Global Recssion: ಆರ್ಥಿಕ ಹಿಂಜರಿತದ ಆತಂಕದಲ್ಲಿ ಟೆಕ್ ಕಂಪನಿಗಳು, ವಿಶ್ವದಾದ್ಯಂತ ಆವರಿಸಿಕೊಂಡಿದೆ ಉದ್ಯೋಗ ಕಡಿತದ ಭೀತಿ

|

Updated on: Nov 10, 2022 | 8:38 AM

ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ತಾಂತ್ರಿಕ ಮತ್ತು ಸಪೋರ್ಟ್​ ವಿಭಾಗಗಳ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ.

Global Recssion: ಆರ್ಥಿಕ ಹಿಂಜರಿತದ ಆತಂಕದಲ್ಲಿ ಟೆಕ್ ಕಂಪನಿಗಳು, ವಿಶ್ವದಾದ್ಯಂತ ಆವರಿಸಿಕೊಂಡಿದೆ ಉದ್ಯೋಗ ಕಡಿತದ ಭೀತಿ
ಪ್ರಾತಿನಿಧಿಕ ಚಿತ್ರ
Follow us on

ರಷ್ಯಾ-ಉಕ್ರೇನ್ ಯುದ್ಧವು (Russia Ukraine War) ತಕ್ಷಣಕ್ಕೆ ಕೊನೆಗೊಳ್ಳುವ ಯಾವ ಲಕ್ಷಣವೂ ಕಂಡುಬರುತ್ತಿಲ್ಲ. ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ (Petrolium Products) ಸರಬರಾಜು ಏರುಪೇರಾಗಿರುವುದರಿಂದ ಅಮೆರಿಕ, ಆಫ್ರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಸರಕು ಉತ್ಪಾದನೆಗೆ ಸಮಸ್ಯೆಯಾಗಿದೆ. ಚೀನಾದಲ್ಲಿ ನಿರ್ಬಂಧಗಳು ಮುಂದುವರಿದಿರುವುದರಿಂದ ಪೂರೈಕೆ ಸರಪಳಿ ಈವರೆಗೆ ಕೊವಿಡ್ ಪಿಡುಗಿನ ಮೊದಲಿನ ಸ್ಥಿತಿಗೆ ಬಂದಿಲ್ಲ. ನಿಯಂತ್ರಣಕ್ಕೆ ಬಾರದಂತೆ ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ (Curbing Inflation) ಹಾಕಲೆಂದು ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುತ್ತಿವೆ. ಇದು ಉದ್ಯಮ ವಲಯಕ್ಕೆ ಬೇಕಿರುವ ಬಂಡವಾಳವನ್ನು ದುಬಾರಿಯಾಗಿಸುತ್ತಿದ್ದು ಉತ್ಪಾದನೆ ಕುಂಠಿತಗೊಳ್ಳಲು ಮತ್ತೊಂದು ಕಾರಣವಾಗುತ್ತಿದೆ.

ಈ ಬೆಳವಣಿಗೆಗಳೂ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಸಂಭಾವ್ಯ ಆರ್ಥಿಕ ಹಿಂಜರಿತ (Global Recession), ಆರ್ಥಿಕ ಕುಸಿತ (Economic Downturn), ಆರ್ಥಿಕ ಸ್ಥಗಿತದ (Economic Stagnantion) ಭೀತಿ ಎಲ್ಲೆಡೆ ವ್ಯಕ್ತವಾಗುತ್ತಿದೆ. ಇದೇ ಕಾರಣದಿಂದ ಆದಾಯ ಕುಂಠಿತಗೊಳ್ಳಬಹುದು ಎಂದು ವಿಶ್ಲೇಷಿಸಿರುವ ಟೆಕ್ ಕ್ಷೇತ್ರದ ದೈತ್ಯ ಕಂಪನಿಗಳು ಭವಿಷ್ಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿವೆ. ಭವಿಷ್ಯಕ್ಕೆಂದು ರೂಪಿಸಿದ್ದ ಪ್ರಾಜೆಕ್ಟ್​ಗಳನ್ನು ರದ್ದುಪಡಿಸುತ್ತಿದ್ದು, ಅಂಥ ಪ್ರಾಜೆಕ್ಟ್​ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿವೆ. ಇದರ ಪರಿಣಾಮವಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.

