Car sales: ಕೊರೊನಾ ಬಿಕ್ಕಟ್ಟಿನ ಹಿಂದಿನ ಸ್ಥಿತಿಗೆ ಕಾರು ಮಾರಾಟಕ್ಕೆ ಬೇಕು ಕನಿಷ್ಠ ಎರಡು ವರ್ಷ ಎಂದ ಮಹೀಂದ್ರಾ ಮುಖ್ಯಸ್ಥ
ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಹಿಂದಿನ ಸ್ಥಿತಿಗೆ ಕಾರುಗಳ ಮಾರಾಟ ಸಂಖ್ಯೆ ಬರಬೇಕು ಎಂದಾದಲ್ಲಿ ಕನಿಷ್ಠ ಎರಡು ವರ್ಷ ಬೇಕಾಗಬಹುದು ಎಂದು ಮಹೀಂದ್ರಾ ಅಂಡ್ ಮಹೀಂದ್ರಾದ ಮುಖ್ಯಸ್ಥ ಅನಿಶ್ ಶಾ ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಹಿಂದಿನ ಸ್ಥಿತಿಗೆ ಕಾರುಗಳ ಮಾರಾಟ ಸಂಖ್ಯೆ ಬರುವುದಕ್ಕೆ ಕನಿಷ್ಠ ಎರಡು ವರ್ಷಗಳು ಬೇಕಾಗಬಹುದು ಎಂದು ಭಾರತದ ಮಹೀಂದ್ರಾ ಅಂಡ್ ಮಹೀಂದ್ರಾ ಅಂದಾಜು ಮಾಡಿದೆ. ಆದರೆ ಕೊರೊನಾ ಲಸಿಕೆ ಹಾಕುವ ಪ್ರಮಾಣದಲ್ಲಿನ ನಿಧಾನ ಗತಿಯು ಚೇತರಿಕೆ ಸಾಧ್ಯತೆಗೆ ಇನ್ನಷ್ಟು ಹೊಡೆತ ನೀಡುತ್ತದೆ ಎಂದು ಕಂಪೆನಿಯ ಮುಖ್ಯಸ್ಥರು ರಾಯಿಟರ್ಸ್ ಸುದ್ದಿ ಸಂಸ್ಥೆ ಜತೆಗಿನ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. 2019ನೇ ಇಸವಿಯಲ್ಲಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತ, 2020ನೇ ಇಸವಿಯಲ್ಲಿನ ಕೊರೊನಾ ಬಿಕ್ಕಟ್ಟು ಇವೆರಡರಿಂದ ಪೆಟ್ಟು ಬಿದ್ದಿದೆ. ಭಾರತದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ ಸಂಖ್ಯೆ 27 ಲಕ್ಷಕ್ಕೆ ಕುಸಿದಿದೆ. ಅದು ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟವಾಗಿದ್ದು, 2019ರ ಹಣಕಾಸು ವರ್ಷದಲ್ಲಿ ಗರಿಷ್ಠ ಮಾರಾಟ ಸಂಖ್ಯೆ 34 ಲಕ್ಷ ಯೂನಿಟ್ ಆಗಿತ್ತು.
ಮಹೀಂದ್ರಾ ಅಂಡ್ ಮಹೀಂದ್ರಾದ ಸಿಇಒ ಅನಿಶ್ ಶಾ ಮಾತನಾಡಿ, ಒಂದು ವೇಳೆ ದೇಶದ ಬಹುಪಾಲು ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡು, ಕೋವಿಡ್-19 ಹೊಸ ಸೋಂಕು ಪ್ರಕರಣಗಳು ಕಡಿಮೆಯಾದಲ್ಲಿ ಆರ್ಥಿಕ ಚೇತರಿಕೆಗೆ ನೆರವಾದಾಗ ಮಾತ್ರ 2023ರ ಹಣಕಾಸು ವರ್ಷದ ಹೊತ್ತಿಗೆ ಮಾರಾಟದಲ್ಲಿ ಚೇತರಿಕೆ ಕಾಣಿಸಿಕೊಳ್ಳಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಸಂಪೂರ್ಣ ಸಹಜ ಸ್ಥಿತಿಗೆ ಮರಳುವುದು ಲಸಿಕೆ ಹಾಕುವುದರ ಮೇಲೆ ಅವಲಂಬಿತವಾಗಿದೆ. ಇಲ್ಲದಿದ್ದರೆ ಯಾವಾಗಲೂ ಮುಂದಿನ ಅಲೆ ಬರುವ ಬಗ್ಗೆ ಆತಂಕ ಇರುತ್ತದೆ ಮತ್ತು ಇನ್ನೊಮ್ಮೆ ಅಸ್ತವ್ಯಸ್ತ ಮಾಡುವ ಬಗ್ಗೆ ಚಿಂತೆ ಇರುತ್ತದೆ,” ಎಂದು ಶಾ ಹೇಳಿದ್ದಾರೆ.
