Twitter Blue Tick: ಟ್ವಿಟರ್ ಬ್ಲೂ ಟಿಕ್ಗೆ ಶುಲ್ಕ; ತಿಂಗಳೊಳಗೆ ಭಾರತದಲ್ಲೂ ಜಾರಿ ಎಂದ ಮಸ್ಕ್
ಒಂದು ತಿಂಗಳ ಒಳಗಾಗಿ ಭಾರತದಲ್ಲೂ ಟ್ವಿಟರ್ ಬ್ಲೂ ಟಿಕ್ಗೆ ಶುಲ್ಕ ಜಾರಿಗೆ ತರುವುದಾಗಿ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ. ಭಾರತದಲ್ಲಿ ಬ್ಲೂಟಿಕ್ಗೆ ತಿಂಗಳಿಗೆ 200 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ: ಟ್ವಿಟರ್ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲೂಟಿಕ್ (Twitter Blue Tick) ಪಡೆಯಲು ಇನ್ನು ಮುಂದೆ 8 ಡಾಲರ್ ಶುಲ್ಕ ವಿಧಿಸಲಾಗುವುದು ಎಂದು ಕಂಪನಿಯ ನೂತನ ಮಾಲೀಕ ಎಲಾನ್ ಮಸ್ಕ್ (Elon Musk) ಇತ್ತೀಚೆಗೆ ಹೇಳಿದ್ದರು. ಹಲವು ದೇಶಗಳಲ್ಲಿ ಬ್ಲೂಟಿಕ್ ಶುಲ್ಕ ಇಂದಿನಿಂದ (ನವೆಂಬರ್ 7) ಜಾರಿಗೆ ಬಂದಿದೆ ಎಂದೂ ವರದಿಯಾಗಿದೆ. ಈ ಮಧ್ಯೆ, ಭಾರತದಲ್ಲಿಯೂ ಸದ್ಯದಲ್ಲೇ ಬ್ಲೂಟಿಕ್ಗೆ ಶುಲ್ಕ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಟ್ವಿಟರ್ನ ಬ್ಲೂಟಿಕ್ ಶುಲ್ಕ ನೀತಿ ಭಾರತದ ಐಟಿ ನಿಯಮಗಳ ವ್ಯಾಪ್ತಿಯಲ್ಲೇ ಬರುತ್ತದೆಯೇ? ನೂತನ ಐಟಿ ನಿಯಮಗಳಲ್ಲಿ ಸಾಮಾಜಿಕ ಮಾಧ್ಯಮಗಳು ವೆರಿಫಿಕೇಷನ್ಗೆ ಶುಲ್ಕ ಪಡೆಯಲು ಅವಕಾಶ ಇದೆಯೇ ಎಂಬ ಕುರಿತು ಇತ್ತೀಚೆಗೆ ಚರ್ಚೆಗಳಾಗಿದ್ದವು. ಇದರ ಬೆನ್ನಲ್ಲೇ ಬಳಕೆದಾರರೊಬ್ಬರು, ಭಾರತದಲ್ಲಿ ನೂತನ ಬ್ಲೂಟಿಕ್ ನಿಯಮ ಜಾರಿ ವಿಚಾರವಾವಿ ಮಸ್ಕ್ ಅವರನ್ನು ಪ್ರಶ್ನಿಸಿದ್ದಾರೆ.
‘ಎಲಾನ್ ಮಸ್ಕ್ ಅವರೇ, ಭಾರತದಲ್ಲಿ ನೂತನ ಬ್ಲೂಟಿಕ್ ನಿಯಮ ಯಾವಾಗ ಜಾರಿಯಾಗಲಿದೆ?’ ಎಂದು ಪ್ರಭು ಎಂಬವರು ಮಸ್ಕ್ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಮಸ್ಕ್, ಒಂದು ತಿಂಗಳ ಒಳಗಾಗಿ ಜಾರಿಯಾಗಲಿದೆ ಎಂಬ ಭರವಸೆ ಹೊಂದಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
Hopefully, less than a month
— Elon Musk (@elonmusk) November 5, 2022
ಅಮೆರಿಕದಲ್ಲಿ ಬ್ಲೂಟಿಕ್ಗೆ 7.99 ಡಾಲರ್ ಶುಲ್ಕ
ಅಮೆರಿಕದಲ್ಲಿ ಬ್ಲೂಟಿಕ್ಗೆ 7.99 ಡಾಲರ್ ಶುಲ್ಕ ವಿಧಿಸಲಾಗುತ್ತಿದೆ. ಐಒಎಸ್ ಬಳಕೆದಾರರಿಗೆ ಆ್ಯಪ್ನ ಅಪ್ಡೇಟೆಡ್ ವರ್ಷನ್ ಬಳಕೆಗೆ ದೊರೆತಿದೆ. ಆದರೆ, ಹೊಸ ಆಯ್ಕೆ ಇನ್ನೂ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ ಎನ್ನಲಾಗಿದೆ. ಭಾರತದಲ್ಲಿ ಬ್ಲೂಟಿಕ್ಗೆ ತಿಂಗಳಿಗೆ 200 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮಧ್ಯೆ, ವಜಾಗೊಂಡ ಕೆಲವು ಸಿಬ್ಬಂದಿಯನ್ನು ಕಂಪನಿಗೆ ಮತ್ತೆ ಕೆಲಸಕ್ಕೆ ಬನ್ನಿ ಎಂದು ಟ್ವಿಟರ್ ಆಹ್ವಾನಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Twitter: ಟ್ವಿಟರ್ನಲ್ಲಿ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಶುಲ್ಕ: ಎಲಾನ್ ಮಸ್ಕ್
Published On - 1:10 pm, Mon, 7 November 22