ಟ್ವಿಟರ್ ನಂತರ ಫೇಸ್ಬುಕ್ನಿಂದಲೂ ಉದ್ಯೋಗಿಗಳ ಕೆಲಸ ಕಸಿಯಲು ಸಿದ್ಧತೆ: ದೊಡ್ಡಮಟ್ಟದಲ್ಲಿ ಸಿಬ್ಬಂದಿ ವಜಾ ಪಟ್ಟಿ ಸಿದ್ಧಪಡಿಸಿದ ಮೆಟಾ
ಮೈಕ್ರೊಸಾಫ್ಟ್, ಸ್ನ್ಯಾಪ್, ಟ್ವಿಟರ್ ಸೇರಿದಂತೆ ಹಲವು ಕಂಪನಿಗಳು ಜಾಗತಿಕ ಆರ್ಥಿಕ ಹಿಂಜರಿತದ ಕಾರಣ ಮುಂದಿಟ್ಟು ಉದ್ಯೋಗಿಗಳನ್ನು ವಜಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿವೆ.
ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಮೆಸೆಂಜಿಂಗ್ ಆ್ಯಪ್ ವಾಟ್ಸ್ಆ್ಯಪ್ ವೇದಿಕೆಗಳನ್ನು ನಿರ್ವಹಿಸುವ ‘ಮೆಟಾ’ ಕಂಪೆನಿಯು ದೊಡ್ಡಮಟ್ಟದಲ್ಲಿ ಉದ್ಯೋಗಿಗಳು ವಜಾ ಮಾಡಲು ಸಿದ್ಧತೆ ನಡೆಸುತ್ತಿದೆ. ತೆಗೆಯಬೇಕಾದ ಉದ್ಯೋಗಿಗಳ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಬುಧವಾರದಿಂದಲೇ (ನ 9) ವಜಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ‘ವಾಲ್ಸ್ಟ್ರೀಟ್ ಜರ್ನಲ್’ ಪತ್ರಿಕೆಯು ವರದಿ ಮಾಡಿದೆ. ಇತ್ತೀಚೆಗಷ್ಟೇ ಟ್ವಿಟರ್ ಸಹ ದೊಡ್ಡಮಟ್ಟದಲ್ಲಿ ಉದ್ಯೋಗಿಗಳನ್ನು ವಜಾ ಮಾಡಿತ್ತು. ಈ ಘಟನೆಯ ಬೆನ್ನಿಗೇ ಮತ್ತೊಂದು ಕಂಪನಿಯು ಉದ್ಯೋಗಿಗಳ ವಜಾಕ್ಕೆ ಮುಂದಾಗಿರುವುದು ಆರ್ಥಿಕ ಹಿಂಜರಿತದ ಪರಿಣಾಮಗಳ ಕುರಿತ ಭೀತಿಯನ್ನು ಹೆಚ್ಚಿಸಿದೆ. ಈ ನಡುವೆ ‘ಮೆಟಾ’ ಕಂಪನಿಯು ‘ವಾಲ್ಸ್ಟ್ರೀಟ್ ಜರ್ನಲ್’ ಪತ್ರಿಕೆಯ ವರದಿಯನ್ನು ನಿರಾಕರಿಸಿದೆ.
ಕಳೆದ ತಿಂಗಳು (ಅಕ್ಟೋಬರ್) ಮೆಟಾ ಕಂಪನಿಯು ತ್ರೈಮಾಸಿಕ ಆದಾಯದಲ್ಲಿ ಕುಂಠಿತವಾಗಬಹುದಾದ ಅಪಾಯ ಇರುವ ಬಗ್ಗೆ ಒತ್ತಿ ಹೇಳಿತ್ತು. ಈ ಹೇಳಿಕೆ ಹೊರಬಿದ್ದ ನಂತರ ಸತತ ಕುಸಿತ ಕಂಡಿದ್ದ ಮೆಟಾ ಕಂಪನಿಯ ಷೇರುಗಳು 67 ಶತಕೋಟಿ ಡಾಲರ್ನಷ್ಟು ಮೌಲ್ಯ ಕಳೆದುಕೊಂಡಿತ್ತು. ಈ ವರ್ಷದಲ್ಲಿ ಮೆಟಾ ಕಳೆದುಕೊಂಡಿರುವ ಬಂಡವಾಳ ಮೌಲ್ಯವು ಸುಮಾರು 50,000 ಕೋಟಿ ಡಾಲರ್ನಷ್ಟು.