ಈ ತನಕ 2.8 ಕೋಟಿ ಪ್ರಕರಣಗಳು ದಾಖಲು: ಜನಸಂಖ್ಯೆ ದೃಷ್ಟಿಯಿಂದ ವಿಶ್ವದ ಎರಡನೇ ಅತಿ ದೊಡ್ಡ ದೇಶವಾದ ಭಾರತದಲ್ಲಿ ಈ ತನಕ 2.8 ಕೋಟಿ ಪ್ರಕರಣಗಳು ದಾಖಲಾಗಿದೆ. ಆ ಮೂಲಕ ಅಮೆರಿಕದ ನಂತರದ ಸ್ಥಾನದಲ್ಲಿ ಭಾರತ ಇದೆ. ಈಚೆಗಿನ ವಾರಗಳಲ್ಲಿ ಸೋಂಕು ಪ್ರಮಾಣ ಭಾರತದಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಮೇ ತಿಂಗಳಲ್ಲಂತೂ ಕೊರೊನಾದಿಂದ ಭಾರತದಲ್ಲಿ ಮೃತಪಟ್ಟವರ ಸಂಖ್ಯೆಯು ಈ ಸೋಂಕು ಕಾಣಿಸಿಕೊಂಡ ದಿನದಿಂದ ಇಲ್ಲಿಯವರೆಗಿನ ಗರಿಷ್ಠ ಮಟ್ಟದಲ್ಲಿದೆ. ಭಾರತದ ಒಟ್ಟು 130 ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇಕಡಾ 3ರಷ್ಟು ಜನರು ಮಾತ್ರ ಪೂರ್ತಿಯಾಗಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಅತಿ ಹೆಚ್ಚು ಪ್ರಕರಣಗಳು ದಾಖಲಿಸಿರುವ ಹತ್ತು ದೇಶಗಳ ಪೈಕಿ ಅತಿ ಕಡಿಮೆ ಲಸಿಕೆ ಹಾಕಿರುವ ದೇಶ ಭಾರತ.
ಗ್ರಾಮೀಣ ಭಾಗದಲ್ಲೂ ಹೆಚ್ಚಿದ ಸೋಂಕು: ಈ ವರ್ಷದ ಜನವರಿಯಿಂದ ಮಾರ್ಚ್ ವೇಳೆಗೆ ಕಾರು ಮಾರಾಟ ಚೇತರಿಸಿಕೊಂಡಿತ್ತು. ಆದರೆ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಹೆಚ್ಚಿನಸ ಸೋಂಕು ಪ್ರಕರಣಗಳಿಂದ ಬಲವಂತವಾಗಿ ಲಾಕ್ಡೌನ್ ಮಾಡಬೇಕಾಯಿತು. ಇದರಿಂದ ಗ್ರಾಹಕರ ಭಾವನೆಗಳಿಗೆ ಪೆಟ್ಟು ಬಿತ್ತು. ಆದ್ದರಿಂದ ಖರ್ಚು ಮಾಡುವುದಕ್ಕೆ ಯೋಚಿಸಿ, ನಿರ್ಧಾರ ಕೈಗೊಳ್ಳುವುದಕ್ಕೆ ಬಹಳ ಸಮಯ ಹಿಡಿಸುತ್ತದೆ. ಇನ್ನು ಭಾರತದ ಗ್ರಾಮೀಣ ಪ್ರದೇಶಗಳಿಗೂ ಕೊರೊನಾ ಹಬ್ಬುತ್ತಿದೆ. ಕೊರೊನಾ ಮೊದಲ ಅಲೆಯಲ್ಲಿ ಗ್ರಾಮೀಣ ಭಾಗಕ್ಕೆ ರಕ್ಷಣೆ ಸಿಕ್ಕಿತ್ತು. ಅಲ್ಲಿನ ಬೇಡಿಕೆ ಕುಸಿತವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನಗರಗಳ ಕಡೆಗೆ ನೋಡಬೇಕಿದೆ.