ಫೇಸ್​ಬುಕ್, ಇನ್​ಸ್ಟಾಗ್ರಾಮ್ ಮತ್ತು ವಾಟ್ಸ್ಯಾಪ್ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯು 11,000 ಉದ್ಯೋಗಿಗಳನ್ನು ಮನೆಗೆ ಕಳಿಸುವುದಾಗಿ ಘೋಷಿಸಿದೆ. ಡಿಜಿಟಲ್ ಜಾಹೀರಾತು ಆದಾಯ ಕುಸಿತದೊಂದಿಗೆ ಜಾಹೀರಾತು ಕಂಪನಿಗಳು ತಮ್ಮ ಮಾರ್ಕೆಟಿಂಗ್ ಬಜೆಟ್ ಕಡಿಮೆ ಮಾಡಿದ್ದು ಫೇಸ್​ಬುಕ್​ನ ಈ ನಿರ್ಧಾರಕ್ಕೆ ಮುಖ್ಯ ಕಾರಣ. ಜಾಗತಿಕ ಮಾರುಕಟ್ಟೆಯನ್ನು ಆವರಿಸಿರುವ ಅನಿಶ್ಚತತೆಯ ಕಾರ್ಮೋಡದಿಂದಾಗಿ ಉತ್ಪಾದನೆ ಮತ್ತು ಸೇವಾ ವಲಯದ ಕಂಪನಿಗಳು ಜಾಹೀರಾತು ಬಜೆಟ್ ಕಡಿಮೆ ಮಾಡುತ್ತಿರುವುದು ಫೇಸ್​ಬುಕ್​ನಂಥ ಸಾಮಾಜಿಕ ಮಾಧ್ಯಮ ಕಂಪನಿಗಳಲ್ಲಿ ಭೀತಿ ಹುಟ್ಟಿಸಿದೆ. ಮೈಕ್ರೊಸಾಫ್ಟ್ ಮತ್ತು ಟ್ವಿಟರ್​ ಕಂಪನಿಗಳು ಈಗಾಗಲೇ ಉದ್ಯೋಗ ಕಡಿತ ಘೋಷಿಸಿದ್ದರೆ, ಆ್ಯಪಲ್, ಅಮೆಜಾನ್ ಮತ್ತು ಆಲ್ಫಾಬೆಟ್ (ಗೂಗಲ್) ನೇಮಕಾತಿ ಸ್ಥಗಿತಗೊಳಿಸುವ ಅಥವಾ ನಿಧಾನಗತಿಯಲ್ಲಿ ನೇಮಿಸಿಕೊಳ್ಳುವ ತಂತ್ರ ಅನುಸರಿಸಲು ನಿರ್ಧರಿಸಿವೆ.

ತಪ್ಪು ಲೆಕ್ಕಾಚಾರದ ಬಲಿಪಶುಗಳು

‘ಕೊವಿಡ್ ಪಿಡುಗಿನಿಂದ ಜನರಲ್ಲಿ ಕಾಣಿಸಿಕೊಂಡಿರುವ ನಡವಳಿಕೆ ಬದಲಾವಣೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಅಂದುಕೊಳ್ಳುವುದೇ ತಪ್ಪು. ಹಿಂದೆ ಇದೇ ತಪ್ಪು ಮಾಡಿ ಕೆಲ ಕಂಪನಿಗಳು ಹೊಸ ಯೋಜನೆಗಳನ್ನು ರೂಪಿಸಿದ್ದವು. ಈಗ ಇದನ್ನೇ ದೊಡ್ಡದು ಮಾಡಿಕೊಂಡು ದೀರ್ಘಕಾಲದ ಯೋಜನೆಗಳನ್ನು ಕೈಬಿಡುವುದು ಅಥವಾ ಉದ್ಯೋಗಿಗಳ ವಜಾ ಮಾಡುವುದು ಅನಗತ್ಯ. ಆದರೆ ಈಗ ಮೆಟಾ (ಫೇಸ್​ಬುಕ್) ಮತ್ತು ಟ್ವಿಟರ್​ ಈ ಪ್ರಕ್ರಿಯೆ ಆರಂಭಿಸಿವೆ’ ಎಂದು ವಿಶ್ಲೇಷಿಸುತ್ತಾರೆ ಎಚ್​ಆರ್ ವಿಭಾಗದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿರುವ ಅರ್ಥ ಸ್ಕೂಲ್ ಆಫ್ ಎಂಟರ್​ಪ್ರೆನರ್​ಶಿಪ್​ನ ಟಿ.ಎನ್.ಹರಿ.

