ತಿಥಿ ಮತ್ತು ವಾರಗಳ ಸಂಯೋಜನೆ ಹೇಗಿದ್ದರೆ ಕಾರ್ಯ ಸಫಲ?
ಇದು ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ತಿಳಿದರೆ, ಮುಂದೆ ಅದನ್ನು ಸರಿಮಾಡಿಕೊಳ್ಳಬಹುದು ಅಥವಾ ಹಿಂದೆ ಆಗಿದ್ದಕ್ಕೆ ಚಿಂತನೆ ನಡೆಸಲು ಸಾಧ್ಯ. ಆ ದಿನದ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳು ಮುಖ್ಯವಾಗಿರುತ್ತವೆ. ಇವುಗಳ ಸಂಯೋಜನೆಯಿಂದ ಕಾರ್ಯಗಳ ಸಫಲತೆ ವಿಫಲತೆಗಳು ನಿರ್ಧಾರವಾಗುತ್ತವೆ. ಅವುಗಳು ಹೇಗೆ ಕಾರ್ಯನಿರ್ವಹಿಸುತ್ತದೆ. ಇಲ್ಲಿದೆ ನೋಡಿ

ಪ್ರತಿದಿನ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಒಂದೇ ವಾರವೂ ಒಂದೇ ರೀತಯ ಫಲದಾಯಕವಾಗಿರದು. ಅದಕ್ಕೆ ಕಾರಣ ಆ ದಿನದ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳು ಮುಖ್ಯವಾಗಿರುತ್ತವೆ. ಇವುಗಳ ಸಂಯೋಜನೆಯಿಂದ ಕಾರ್ಯಗಳ ಸಫಲತೆ ವಿಫಲತೆಗಳು ನಿರ್ಧಾರವಾಗುತ್ತವೆ. ಇದು ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ತಿಳಿದರೆ, ಮುಂದೆ ಅದನ್ನು ಸರಿಮಾಡಿಕೊಳ್ಳಬಹುದು ಅಥವಾ ಹಿಂದೆ ಆಗಿದ್ದಕ್ಕೆ ಚಿಂತನೆ ನಡೆಸಲು ಸಾಧ್ಯ.
ತಿಥಿ ಮತ್ತು ವಾರಗಳ ಸಂಯೋಜನೆಯನ್ನು ನೋಡುವುದಾದರೆ, ಒಂದರಿಂದ ಹದಿನೈದರವರೆಗಿನ ತಿಥಿಗಳಿಗೆ ನಂದಾ, ಭದ್ರಾ, ಜಯಾ, ರಿಕ್ತಾ, ಪೂರ್ಣಾ ಎಂಬ ಅನುಕ್ರಮ ಸಂಜ್ಞೆಗಳಿವೆ. ಇದನ್ನು ವಾರಕ್ಕೆ ಯೋಜಿಸಿದಾಗ ಯಾವುದು ಯಾವ ವಾರಕ್ಕೆ ಶುಭ ಎನ್ನುವುದು ಗೊತ್ತಾಗಲಿದೆ. ರವಿವಾರಕ್ಕೆ ಜಯಾ ತಿಥಿ ಶ್ರೇಷ್ಠ. ಅಂದರೆ ತೃತೀಯಾ ಅಷ್ಟಮೀ, ತ್ರಯೋದಶೀ ಈ ಮೂರು ತಿಥಿಗಳಿಗೆ ರವಿವಾರವಾದರೆ ಶುಭ. ಸೋಮವಾರಕ್ಕೆ ನಂದಾ ತಿಥಿ ಅಂದರೆ ಪ್ರತಿಪತ್, ಷಷ್ಠೀ, ಏಕಾದಶೀ ಉತ್ತಮ. ಮಂಗಳವಾರಕ್ಕೆ ಜಯಾತಿಥಿ ಅಂದರೆ ತೃತೀಯಾ, ಅಷ್ಟಮೀ, ತ್ರಯೋದಶೀ ತಿಥಿಗಳು ಮಂಗಳಕರ. ಬುಧವಾರದಂದು ಭದ್ರಾತಿಥಿ ಅಂದರೆ ದ್ವಿತೀಯಾ, ಸಪ್ತಮೀ, ದ್ವಾದಶೀ ತಿಥಿಗಳು, ಗುರುವಾರದಂದು ಪೂರ್ಣಾತಿಥಿ ಅಂದರೆ ಪಂಚಮೀ, ದಶಮೀ, ಪೂರ್ಣಿಮಾ ಅಥವಾ ಅಮಾವಾಸ್ಯಾ ಬಂದರೆ, ಶುಕ್ರವಾರದಂದು ನಂದಾತಿಥಿ ಎಂದರೆ ಪ್ರತಿಪತ್, ಷಷ್ಠೀ, ಏಕಾದಶೀ, ಶನಿವಾರ ಬಂದರೆ ರಿಕ್ತಾತಿಥಿ ಎಂದರೆ ಚತುರ್ಥೀ, ನವಮೀ, ಚತುರ್ದಶೀ ಶ್ರೇಯಸ್ಕರವಾದುದು.
