ಎಥರ್ ಮತ್ತು ಓಲಾ ಇವಿ ಸ್ಕೂಟರ್ ಗಳ ಪ್ರತಿಸ್ಪರ್ಧಿ ಹೀರೋ ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ವಿಶೇಷತೆಗಳಿವು!

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 13, 2022 | 1:03 PM

ಹೀರೋ ಮೋಟಾಕಾರ್ಪ್ ಕಂಪನಿಯು ತನ್ನ ಸಬ್ ಬ್ರಾಂಡ್ ವಿಡಾ ಅಡಿಯಲ್ಲಿ ಹೊಸದಾಗಿ ವಿ1 ಪ್ಲಸ್ ಮತ್ತು ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಗಳು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಎಥರ್ ಮತ್ತು ಓಲಾ ಇವಿ ಸ್ಕೂಟರ್ ಗಳ ಪ್ರತಿಸ್ಪರ್ಧಿ ಹೀರೋ ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ವಿಶೇಷತೆಗಳಿವು!
 Hero Vida V1 Plus and V1 Pro Electric Scootres Highlights
Follow us on

ದ್ವಿಚಕ್ರ ವಾಹನ ಉತ್ವಾದನೆಯಲ್ಲಿ ಸದ್ಯ ಜಾಗತಿಕ ಮಾರುಕಟ್ಟೆಯ ನಂ.1 ಕಂಪನಿಯಾಗಿ ಹೊರಹೊಮ್ಮಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಇದೀಗ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ತನ್ನ ಹೊಸ ಸಬ್ ಬ್ರಾಂಡ್ ವಿಡಾ(Vida) ಅಡಿಯಲ್ಲಿ ವಿ1 ಪ್ಲಸ್(V1 Plus) ಮತ್ತು ವಿ1 ಪ್ರೊ(V1 Pro) ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪರಿಚಯಿಸಿದೆ.

ಬೆಲೆಗಳು(ಎಕ್ಸ್ ಶೋರೂಂ ಪ್ರಕಾರ)

ಹೊಸ ಹೀರೋ ವಿಡಾ ವಿ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.45 ಲಕ್ಷ ಬೆಲೆ ಹೊಂದಿದ್ದರೆ ವಿ1 ಪ್ರೊ ಟಾಪ್ ಎಂಡ್ ಮಾದರಿಯು ರೂ. 1.59 ಲಕ್ಷ ಬೆಲೆ ಹೊಂದಿದೆ.

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ವಿಡಾ ಹೊಸ ಇವಿ ಸ್ಕೂಟರ್ ಗಳಲ್ಲಿ 3.9kWh ಬ್ಯಾಟರಿ ಮತ್ತು 6kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದ್ದು, ಇದರಲ್ಲಿ ವಿಡಾ ವಿ1 ಪ್ಲಸ್ ಪ್ರತಿ ಚಾರ್ಜ್ ಗೆ 143 ಕಿ.ಮೀ ಮೈಲೇಜ್ ನೀಡಿದರೆ ವಿಡಾ ವಿ1 ಪ್ರೊ ಪ್ರತಿ ಚಾರ್ಜ್ ಗೆ 165 ಕಿ.ಮೀ ಮೈಲೇಜ್ ನೀಡುತ್ತದೆ.

ಪರ್ಫಾಮೆನ್ಸ್ ಮತ್ತು ಟಾಪ್ ಸ್ಪೀಡ್

ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ಎರಡು ಇವಿ ಸ್ಕೂಟರ್ ಗಳು ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, 3.2 ಸೆಕೆಂಡ್ ಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ಹಾಗೆಯೇ ಹೊಸ ಇವಿ ಸ್ಕೂಟರ್ ಗಳಲ್ಲಿ ಕಂಪನಿಯು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹೊಂದಿರಲಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.

ಇದರಲ್ಲಿ ಮತ್ತೊಂದು ಪ್ರಮುಖ ತಂತ್ರಜ್ಞಾನ ಸೌಲಭ್ಯವೆಂದರೆ ರೈಡಿಂಗ್ ವೇಳೆ ಬ್ಯಾಟರಿ ಪ್ರಮಾಣವು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾದ ನಂತರವೂ ಕನಿಷ್ಠ 8 ಕಿ.ಮೀ ದೂರವನ್ನು ಪ್ರತಿ ಗಂಟೆಗೆ 10 ಕಿ.ಮೀ ವೇಗದಲ್ಲಿ ಚಾಲನೆಗೆ ಅವಕಾಶ ನೀಡುತ್ತದೆ.

