ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಸಾಮ್ರಾಜ್ಯ ವಿಸ್ತರಣೆಯ ರೋಚಕ ಕತೆ ಇಲ್ಲಿದೆ
ಅದಾನಿ ಗ್ರೂಪ್ ವಿಶ್ವದ ಇತರ ಉದ್ಯಮಿಗಳ ಸಹಭಾಗಿತ್ವ, ಬಂಡವಾಳದೊಂದಿಗೆ ಔದ್ಯಮಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿಟ್ಟಿದೆ.
ಗೌತಮ್ ಅದಾನಿಗೆ ಸಂಕಷ್ಟಗಳನ್ನು ಎದುರಿಸಿ ಗೆಲ್ಲುವುದು ಗೊತ್ತು. ಅದಾನಿ, ಎರಡು ದಶಕಗಳ ಹಿಂದೆ ಹಣಕ್ಕಾಗಿ ಅಪಹರಣವಾಗಿದ್ದರು. ಈ ಹಿಂದೆ 2008ರಲ್ಲಿ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಒತ್ತೆಯಾಳಾಗಿದ್ದರು. ಅವೆಲ್ಲವನ್ನೂ ಎದುರಿಸಿ ಬಂದ ಅದಾನಿ ಇಂದು ಭಾರತದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.
ಕೊರೊನಾ ಕಾರಣದಿಂದ ಭಾರತ ಹಣದುಬ್ಬರ ಸಮಸ್ಯೆ ಎದುರಿಸುತ್ತಿದ್ದರೆ, ಇತ್ತ ಅದಾನಿ ಗ್ರೂಪ್ ಲಾಭದೊಂದಿಗೆ ಬೆಳೆಯುತ್ತಿದೆ. ಅದಾನಿ ಗ್ರೂಪ್ ವಿಶ್ವದ ಇತರ ಉದ್ಯಮಿಗಳ ಸಹಭಾಗಿತ್ವ, ಬಂಡವಾಳದೊಂದಿಗೆ ಔದ್ಯಮಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿಟ್ಟಿದೆ.
ಗಣಿಗಾರಿಕೆ, ಇಂಧನ, ಬಂದರು ನಿರ್ವಹಣೆ ಮುಂತಾದ ವಿಭಾಗದಲ್ಲಿ ಅದಾನಿ ಹೂಡಿಕೆ ಪ್ರಮಾಣ ಹೆಚ್ಚಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಆರು ಶತಕೋಟಿ ಮೌಲ್ಯದ ಸೌರ ವಿದ್ಯುತ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಈ ವರ್ಷದ ಲಾಭದಲ್ಲಿ ಆರುಪಟ್ಟು ಏರಿಕೆ ಕಂಡಿದೆ. ಆ ಮೂಲಕ 2025ರಲ್ಲಿ ನವೀಕರಿಸಬಹುದಾದ ಇಂಧನ ತಯಾರಿಯಲ್ಲಿ ವಿಶ್ವದ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮುವ ಸೂಚನೆ ನೀಡಿದೆ.
32.4 ಶತಕೋಟಿಗಳಷ್ಟು ಆಸ್ತಿ ಹೊಂದಿರುವ ಅದಾನಿ ಮುಖೇಶ್ ಅಂಬಾನಿ ಬಳಿಕ ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಸಿಲಿಕಾನ್ ವ್ಯಾಲಿಯ ಪ್ರಮುಖ ವಾಣಿಜ್ಯ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿರುವ ಅದಾನಿ, ತಮ್ಮ ಪಾಲುದಾರಿಕೆಯಲ್ಲಿ ಪ್ರಸ್ತುತ ಒಂದೇ ವರ್ಷದಲ್ಲಿ 21.1 ಶತಕೋಟಿ ಮೊತ್ತದ ಏರಿಕೆ ಕಂಡಿದ್ದಾರೆ. ಈ ಮೂಲಕ ಅಂಬಾನಿ ಒಡೆತನದ ರಿಲಯನ್ಸ್ ಕಂಪೆನಿ ಗಳಿಕೆ ಮಾಡಿರುವ ಲಾಭದಷ್ಟೇ ಅದಾನಿ ಸಂಸ್ಥೆ ಕೂಡ ಆದಾಯ ಗಳಿಕೆ ಮಾಡಿದೆ ಎಂದು ಬ್ಲೂಮ್ಬರ್ಗ್ ಬಿಲಿಯನರಿಸ್ ಇಂಡೆಕ್ಸ್ ತಿಳಿಸಿದೆ.
