ಭಾರತದ 256 ಜಿಲ್ಲೆಗಳಲ್ಲಿ ಜಾರಿ ಆಗುವುದರೊಂದಿಗೆ ಚಿನ್ನಾಭರಣಗಳು ಮತ್ತು ಇತರ ವಸ್ತುಗಳಿಗೆ ಹಾಲ್ಮಾರ್ಕ್ ಕಡ್ಡಾಯಗೊಳಿಸುವ ಪ್ರಕ್ರಿಯೆ ಜೂನ್ 16, 2021ರಿಂದ ಹಂತಹಂತವಾಗಿ ಅನುಷ್ಠಾನಕ್ಕೆ ಬರಲಿದೆ. ಗ್ರಾಹಕ ವ್ಯವಹಾರಗಳ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಮತ್ತು ಆಲ್ ಇಂಡಿಯಾ ಜ್ಯುವೆಲ್ಲರ್ಸ್ ಅಂಡ್ ಗೋಲ್ಡ್ಸ್ಮಿತ್ ಫೆಡರೇಷನ್ (ಎಯುಜಿಎಫ್) ಕೂಡ ಈ ಸಭೆಯಲ್ಲಿ ಹಾಜರಿದ್ದರು. ಎಯುಜಿಎಫ್ ಎಂಬುದು ಭಾರತದಲ್ಲಿ ಸಣ್ಣ ಆಭರಣ ವರ್ತಕರ ಅತಿ ದೊಡ್ಡ ಒಕ್ಕೂಟ. ಮೊದಲಿಗೆ ಭಾರತದ 256 ಜಿಲ್ಲೆಗಳಲ್ಲಿ, ಅಂದರೆ ಈಗಾಗಲೇ ಎಲ್ಲೆಲ್ಲಿ ಹಾಲ್ಮಾರ್ಕಿಂಗ್ ಕೇಂದ್ರಗಳಿವೆಯೋ ಅಲ್ಲಿ ಜೂನ್ 16, 2021ರಿಂದ ಜಾರಿ ಆಗಲಿದೆ. ಚಿನ್ನದ ಆಭರಣವು 14, 18 ಮತ್ತು 22 ಕ್ಯಾರಟ್ ಸದ್ಯಕ್ಕೆ ಮಾರಲಾಗುತ್ತಿದೆ. ಇನ್ನು ಮುಂದೆ 20, 23 ಮತ್ತು 24 ಕ್ಯಾರಟ್ಗಳ ಚಿನ್ನದ ಹಾಲ್ಮಾರ್ಕ್ಗೂ ಅವಕಾಶ ನೀಡಲಾಗಿದೆ. ಇನ್ನೂ ಒಂದು ಸಂಗತಿ ಏನೆಂದರೆ, ಬೆಳ್ಳಿಗೂ ಬಿಐಎಸ್ ಹಾಲ್ಮಾರ್ಕ್ ಬರುತ್ತದೆ. ಆಭರಣ ವರ್ತಕರು ಬೆಳ್ಳಿಯ ಗುಣಮಟ್ಟವನ್ನು ಅಳೆಯುವುದಕ್ಕೆ ‘ಟಚ್’ ಎಂಬ ಪದವನ್ನು ಬಳಸುತ್ತಾರೆ. ಆದ್ದರಿಂದ ಬೆಳ್ಳಿಯ ವಸ್ತುಗಳನ್ನು ಖರೀದಿಸುವಾಗಲೂ ಕಡ್ಡಾಯವಾಗಿ ಶುದ್ಧತೆಯನ್ನು ಪರೀಕ್ಷಿಸಿಕೊಳ್ಳಬೇಕು.
ಹಾಲ್ಮಾರ್ಕಿಂಗ್ ಅಂದರೇನು?
ಚಿನ್ನದ ಗುಣಮಟ್ಟವನ್ನು ಯಂತ್ರದ ಸಹಾಯದಿಂದ ಅಳೆದು, ಅದಕ್ಕೆ ಪ್ರಮಾಣ ಪತ್ರವನ್ನು ನೀಡುವುದಕ್ಕೆ ಹಾಲ್ಮಾರ್ಕಿಂಗ್ ಎನ್ನಲಾಗುತ್ತದೆ. ಅದಕ್ಕೆ ಅಂತಲೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇದೆ.