ಫೇಸ್​ಬುಕ್​ನ ಪ್ರವರ್ತಕ ಕಂಪನಿ ಮೆಟಾದ ಸಂಸ್ಥಾಪಕ ಮಾರ್ಕ್ ಝುಕರ್​ಬರ್ಗ್​ ಸಹ ಈ ಮಾತು ಒಪ್ಪುತ್ತಾರೆ. ‘ಕೊವಿಡ್ ಪಿಡುಗು ವ್ಯಾಪಿಸಿಕೊಂಡ ನಂತರ ಜಗತ್ತು ಆನ್​ಲೈನ್​ಗೆ ಹೊರಳಿಕೊಂಡಿತು. ಇ-ಕಾಮರ್ಸ್​ ಕಂಪನಿಗಳ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಹಲವು ವಿಶ್ಲೇಷಿಸಿದರು. ನಾನೂ ಹೀಗೆಯೇ ಯೋಚಿಸಿದ್ದೆ. ಈ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚು ಮಾಡಿದೆ. ಆದರೆ ನನ್ನ ಲೆಕ್ಕಾಚಾರ ಸುಳ್ಳಾಯಿತು’ ಎಂದು ತಮ್ಮ ಕಂಪನಿಯ ಶೇ 13ರಷ್ಟು ಉದ್ಯೋಗಿಗಳನ್ನು ವಜಾ ಮಾಡುವ ಹಾಗೂ ನೇಮಕಾತಿ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ಮಾರ್ಕ್​ಝುಕರ್​ಬರ್ಗ್ ಹೇಳಿದ್ದರು.

‘ಆನ್​ಲೈನ್ ವಹಿವಾಟು ಕಡಿಮೆಯಾಗಿದ್ದಲ್ಲದೆ, ಹಲವು ದೇಶಗಳಲ್ಲಿ ಆರ್ಥಿಕತೆ ಕುಸಿಯುವ ಲಕ್ಷಣಗಳು ಗೋಚರಿಸುತ್ತಿವೆ. ಸ್ಪರ್ಧೆ ಹೆಚ್ಚಾಗುತ್ತಿದ್ದು, ಜಾಹೀರಾತು ಆದಾಯ ಕುಸಿಯುವ ಸಂಕೇತಗಳು ಕಾಣಿಸುತ್ತಿವೆ. ನನ್ನ ಲೆಕ್ಕಾಚಾರ ತಪ್ಪಾಯಿತು, ಇದು ಸಂಪೂರ್ಣವಾಗಿ ನನ್ನದೇ ತಪ್ಪು’ ಎಂದು ಝುಕರ್​ಬರ್ಗ್ ಒಪ್ಪಿಕೊಂಡಿದ್ದರು.

ಮುಂದೇನಾಗಬಹುದು?

