Rise of New India: ಮುಂದಿನ 30 ವರ್ಷದಲ್ಲಿ ಭಾರತ ಇತಿಹಾಸದಲ್ಲಿಯೇ ಅತ್ಯುತ್ತಮವನ್ನು ಸಾಧಿಸಬಲ್ಲದು, ಹೇಗೆ? ಇಲ್ಲಿದೆ ಮುಕೇಶ್ ಅಂಬಾನಿ ವ್ಯಾಖ್ಯಾನ

| Updated By: ಸಾಧು ಶ್ರೀನಾಥ್​

Updated on: Jul 27, 2021 | 8:43 AM

Mukesh Ambani: 1990ರ ದಶಕದ ಆರಂಭದಲ್ಲಿಯೇ ಭಾರತ ಮತ್ತು ವಿಶ್ವ ನಾಟಕೀಯ ಬದಲಾವಣೆಗೆ ಸಾಕ್ಷಿಯಾಗಿದೆ. ಕಮ್ಯೂನಿಸ್ಟ್ ಸೋವಿಯತ್ ಒಕ್ಕೂಟ ಕುಸಿದುಹೋಗಿದೆ. ಶೀತಲಸಮರ ಕೊನೆಗೊಂಡಿದೆ ಮತ್ತು ಭಾರತವು ಆರ್ಥಿಕ ಸುಧಾರಣೆಗಳ ದಿಟ್ಟ ಹೊಸ ಹಾದಿಯಲ್ಲಿ ನಡೆಯಲಾರಂಭಿಸಿದೆ ಎಂದು ಅಂಬಾನಿ ಹೇಳಿದ್ದಾರೆ. ‘ಮೂವತ್ತು ವರ್ಷಗಳ ತರುವಾಯ ಜಾಗತಿಕ ವ್ಯವಸ್ಥೆ ಮತ್ತೆ ಮೂಲಭೂತವಾಗಿ ಬದಲಾಗಲಾರಂಭಿಸಿದೆ. ಈ ಬದಲಾವಣೆಯ ವೇಗ, ಪ್ರಮಾಣ ಮತ್ತು ಸತ್ವ ಅಭೂತಪೂರ್ವವೂ ಅನೂಹ್ಯವೂ ಆಗಿವೆ. ಆದರೆ ಒಂದು ಸಂಗತಿ ಮಾತ್ರ ತುಂಬ ಸ್ಪಷ್ಟವಾಗಿ ಊಹೆಗೆ ನಿಲುಕುತ್ತಿದೆ: ‘ಭಾರತದ ಸಮಯ ಬಂದಿದೆ’ ಅಂಬಾನಿ

Rise of New India: ಮುಂದಿನ 30 ವರ್ಷದಲ್ಲಿ ಭಾರತ ಇತಿಹಾಸದಲ್ಲಿಯೇ ಅತ್ಯುತ್ತಮವನ್ನು ಸಾಧಿಸಬಲ್ಲದು, ಹೇಗೆ? ಇಲ್ಲಿದೆ ಮುಕೇಶ್ ಅಂಬಾನಿ ವ್ಯಾಖ್ಯಾನ
ಮುಂದಿನ 30 ವರ್ಷಗಳಲ್ಲಿ ಭಾರತ ಇತಿಹಾಸದಲ್ಲಿಯೇ ಅತ್ಯುತ್ತಮವಾದದ್ದನ್ನು ಸಾಧಿಸಬಲ್ಲದು, ಹೇಗೆ? ಇಲ್ಲಿದೆ ಮುಕೇಶ್ ಅಂಬಾನಿ ವ್ಯಾಖ್ಯಾನ
Follow us on

‘ನವ ಭಾರತದ ಉದಯದ ಬಗ್ಗೆ ನನಗೆ ಅತ್ಯಂತ ಭರವಸೆ ಮತ್ತು ವಿಶ್ವಾಸವಿದೆ. ಭಾರತದ ಚೈತನ್ಯ ಹಿಂದೆಂದೂ ಕಾಣದಷ್ಟು ಪುನರುಜ್ಜೀವನಗೊಂಡಿರುವುದನ್ನು ನಾನು ಕಾಣುತ್ತಿದ್ದೇನೆ,’ ಎಂದು ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಆಂಗ್ಲ ಪತ್ರಿಕೆಯ ಲೇಖನದಲ್ಲಿ ಹೇಳಿದ್ದಾರೆ.

