ಕರ್ನಾಟಕದ ಬ್ಯಾಂಕ್​ಗಳ ವಿಲೀನವಾಯ್ತು…ಈಗ ಮಂಗಳೂರಿನ MRPL ಸರದಿ​.. ಯಾರಿಗೆ ಹಾನಿ? ಹೇಗೆ?

ಕರ್ನಾಟಕದ ಬ್ಯಾಂಕ್​ಗಳ ವಿಲೀನವಾಯ್ತು...ಈಗ ಮಂಗಳೂರಿನ MRPL ಸರದಿ​.. ಯಾರಿಗೆ ಹಾನಿ? ಹೇಗೆ?
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್​ನ (HPCL) ಜೊತೆ ಎಮ್​ಆರ್​ಪಿಎಲ್​ ಸಂಸ್ಥೆಯನ್ನು ವಿಲೀನ?

ಮಂಗಳೂರಿನಲ್ಲಿರುವ ಎಮ್​ಆರ್​ಪಿಎಲ್​ ಸಂಸ್ಥೆ ಇನ್ನು ಕೆಲ ದಿನಗಳಲ್ಲಿ ಮುಂಬೈನ ಎಚ್​ಪಿಸಿಎಲ್​ ಜೊತೆ ವಿಲೀನವಾಗುವ ಸಂದರ್ಭವಿದೆ. ಇದು ಕರ್ನಾಟಕಕ್ಕೆ ಹೇಗೆ ಹಾನಿಯಾಗುವುದು ಎಂಬುದರ ವಿವರ ಇಲ್ಲಿದೆ.

bhaskar hegde

|

Jan 18, 2021 | 6:28 PM

ಕಾರ್ಪೋರೇಶನ್ ಬ್ಯಾಂಕ್​ ಆಯ್ತು. ಸಿಂಡಿಕೇಟ್ ಬ್ಯಾಂಕ್​ ಆಯ್ತು. ವಿಜಯಾ ಬ್ಯಾಂಕ್ ಆಯ್ತು. ಸ್ಟೇಟ್​ ಬ್ಯಾಂಕ್​ ಆಫ್ ಮೈಸೂರು ಆಯ್ತು. ಮುಂದಿನ ಸರದಿ ಮಂಗಳೂರಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ (MRPL) ಲಿಮಿಟೆಡ್​ಸಂಸ್ಥೆಯದ್ದಾ? ದೇಶದ ದೊಡ್ಡ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್​ನ (HPCL) ಜೊತೆ ಎಮ್​ಆರ್​ಪಿಎಲ್​ ಸಂಸ್ಥೆಯನ್ನು ವಿಲೀನ ಮಾಡುತ್ತಾರೆ ಎಂಬ ಸುದ್ದಿ ಇದೆ. ಈಗಾಗಲೇ ಈ ಎರಡೂ ಕಂಪೆನಿಗಳ ಬೋರ್ಡ್​ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿವೆ. ಕೇಂದ್ರದ ಪೆಟ್ರೋಲಿಯಂ​ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್​ಗೆ ಈ ಕುರಿತು ಪತ್ರ ಬರೆದಿರುವ ಹಣಕಾಸು ತಜ್ಞ ವಿವೇಕ್ ಮಲ್ಯ ಈ ನಿರ್ಣಯವನ್ನು ಜಾರಿಗೆ ತರಬೇಡಿ ಮತ್ತು ಇದನ್ನು ಜಾರಿಗೆ ತಂದರೆ ಇದು ಹೇಗೆ ಕರ್ನಾಟಕಕ್ಕೆ ಮಾರಕವಾಗಬಹುದು ಎಂಬುದನ್ನು ವಿವರಿಸಿದ್ದಾರೆ.

ವಿವೇಕ್ ಮಲ್ಯ ಹಣಕಾಸು ತಜ್ಞ ಮಾತ್ರ ಅಲ್ಲ, ಈ ಹಿಂದೆ ದೇಶದ ಒಂದು ಸಾರ್ವಜನಿಕ ಕ್ಷೇತ್ರದಲ್ಲಿನ ಪಟ್ರೋಲಿಯಂ​ ಸಂಸ್ಥೆಯ ಸ್ವತಂತ್ರ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ. ಈ ಅನುಭವದ ಹಿನ್ನೆಲೆಯಲ್ಲಿ ಅವರು ಪ್ರಧಾನ್​ ಅವರಿಗೆ ಬರೆದಿರುವ ಪತ್ರ ಬಹಳ ಮುಖ್ಯ ಎನ್ನಿಸಿಕೊಳ್ಳುತ್ತದೆ.