ಯಾವ ಆಧಾರದಲ್ಲಿ ಹಾಲ್ಮಾರ್ಕಿಂಗ್ ಮಾಡಲಾಗುತ್ತದೆ? ಅದರ ಮಾನದಂಡ ಏನು?
ಉದಾಹರಣೆಗೆ ನೀವೊಂದು ಉಂಗುರ ಖರೀದಿ ಮಾಡಿದಿರಿ ಅಂತಿಟ್ಟುಕೊಳ್ಳಿ. ಅದರ ತೂಕವನ್ನು ನಿಮ್ಮೆದುರೇ ಮಾಡಿ, ತೋರಿಸಲಾಗುತ್ತದೆ. ಆದರೆ ಅದರ ಶುದ್ಧತೆಯನ್ನು ತಿಳಿದುಕೊಳ್ಳುವುದು ಹೇಗೆ? ಅದಕ್ಕಾಗಿಯೇ ಹಾಲ್ಮಾರ್ಕಿಂಗ್ ಮಾಡಲಾಗುತ್ತದೆ. ಎಲ್ಲ ಚಿನ್ನಕ್ಕೂ ಹಾಲ್ಮಾರ್ಕಿಂಗ್ ಮಾಡಿಸಬಹುದು. ಹಾಲ್ಮಾರ್ಕಿಂಗ್ಗೆ ಚಿನ್ನದ ಶುದ್ಧತೆಯೇ ಆಧಾರ. ಅದರಲ್ಲಿ ಎಷ್ಟು ಕ್ಯಾರಟ್ ಎಂದು ಹಾಕಲಾಗಿದೆಯೋ ಅದು ಶುದ್ಧತೆಯನ್ನು ಸೂಚಿಸುತ್ತದೆ.
ಅದನ್ನು ಇನ್ನಷ್ಟು ವಿವರವಾಗಿ ಹೇಳುವುದಾದರೆ ಹೇಗೆ?
ಉದಾಹರಣೆಗೆ: 14 ಕ್ಯಾರಟ್ ಅಂದರೆ, ಹಾಲ್ಮಾರ್ಕ್ 14K,14KT ಅಂತಾಗಿರುತ್ತದೆ. ಅದನ್ನು 585 ಎನ್ನುತ್ತಾರೆ. ಅಂದರೆ ಆ ಆಭರಣದಲ್ಲಿ ಶೇ 58.5ರಷ್ಟು ಮಾತ್ರ ಶುದ್ಧ ಚಿನ್ನ ಇದೆ ಎಂದರ್ಥ. ಇನ್ನು 18 ಕ್ಯಾರಟ್ ಆದಲ್ಲಿ ಶೇ 75ರಷ್ಟು ಶುದ್ಧ ಚಿನ್ನ ಇರುತ್ತದೆ. ಅದನ್ನು 750 ಎನ್ನಲಾಗುತ್ತದೆ. 22 ಕ್ಯಾರಟ್ನಲ್ಲಿ ಶೇ 91.7 ಶುದ್ಧ ಚಿನ್ನ ಇರುತ್ತದೆ. 917 ಎನ್ನಲಾಗುತ್ತದೆ. 24 ಕ್ಯಾರಟ್ ಚಿನ್ನ ಅಂದರೆ ಶೇ 99.9ರಷ್ಟು ಶುದ್ಧವಾಗಿರುತ್ತದೆ. 999.9 ಎನ್ನಲಾಗುತ್ತದೆ.
ಆಭರಣಕ್ಕೆ ಯಾವ ಚಿನ್ನದ ಆಭರಣ ಉತ್ತಮ?
ಚಿನ್ನದ ಕ್ಯಾರಟ್ ಕಡಿಮೆ ಇದ್ದಷ್ಟು ಹೆಚ್ಚು ಗಟ್ಟಿ ಬರುತ್ತದೆ. ಚಿನ್ನ ಶುದ್ಧವಾದಷ್ಟೂ ಮೃದುವಾಗುತ್ತದೆ. ವಿದೇಶಗಳಲ್ಲಿ 14KT, 18 ಕ್ಯಾರಟ್ ಚಿನ್ನವನ್ನು ಹೆಚ್ಚು ಬಳಸುತ್ತಾರೆ. ಭಾರತದಲ್ಲೂ ವಜ್ರದ ಆಭರಣಗಳಿಗೆ ಈ ಗುಣಮಟ್ಟದ ಚಿನ್ನವನ್ನು ಬಳಸಲಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿ ಇರುವುದು 22 ಕ್ಯಾರಟ್ ಚಿನ್ನ. 24 ಕ್ಯಾರಟ್ ಚಿನ್ನದ ಆಭರಣವನ್ನು ಬಳಸುವಂತಿದ್ದಲ್ಲಿ ಅಪರೂಪದ ಸಂದರ್ಭಕ್ಕೆ ಮಾತ್ರ ಬಳಸಬಹುದು. ಇದು ಮೃದುವಾಗಿರುತ್ತದಾದ್ದರಿಂದ ಮುರಿಯುವ, ಬೆಂಡಾಗುವ ಅಪಾಯ ಇರುತ್ತದೆ.
