ಇನ್‌ಪುಟ್ ವೆಚ್ಚಗಳ ಹೆಚ್ಚಳದ ಮಧ್ಯೆ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (MSI) ಈ ತಿಂಗಳು ತನ್ನ ಸಂಪೂರ್ಣ ಮಾದರಿ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸುವುದಾಗಿ ಬುಧವಾರ ತಿಳಿಸಿದೆ. ಕಳೆದ ವರ್ಷದಲ್ಲಿ ವಿವಿಧ ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪೆನಿಯ ವಾಹನಗಳ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಮಾರುತಿ ಸುಜುಕಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. “ಆದ್ದರಿಂದ ಬೆಲೆ ಏರಿಕೆ ಮೂಲಕ ಗ್ರಾಹಕರಿಗೆ ಮೇಲಿನ ಹೆಚ್ಚುವರಿ ವೆಚ್ಚಗಳ ಕೆಲವು ಮಟ್ಟಿಗಿನ ಪರಿಣಾಮವನ್ನು ವರ್ಗಾಯಿಸುವುದು ಕಂಪೆನಿಗೆ ಅನಿವಾರ್ಯವಾಗಿದೆ,” ಎಂದು ಅದು ಸೇರಿಸಿದೆ. ಕಂಪೆನಿಯು ಏಪ್ರಿಲ್‌ನಲ್ಲಿ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ ಮತ್ತು ಹೆಚ್ಚಳವು ವಿವಿಧ ಮಾದರಿಗಳಿಗೆ ಬದಲಾಗುತ್ತದೆ. ಆದರೆ ಪ್ರಸ್ತಾವಿತ ಬೆಲೆ ಏರಿಕೆಯ ಪ್ರಮಾಣವನ್ನು ಕಂಪೆನಿಯು ಬಹಿರಂಗಪಡಿಸಿಲ್ಲ.
ಇನ್‌ಪುಟ್ ವೆಚ್ಚದಲ್ಲಿ ನಿರಂತರ ಹೆಚ್ಚಳದಿಂದಾಗಿ ಮಾರುತಿ ಸುಜುಕಿ ಇಂಡಿಯಾ ಈಗಾಗಲೇ ವಾಹನ ಬೆಲೆಗಳನ್ನು 2021ರಿಂದ 2022ರ ಮಾರ್ಚ್ವರೆಗೆ ಸುಮಾರು ಶೇ 8.8ರಷ್ಟು ಹೆಚ್ಚಿಸಿದೆ. ಕಂಪೆನಿಯು ದೇಶೀಯ ಮಾರುಕಟ್ಟೆಯಲ್ಲಿ ಆಲ್ಟೊದಿಂದ ಪ್ರಾರಂಭಿಸಿ ಎಸ್-ಕ್ರಾಸ್ವರೆಗೆ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತದೆ. ಇದರ ಬೆಲೆ ರೂ. 3.25 ಲಕ್ಷ ಮತ್ತು ರೂ. 12.77 ಲಕ್ಷದ (ಎಕ್ಸ್ ಶೋ ರೂಂ ದೆಹಲಿ) ತನಕ ಇದೆ. ಉಕ್ಕು, ಅಲ್ಯೂಮಿನಿಯಂ ಮತ್ತು ಪಲ್ಲಾಡಿಯಮ್‌ನಂತಹ ಅಮೂಲ್ಯ ಲೋಹಗಳ ಬೆಲೆ ಏರಿಕೆಯೊಂದಿಗೆ ವಾಹನ ಕಂಪೆನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ. ಉದ್ಯಮವು ಸರಕು ಮತ್ತು ಸಾರಿಗೆ ಶುಲ್ಕಗಳ ಹೆಚ್ಚಳ ಮತ್ತು ಎಲೆಕ್ಟ್ರಾನಿಕ್ ಘಟಕಗಳ ವೆಚ್ಚವನ್ನು ವಾಹನದ ಬೆಲೆಗಳನ್ನು ಹೆಚ್ಚಿಸುವ ಅಂಶಗಳಾಗಿ ಉಲ್ಲೇಖಿಸುತ್ತಿವೆ.
ಈಗಾಗಲೇ, ವಿವಿಧ ವಾಹನ ತಯಾರಕರು ತಮ್ಮ ಉತ್ಪನ್ನಗಳ ಬೆಲೆಯನ್ನು ಈ ತಿಂಗಳಿನಿಂದ ಹೆಚ್ಚಿಸುವುದಾಗಿ ಘೋಷಿಸಿವೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಪರಿಣಾಮವನ್ನು ಸರಿದೂಗಿಸಲು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಸಂಪೂರ್ಣ ಮಾದರಿ ಶ್ರೇಣಿಯ ಬೆಲೆಗಳನ್ನು ಏಪ್ರಿಲ್ 1ರಿಂದ ಶೇಕಡಾ 4ರ ವರೆಗೆ ಹೆಚ್ಚಿಸಿದೆ. ಅದೇ ರೀತಿ ಬಿಎಂಡಬ್ಲ್ಯ ಇಂಡಿಯಾ ಈ ತಿಂಗಳಿನಿಂದ ಉತ್ಪನ್ನದ ಬೆಲೆಯನ್ನು ಶೇಕಡಾ 3.5 ರಷ್ಟು ಹೆಚ್ಚಿಸಿದೆ. ಇತರ ಐಷಾರಾಮಿ ಕಾರು ತಯಾರಕರಾದ ಔಡಿ ಮತ್ತು ಮರ್ಸಿಡಿಸ್-ಬೆಂಜ್ ಕೂಡ ಏಪ್ರಿಲ್ 1 ರಿಂದ ಬೆಲೆಗಳನ್ನು ಹೆಚ್ಚಿಸಿವೆ.
ಇದನ್ನೂ ಓದಿ: ಹೊಸ ಸೆಲೆರಿಯೊ ಸಿ ಎನ್ ಜಿ ಆವೃತ್ತಿಯನ್ನು ಲಾಂಚ್ ಮಾಡಿದೆ ಮಾರುತಿ ಸುಜುಕಿ, ಬೆಲೆ ರೂ. 6,58,000