ನಿಮ್ಮ ಬಾಸ್ ರಾಶಿ ಯಾವುದು? ಅದರ ಆಧಾರದಲ್ಲಿ ಅವರು ಹೇಗೆ ಅಂತ ಹೇಳಬಹುದು. ಮೇಷದಿಂದ ಮೀನದ ತನಕ ಯಾವ ರಾಶಿಯ ಬಾಸ್ ಹೇಗೆ ಇರಬಹದು ಅನ್ನೋದನ್ನ ಈ ಲೇಖನದಲ್ಲಿ ಓದಿ.
ಈ ರಾಶಿಯ ಬಾಸ್ ಇದ್ದರೆ ಪ್ರತಿಯೊಂದಕ್ಕೂ ತಾನೇ ಮುಂದೆ ನಿಂತಿರಬೇಕು ಅಂದುಕೊಳ್ಳುತ್ತಾರೆ. ಸಮಸ್ಯೆಗಳು ಅಂತ ಬಂದರಂತೂ ಭಯಂಕರ ಯುದ್ಧೋತ್ಸಾಹ. ಅಕ್ಷರಶಃ ರಣರಂಗದಲ್ಲಿ ನಿಂತು ಕಾದಾಡಿದಂಥ ಅನುಭವ ಇರುತ್ತದೆ. ಎಲ್ಲವೂ ಆರಾಮವಾಗಿದೆ ಅನ್ನೋದು ಈ ಆಸಾಮಿಗೆ ಜೀರ್ಣಿಸಿಕೊಳ್ಳುವುದಕ್ಕೆ ಆಗಲ್ಲ. ಸ್ವಲ್ಪ ಬೇಗ ಮನೆಗೆ ಹೋಗಿ, ಹೆಂಡತಿ- ಮಕ್ಕಳಿಗೂ ಟೈಮ್ ಕೊಡಿ ಅಂತ ಯಾರಾದರೂ ಇವರಿಗೆ ಹೇಳಲ್ಲವಾ ಅನಿಸುತ್ತದೆ. ಇಂಪಾಸಿಬಲ್ ಟಾಸ್ಕ್ ಗಳನ್ನು ಒಪ್ಪಿಕೊಂಡು ಬಂದುಬಿಟ್ಟು, ಜತೆಯಲ್ಲಿ ಅಥವಾ ಕೈ ಕೆಳಗೆ ಕೆಲಸ ಮಾಡುವವರಿಗೆ ಹಬ್ಬ ಮಾಡಿಬಿಡುತ್ತಾರೆ.
ತನ್ನದೇ ಆಲೋಚನೆಯಲ್ಲಿ ಮುಳುಗಿರುವ ಇವರು ಪ್ರತಿ ಸನ್ನಿವೇಶಕ್ಕೂ ಒಂದೊಂದು ಸಲ್ಯೂಷನ್ ಮುಂಚೆಯೇ ತಯಾರು ಮಾಡಿಟ್ಟುಕೊಂಡಿರುತ್ತಾರೆ. ಆದರೆ ಜತೆಯಲ್ಲಿ ಕೆಲಸ ಮಾಡುವವರು ಏನು ಹೇಳುತ್ತಾರೆ ಅನ್ನೋದನ್ನ ಗಮನಿಸುತ್ತಾ ಇರುತ್ತಾರೆ. ಬಹಳ ಡಲ್ ಆಗಿ ಅಥವಾ ಯಾವುದೋ ಬೇಜಾರಿನಲ್ಲಿ ಇರುವಂತೆ ಇವರೆದುರು ಕಾಣಿಸಿಕೊಂಡು ಬಿಟ್ಟರೆ ಬಲೇ ಕಷ್ಟ ಕಣ್ರೀ. ಏಕೆಂದರೆ ಈ ಹಿಂದೆ ನೀವು ಎಷ್ಟು ಕೆಲಸ ಮಾಡಿದ್ದಿರಿ, ಪ್ರತಿ ದಿನದ ಬ್ರೇಕ್ ಎಷ್ಟು ಹೊತ್ತು ತಗೊಳ್ತೀರಿ ಹೀಗೆ ಪ್ರತಿಯೊಂದರ ರಿಪೋರ್ಟ್ ಕೊಡು ಅಂತ ನಿಂತುಬಿಡ್ತಾರೆ.