ಜಾಗತಿಕ ಆರ್ಥಿಕ ಪ್ರಗತಿ ಕುಂಠಿತಗೊಂಡಿರುವುದು ಹಾಗೂ ಮುಂದಿನ ದಿನಗಳಲ್ಲಿ ಹಿಂಜರಿತ ಕಾಣಿಸಿಕೊಳ್ಳಬಹುದು ಎಂಬ ಭೀತಿ ವ್ಯಕ್ತವಾಗಿರುವುದು ಮೆಟಾ ಲಾಭದ ಮೇಲೆ ನೇರ ಪರಿಣಾಮ ಬೀರಿದೆ. ಇದರ ಜೊತೆಗೆ ಟಿಕ್ಟಾಕ್ ಒಡ್ಡುತ್ತಿರುವ ಪ್ರಬಲ ಸ್ಪರ್ಧೆ, ಖಾಸಗಿ ಬದುಕು ಹಾಗೂ ಗೌಪ್ಯದ ವಿಚಾರದಲ್ಲಿ (ಪ್ರೈವೆಸಿ) ಆ್ಯಪಲ್ ತನ್ನ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಮೆಟಾವರ್ಸ್ಗಾಗಿ ಹೆಚ್ಚಿನ ವೆಚ್ಚ ಮಾಡಬೇಕಾಗುತ್ತದೆ ಎನ್ನುವ ಲೆಕ್ಕಾಚಾರ ಹಾಗೂ ನಿಯಮಗಳಲ್ಲಿ ಯಾವ ಬೇಕಾದರೂ ಬದಲಾವಣೆಗಳು ಬರಬಹುದು ಎಂಬ ಭೀತಿಯು ಮೆಟಾ ಕಂಪನಿಯ ಆದಾಯ ಗಳಿಕೆ ಸಾಧ್ಯತೆಯ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿತು.
ಮೆಟಾ ಕಂಪನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮಾರ್ಕ್ ಝುಕರ್ಬರ್ಗ್ ಮೆಟಾವರ್ಸ್ನ ಹೂಡಿಕೆಗಳು ಫಲ ನೀಡಲು ಸುಮಾರು 10 ವರ್ಷ ಬೇಕಾಗಬಹುದು ಎಂದು ಹೇಳಿದ್ದರು. ಇದಾದ ನಂತರ ಝುಕರ್ಬರ್ಗ್ ನೇಮಕಾತಿಗಳನ್ನು ಸ್ಥಗಿತಗೊಳಿಸಿದ್ದರು, ಹಲವು ಪ್ರಾಜೆಕ್ಟ್ಗಳನ್ನು ಕೈಬಿಟ್ಟರು, ಅದರ ಜೊತೆಗೆ ವೆಚ್ಚ ಕಡಿತಕ್ಕೆ ಹಲವು ಕ್ರಮಗಳನ್ನೂ ಘೋಷಿಸಿದ್ದರು. ‘2023ರಲ್ಲಿ ನಾವು ನಮ್ಮ ಹೂಡಿಕೆಗಳನ್ನು ಕಡಿಮೆ ಸಂಖ್ಯೆಯ ಆದರೆ ಹೆಚ್ಚು ಬೆಳವಣಿಗೆ ಸಾಧ್ಯತೆಯಿರುವ ಕ್ಷೇತ್ರಗಳತ್ತ ಗಮನ ಕೊಡುತ್ತೇವೆ. ಹೀಗಾಗಿ ಕೆಲ ತಂಡಗಳು ಅರ್ಥಪೂರ್ಣವಾಗಿ ಬೆಳೆಯುತ್ತವೆ. ಆದರೆ ಬಹುತೇಕ ಇತರ ತಂಡಗಳು ಪ್ರಗತಿ ಕಾಣುವುದಿಲ್ಲ. ಅಷ್ಟೇ ಅಲ್ಲ, ತಂಡದ ಸದಸ್ಯರೂ ಕಡಿಮೆಯಾಗಲಿದ್ದಾರೆ. 2023ರ ಅಂತ್ಯದ ಹೊತ್ತಿಗೆ ನಮ್ಮ ತಂಡವು ಹೆಚ್ಚು ಕಡಿಮೆ ಇಷ್ಟೇ ಸಂಖ್ಯೆಯಲ್ಲಿರುತ್ತದೆ ಅಥವಾ ಸ್ವಲ್ಪ ಕಡಿಮೆಯಾಗಬಹುದು’ ಎಂದು ಮಾರ್ಕ್ ಝುಕರ್ಬರ್ಗ್ ಕಳೆದ ಅಕ್ಟೋಬರ್ನಲ್ಲಿ ಹೇಳಿದ್ದರು.