ಪತ್ರದ ಮುಖ್ಯಾಂಶಗಳೇನು? ವಾರ್ಷಿಕ ರೂ 60,000 ಕೋಟಿ ವ್ಯವಹಾರ ನಡೆಸುತ್ತಿರುವ ಎಮ್​ಆರ್​ಪಿಎಲ್​ ಸಂಸ್ಥೆ ಕರ್ನಾಟಕದ ಕರಾವಳಿ ಭಾಗದ ಅತ್ಯಂತ ಪ್ರತಿಷ್ಠಿತ ಸಂಸ್ಥೆ. ವಿಶೇಷ ಏನೆಂದರೆ, ಈ ಭಾಗದಲ್ಲಿ ಕೆಲಸ ಮಾಡುತ್ತಿರುವ ಏಕೈಕ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾಗಿರುವ ಎಮ್​ಆರ್​ಪಿಎಲ್​ಗೆ ತನ್ನದೇ ಆದ ಬದ್ಧತೆ ಇದೆ. ಬ್ಯಾಂಕುಗಳ ವಿಲೀನದ ಮೂಲಕ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಆದ ಸಂಚಲನ ಈಗ ಪೆಟ್ರೋಲಿಯಂ​ ಕ್ಷೇತ್ರದಲ್ಲೂ ಆಗುವ ಸಂದರ್ಭ ಇದೆ.

ಅಸ್ಸಾಮಿನಲ್ಲಿರುವ ನುಮಲಿಘರ್​ ರಿಫೈನರಿ ಸಂಸ್ಥೆಗೆ ಸ್ಥಳೀಯ ಜನರ ಬೆಂಬಲ ಸಿಕ್ಕಂತೆ ಇಲ್ಲಿನ ಎಮ್​ಆರ್​ಪಿಎಲ್​ ಗೆ ಭಾವನಾತ್ಮಕ ಬೆಂಬಲ ಸಿಕ್ಕಿಲ್ಲ. 2021 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ಎಮ್​ಆರ್​ಪಿಎಲ್ ​ತನ್ನ ಶಕ್ತಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗಿರಲಿಕ್ಕಿಲ್ಲ. ಆದರೆ, ಈ ರೀತಿಯ ನಿರ್ಣಯದಿಂದ ಇನ್ನೂ ಹೆಚ್ಚಿನ ಹಾನಿ ಕರ್ನಾಟಕಕ್ಕೆ ಆಗುವ ಸಾಧ್ಯತೆ ಇದೆ.

ಅಸಲಿ ಹಾನಿ ಯಾವುದು? ಹೇಗೆ? ಎಮ್​ಆರ್​ಪಿಲ್​ನ್ನು ಎಚ್​ಪಿಸಿಎಲ್​ ಜೊತೆಗೆ ವಿಲೀನಗೊಳಿಸಿದರು ಎಂದುಕೊಳ್ಳೋಣ. ಆಗ ಏನಾಗಬಹುದು? ಮೊದಲು, ಎಮ್​ಆರ್​ಪಿಲ್​ ಮಾಡುವ ಲಾಭ ಎಚ್​ಪಿಸಿಎಲ್​ನ ಲಾಭ ಎಂದು ಪರಿಗಣಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಕೇಂದ್ರಕ್ಕೆ ಕೊಡುವ ತೆರಿಗೆ ಎಮ್​ಆರ್​ಪಿಲ್​ಗೆ ವಿಧಿಸಿದ ತೆರಿಗೆ ಆಗಿರುವುದಿಲ್ಲ, ಅದು ಎಚ್​ಪಿಸಿಎಲ್​ನ ಮೇಲೆ ವಿಧಿಸಿರುವ ತೆರಿಗೆ ಆಗಿರುತ್ತದೆ. ಅದರಿಂದ ಸಾರ್ವಜನಿಕರಿಗೆ ಏನು ತೊಂದರೆ? ಇಲ್ಲೇ ಇರುವುದು ವಿಶೇಷ.