1990ರ ದಶಕದ ಆರಂಭದಲ್ಲಿಯೇ ಭಾರತ ಮತ್ತು ವಿಶ್ವ ನಾಟಕೀಯ ಬದಲಾವಣೆಗೆ ಸಾಕ್ಷಿಯಾಗಿದೆ. ಕಮ್ಯೂನಿಸ್ಟ್ ಸೋವಿಯತ್ ಒಕ್ಕೂಟ (Communist Soviet Union) ಕುಸಿದುಹೋಗಿದೆ. ಶೀತಲಸಮರ ಕೊನೆಗೊಂಡಿದೆ ಮತ್ತು ಭಾರತವು ಆರ್ಥಿಕ ಸುಧಾರಣೆಗಳ ದಿಟ್ಟ ಹೊಸ ಹಾದಿಯಲ್ಲಿ ನಡೆಯಲಾರಂಭಿಸಿದೆ ಎಂದು ಅಂಬಾನಿ ಹೇಳಿದ್ದಾರೆ. ‘ಮೂವತ್ತು ವರ್ಷಗಳ ತರುವಾಯ ಜಾಗತಿಕ ವ್ಯವಸ್ಥೆ ಮತ್ತೆ ಮೂಲಭೂತವಾಗಿ ಬದಲಾಗಲಾರಂಭಿಸಿದೆ. ಈ ಬದಲಾವಣೆಯ ವೇಗ, ಪ್ರಮಾಣ ಮತ್ತು ಸತ್ವ ಅಭೂತಪೂರ್ವವೂ ಅನೂಹ್ಯವೂ ಆಗಿವೆ. ಆದರೆ ಒಂದು ಸಂಗತಿ ಮಾತ್ರ ತುಂಬ ಸ್ಪಷ್ಟವಾಗಿ ಊಹೆಗೆ ನಿಲುಕುತ್ತಿದೆ: ‘ಭಾರತದ ಸಮಯ ಬಂದಿದೆ’ ಎಂದು ಅಂಬಾನಿ ಹೇಳಿದ್ದಾರೆ (Rise of New India).

‘ಅದೃಷ್ಟ ಮತ್ತು ಚಲನೆಯು 21ನೇ ಶತಮಾನದ ನೆಚ್ಚಿನ ದೇಶವನ್ನು ತನ್ನ ಮುಂದಿರುವ ದೊಡ್ಡ ಜಿಗಿತಕ್ಕೆ ಸಜ್ಜುಗೊಳಿಸುತ್ತಿದೆ. ಭಾರತವು ಮಹತ್ವದ, ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರಜಾಪ್ರಭುತ್ವದ ಮಾರ್ಗದ ಮೂಲಕ ಮಾನವನ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವ ಅಭ್ಯುದಯದ ಬಾಗಿಲಲ್ಲಿ ನಿಂತಿದೆ. ನಮ್ಮ ಸಾಮರ್ಥ್ಯದ ಮೇಲಿನ ನಂಬಿಕೆ, ನಮ್ಮ ಸಾಮೂಹಿಕ ದಕ್ಷತೆ ಮತ್ತು ಕ್ರಿಯೆಯಲ್ಲಿನ ಏಕತೆಗಳ ಮೂಲಕ ನಾವು ವಿಶ್ವದ ನಿರೀಕ್ಷೆಗಳನ್ನೂ ಮೀರಬಹುದು’ ಎಂದು ಅಂಬಾನಿ ಬರೆದಿದ್ದಾರೆ.

‘ನನ್ನ ಆಶಾವಾದದ ಮೂಲ ಇರುವುದು ನಮ್ಮ ಇತ್ತೀಚೆಗಿನ ಭೂತಕಾಲದಲ್ಲಿ. 1991ರಲ್ಲಿ, ಭಾರತ ತನ್ನ ಆರ್ಥಿಕತೆಯ ದಿಕ್ಕು ಮತ್ತು ನಿರ್ಧಾರಗಳನ್ನು ಬದಲಾಯಿಸುವಲ್ಲಿ ದೂರದೃಷ್ಟಿ ಮತ್ತು ಧೈರ್ಯವನ್ನು ತೋರಿಸಿದೆ. ಈ ಸುಧಾರಣೆಗಳು ಭಾರತದ ಉದ್ಯಮಶೀಲ ಚೈತನ್ಯವನ್ನು ಸ್ವಂತಂತ್ರಗೊಳಿಸಿದವು ಮತ್ತು ವೇಗದ ಬೆಳವಣಿಗೆಯ ಯುಗವನ್ನು ಪ್ರಾರಂಭಿಸಿದವು’ ಎಂದು ಅಂಬಾನಿ ಹೇಳಿದ್ದಾರೆ (spirit of India).