ಹಾಲ್ಮಾರ್ಕಿಂಗ್ ಆಗಿರುವ ಆಭರಣಗಳನ್ನೇ ಏಕೆ ಖರೀದಿಸಬೇಕು?
ಚಿನ್ನದ ದರ ನಿಗದಿ ಆಗುವುದು ಅದರ ಶುದ್ಧತೆಯ ಆಧಾರದ ಮೇಲೆ. ಅಂದರೆ ಅದರ ಕ್ಯಾರಟ್ ಎಷ್ಟಿದೆ ಎಂಬುದರ ಆಧಾರದಲ್ಲಿ. ಆದ್ದರಿಂದ ಚಿನ್ನ ಖರೀದಿಸುವಾಗ ಗ್ರಾಹಕರಿಗೆ ತಾವು ನೀಡುತ್ತಿರುವ ದರಕ್ಕೆ ತಕ್ಕ ಮೌಲ್ಯದ ಚಿನ್ನ ಸಿಗುತ್ತಿದೆಯೇ ಎಂಬುದು ಖಾತ್ರಿ ಆಗುವ ಸಲುವಾಗಿ ಹಾಲ್ಮಾರ್ಕ್ ಆಗಿರುವ ಆಭರಣವನ್ನು ಖರೀದಿಸಬೇಕು.
ಈಗಿನ ಕ್ರಮದ ಅನುಷ್ಠಾನದಲ್ಲಿ ಇರುವ ಸವಾಲು ಏನು?
ಭಾರತದಲ್ಲಿ ಹಾಲ್ಮಾರ್ಕಿಂಗ್ ಕೇಂದ್ರಗಳು ಕಡಿಮೆ ಇವೆ. ಜತೆಗೆ ಹಾಲ್ಮಾರ್ಕ್ಗಾಗಿ ಬರುವ ಆಭರಣಗಳ ಪ್ರಮಾಣ ಹೆಚ್ಚು. ಸದ್ಯದ ಸ್ಥಿತಿ ಹೇಗಿದೆಯೆಂದರೆ, ಒಬ್ಬರು ಆಭರಣ ವ್ಯಾಪಾರಿ ಕಡೆಯಿಂದ ಹತ್ತಾರು ಒಡವೆಗಳು ಬಂದಾಗ, ಆಯ್ದ ಕೆಲವನ್ನು ಪರೀಕ್ಷಿಸಿ, ಎಲ್ಲಕ್ಕೂ ಅದೇ ಗುಣಮಟ್ಟದ ಪ್ರಮಾಣಪತ್ರ ನೀಡಲಾಗುತ್ತಿದೆ. ಇನ್ನು ಕೆಲವು ಆಭರಣ ವರ್ತಕರು ಇದಕ್ಕಾಗಿಯೇ ಹೆಚ್ಚುವರಿ ಹಣವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಾರೆ. ಆದರೆ ನೆನಪಿನಲ್ಲಿರಲಿ, ಇದಕ್ಕೆ ಹೆಚ್ಚುವರಿ ಹಣ ಪಾವತಿಸುವ ಅಗತ್ಯ ಇಲ್ಲ.
ಇದನ್ನೂ ಓದಿ: Coin Auction: ಆ ಒಂದು ಚಿನ್ನದ ನಾಣ್ಯ ಹರಾಜಾಗಿದ್ದು 138 ಕೋಟಿ ರೂಪಾಯಿಗೆ; ಏನಿತ್ತು ಅಂಥ ವಿಶೇಷ ಅಂತೀರಾ?
Published On - 11:43 am, Wed, 16 June 21