ಎಮ್​ಆರ್​ಪಿಲ್​ ಕರ್ನಾಟಕದಲ್ಲಿ ಇರುವುದರಿಂದ, ಎಮ್​ಆರ್​ಪಿಲ್​ ಕೊಡುವ ತೆರಿಗೆಯನ್ನು ಇಡೀ ಕರ್ನಾಟಕದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಕೇಂದ್ರಕ್ಕೆ ಕೊಡುವ ತೆರಿಗೆಯ ಲೆಕ್ಕಾಚಾರಕ್ಕೆ ಸೇರಿಸಿ ಕೊಳ್ಳಲಾಗುತ್ತದೆ. ಒಮ್ಮೆ ಎಮ್​ಆರ್​ಪಿಲ್​ ಎಚ್​ಪಿಸಿಎಲ್​ ಜೊತೆಗೆ ವಿಲೀನಗೊಳಿಸಿದರೆ, ಅದರ ಲಾಭಾಂಶ ಮುಂಬೈನಲ್ಲಿರುವ ಎಚ್​ಪಿಸಿಎಲ್​ನ ಲೆಕ್ಕಕ್ಕೆ ಹೋಗುತ್ತದೆ ಮತ್ತು ಎಚ್​ಪಿಸಿಎಲ್​ ಕೇಂದ್ರ ಸರಕಾರಕ್ಕೆ ಕೊಡುವ ತೆರಿಗೆಯನ್ನು ಮಹಾರಾಷ್ಟ್ರದಲ್ಲಿರುವ ಸಂಸ್ಥೆಗಳು ಕೇಂದ್ರಕ್ಕೆ ಕೊಡುವ ತೆರಿಗೆಯ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ತೆರಿಗೆಗೆ ಅನುಗುಣವಾಗಿ ಕೇಂದ್ರ ಸರಕಾರ ತಿರುಗಿ ಮಹಾರಾಷ್ಟ್ರಕ್ಕೆ ಕೊಡುವ ತೆರಿಗೆಯ ಪಾಲು ಹೆಚ್ಚಾಗುತ್ತದೆ. ಅಂದರೆ, ಕರ್ನಾಟಕಕ್ಕೆ ಹಾನಿಯೇ ಜಾಸ್ತಿ ಎಂದು ಮಲ್ಯ ಹೇಳುತ್ತಾರೆ. ಆದ್ದರಿಂದ ಈ ಕುರಿತು ಕರ್ನಾಟಕಕ್ಕೆ ಆಗುವ ಹಾನಿಯನ್ನು ತಡೆಯಬೇಕು ಮತ್ತು ವಿಲೀನ ಪ್ರಕ್ರಿಯೆಯನ್ನು ತಡೆಯಬೇಕು ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ನಾಲ್ಕು ಬ್ಯಾಂಕ್​- ಕಾರ್ಪೋರೇಶನ್ ಬ್ಯಾಂಕ್​, ಸಿಂಡಿಕೇಟ್ ಬ್ಯಾಂಕ್​, ವಿಜಯಾ ಬ್ಯಾಂಕ್ ಮತ್ತು ಸ್ಟೇಟ್​ ಬ್ಯಾಂಕ್​ ಆಫ್ ಮೈಸೂರು -ಎಷ್ಟು ತೆರಿಗೆ ಕೊಡುತ್ತಿದ್ದವು? ಆ ತೆರಿಗೆ ಇಡೀ ಕರ್ನಾಟಕ ರಾಜ್ಯ ಕೊಡುವ ತೆರಿಗೆಯ ಭಾಗವಾಗುತ್ತಿತ್ತು. ಕೊನೆಗೆ ಸಂಗ್ರಹವಾದ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಕೊಡುವಾಗ, ಕೇಂದ್ರ ಸರಕಾರ ತಿರುಗಿ ಕರ್ನಾಟಕ ಸರಕಾರಕ್ಕೆ ಹಣ ಕೊಡುತ್ತಿತ್ತು. ಈಗ ಲೆಕ್ಕ ಹಾಕಿ. ಸಾರ್ವಜನಿಕ ಸಂಸ್ಥೆಗಳ ವಿಲೀನಗಳಿಂದ ರಾಜ್ಯಕ್ಕೆ ಎಷ್ಟು ಹಾನಿ ಆಗಿರಬಹುದು ಎಂದು?

Follow us on

Related Stories

Most Read Stories

Click on your DTH Provider to Add TV9 Kannada