ಎಂಜಿನಿಯರ್ಗಳ ನೇಮಕಾತಿ ಪ್ರಮಾಣವನ್ನು ಶೇ 30ರಷ್ಟು ಕಡಿಮೆ ಮಾಡುವುದಾಗಿ ಮಾರ್ಕ್ ಝುಕರ್ಬರ್ಗ್ ಹೇಳಿದ್ದರು. ಆರ್ಥಿಕ ಕುಸಿತವನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಝುಕರ್ಬರ್ಗ್ ಉದ್ಯೋಗಿಗಳಿಗೆ ಎಚ್ಚರಿಸಿದ್ದರು. ಮೆಟಾ ಕಂಪನಿಯ ಹೂಡಿಕೆದಾರ ಕಂಪನಿ ‘ಅಲ್ಟಿಮೀಟರ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್’ ಮಾರ್ಕ್ ಝುಕರ್ಬರ್ಗ್ಗೆ ಬಹಿರಂಗ ಪತ್ರ ಬರೆದು, ‘ಕಂಪನಿಯು ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತಗೊಳಿಸಬೇಕು ಮತ್ತು ವೆಚ್ಚ ಕಡಿಮೆ ಮಾಡಲು ಗಮನ ಹರಿಸಬೇಕು’ ಎಂದು ತಾಕೀತು ಮಾಡಿತ್ತು. ಮೆಟಾವರ್ಸ್ನಲ್ಲಿ ಹೂಡಿಕೆದಾರರ ವಿಶ್ವಾಸ ಕಡಿಮೆಯಾಗುತ್ತಿದೆ ಎಂಬ ಸಂಗತಿಯನ್ನು ಈ ಪತ್ರವು ಸಾರಿ ಹೇಳಿತ್ತು.
ಮೈಕ್ರೊಸಾಫ್ಟ್, ಸ್ನ್ಯಾಪ್, ಟ್ವಿಟರ್ ಸೇರಿದಂತೆ ಹಲವು ಕಂಪನಿಗಳು ಜಾಗತಿಕ ಆರ್ಥಿಕ ಹಿಂಜರಿತದ ಕಾರಣ ಮುಂದಿಟ್ಟು ಉದ್ಯೋಗಿಗಳನ್ನು ವಜಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಹಲವು ಕಂಪನಿಗಳು ಹೊಸ ನೇಮಕಾತಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿವೆ. ಹೆಚ್ಚುತ್ತಿರುವ ಬಡ್ಡಿ ದರ, ಹಣದುಬ್ಬರ ಮತ್ತು ಯೂರೋಪ್ನಲ್ಲಿ ಇಂಧನ ಬಿಕ್ಕಟ್ಟಿನಿಂದಾಗಿ ಆರ್ಥಿಕ ಕುಸಿತದ ಆತಂಕ ಜಗತ್ತನ್ನು ಕಾಡುತ್ತಿದೆ.
Published On - 8:07 am, Mon, 7 November 22