‘ಮುಂದಿನ ಕೆಲವು ವರ್ಷಗಳ ಅವಧಿಗೆ ಆರ್ಥಿಕ ಹಿಂಜರಿತದ ಸಮಸ್ಯೆಗಳು ಹೀಗೆಯೇ ಉಳಿಯಬಹುದು ಎಂದು ಟೆಕ್ ದೈತ್ಯ ಕಂಪನಿಗಳು ಊಹಿಸಿರುವಂತಿದೆ. ಹೀಗಾಗಿಯೇ ಕಡಿಮೆ ಆದಾಯ ತರುವ ಮತ್ತು ಅನಗತ್ಯ ಎನಿಸುವ ಸಿಬ್ಬಂದಿಯನ್ನು ಹೊರೆ ಎಂದು ಪರಿಗಣಿಸುತ್ತಿವೆ. ಮುಂದಿನ ದಿನಗಳಲ್ಲಿ ಹೆಚ್ಚು ಆದಾಯ ತರುವ ಮತ್ತು ಹೆಚ್ಚಿನ ಕಾರ್ಯಕ್ಷಮತೆ ತೋರುವ ಸಿಬ್ಬಂದಿಯನ್ನು ಮಾತ್ರವೇ ಉಳಿಸಿಕೊಳ್ಳುತ್ತವೆ’ ಎನ್ನುವ ಅಮೆಜಾನ್​ನ ಮಾಜಿ ನೌಕರರ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್​’ ಜಾಲತಾಣವು ವರದಿ ಮಾಡಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಕಂಪನಿಗಳು ನೈತಿಕ ಮೌಲ್ಯಕ್ಕಿಂತಲೂ ಹಣಕಾಸು ಲೆಕ್ಕಾಚಾರಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಉದ್ಯೋಗಿಗಳ ರಕ್ಷಣೆಗೆ ಮುಂದಾಗುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಉದ್ಯಮ ವಲಯದಲ್ಲಿ ಚಾಲ್ತಿಗೆ ಬಂದಿವೆ.

ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ತಾಂತ್ರಿಕ ಮತ್ತು ಸಪೋರ್ಟ್​ ವಿಭಾಗಗಳ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ. ಈಗಿನ್ನೂ ಕೆಲಸ ಆರಂಭಿಸುತ್ತಿರುವ ಉದ್ಯೋಗಿಗಳಿಗಿಂತಲೂ ಸೀನಿಯರ್ ಮ್ಯಾನೇಜ್​ಮೆಂಟ್ ಸ್ಥಾನಗಳಲ್ಲಿ ಇರುವವರೇ ಈ ಹೊಡೆತಕ್ಕೆ ಮೊದಲು ಸಿಲುಕುತ್ತಾರೆ. ಇಂಥವರು ಭಾರತೀಯ ಕಂಪನಿಗಳತ್ತ ವಲಸೆ ಬರುವ ಅಥವಾ ಸ್ವಂತ ಕಂಪನಿಗಳನ್ನು ಹುಟ್ಟುಹಾಕುವ ಸಾಧ್ಯತೆಗಳೂ ಇವೆ. ಒಟ್ಟಾರೆ ಟೆಕ್ ಕಂಪನಿಗಳಲ್ಲಿ ನಡೆಯುತ್ತಿರುವ ಈ ವಿದ್ಯಮಾನ ಭಾರತೀಯ ಆರ್ಥಿಕತೆ ಮತ್ತು ಔದ್ಯೋಗಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಕ್ಷಣಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ.

(ಮಾಹಿತಿ: ಪಿಟಿಐ, ಎಪಿ, ಎಎಫ್​ಪಿ)

ಇದನ್ನೂ ಓದಿ: ಟ್ವಿಟರ್​ ನಂತರ ಫೇಸ್​ಬುಕ್​ನಿಂದಲೂ ಉದ್ಯೋಗಿಗಳ ಕೆಲಸ ಕಸಿಯಲು ಸಿದ್ಧತೆ: ದೊಡ್ಡಮಟ್ಟದಲ್ಲಿ ಸಿಬ್ಬಂದಿ ವಜಾ ಪಟ್ಟಿ ಸಿದ್ಧಪಡಿಸಿದ ಮೆಟಾ

ಇದನ್ನೂ ಓದಿ: Meta Layoffs: ಮೆಟಾದಿಂದ 11,000 ಉದ್ಯೋಗಿಗಳ ವಜಾ; ಮಾರ್ಕ್ ಝುಕರ್​ಬರ್ಗ್ ಘೋಷಣೆ

Published On - 8:30 am, Thu, 10 November 22