Keeway SR125: ಯಮಹಾ ಆರ್ ಎಕ್ಸ್ 100 ನೆನಪಿಸುವ ಕೀವೇ ಎಸ್ಆರ್125 ಬೈಕ್ ಬಿಡುಗಡೆ
ಹಂಗೇರಿಯನ್ ಮೂಲದ ಕೀವೇ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಮೂಲಕ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಇದೀಗ ಗ್ರಾಹಕರ ಬೇಡಿಕೆ ಆಧರಿಸಿ ಹೊಚ್ಚ ಹೊಸ ಎಸ್ಆರ್ 125 ಮೋಟಾರ್ ಸೈಕಲ್ ಬಿಡುಗಡೆ ಮಾಡಿದೆ.
ಹೊಸ ಕೀವೇ ಎಸ್ಆರ್125 (Keeway SR125) ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.19 ಲಕ್ಷ ಬೆಲೆ ಹೊಂದಿದ್ದು, ರೆಟ್ರೊ ಲುಕ್ ಹೊಂದಿರುವ ಹೊಸ ಬೈಕ್ ಮಾದರಿಯು ಈ ಹಿಂದೆ ಭಾರತದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದ ಯಮಹಾ ಆರ್ ಎಕ್ಸ್ 100 ನೆನಪಿಸುತ್ತದೆ. ಭಾರತದಲ್ಲಿ ಸರಣಿ ಬೈಕ್ ಮಾದರಿಗಳನ್ನು ಪರಿಚಯಿಸುತ್ತಿರುವ ಕೀವೇ ಕಂಪನಿಯು ಇದೀಗ ಏಳನೇ ಬೈಕ್ ಉತ್ಪನ್ನವನ್ನು ಪರಿಚಯಿಸಿದ್ದು, ಹೊಸ ಬೈಕ್ ಮಾದರಿಯು 125 ಸಿಸಿ ವಿಭಾಗದ ಬೈಕ್ ಗಳಲ್ಲಿಯೇ ಹಲವಾಲು ಹೊಸ ಫೀಚರ್ಸ್ ಹೊತ್ತು ಮಾರುಕಟ್ಟೆ ಪ್ರವೇಶಿಸಿದೆ. 80 ಮತ್ತು 90ಕ ದಶಕದಲ್ಲಿ ಭಾರತದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ್ದ 2 ಸ್ಟ್ರೋಕ್ ಬೈಕ್ ಮಾದರಿಗಳನ್ನು ನೆನಪಿಸುವ ಹೊಸ ಕೀವೇ ಎಸ್ಆರ್125 ಬೈಕ್ ಮಾದರಿಯು ಕೀವೇ ಹಾಗೂ ಬೆನೆಲ್ಲಿ ಶೋರೂಂಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಕೀವೇ ಕಂಪನಿಯು 1999ರಲ್ಲಿ ಸ್ಥಾಪಿತವಾದ ಹಂಗೇರಿಯನ್ ಆಟೋಮೊಬೈಲ್ ತಯಾರಕ ಕಂಪನಿಯಾಗಿದ್ದು, ಕೀವೇ ಕಂಪನಿಯಲ್ಲಿ ಇತ್ತೀಚೆಗೆ ಚೀನಾ ಮೂಲದ ಕಿಯಾನ್‌ಜಿಯಾಂಗ್ (ಕ್ಯೂಜೆ) ಗ್ರೂಪ್ ಸಹಭಾಗಿತ್ವ ಯೋಜನೆಯಡಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ.
ಕ್ಯೂಜೆ ಗ್ರೂಪ್ ಕಂಪನಿಯು ಕೀವೇ ಕಂಪನಿಯಲ್ಲಿ ಮಾತ್ರವಲ್ಲದೆ ಬೆನೆಲ್ಲಿ ಮೋಟಾರ್‌ಸೈಕಲ್ ಕಂಪನಿಯಲ್ಲೂ ಕೂಡಾ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಈ ಹಿನ್ನಲೆಯಲ್ಲಿ ಕೀವೇ ಮಾದರಿಗಳನ್ನು ಭಾರತದಲ್ಲಿ ಬೆನೆಲ್ಲಿ ಬ್ರಾಂಡ್ ಅಡಿಯಲ್ಲಿ ಕೀವೇ ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದೆ. ಇದೀಗ ಹೊಸ ಎಸ್ಆರ್ 125 ಬೈಕ್ ಬಿಡುಗಡೆಯೊಂದಿಗೆ ಕೀವೇ ಕಂಪನಿಯು ರೂ. 1 ಸಾವಿರ ಮುಂಗಡದೊಂದಿಗೆ ಇಂದಿನಿಂದಲೇ ಬುಕಿಂಗ್ ಆರಂಭಿಸಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಬೈಕ್ ವಿತರಣೆ ಮಾಡುವ ಭರವಸೆ ನೀಡಿದೆ.
