ಬೆಂಗಳೂರು: ಆದಾಯ ತೆರಿಗೆ ಪೋರ್ಟಲ್ ಚಾಲು ಆದ 2.5 ತಿಂಗಳ ನಂತರವೂ ದೋಷಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಇಲಾಖೆಯು ಇನ್ಫೋಸಿಸ್ ಮುಖ್ಯ ನಿರ್ವಹಣಾಧಿಕಾರಿ ಸಲಿಲ್ ಪಾರೇಖ್ ಅವರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದೆ. ಆಗಸ್ಟ್ 21ರಿಂದ ಬಳಕೆದಾರರಿಗೆ ಆದಾಯ ತೆರಿಗೆ ಪೋರ್ಟಲ್ ಆಕ್ಸೆಸ್ ಮಾಡಲು ಆಗುತ್ತಿಲ್ಲ.
ಆಗಸ್ಟ್ 23ರಂದು ಖುದ್ದು ಹಾಜರಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಣೆ ನೀಡಬೇಕು ಎಂದು ಹಣಕಾಸು ಇಲಾಖೆ ಸೂಚಿಸಿದೆ. ಆರಂಭವಾದ 2.5 ತಿಂಗಳ ನಂತರವೂ ಹೊಸ ಇ-ಫೈಲಿಂಗ್ ಪೋರ್ಟಲ್ನಲ್ಲಿ ದೋಷಗಳು ಮುಂದುವರಿದಿರುವುದು ಏಕೆ? ಲೋಪಗಳನ್ನು ಸರಿಪಡಿಸಿಲ್ಲ ಏಕೆ ಎಂದು ಹಣಕಾಸು ಇಲಾಖೆ ಟ್ವೀಟ್ ಮೂಲಕ ಪ್ರಶ್ನಿಸಿದೆ. ಐಟಿ ಪೋರ್ಟಲ್ ಸಮಸ್ಯೆಗಳ ಬಗ್ಗೆ ನಿರ್ಮಲಾ ಸೀತಾರಾಮನ್ ಅವರನ್ನು ಇನ್ಫೋಸಿಸ್ನ ಉನ್ನತ ಹಂತದ ಆಡಳಿತ ವರ್ಗದ ಪ್ರತಿನಿಧಿ ಭೇಟಿಯಾಗುತ್ತಿರುವುದು ಇದು 2ನೇ ಬಾರಿ.
ಪೋರ್ಟಲ್ ಆಕ್ಸೆಸ್ ಮಾಡಲು ಆಗುತ್ತಿಲ್ಲ ಎನ್ನುವುದನ್ನು ಒಪ್ಪಿಕೊಂಡಿರುವ ಇನ್ಫೋಸಿಸ್, ಆಗಸ್ಟ್ 21ರಂದು ಈ ಸಂಬಂಧ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ಮೊದಲೇ ಘೋಷಿಸಿದ್ದಂತೆ ಆದಾಯ ತೆರಿಗೆ ಪೋರ್ಟಲ್ ನಿರ್ವಹಣೆ ಕೆಲಸಗಳು ಆರಂಭವಾಗಿವೆ. ಪೋರ್ಟಲ್ ಮತ್ತೆ ಕಾರ್ಯಾರಂಭ ಮಾಡಿದ ನಂತರ ಈ ಕುರಿತು ಮಾಹಿತಿ ನೀಡುತ್ತೇವೆ. ತೊಂದರೆಗಾಗಿ ವಿಷಾದಿಸುತ್ತೇವೆ ಎಂದು ಸ್ಪಷ್ಟನೆ ನೀಡಿತ್ತು.
Ministry of Finance has summoned Sh Salil Parekh,MD&CEO @Infosys on 23/08/2021 to explain to hon’ble FM as to why even after 2.5 months since launch of new e-filing portal, glitches in the portal have not been resolved. In fact,since 21/08/2021 the portal itself is not available.