‘ಅದರ ಫಲಿತಾಂಶಗಳನ್ನು ಎಲ್ಲರೂ ನೋಡುತ್ತಿದ್ದೇವೆ. 1991ರಲ್ಲಿ 266 ಬಿಲಿಯನ್ ಡಾಲರ್‌ಗಳಷ್ಟಿದ್ದ ಭಾರತದ ಜಿಡಿಪಿಯು ಕ್ರಮೇಣ ಅದರ ಹತ್ತುಪಟ್ಟು ಬೆಳೆದಿದೆ. ಭಾರತವು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಹೊಮ್ಮಿದೆ. ಜನಸಂಖ್ಯೆಯು 880 ದಶಲಕ್ಷದಿಂದ 1.38 ಶತಕೋಟಿಗೆ ಏರಿದ್ದರೂ ಬಡತನದ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ. ಪ್ರಮುಖ ಮೂಲಭೂತ ಸೌಕರ್ಯಗಳು ಗಮನಾರ್ಹವಾಗಿ ಸುಧಾರಿಸಿವೆ.

ನಮ್ಮ ಎಕ್ಸ್‌ಪ್ರೆಸ್‌ ವೇಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳಷ್ಟೇ ಅಲ್ಲದೆ ನಮ್ಮ ಹಲವು ಕೈಗಾರಿಕೆಗಳು ಮತ್ತು ಸೇವೆಗಳು ಜಾಗತಿಕ ಮಟ್ಟದಲ್ಲಿವೆ. ‘ದೂರವಾಣಿ ಪಡೆದುಕೊಳ್ಳಲು, ಅಡುಗೆ ಅನಿಲ ಸಂಪರ್ಕಕ್ಕಾಗಿ ವರ್ಷಗಟ್ಟಲೆ ಕಾಯಬೇಕಾಗಿತ್ತು ಮತ್ತು ಕಂಪ್ಯೂಟರ್‌ ಅನ್ನು ಕೊಳ್ಳಲು ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಾಗಿತ್ತು ಎಂಬುದನ್ನು ಇಂದು ಯಾವ ಯುವ ಭಾರತೀಯನೂ ನಂಬಲಾರ’ ಎಂದು ಅಂಬಾನಿ (Mukesh Ambani, Chairman, Reliance Industries Limited -RIL) ಹೇಳಿದ್ದಾರೆ.

‘ಭಾರತವು 1991ರ ಕೊರತೆಯ ಆರ್ಥಿಕತೆಯಿಂದ 2021ರ ಸಮೃದ್ಧ ಆರ್ಥಿಕತೆಗೆ ರೂಪಾಂತರಗೊಂಡಿದೆ. ಈಗ, 2051ರ ವೇಳೆಗೆ ಭಾರತವು ತನ್ನನ್ನು ತಾನು ಸುಸ್ಥಿರ ಸಮೃದ್ಧಿ ಮತ್ತು ಸಮಾನತೆಯ ಅಭಿವೃದ್ಧಿಯ ಆರ್ಥಿಕತೆಗೆ ರೂಪಾಂತರಿಸಿಕೊಳ್ಳಬೇಕಾಗಿದೆ. ಭಾರತದಲ್ಲಿ ನಮ್ಮ ಸಾಮೂಹಿಕ ಅಭಿವೃದ್ಧಿಯ ಹೃದಯಭಾಗದಲ್ಲಿ ನ್ಯಾಯವಿರುತ್ತದೆ’ ಎಂದು ಅಂಬಾನಿ ಹೇಳಿದ್ದಾರೆ.