ಈ ಸಂಯೋಜನೆ ಬಂದಾಗ ನೀವು ಮಾಡುವ ಹೊಸ ಕೆಲಸಗಳು ಅಥವಾ ಮಾಡುತ್ತಿರುವ ಕೆಲಸಕ್ಕೆ ಕಾಲದ ಅನುಕೂಲತೆ ಅಧಿಕವಾಗಿ ಸಿಗುತ್ತದೆ. ಇಲ್ಲವಾದರೆ ಶ್ರಮ ಹೆಚ್ಚು, ಫಲ ಕಡಿಮೆಯಾಗಿ, ನಿರಾಸೆ ಉಂಟಾಗಬಹುದು. ಅಥವಾ ವ್ಯತಿರಿಕ್ತವೂ ಆಗಬಹುದು. ಇದು ಗೊತ್ತಾದಾಗ ಸಮಾಧಾನ, ಮುಂದೆ ಮಾಡುವಾಗ ಎಚ್ಚರಿಕೆ ಎರಡೂ ಸಿಗಲು ಸಾಧ್ಯ.
ಅಮೃತಯೋಗ :
ಈ ತಿಥಿ ಮತ್ತು ವಾರಗಳಲ್ಲಿ ಬರುವ ಇನ್ನಷ್ಟು ಮುಖ್ಯಾಂಶಗಳನ್ನು ಗಮನಿಸುವುದಾದರೆ ಅಮೃತಯೋಗ ಉಂಟಾಗುವುದನ್ನು ನೋಡಬಹುದು. ಬುಧ ಹಾಗು ಶನಿವಾರದಂದು ನಂದಾ ತಿಥಿ, ಮಂಗಳವಾರಕ್ಕೆ ಭದ್ರಾ, ಗುರುವಾರ ಜಯಾ, ಭಾನುವಾರ ಮತ್ತು ಸೋಮವಾದ ನಂದಾ, ಶುಕ್ರವಾರ ರಿಕ್ತಾ ಬಂದರೆ ಅಮೃತ ಯೋಗ. ಅಂದರೆ ಅಂದು ಆರಂಭವಾದ ಕಾರ್ಯ ನಾಶವಾಗದು. ಅಮೃತಪಾನದಂತೆ ಚಿರವಾಗಿ ಉಳಿಯುವುದು.
ಮೃತ್ಯುಯೋಗ :
ನಂದಾ ತಿಥಿಯಲ್ಲಿ ಸೂರ್ಯ ಮತ್ತು ಮಂಗಳವಾರ ಬಂದರೆ, ಭದ್ರಾ ತಿಥಿಯಲ್ಲಿ ಶುಕ್ರ ಮತ್ತು ಸೋಮವಾರ ಬಂದರೆ, ಜಯಾ ತಿಥಿಯಲ್ಲಿ ಬುಧವಾರವಿದ್ದರೆ, ರಿಕ್ತಾ ತಿಥಿಯಲ್ಲಿ ಗುರುವಾರ ಬಂದರೆ, ಶನಿವಾರದಂದು ರಿಕ್ತಾ ತಿಥಿ ಬಂದರೆ ಮೃತ್ಯು ಉಂಟಾಗುವುದು. ಇದರಿಂದ ಕಾರ್ಯಗಳ ನಾಶ ಅಥವಾ ಕಾರ್ಯವನ್ನು ಆರಂಭಿಸಿದವನ ನಾಶವೂ ಆಗುವುದು.
ನೂತನ ಕಾರ್ಯಕ್ಕೆ ಶುಭವಲ್ಲ :
ದ್ವಾದಶೀ ಮತ್ತು ರವಿವಾರ, ಸೋಮವಾರ ಮತ್ತು ಏಕಾದಶೀ, ಮಂಗಳವಾರ ಮತ್ತು ದಶಮೀ, ಬುಧವಾರ ಮತ್ತು ತೃತೀಯಾ, ಗುರುವಾರ ಮತ್ತು ಷಷ್ಠೀ, ಶುಕ್ರವಾರ ಮತ್ತು ದ್ವಿತೀಯಾ, ಶನಿವಾರ ಮತ್ತು ಸಪ್ತಮೀ ತಿಥಿಗಳ ಕಾರ್ಯಧ್ವಂಸಕ ಸಂಯೋಜನೆಗಳು.
ಒಂದು ಕಾರ್ಯಗಳ ಹಿಂದೆ ಎಷ್ಟೆಲ್ಲ ಚರ್ಚೋಪಚರ್ಚೆಗಳು ನಡೆದಿರುತ್ತದೆ ಎನ್ನುವುದನ್ನು ಅರ್ಥಮಾಡಿಕೊಂಡಾಗ ಕಾಲ ಎನ್ನುವುದು ಎಷ್ಟು ನಿಗೂಢ ಮತ್ತು ಎಷ್ಟು ಶಕ್ತಿಶಾಲಿ ಎನ್ನುವ ಅರಿವುದು ಮೂಡುತ್ತದೆ.
– ಲೋಹಿತ ಹೆಬ್ಬಾರ್ – 8762924271