— Income Tax India (@IncomeTaxIndia) August 22, 2021
ಆಗಸ್ಟ್ 22ರಂದು ಮತ್ತೊಂದು ಸ್ಪಷ್ಟನೆ ನೀಡಿದ್ದ ಇನ್ಫೋಸಿಸ್, ಇನ್ಕಮ್ಟ್ಯಾಕ್ಸ್ ಇಂಡಿಯಾ ಪೋರ್ಟಲ್ನಲ್ಲಿ ತುರ್ತು ನಿರ್ವಹಣೆ ಕಾರ್ಯಗಳು ನಡೆಯುತ್ತಿವೆ. ಪೋರ್ಟಲ್ ಸರಿಯಾದಾಗ ಮತ್ತೆ ತೆರಿಗೆದಾರರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿತ್ತು. ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್ ಜೂನ್ 7ರಿಂದ ಕಾರ್ಯಾರಂಭ ಮಾಡಿತ್ತು. ಆದರೆ ಮಾರನೇ ದಿನದಿಂದಲೇ ದೋಷಗಳು ಪತ್ತೆಯಾಗಿದ್ದವು. ಜೂನ್ 22ರಂದು ಇನ್ಫೋಸಿಸ್ ಪ್ರತಿನಿಧಿಗಳನ್ನು ಭೇಟಿಯಾಗಿದ್ದ ನಿರ್ಮಲಾ ಸೀತಾರಾಮನ್ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸರಿಪಡಿಸುವಂತೆ ಸೂಚಿಸಿದ್ದರು.
ಹೊಸ ತಲೆಮಾರಿನ ಆದಾಯ ತೆರಿಗೆ ಪೋರ್ಟಲ್ ರೂಪಿಸಲು ಇನ್ಫೋಸಿಸ್ಗೆ 2019ರಲ್ಲಿ ₹ 4,242 ಕೋಟಿ ಮೊತ್ತದ ಗುತ್ತಿಗೆ ನೀಡಲಾಗಿತ್ತು. ಆದಾಯ ತೆರಿಗೆ ರಿಟರ್ನ್ಸ್ ಅರ್ಜಿಯ ಪ್ರಕ್ರಿಯೆಗೆ ಇದ್ದ 63 ದಿನಗಳ ಅವಧಿಯ ಗಡುವನ್ನು ಒಂದು ದಿನಕ್ಕೆ ಇಳಿಸಲು ಮತ್ತು ಒಂದೇ ದಿನದಲ್ಲಿ ಹೆಚ್ಚುವರಿ ಪಾವತಿಯನ್ನು ತೆರಿಗೆ ಪಾವತಿದಾರರಿಗೆ ಮರಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿತ್ತು.
‘ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಹಾರ್ಡ್ವೇರ್, ಸಾಫ್ಟ್ವೇರ್ ಮತ್ತು ಮಾನವ ಸಂಪನ್ಮೂಲ ನಮ್ಮಲ್ಲಿದೆ. ಈ ಮೊದಲೂ ಹಲವು ಲೋಪಗಳನ್ನು ಗುರುತಿಸಿ ಸರಿಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ದೋಷಗಳನ್ನೂ ಸರಿಪಡಿಸಲಾಗುವುದು’ ಎಂದು ಇನ್ಫೋಸಿಸ್ ಪ್ರತಿನಿಧಿಗಳು ಹಣಕಾಸು ಸಚಿವರಿಗೆ ಭರವಸೆ ನೀಡಿದ್ದರು.
ಸಾರ್ವಜನಿಕರ ಬಳಕೆಗೆ ಹೊಸ ಪೋರ್ಟಲ್ ಮುಕ್ತಗೊಳಿಸಿದ ನಂತರ ಈವರೆಗೆ 10 ಲಕ್ಷ ಆದಾಯ ತೆರಿಗೆ ರಿಟರ್ನ್ಗಳು ಫೈಲ್ ಆಗಿವೆ. ಕಾರ್ಯಕ್ಷಮತೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಯು.ಬಿ.ಪ್ರವೀಣ್ ರಾವ್ ಜುಲೈ 14ರಂದು ಹೇಳಿದ್ದರು.
(Glitches in Income Tax E Filing Portal Finance Ministry summons Infosys CEO Salil Parekh)
ಇದನ್ನೂ ಓದಿ: Income Tax: ಹೆಚ್ಚುವರಿಯಾಗಿ ಪಾವತಿಸಿದ ಬಡ್ಡಿ, ವಿಳಂಬ ಶುಲ್ಕ ಹಿಂತಿರುಗಿಸಲಿದೆ ಆದಾಯ ತೆರಿಗೆ ಇಲಾಖೆ
Published On - 5:54 pm, Sun, 22 August 21