ಅದಾನಿ ಉದ್ಯಮದ ಆರಂಭ ಕಾಲೇಜು ಅರ್ಧಕ್ಕೆ ಕೈಬಿಟ್ಟ ಅದಾನಿ, 1980ರ ಸಮಯದಲ್ಲಿ ವಜ್ರದ ಉದ್ಯಮಕ್ಕೆ ತೊಡಗಿ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡರು. ಕೆಲವೇ ಸಮಯದ ಬಳಿಕ ಅವರು ಗುಜರಾತ್ಗೆ ಹಿಂತಿರುಗಿ ತಮ್ಮ ಅಣ್ಣನ ಪ್ಲಾಸ್ಟಿಕ್ ವ್ಯವಹಾರದಲ್ಲಿ ತೊಡಗಿಸಿಕೊಂಡರು. 1988ರಲ್ಲಿ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಎಂಬ ಸಂಸ್ಥೆ ಆರಂಭಿಸಿದರು. ದಶಕದ ಬಳಿಕ ಖಾಸಗಿಯಾಗಿ ಬಂದರು ನಿರ್ವಹಣೆಯಲ್ಲಿ ಶುರುಮಾಡಿದ ಅದಾನಿ, ದೇಶದ ಅತಿದೊಡ್ಡ ಬಂದರು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಎನಿಸಿಕೊಂಡರು.
ದೇಶದ ಅತಿದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕ ಸಂಸ್ಥೆ ಮತ್ತು ಕಲ್ಲಿದ್ದಲು ಗಣಿಗಾರಿಕೆಯ ಮುಂಚೂಣಿಯ ಸಂಸ್ಥೆ ಎಂದೂ ಅದಾನಿ ಗ್ರೂಪ್ ಗುರುತಿಸಿಕೊಂಡಿತು. ವಿದೇಶಗಳಿಗೂ ತನ್ನ ಪ್ರಭಾವ ವಿಸ್ತರಿಸಿಕೊಂಡಿತು. ಆಸ್ಟ್ರೇಲಿಯಾದಲ್ಲಿ ಅದಾನಿಯ ಕಾರ್ಮಿಖಾಯಲ್ ಕಲ್ಲಿದ್ದಲು ಯೋಜನೆಯು ಪರಿಸರ ಹೋರಾಟಗಳ, ಋಣಾತ್ಮಕ ಸುದ್ದಿಗಳ ನಡುವೆಯೂ ಮುಂದುವರಿಯುತ್ತಿದೆ.
ಇದನ್ನೂ ಓದಿ: ವಿಶ್ವದ 2ನೇ ಅತಿದೊಡ್ಡ ಶ್ರೀಮಂತ ಬಿಲ್ ಗೇಟ್ಸ್ನ ಹಿಂದಿಕ್ಕಿದ ಉದ್ಯಮಿ ಎಲಾನ್ ಮಸ್ಕ್!
ಎಲ್ಲಾ ಉದ್ಯಮಿಗಳಂತೆ ಅದಾನಿ ಕೂಡ ಹೊಸ ಹೊಸ ಉದ್ಯಮಗಳ ಪ್ರಯೋಗದಲ್ಲಿ ತೊಡಗಿಸಿಕೊಂಡವರು. ದೇಶ ನಡೆದಲ್ಲಿ, ಸ್ಪರ್ಧೆ ಕಡಿಮೆ ಇರುವಲ್ಲಿ ಅದಾನಿ ಭಿನ್ನವಾಗಿ ಹೆಜ್ಜೆ ಹಾಕಿದವರು. ಪ್ರಸ್ತುತ ದೇಶ ಕಟ್ಟುವ ಆಶಯವನ್ನು ಉಲ್ಲೇಖಿಸಿ ಅದಾನಿ ಮಾತನಾಡುತ್ತಿದ್ದಾರೆ.
ಉದ್ಯಮ ಕ್ಷೇತ್ರ ವಿಸ್ತರಿಸಿಕೊಂಡರು ಗೌತಮ್ ಅದಾನಿ ವ್ಯಾಪಾರ ಸಂಸ್ಥೆಯಾಗಿ ಅಹಮದಾಬಾದ್ನಲ್ಲಿ ಆರಂಭಗೊಂಡ ಅದಾನಿ ಗ್ರೂಪ್, ಬಳಿಕ ವೈವಿಧ್ಯಮಯ ವಾಣಿಜ್ಯ ವಹಿವಾಟುದಾರರೊಂದಿಗೆ ಸಮೂಹವಾಗಿ ಬೆಳೆದದ್ದು ಆಶ್ಚರ್ಯಕರ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್ನ ಉಮೇಶ್ ಮೆಹ್ತಾ ಅಭಿಪ್ರಾಯಪಡುತ್ತಾರೆ.
ಮೋದಿಯಂತೆ ತನ್ನ ವ್ಯಾಪ್ತಿಯಲ್ಲಿ ಉನ್ನತ ಹಂತಕ್ಕೆ ಏರಿದ ಅದಾನಿ, ಕಳೆದ ಎರಡು ದಶಕಗಳಿಂದ ನರೇಂದ್ರ ಮೋದಿಯ ಪ್ರಮುಖ ಬೆಂಬಲಿಗರಾಗಿದ್ದಾರೆ. ಮುಂದ್ರಾ ಬಂದರಿನ ವಾಣಿಜ್ಯ ವ್ಯವಹಾರಗಳಿಂದ ತಮ್ಮ ಕೈಗಾರಿಕಾ ವಲಯವನ್ನು ವಿಸ್ತರಿಸಿಕೊಂಡಿದ್ದಾರೆ.