ಮಳೆ- ಬಿಸಿಲು ಎರಡೂ ಒಟ್ಟಿಗೆ ಬಂದರೇನೇ ತಾನೆ ಕಾಮನಬಿಲ್ಲು. ಮಿಥುನ ರಾಶಿಯ ಬಾಸ್ಗಳೆಂದರೆ ಕಾಮನಬಿಲ್ಲು. ಗ್ಯಾನ ಬಂದ ಗಿರಾಕಿ ಅಂತೀವಲ್ಲ ಹಾಗೆ ಇವರು. ಒಂದೊಂದು ಸಲ ಅತಿಯಾದ ಪ್ರೀತಿ, ಇನ್ನೊಂದು ಸಲ ಭೀಕರವಾದ ವಿಮರ್ಶೆ. ಐದು ನಿಮಿಷದ ಹಿಂದೆ ಸರಿಯಾಗಿಯೇ ಇದ್ದೆಯಲ್ಲಾ ಗುರು ಅಂದುಕೊಳ್ಳಬೇಕು ಮನಸ್ಸಿನಲ್ಲಿ ಹಾಗಿರುತ್ತದೆ ಇವರ ವರ್ತನೆ. ಆದರೆ ಜತೆಯಲ್ಲಿ ಕೆಲಸ ಮಾಡುವವರನ್ನ ಕಷ್ಟದಲ್ಲಿ ಕೈ ಬಿಡುವಂಥವರಲ್ಲ.
ಈ ರಾಶಿಯವರು ಬಾಸ್ ಆದಲ್ಲಿ ಇವರನ್ನು ಹುಡುಕಾಡಬೇಕಾಗುತ್ತದೆ. ಏಕೆಂದರೆ ತನ್ನದು ದೊಡ್ಡ ಹುದ್ದೆ, ಅಧಿಕಾರ ಚಲಾಯಿಸಬೇಕು, ದೊಡ್ಡ ಕೋಣೆಯಲ್ಲಿ ಅದಕ್ಕಿಂತ ದೊಡ್ಡ ಮೇಜು, ಕುರ್ಚಿ ಹಾಕಿಕೊಂಡು ಕೂತು ತಾನು ಏನು ಎಂಬುದನ್ನು ಎಲ್ಲರಿಗೂ ಅರ್ಥ ಮಾಡಿಸಬೇಕು ಎಂದೆಲ್ಲ ಯೋಚಿಸದ ಸಾದಾ- ಸೀದಾ ಮಂದಿ ಇವರು. ನಗುನಗುತ್ತಲೇ ಕೆಲಸ ಮಾಡಿಸಿಕೊಳ್ಳುತ್ತಾರೆ. ಎಲ್ಲರೊಳಗೆ ತಾವೂ ಒಬ್ಬರಾಗಿ ಅಚ್ಚುಕಟ್ಟಾಗಿ ಕೆಲಸ ಮಾಡಿಸುತ್ತಾರೆ.
