ನವದೆಹಲಿ: ಸರ್ಚ್ ಎಂಜಿನ್ ದೈತ್ಯ ಗೂಗಲ್ (Google) ಉದ್ಯೋಗಿಗಳನ್ನು ವಜಾಗೊಳಿಸುವ (Layoffs) ಸಾಧ್ಯತೆ ಇದೆ ಎಂಬ ವದಂತಿಗಳು ಇತ್ತೀಚೆಗೆ ಹರಡಿದ್ದವು. ಇದೀಗ ಶ್ರೇಯಾಂಕ ವ್ಯವಸ್ಥೆ ಮೂಲಕ ಉದ್ಯೋಗಿಗಳ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡುತ್ತಿರುವ ಗೂಗಲ್, ಕಡಿಮೆ ಕ್ಷಮತೆ ಹೊಂದಿರುವ ಶೇಕಡಾ 6ರಷ್ಟು ಉದ್ಯೋಗಿಗಳನ್ನು ಮುಂದಿನ ವರ್ಷ ವಜಾಗೊಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಶೇಕಡಾ 6ರಷ್ಟು ಕಾಯಂ ಉದ್ಯೋಗಿಗಳ ವಜಾಕ್ಕೆ ಗೂಗಲ್ ಚಿಂತನೆ ನಡೆಸಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಹೊಸದಾಗಿ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯನ್ನು ಈಗಾಗಲೇ ಸ್ಥಗಿತಗೊಳಿಸಿರುವ ಗೂಗಲ್, ಕೆಲವು ಉದ್ಯೋಗಿಗಳಿಗೆ ಒಂದೋ ಕಾರ್ಯಕ್ಷಮತೆ ಹೆಚ್ಚಿಸಿ ಇಲ್ಲವೇ ಕೆಲಸ ಬಿಡಿ ಎಂದೂ ಸೂಚಿಸಿದೆ ಎನ್ನಲಾಗಿದೆ.
ಗೂಗಲ್ನ ಮಾತೃಸಂಸ್ಥೆ ಅಲ್ಫಾಬೆಟ್ ಸದ್ಯದಲ್ಲೇ 10,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಅಲ್ಫಾಬೆಟ್ 1,87,000 ಉದ್ಯೋಗಿಗಳನ್ನು ಒಳಗೊಂಡಿದ್ದು, ಇದರ ಶೇಕಡಾ 6ರಷ್ಟು ಮಂದಿಯನ್ನು ವಜಾಗೊಳಿಸುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವುದಕ್ಕಾಗಿ ಕಂಪನಿ ಈ ಕ್ರಮಕ್ಕೆ ಮುಂದಾಗಲಿದೆ. ಕಳಪೆ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳನ್ನು ಗುರುತಿಸಲು ಗೂಗಲ್ನ ಮ್ಯಾನೇಜರ್ಗಳಿಗೆ ಸೂಚಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು.
ಈ ತಿಂಗಳ ಆರಂಭದಲ್ಲಿ ಗೂಗಲ್ನ ಅನೇಕ ಉದ್ಯೋಗಿಗಳು ಉದ್ಯೋಗ ಕಡಿತ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಕಂಪನಿಯ ವಿವಿಧ ವಿಭಾಗಗಳ ಜತೆ ಸಭೆ ನಡೆಸಿದ್ದ ಸಿಇಒ ಸುಂದರ್ ಪಿಚೈ ಉದ್ಯೋಗ ಕಡಿತದ ಸುಳಿವು ನೀಡಿದ್ದಾರೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Google: ವೈದ್ಯರ ಕೈಬರಹ ಅರ್ಥೈಸಲು ಗೂಗಲ್ನಿಂದ ಹೊಸ ಆ್ಯಪ್ ಬಿಡುಗಡೆ: ಯಾವುದು ಗೊತ್ತೇ?
ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ ಗೂಗಲ್ ನೇಮಕಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿತ್ತು. ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ವೇತನದ ಬಗ್ಗೆ ತಜ್ಞರು ಗೂಗಲ್ಗೆ ಎಚ್ಚರಿಕೆ ನೀಡಿದ್ದರು. ಟೆಕ್ ಕ್ಷೇತ್ರದ ಇತರ ಕಂಪನಿಗಳಿಗೆ ಹೋಲಿಸಿದರೆ ಗೂಗಲ್ ತುಂಬಾ ಹೆಚ್ಚು ವೇತನ ನೀಡುತ್ತಿದೆ ಎಂದು ಶತಕೋಟ್ಯಧಿಪತಿ ಹೂಡಿಕೆದಾರ ಕ್ರಿಸ್ಟೋಫರ್ ಹಾನ್ ಹೇಳಿದ್ದರು. ನೇಮಕಾತಿಯು ಕಂಪನಿಯ ಅಗತ್ಯಕ್ಕಿಂತಲೂ ಹೆಚ್ಚಾಗಿದೆ ಎಂದೂ ಅವರು ಹೇಳಿದ್ದರು.
ಗೂಗಲ್ನ ಲಾಭದ ಪ್ರಮಾಣ ಕುಸಿಯುತ್ತಿದೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು 13.9 ಶತಕೋಟಿ ಡಾಲರ್ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭಕ್ಕಿಂತ ಶೇಕಡಾ 27ರಷ್ಟು ಕಡಿಮೆಯಾಗಿದೆ. ಆದಾಯದಲ್ಲಿ ಶೇಕಡಾ 6ರಷ್ಟು ಹೆಚ್ಚಳವಾಗಿ 69.1 ಶತಕೋಟಿ ಡಾಲರ್ ಆದ ಹೊರತಾಗಿಯೂ ಲಾಭದಲ್ಲಿ ಕುಸಿತವಾಗಿದೆ. ಇದು ಉದ್ಯೋಗ ಕಡಿತ ನಿರ್ಧಾರಕ್ಕೆ ಕಾರಣವಗಿರಬಹುದು ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 am, Tue, 27 December 22