‘ಕಳೆದ ಮೂರು ದಶಕಗಳ ನಮ್ಮ ಸಾಧನೆಗಳಿಂದ ನಾವು ದೊಡ್ಡದೊಂದು ಕನಸು ಕಾಣುವ ಹಕ್ಕನ್ನು ಗಳಿಸಿಕೊಂಡಿದ್ದೇವೆ. 2047ರಲ್ಲಿ ನಮ್ಮ ದೇಶದ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ಹೊತ್ತಿಗೆ, ಅಮೆರಿಕ ಮತ್ತು ಚೀನಾದ ಜೊತೆಗೆ ಭಾರತವನ್ನು ಜಗತ್ತಿನ ಮೂರು ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿಸುವುದಕ್ಕಿಂತ ಒಳ್ಳೆಯ ಕನಸು ಇನ್ನೇನಿದ್ದೀತು? ಇದು ಸಾಧಿಸಲಸಾಧ್ಯವಾದಷ್ಟು ಎತ್ತರದಲ್ಲಿರುವ ಮಹತ್ವಾಕಾಂಕ್ಷೆಯೇ? ಇಲ್ಲ. 1980ರ ದಶಕದಲ್ಲಿ ಆರ್ಥಿಕ ಉದಾರೀಕರಣವನ್ನು ಮೊದಲಿಗೆ ಪ್ರತಿಪಾದಿಸಿದವರಲ್ಲಿ ಒಬ್ಬರಾದ, ದೂರದೃಷ್ಟಿಯುಳ್ಳ ನನ್ನ ತಂದೆ ಧೀರೂಭಾಯಿ ಅಂಬಾನಿ ನನಗೆ ಯಾವಾಗಲೂ ಹೇಳುತ್ತಿದ್ದರು ‘ಸಣ್ಣದಾಗಿ ಯೋಚಿಸುವುದು ಭಾರತೀಯನ ಲಕ್ಷಣವೇ ಅಲ್ಲ’ ಅಂಬಾನಿ ಹೇಳಿದ್ದಾರೆ.

ಈ ಮಹತ್ವಾಕಾಂಕ್ಷೆಯನ್ನು ನಾವು ಹೇಗೆ ಅರಿತುಕೊಳ್ಳುವುದು? ಪ್ರಪಂಚದ ಎಲ್ಲೆಡೆಗಳಿಂದ ಸೂಕ್ತ ಪಾಠಗಳನ್ನು ಕಲಿಯುತ್ತ, ಅವುಗಳೊಟ್ಟಿಗೆ ಸಹಕರಿಸುತ್ತಲೇ, ನಮಗೆ ವಿಶಿಷ್ಟವಾದ ಸಂಪತ್ತಿನ ಸೃಷ್ಟಿಯ ಭಾರತೀಯ ಮತ್ತು ಆತ್ಮನಿರ್ಭರ ಮಾದರಿಗಳನ್ನು ಅನುಸರಿಸುವುದರ ಮೂಲಕ ನಾವಿದನ್ನು ಸಾಧಿಸಬಹುದು ಎಂದು ಹೇಳಿದ ಅಂಬಾನಿ ಐದು ಮಹತ್ವದ ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ.

ಒಂದು. ಇಲ್ಲಿಯವರೆಗಿನ ಆರ್ಥಿಕ ಸುಧಾರಣೆಗಳು ಭಾರತೀಯರಿಗೆ ಅಸಮಾನವಾದ ಪ್ರಯೋಜನ ನೀಡಿವೆ. ಅಸಮಾನತೆ ಎನ್ನುವುದು ಸ್ವೀಕಾರಾರ್ಹವೂ ಅಲ್ಲ, ಸಹನೀಯವೂ ಅಲ್ಲ. ಆದ್ದರಿಂದ, ಭಾರತದ ಅಭಿವೃದ್ಧಿ ಮಾದರಿಯು ಆರ್ಥಿಕ ಪಿರಾಮಿಡ್ಡಿನ ತಳದಲ್ಲಿರುವ ಜನರಿಗೆ ಸಮೃದ್ಧಿಯನ್ನು ನೀಡುವತ್ತ ಗಮನ ಕೇಂದ್ರೀಕರಿಸಬೇಕು. ನಮ್ಮ ಬಹುದೊಡ್ಡ ಅನುಕೂಲ ಇರುವುದು ಇನ್ನೂ ಅಷ್ಟಾಗಿ ಬಳಕೆಯಾಗಿಲ್ಲದ ಭರತಖಂಡದ ದೇಶಿ ಮಾರುಕಟ್ಟೆಯಲ್ಲಿ. ಆದಾಯ ಹೆಚ್ಚಿಸಿಕೊಳ್ಳುತ್ತಿರುವ ಒಂದು ನೂರು ಕೋಟಿ ಜನರ ಮಧ್ಯಮವರ್ಗವನ್ನು ರೂಪಿಸಿದಾಗ ನಮ್ಮ ಆರ್ಥಿಕತೆಯು ಅದ್ಭುತ ಬೆಳವಣಿಗೆಗೆ ಸಾಕ್ಷಿಯಾಗಲು ಪ್ರಾರಂಭಿಸುತ್ತದೆ.