ಬಾಸ್ ಈಸ್ ಆಲ್ ವೇಸ್ ರೈಟ್. ಒಂದು ವೇಳೆ ನಿಮ್ಮ ಬಾಸ್ ರಾಶಿ ಸಿಂಹವಾಗಿದ್ದಲ್ಲಿ ಇದನ್ನು ಪಾಲಿಸಿ. ಏಕೆಂದರೆ ಸಾವಿರ ಜನರ ಮಧ್ಯೆಯೇ ಇದ್ದರೂ ತನ್ನನ್ನ ಗುರುತಿಸಬೇಕು, ತನಗೆ ತಿಳಿಸಬೇಕಾದ ಮಾಹಿತಿಯನ್ನ ನೀಡಬೇಕು, ತಾನು ಸ್ಪೆಷಲ್ ಅನ್ನೋದು ಇವರ ಮನಸ್ಥಿತಿ ಆಗಿರುತ್ತದೆ. ಇನ್ನು ಈ ರಾಶಿಯವರಿಗೆ ಸ್ವಭಾವತಃ ಮುನ್ನಡೆಸುವಂಥ ಗುಣ ಬಂದಿರುತ್ತದೆ. ಆದ್ದರಿಂದ ಸಿಂಹ ಅಂದರೆ ಬಾಸ್, ಬಾಸ್ ಅಂದರೆ ಸಿಂಹ ಅಂತಲೇ.
ಈ ರಾಶಿಯ ಬಾಸ್ ಹತ್ತಿರ ಎಷ್ಟು ಪ್ರಯತ್ನ ಪಟ್ಟರೂ ಸಣ್ಣ ಬಿಡುವು ಸಹ ಸಿಗದಂತೆ ಕೆಲಸ ಮಾಡಿಸ್ತಾರೆ. ನನಗೆ ಇದು ಸ್ವಲ್ಪ ಅರ್ಥ ಆಗ್ತಿಲ್ಲ, ಒಂಚೂರು ಡೀಟೇಲಾಗಿ ಹೇಳ್ತೀರಾ ಎಂದು ಸಾಫ್ಟ್ ಆಗಿ ಕೇಳಿದರು ಅಂದುಕೊಳ್ಳಿ. ಅತ್ಯುತ್ಸಾಹದಿಂದ ನೀವು ವಿವರಿಸುವುದಕ್ಕೆ ಆರಂಭಿಸಿದರೆ ಅಲ್ಲಿಂದ ಆಚೆಗೆ ಪ್ರತಿ ದಿನದ ಕೆಲಸ ಕನಿಷ್ಠ ಮೂವತ್ತು ನಿಮಿಷ ಜಾಸ್ತಿ ಆಯಿತು ಅಂತಲೇ ಅರ್ಥ. ನಿಮ್ಮಿಂದಲೇ ಮಾಹಿತಿ ತಗೊಂಡು, ನಿಮಗೆ ಕೆಲಸಗಳನ್ನು ಅಂಟಿಸುವ ಆಸಾಮಿ ಇವರು.
ಒಂದು ಆಫೀಸಿನಲ್ಲಿ ಒನ್ ಸೈಡೆಡ್ ಕೂಗಾಟ- ಕಿರುಚಾಟ ಇದೆ ಅಂತಾದರೆ ಅಲ್ಲಿ ತುಲಾ ರಾಶಿಯ ಬಾಸ್ ಇದ್ದಾರೆ ಅಂತಲೇ ಅರ್ಥ. ಎದುರಿನಲ್ಲಿ ಇರುವವರಿಗೆ ತಮ್ಮದೊಂದು ವರ್ಷನ್ ಇದೆ ಎಂಬ ಅಭಿಪ್ರಾಯವನ್ನು ಸಹ ಹೇಳುವುದಕ್ಕೆ ಬಿಡದೆ ಎಗಾದಿಗಾ ಕಿರುಚಾಡುತ್ತಲೇ ಇರುತ್ತಾರೆ. ಅವರ ಉದ್ದೇಶ ಏನೆಂದರೆ, ಎಲ್ಲರೂ ತಮಗೆ ಹೆದರಲಿ, ತಾನು ಏನನ್ನೋ ಮೆಚ್ಚಿಬಿಟ್ಟಲ್ಲಿ ಅದನ್ನೇ ಮಹಾ ಸಾಧನೆ ಅಂದುಕೊಳ್ಳಲಿ ಎಂಬುದಾಗಿರುತ್ತದೆ.
