೆಗಳ ಜೊತೆಗೆ ಮಾರಾಟ ಒಪ್ಪಂದ ಮಾಡಿಕೊಳ್ಳುವಂಥ ಯೋಗ ಇದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ- ಕಾರ್ಯಗಳನ್ನು ಪಟ್ಟು ಹಿಡಿದು ಮಾಡಿಸಿಕೊಳ್ಳುವಲ್ಲಿ ಯಶಸ್ವಿ ಆಗಲಿದ್ದೀರಿ.
ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಡಿ. 21 ರಿಂದ 27ರ ವರೆಗಿನ ವಾರಭವಿಷ್ಯ ತಿಳಿಯಿರಿ
ಯಾರ ಬಳಿ ಎಷ್ಟು ಮಾಹಿತಿ ನೀಡಬೇಕು ಎಂಬ ಸ್ಪಷ್ಟತೆ ಇರಿಸಿಕೊಳ್ಳುವುದು ಮುಖ್ಯ. ವೃತ್ತಿ ರಹಸ್ಯಗಳು- ಗುಟ್ಟು ಎನಿಸುವಂಥದ್ದು ಎಲ್ಲರ ಜೊತೆಗೂ ಹಂಚಿಕೊಳ್ಳಬಾರದು ಎಂದು ಹಲವು ಬಾರಿ ಅನಿಸಲಿದೆ. ನಿಮಗಿಂತ ಹೆಚ್ಚು ಹೆಸರು ಪಡೆದಿರುವಂಥ ಹಾಗೂ ಕ್ಲೈಂಟ್ ಗಳನ್ನು ಹೊಂದಿರುವಂಥ ಸಂಸ್ಥೆಯ ಮುಖ್ಯಸ್ಥರು ತಮ್ಮ ಜೊತೆಗೂಡಿ ಕೆಲಸ ಮಾಡುವಂತೆ ಆಹ್ವಾನ ನೀಡುವ ಸಾಧ್ಯತೆ ಇದೆ. ಇಂಥವುಗಳನ್ನು ಸಕಾರಾತ್ಮವಾಗಿ ಪರಿಗಣಿಸಿ.
ಕೆಲವು ಪುಸ್ತಕಗಳ ಖರೀದಿಗೆ ಹೆಚ್ಚು ಖರ್ಚನ್ನು ಮಾಡಲಿದ್ದೀರಿ. ಪ್ರವೇಶ ಪರೀಕ್ಷೆಗಳಿಗೆ ಸಿದ್ಧ ಆಗುವ ಸಲುವಾಗಿಯೇ ಟ್ಯೂಷನ್ ಗೆ ಸೇರುವ ಬಗ್ಗೆ ಪೋಷಕರ ಜೊತೆ ಮಾತುಕತೆ ನಡೆಸಲಿದ್ದೀರಿ. ಇದಲ್ಲೆ ಅವರ ಒಪ್ಪಿಗೆ ಸಹ ಸಿಗಲಿದ್ದು, ಭವಿಷ್ಯದಲ್ಲಿ ಇದರಿಂದ ಅನುಕೂಲ ಆಗಲಿದೆ. ಇನ್ನೂ ನಿಧಾನ ಆಗಬಹುದು ಎಂದು ನೀವಂದುಕೊಂಡಿದ್ದ ಕೆಲವು ವಿಚಾರಗಳು ವೇಗವಾಗಿ ಮುಗಿಯಲಿದ್ದು, ಅದಕ್ಕೆ ಬೇಕಾದ ತಯಾರಿಗೆ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ.
ತಾಯಿ, ಅಕ್ಕ- ತಂಗಿಯರ ಅನಾರೋಗ್ಯ ಸಮಸ್ಯೆಯು ಚಿಂತೆಗೆ ಕಾರಣ ಆಗಲಿದೆ. ಅವರ ಕಡೆಗೆ ಹೆಚ್ಚಿನ ಗಮನ ನೀಡಬೇಕಾದಂಥ ಪರಿಸ್ಥಿತಿ ಬರುವುದರಿಂದ ನಿಮ್ಮ ಮನೆಯ ಕೆಲಸ- ಕಾರ್ಯಗಳು ಹಾಗೇ ಉಳಿದುಕೊಳ್ಳಲಿದೆ. ನಿಮ್ಮ ಬಳಿ ಎಷ್ಟು ಹಣ ಇದೆಯೋ ಆ ಮೊತ್ತಕ್ಕೆ ಮಾತ್ರ ಬಜೆಟ್- ಪ್ಲಾನಿಂಗ್ ಮಾಡಿಕೊಳ್ಳಿ. ಸಾಲ ತಂದು ಯಾವುದೇ ಹೂಡಿಕೆಯನ್ನು ಮಾಡುವುದಕ್ಕೆ ಹೋಗಬೇಡಿ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Mon, 22 December 25