ಹೊಸ ಬೈಕ್ ಮಾದರಿಯು ರೆಟ್ರೊ ಮಾರ್ಡನ್ ಲುಕ್ ನೊಂದಿಗೆ ಹಲವಾರು ಹೊಸ ಸ್ಟ್ಯಾಂಡರ್ಡ್ ಫೀಚರ್ಸ್ ಹೊಂದಿದ್ದು, 125 ಸಿಸಿ 4-ಸ್ಟ್ರೋಕ್ ಸಿಂಗಲ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಹೊಸ ಬೈಕಿನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು, ಇದು 9.7 ಬಿಎಚ್ ಪಿ ಮತ್ತು 8.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಹೊಸ ಬೈಕ್ 120 ಕೆ.ಜಿ ಒಟ್ಟು ತೂಕದೊಂದಿಗೆ 160 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, 14.5 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಸೌಲಭ್ಯ ಹೊಂದಿದೆ.
ಹಾಗೆಯೇ ಹೊಸ ಬೈಕಿನಲ್ಲಿ ರೆಟ್ರೊ ಲುಕ್ ಇಷ್ಟಪಡುವ ಗ್ರಾಹಕರಿಗಾಗಿ ರೌಂಡ್ ಹೆಡ್ ಲ್ಯಾಂಪ್, ಟರ್ನ್ ಇಂಡಿಕೇಟರ್, ಟೈಲ್ ಲ್ಯಾಂಪ್, ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಸ್ಪೋಕ್ ವ್ಹೀಲ್, ಸಿಂಗಲ್ ಪೀಸ್ ಸೀಟ್ ಮತ್ತು ಬ್ಲ್ಯಾಕ್ ಫೋರ್ಕ್ ಬೂಟ್ಸ್ ಸೌಲಭ್ಯ ನೀಡಲಾಗಿದೆ. ಜೊತೆಗೆ ಹೊಸ ಬೈಕಿನಲ್ಲಿ ಎಲ್ಇಡಿ ಡಿಆರ್ ಎಲ್ಎಸ್, ಹಜಾರ್ಡ್ ಸ್ವಿಚ್, ವಿವಿಧ ಬಣ್ಣಗಳ ಆಯ್ಕೆ ಹೊಂದಿರುವ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಅಪ್, ಐದು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಹಿಂಬದಿಯ ಸಸ್ಪೆಷನ್ ನೀಡಲಾಗಿದೆ. ಸುರಕ್ಷತೆಗಾಗಿ ಹೊಸ ಬೈಕಿನಲ್ಲಿ ಕಂಪನಿಯು ಮುಂಭಾಗದ ಚಕ್ರದಲ್ಲಿ 300 ಫ್ರಂಟ್ ಡಿಸ್ಕ್ ಬ್ರೇಕ್, ಹಿಂಬದಿಯ ಚಕ್ರದಲ್ಲಿ 210 ಎಂಎಂ ಡಿಸ್ಕ್ ಬ್ರೇಕ್ ನೊಂದಿಗೆ ಕಾಂಬಿ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ. ಇನ್ನು ಹೊಸ ಬೈಕ್ ಮಾದರಿಯು ಗ್ಲಾಸಿ ಬ್ಲ್ಯಾಕ್, ಗ್ಲಾಸಿ ರೆಡ್ ಮತ್ತು ಗ್ಲಾಸಿ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 125 ಸಿಸಿ ವಿಭಾಗದಲ್ಲಿ ರೆಟ್ರೊ ಸ್ಟೈಲ್ ಬೈಕ್ ಮಾದರಿಯನ್ನು ಖರೀದಿ ಖರೀದಿ ಬಯಸುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಲಿದೆ.
ಮತ್ತಷ್ಟು ಉದ್ಯಮದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.