ಈ ರಾಶಿಯ ಬಾಸ್ ಎದುರು ಸಣ್ಣ ಸುಳ್ಳು ಅಥವಾ ಉತ್ಪ್ರೇಕ್ಷೆಯಿಂದ ಏನಾದರೂ ಹೇಳಿಬಿಟ್ಟರೆ ಅದನ್ನು ಜನ್ಮದಲ್ಲಿ ಮರೆಯದ ‘ಚೇಳು’ ಪದೇಪದೇ ಅದನ್ನೇ ಹಿಡಿದು ಜಗ್ಗಾಡುವುದಕ್ಕೆ ಶುರು ಮಾಡುತ್ತದೆ. ಸಲುಗೆ ಕೊಟ್ಟಂತೆಯೇ ಕಾಣುವ, ನಿಮ್ಮ ಕಷ್ಟವನ್ನು ಅಪಾರ ಕಾಳಜಿಯಿಂದ ಕೇಳಿಸಿಕೊಳ್ಳುವಂತೆ ಮಾಡುವ ಈ ರಾಶಿಯ ಬಾಸ್ಗಳು ಯಾವಾಗ ಬೇಕಾದರೂ ನಿಮ್ಮನ್ನು ಇಲ್ಲಿಂದ ಕಳಚಿಕೋ ಎಂದುಬಿಡಬಹುದು. ಆದ್ದರಿಂದ ಈ ರಾಶಿಯ ಬಾಸ್ಗಳ ಬಳಿ ಅಂತರ ಇಟ್ಟುಕೊಳ್ಳುವುದು ಉತ್ತಮ.
ತನ್ನನ್ನು ಬಿಟ್ಟು ಉಳಿದವರೆಲ್ಲರೂ ಅಷ್ಟೇನೂ ಕೆಲಸಕ್ಕೆ ಬರಲ್ಲ ಎಂಬ ಧೋರಣೆಯಿಂದ ನಡೆದುಕೊಳ್ಳುವಂಥ ಬಾಸ್ ಇವರು. ಒಂದಿಷ್ಟು ಕೊಂಕು, ಹಂಗಿಸುವುದು, ಮೂದಲಿಸುವುದು ಇಂಥದ್ದೆಲ್ಲ ಮಾಡುತ್ತಾ ಇದ್ದಾರೆ ಅಂದರೆ ಅದು ಒಬ್ಬ ವ್ಯಕ್ತಿಗೆ ಅಂತಲ್ಲ, ಅದು ಇಡೀ ಕಚೇರಿಗೆ ಒಂದು ಸಂದೇಶ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಈ ರಾಶಿಯ ಬಾಸ್ ಮೆಚ್ಚಿಸುವಂತೆ ಕೆಲಸ ಮಾಡುತ್ತೀನಿ ಎಂದು ಯಾರಾದರೂ ಅಂದುಕೊಂಡರೆ ಹಣ್ಣುಗಾಯಿ- ನೀರುಗಾಯಿ ಆಗಿಬಿಡ್ತಾರೆ.
ಇದನ್ನೂ ಓದಿ:ಈ ರಾಶಿಯವರಿಗೆ ಲವ್ ಮ್ಯಾರೇಜ್ ಆಗಿಬರಲ್ಲವಂತೆ; ಯಾಕೆ ಗೊತ್ತಾ?
ಊಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬಂಥ ವ್ಯಕ್ತಿತ್ವ ಅಂದರೆ ಅದು ಮಕರ ರಾಶಿಯ ಬಾಸ್. ಮುಖದ ಮೇಲೆ ಯಾವ ಭಾವನೆಯನ್ನೂ ತೋರಗೊಡದ ಮಕರ ರಾಶಿಯ ಬಾಸ್ಗಳು ತಾವೇ ಮೈ ಮೇಲೆ ಹಾಕಿಕೊಂಡು ಯಾವುದೋ ಒಂದು ಸಣ್ಣ ಕೆಲಸವನ್ನೇ ದಿನಗಟ್ಟಲೆ ಮಾಡುತ್ತಾ ಇರುತ್ತಾರೆ. ಅದನ್ನು ಬಹಳ ಚೆನ್ನಾಗಿಯೂ ಮಾಡಿರುತ್ತಾರೆ. ಆದರೆ ಡೆಡ್ ಲೈನ್ ಒಳಗೆ ಮಾಡಲ್ಲ, ಅಷ್ಟೇ. ಇದನ್ನೇ ನಿಮ್ಮಿಂದ ಡೆಡ್ ಲೈನ್ ಒಳಗಾಗಿ ನಿರೀಕ್ಷೆ ಮಾಡುತ್ತಾರೆ ಎಂಬುದೇ ಸಮಸ್ಯೆ,
ತನ್ನ ಜತೆ, ಕೈ ಕೆಳಗೆ ಕೆಲಸ ಮಾಡುವವರನ್ನೆಲ್ಲ ರೇಸ್ನಲ್ಲಿ ಎದ್ದು ಬಿದ್ದು ಓಡುವಂತೆ ಮಾಡುವಲ್ಲಿ ಇವರು ನಿಸ್ಸೀಮರು. ಪರ್ಫಾರ್ಮೆನ್ಸ್ ಅಪ್ರೈಸಲ್ ಅಂತ ಬಂದಾಗ ನೀವು ಇಡೀ ವರ್ಷ ಏನೂ ಮಾಡೇ ಇಲ್ಲವೇನೋ ಎಂಬಂತೆ ಹೆಜ್ಜೆಹೆಜ್ಜೆಗೂ ಅನಿಸುವಂತೆ ಮಾಡುವುದಕ್ಕೆ ಯತ್ನಿಸುತ್ತಾರೆ. ಕುಂಭ ರಾಶಿಯ ಬಾಸ್ಗೆ ಮೇಷ ಅಥವಾ ಸಿಂಹ ರಾಶಿಯ ವ್ಯಕ್ತಿ ಕೆಲಸಕ್ಕೆ ಸಿಕ್ಕರೆ ಅವರ ಮಧ್ಯದ ಸಂವಹನ ನೋಡುವುದಕ್ಕೆ ಸೊಗಸಾಗಿರುತ್ತದೆ.
ಈ ರಾಶಿಯ ಬಾಸ್ ನಿಗದಿ ಮಾಡುವ ಗುರಿಯನ್ನು ತಲುಪಿ, ಅವರನ್ನು ಮೆಚ್ಚಿಸ್ತೀನಿ ಎಂದು ಪ್ರಯತ್ನವೇ ಮಾಡದಿರುವುದು ಉತ್ತಮ. ಏಕೆಂದರೆ ಪ್ರತಿಯೊಂದಕ್ಕೂ ತನ್ನನ್ನೇ ಉದಾಹರಣೆಯಾಗಿ ಕೊಟ್ಟು, ನಿಮ್ಮ ಪರ್ಫಾರ್ಮೆನ್ಸ್ ಅಳೆಯುತ್ತಾರೆ. ಹಾಗಂತ ನಿಮಗೆ ಇಷ್ಟು ಸಂಬಳ ಸ್ವಾಮಿ, ಆದರೆ ನಮಗೆ ಇಷ್ಟು ಎಂದು ಮಾತನಾಡುವಂತೆಯೂ ಇರಲ್ಲ. ಆದರೆ ಇವರಿಗೆ ಅಂತ ಬಹಳ ಇಷ್ಟ ಆಗುವ ಕೆಲವರಿರುತ್ತಾರೆ, ಅವರಿಗೆ ಎಲ್ಲವೂ ಸಿಗುತ್ತಾ ಇರುತ್ತದೆ. ಅದೇ ಕಾರಣಕ್ಕೆ ಎರಡು ಟೀಮ್ ಅಂತ ಇದ್ದೇ ಇರುವಂಥ ಸನ್ನಿವೇಶ ಇರುತ್ತದೆ.