ಸದ್ಯಕ್ಕೆ ಖರೀದಿ ಬೇಡ ಎಂದು ಯೋಚಿಸುತ್ತಿರುವ ಗ್ರಾಹಕರು: ಭಾರತದ ಪ್ರಯಾಣಿಕರ ವಾಹನ ಮಾರಾಟ ಮಾರುಕಟ್ಟೆಯಲ್ಲಿ ಮಹೀಂದ್ರಾ ಪಾಲು ಶೇ 6ರಷ್ಟಿದೆ. ಜತೆಗೆ ದೇಶದ ಅತಿ ದೊಟ್ಟ ಟ್ರ್ಯಾಕ್ಟರ್ ತಯಾರಕ ಕಂಪೆನಿ ಇದು. ಕೃಷಿ ವಲಯದಲ್ಲಿನ ಚೇತರಿಕೆಯೊಂದಿಗೆ ಕಳೆದ ವರ್ಷ ಬೆಳವಣಿಗೆ ಕಂಡಿದ್ದ ಕಂಪೆನಿ ಆದಾಯವು, ಈ ವರ್ಷ ಮೇ ತಿಂಗಳ ಮಾರಾಟದ ಕುಸಿತದೊಂದಿಗೆ ಇಳಿಕೆ ಕಂಡಿದೆ. ಈ ಬಾರಿ ಕೊರೊನಾ ಬಿಕ್ಕಟ್ಟು ಪೂರ್ತಿ ಹೋಗುವ ತನಕ ಏನೂ ಖರೀದಿಸುವುದು ಬೇಡ ಎಂದು ಗ್ರಾಮೀಣ ಹಾಗೂ ನಗರ ಪ್ರದೇಶದ ಗ್ರಾಹಕರು ನಿರ್ಧರಿಸಿದಂತೆ ಕಾಣುತ್ತಿದೆ. ಒಂದು ವೇಳೆ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಕೊರೊನಾ ಬಂದಲ್ಲಿ ಕಷ್ಟ ಎಂಬ ಚಿಂತೆ ಗ್ರಾಹಕರಲ್ಲಿ ಕಾಡುತ್ತಿದೆ. ಆ ಕಾರಣಕ್ಕೆ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಲಸಿಕೆ ಹಾಕುವ ಪ್ರಕ್ರಿಯೆಗೆ ವೇಗ ಸಿಕ್ಕಲ್ಲಿ ಜೂನ್ನಲ್ಲಿ ಮತ್ತೆ ಮಾರಾಟ ಚೇತರಿಕೆ ಕಾಣಿಸಿಕೊಳ್ಳಬಹುದು ಎಂದು ಶಾ ಅಭಿಪ್ರಾಯ ಪಡುತ್ತಾರೆ. ಜತೆಗೆ ನಾವು ಮತ್ತೆ ಕೊರೊನಾ ಲಾಕ್ಡೌನ್ ಹಾಕುವ ಸ್ಥಿತಿ ತಲುಪಬಾರದು ಎನ್ನುತ್ತಾರೆ.
ಇದನ್ನೂ ಓದಿ: ದೋಷಪೂರಿತ ವಾಹನ ತಯಾರಿಸಿದ ಕಂಪೆನಿಗಳಿಗೆ ಬೀಳಲಿದೆ ಭಾರೀ ಜುಲ್ಮಾನೆ
(Mahindra and Mahindra chief said, car sales in India to reach pre covid level required at least 2 years of time)
Published On - 7:11 pm, Sat, 29 May 21