ಅದಾನಿ ವಿವಿಧ ವಿಭಾಗದ ಉದ್ಯಮಕ್ಕೆ ಕಾಲಿಟ್ಟದ್ದು 2015ರಲ್ಲಿ. ಸ್ಥಳೀಯ ಸಂಸ್ಥೆಗಳಿಗೆ ರಕ್ಷಣಾ ಸಾಮಾಗ್ರಿಗಳ ತಯಾರಿ ನಡೆಸಲು ಅನುಮತಿ ನೀಡಲು ಮೋದಿ ಯೋಜನೆ ಹಾಕಿಕೊಂಡಾಗ, ಅದಾನಿ ರಕ್ಷಣಾ ಸಾಧನಗಳ ತಯಾರಿಗೆ ಇತರ ಸಂಸ್ಥೆಗಳ ಸಹಯೋಗದಲ್ಲಿ ಗುತ್ತಿಗೆ ಪಡೆದರು.
ಮೂರು ವರ್ಷಗಳ ಬಳಿಕ ಇಂಧನ ಉದ್ಯಮ ಆರಂಭಿಸಿ, ಭಾರತದ ಅತಿ ದೊಡ್ಡ ಇಂಧನ ಉದ್ಯಮಿಯಾದರು. 2019ರಲ್ಲಿ ವಿಮಾನ ನಿಲ್ದಾಣಗಳ ಮೇಲೆ ಕಣ್ಣಿಟ್ಟ ಅದಾನಿ, ಸದ್ಯ ಡಾಟಾ ಸ್ಟೋರೇಜ್ ಮತ್ತು ಆರ್ಥಿಕ ಸೇವಾ ಉದ್ಯಮದತ್ತ ದಾಪುಗಾಲಿಡುತ್ತಿದ್ದಾರೆ.
ಕಾರ್ಪೊರೇಟ್ ತಂತ್ರಗಳನ್ನು ರಾಜಕೀಯದ ಅಥವಾ ಸರ್ಕಾರದ ಆದ್ಯತೆಗಳೊಂದಿಗೆ ತಳುಕು ಹಾಕುವುದು ಭಾರತದ ಉದ್ಯಮದ ಗುಣಲಕ್ಷಣ ಎಂದು ಸೆಂಟರ್ ಫಾರ್ ಡೆವಲೆಪ್ಮೆಂಟ್ ಆಲ್ಟರ್ನೇಟೀವ್ಸ್ ಅಹಮದಾಬಾದ್ ಸಂಸ್ಥೆಯ ನಿರ್ದೇಶಕಿ ಇಂದಿರಾ ಹಿರ್ವೆ ಹೇಳಿದ್ದಾರೆ.
ಭಾರತದಲ್ಲಿ ಯಶಸ್ವಿ ಉದ್ಯಮಿಯಾಗಿರುವ ಅದಾನಿ, ಆಸ್ಟ್ರೇಲಿಯಾದಲ್ಲಿ ಮಾತ್ರ ಋಣಾತ್ಮಕ ಅಭಿಪ್ರಾಯ ಪಡೆದುಕೊಂಡಿದ್ದರು. 2019ರ ಅಲ್ಲಿನ ಚುನಾವಣೆಯಲ್ಲೂ ಈ ವಿಚಾರ ಸದ್ದು ಮಾಡಿತ್ತು. ಈ ಬಗ್ಗೆ ಅಲ್ಲಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದರು. ಗಣಿಯ ಕಲ್ಲಿದ್ದಲು, ಮಾರುಕಟ್ಟೆಯಲ್ಲಿರುವ ಕಲ್ಲಿದ್ದಲಿಗಿಂತ ಒಳ್ಳೆಯದು ಎಂದಿದ್ದರು.
ಈ ಕಲ್ಲಿದ್ದಲು, ವಿದ್ಯುತ್ ಉತ್ಪಾದನೆಯ ಸಂದರ್ಭದಲ್ಲಿ ಕನಿಷ್ಠ ಹಾನಿ ಮಾಡುತ್ತದೆ ಎಂದು ಹೇಳಿದ್ದರು. ಇಂತಹ ಯಾವ ವಿಚಾರಗಳೂ ಅದಾನಿ ಸಮೂಹ ಸಂಸ್ಥೆಯ ಬೆಳೆವಣಿಗೆಗೆ ತೊಡಕಾಗಲಿಲ್ಲ. ಬಂಡವಾಳ ಹೂಡಿಕೆಯಲ್ಲಿ, ಗ್ರೀನ್ ಎನರ್ಜಿ ಎಂಬ ಪ್ರಧಾನ ವಿಷಯವನ್ನು ಇಟ್ಟುಕೊಂಡು ವಿದೇಶಿ ಬ್ಯಾಂಕ್ಗಳಿಂದ ಬಂಡವಾಳ ಒಗ್ಗೂಡಿಸಿ ಮುಂದುವರಿಯುತ್ತಿದೆ.
Published On - 5:49 pm, Mon, 14 December 20