ಇದರಿಂದ ಟ್ರಾಫಿಕ್ ದಟ್ಟಣೆಯ ಸಂದರ್ಭದಲ್ಲಿ ಬ್ಯಾಟರಿ ಖಾಲಿಯಾದರೂ ಹತ್ತಿರ ಚಾರ್ಜಿಂಗ್ ನಿಲ್ದಾಣಕ್ಕೆ ತಲುಪಲು ಈ ಸೌಲಭ್ಯವು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ಇವಿ ಸ್ಕೂಟರ್ ಗಳು ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿವೆ.

ಚಾರ್ಜಿಂಗ್ ಅವಧಿ

ವಿಡಾ ಹೊಸ ಇವಿ ಸ್ಕೂಟರ್ ಗಳು ಹೋಂ ಚಾರ್ಜರ್ ಮೂಲಕ 5 ಗಂಟೆ 55 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.80 ರಷ್ಟು ಚಾರ್ಜ್ ಆಗಲಿದ್ದು, ಫಾಸ್ಟ್ ಚಾರ್ಜರ್ ಸೌಲಭ್ಯದೊಂದಿಗೆ ಕೇವಲ 1ಗಂಟೆಯಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದಾಗಿದೆ.

ಇದನ್ನು ಓದಿ: ಪ್ರತಿ ಚಾರ್ಜ್ ಗೆ 521 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಅಟ್ಟೊ 3 ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳಿವು!

ಡಿಸೈನ್ ಮತ್ತು ಫೀಚರ್ಸ್

ರೆಟ್ರೊ ಲುಕ್ ಜೊತೆಗೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ಇವಿ ಸ್ಕೂಟರ್ ಗಳಲ್ಲಿ ಶಾರ್ಪ್ ಡಿಸೈನ್ ಎಲ್ಇಡಿ ಹೆಡ್ ಲ್ಯಾಂಪ್, ಟರ್ನ್ ಇಂಡಿಕೇಟರ್, ಸಣ್ಣ ಗಾತ್ರದ ವಿಂಡ್ ಸ್ಕ್ರೀನ್ ಮತ್ತು 7 ಇಂಚಿನ ಟಚ್ ಸ್ಕ್ರೀನ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಪ್ಯಾನೆಲ್ ಸೌಲಭ್ಯಗಳಿವೆ.

ಹಾಗೆಯೇ ಹೊಸ ಇವಿ ಸ್ಕೂಟರ್ ಗಳಲ್ಲಿ ಕರ್ವ್ ಡಿಸೈನ್ ಪ್ರೇರಿತ ಸ್ಪ್ಲೀಟ್ ಸೀಟ್, ಕೀ ಲೆಸ್ ಕಂಟ್ರೊಲ್, ಎಮರ್ಜೆನ್ಸಿ ಕಾಲ್, ಕ್ರೂಸ್ ಕಂಟ್ರೊಲ್, ಟು ವೇ ಥ್ರೊಟಲ್ ಸೌಲಭ್ಯಗಳಿವೆ.

ಈ ಮೂಲಕ ಹೊಸ ವಿ1 ಪ್ಲಸ್ ಮತ್ತು ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಗಳು ಸದ್ಯ ಮಾರುಕಟ್ಟೆಯಲ್ಲಿರುವ ಎಥರ್ 450 ಪ್ಲಸ್, 450ಎಕ್ಸ್, ಓಲಾ ಎಸ್1, ಎಸ್ ಪ್ರೊ ಮತ್ತು ಬಜಾಜ್ ಚೇತಕ್ ಇವಿ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಖರೀದಿಗೆ ಲಭ್ಯವಿರುವ ನಗರಗಳು

ಹೀರೋ ಮೋಟೊಕಾರ್ಪ್ ಕಂಪನಿಯು ಸದ್ಯಕ್ಕೆ ಹೊಸ ವಿಡಾ ಇವಿ ಸ್ಕೂಟರ್ ಗಳನ್ನು ಸಾರ್ವಜನಿಕ ಬಳಕೆಯ ಚಾರ್ಜಿಂಗ್ ಸೌಲಭ್ಯಗಳನ್ನು ಆಧರಿಸಿ ಆಯ್ದ ನಗರಗಳಲ್ಲಿ ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ. ಹೀಗಾಗಿ ಹೊಸ ಇವಿ ಸ್ಕೂಟರ್ ಗಳು ಬೆಂಗಳೂರು, ದೆಹಲಿ ಮತ್ತು ಜೈಪುರ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಹಂತ-ಹಂತವಾಗಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತದೆ.

Published On - 1:02 pm, Thu, 13 October 22