ದೋಣಿಮಲೈನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಶೀಘ್ರವೇ ಆರಂಭ, ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ

| Updated By: ಸಾಧು ಶ್ರೀನಾಥ್​

Updated on: Dec 02, 2020 | 3:43 PM

ಈ ಯೋಜನೆಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ರಾಜ್ಯಕ್ಕೆ 400 ಕೋಟಿ ರೂ.ಆದಾಯ ಆಗುವ ನಿರೀಕ್ಷೆ ಇದೆ. ಎನ್​ಎಂಡಿಸಿ ಪ್ರಾರಂಭವಾಗುವುದರಿಂದ ರಾಜ್ಯಕ್ಕೆ ಪ್ರತಿವರ್ಷ 1100 ಕೋಟಿ ರೂ.ಆದಾಯ ಬರಲಿದೆ.

ದೋಣಿಮಲೈನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಶೀಘ್ರವೇ ಆರಂಭ, ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ
ದೋಣಿಮಲೈ ಕಬ್ಬಿಣದ ಅದಿರು ಗಣಿ
Follow us on

ಬಳ್ಳಾರಿ: 2018ರಲ್ಲಿ ಗುತ್ತಿಗೆ ಅವಧಿ ಕೊನೆಗೊಂಡ ನಂತರ ಸ್ಥಗಿತಗೊಂಡಿದ್ದ ಸಂಡೂರು ತಾಲೂಕಿನ ದೋಣಿಮಲೈ ರಾಷ್ಟ್ರೀಯ ಖನಿಜ ನಿಗಮದಲ್ಲಿ (NMDC) ಕಬ್ಬಿಣದ ಅದಿರು ಗಣಿಗಾರಿಕೆ ಮತ್ತೆ ಆರಂಭಗೊಳ್ಳಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ದೋಣಿಮಲೈನಲ್ಲಿ ಗಣಿಗಾರಿಕೆ ಆರಂಭಿಸಲು, ಗುತ್ತಿಗೆ ಮಧ್ಯಂತರ ವ್ಯವಸ್ಥೆಯಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕೇಂದ್ರ ಗಣಿ ಸಚಿವಾಲಯದಿಂದ ದಿಟ್ಟ ನಿರ್ಧಾರ ಕೈಗೊಂಡು, ಅನುಮೋದನೆ ಕೊಟ್ಟ ಪರಿಣಾಮ ಅಲ್ಲಿನ 597.54 ಹೆಕ್ಟೇರ್ ಪ್ರದೇಶದಲ್ಲಿ ಅತಿ ಶೀಘ್ರದಲ್ಲೇ ಕಾರ್ಯ ಪ್ರಾರಂಭವಾಗಲಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.

ಈ ಯೋಜನೆಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ರಾಜ್ಯಕ್ಕೆ 400 ಕೋಟಿ ರೂ. ಆದಾಯ ಆಗುವ ನಿರೀಕ್ಷೆ ಇದೆ. ಎನ್​ಎಂಡಿಸಿ ಪ್ರಾರಂಭವಾಗುವುದರಿಂದ ರಾಜ್ಯಕ್ಕೆ ಪ್ರತಿವರ್ಷ 1100 ಕೋಟಿ ರೂ. ಆದಾಯ ಬರಲಿದೆ. ಅಷ್ಟೇ ಅಲ್ಲ, ಸಾವಿರಾರು ಜನರಿಗೆ ಉದ್ಯೋಗ ಅವಕಾಶ, ಸುತ್ತಮುತ್ತಲಿನ ವಾಣಿಜ್ಯ ವಹಿವಾಟಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.

2030-31ರೊಳಗೆ 300 MTPA ಕಬ್ಬಿಣದ ಅದಿರು ಉತ್ಪಾದನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಅದನ್ನು ತಲುಪಲು ದೋಣಿಮಲೈ ಅದಿರು ಗಣಿಗಾರಿಕೆ ಸಹಾಯವಾಗಲಿದೆ. ನಮ್ಮ ಗಣಿ ಮಂತ್ರಾಲಯದ ಈ ನಿರ್ಧಾರದಿಂದ ರಾಷ್ಟ್ರ ಮತ್ತು ರಾಜ್ಯ ಎರಡಕ್ಕೂ ಲಾಭವಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗಣಿ ಇಲಾಖೆ ಸಚಿವ ಸಿಸಿ ಪಾಟೀಲ್​ ಗೆ ಅಭಿನಂದನೆಗಳು ಎಂದಿದ್ದಾರೆ.

ಸ್ಥಗಿತಗೊಳ್ಳಲು ಕಾರಣ
ದೋಣಿಮಲೈ ಕಬ್ಬಿಣದ ಅದಿರು ಗಣಿಗಾರಿ 50 ವರ್ಷಗಳಿಂದಲೂ ಎನ್​ಎಂಡಿಸಿ (NMDC) ವಶದಲ್ಲಿ ಇತ್ತು. 2018ರಲ್ಲಿ ಗುತ್ತಿಗೆ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಇದರ ಪುನರಾರಂಭಕ್ಕೆ ಸಂಬಂಧಪಟ್ಟಂತೆ ಸಚಿವ ಪ್ರಲ್ಹಾದ್ ಜೋಶಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿ, ಚರ್ಚಿಸಿದ್ದರು. ಸಮಿತಿಯನ್ನೂ ರಚಿಸಲಾಗಿತ್ತು. ಅದಾದ ಬಳಿಕ ಗಣಿಗಾರಿಕೆ ಆರಂಭಿಸಲು ಸೆಪ್ಟೆಂಬರ್ 16ರಂದು ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿತ್ತು. ಇದೀಗ ಅಧಿಸೂಚನೆ ಹೊರಡಿಸುವ ಮೂಲಕ ಶೀಘ್ರವೇ ಕಾರ್ಯಾರಂಭ ಆಗಲಿದೆ.