ಜನಸಂಖ್ಯಾ ಪರಿಭಾಷೆಯಲ್ಲಿ ಹೇಳುವುದಾದರೆ ಇದು ಯುಎಸ್‌ಎ ಮತ್ತು ಯೂರೋಪ್‌ ದೇಶಗಳನ್ನು ಸೇರಿಸಿದರೆ ಭಾರತದ ಮಾರುಕಟ್ಟೆಗೆ ಸಮನಾಗುತ್ತದೆ. ಬಹುಜನರು ಉತ್ತಮ ಜೀವನದ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾದಾಗ, ಅವರು ಉಪಭೋಗ ಮತ್ತು ಉತ್ಪಾದನೆಯ ನೀತಿಚಕ್ರದ ಚಲನೆಯನ್ನು ರೂಪಿಸುತ್ತಾರೆ. ಇದು ಗಣನೀಯವಾಗಿ ಮಹಿಳಾ ಉದ್ಯಮಿಗಳೂ ಸೇರಿದಂತೆ ಯುವ ಉದ್ಯಮಿಗಳ ಉದಯಕ್ಕೆ ಕಾರಣವಾಗುತ್ತದೆ. ಜಗತ್ತಿನಾದ್ಯಂತ ಇರುವ ಹೂಡಿಕೆದಾರರು ಮತ್ತು ಬ್ಯುಸಿನೆಸ್‌ಗಳು ಈ ಬೃಹತ್ ಭಾರತದ ಅವಕಾಶದಲ್ಲಿ ಭಾಗಿಯಾಗಲು ಬಯಸುತ್ತಾರೆ.

ಈ ಮೊದಲು ಇದನ್ನು ಸಾಧಿಸುವುದು ಅಸಾಧ್ಯವೆಂಬಂತೆ ಕಾಣುತ್ತಿತ್ತೇನೋ. ಆದರೆ ಈಗಲ್ಲ:

ಈ ಮೊದಲು ಇದನ್ನು ಸಾಧಿಸುವುದು ಅಸಾಧ್ಯವೆಂಬಂತೆ ಕಾಣುತ್ತಿತ್ತೇನೋ. ಆದರೆ ಈಗಲ್ಲ- ಮುಕೇಶ್ ಅಂಬಾನಿ

ಆದ್ದರಿಂದ, ನನ್ನ ಎರಡನೇ ವಿಚಾರ ಹೀಗಿದೆ. ಇದು ತಾಂತ್ರಿಕ ಅಡಚಣೆ ಮತ್ತು ವೇಗವರ್ಧನೆಯ ಯುಗ. ಕಳೆದ 300 ವರ್ಷಗಳಲ್ಲಿ ಕಂಡಿದ್ದಕ್ಕಿಂತ ಹೆಚ್ಚಿನ ಬದಲಾವಣೆ ಮುಂದಿನ 30 ವರ್ಷಗಳಲ್ಲಿ ನಡೆಯುವುದಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಮೊದಲ ಎರಡು ಕೈಗಾರಿಕಾ ಕ್ರಾಂತಿಗಳನ್ನು ತಪ್ಪಿಸಿಕೊಂಡು, ಮೂರನೆಯದರಲ್ಲಿ ಪಾಲ್ಗೊಂಡ ಭಾರತಕ್ಕೆ ಈಗ ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಮುನ್ನಡೆಸುವ ಅವಕಾಶವಿದೆ. ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದರ ಮೂಲಕ, ನಮ್ಮ ಉದ್ಯಮಿಗಳು ಉತ್ಪಾದಕತೆ ಮತ್ತು ದಕ್ಷತೆಯಲ್ಲಿ ಅಪಾರ ಪ್ರಮಾಣದ ಹೆಚ್ಚಳವನ್ನು ಸಾಧಿಸಬಹುದು.

ಇದು ನಮ್ಮ ದೊಡ್ಡ ಕೈಗಾರಿಕೆಗಳು ಮತ್ತು ಸೇವೆಗಳನ್ನಷ್ಟೇ ಅಲ್ಲ, ಕೃಷಿ, ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು, ನಿರ್ಮಾಣ ಕಾರ್ಯಗಳು, ನವೀಕರಿಸಬಹುದಾದ ಇಂಧನ, ಕಲೆ, ಕರಕುಶಲ ಇತ್ಯಾದಿಗಳನ್ನೂ ರೂಪಾಂತರಿಸಲಿದೆ. ಇವು ಖಚಿತವಾಗಿ ದೊಡ್ಡ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಕ್ಷೇತ್ರಗಳಾಗಿವೆ, ಇದು ಭಾರತಕ್ಕೆ ಅತ್ಯಂತ ಅವಶ್ಯಕ ಅಗತ್ಯವೂ ಹೌದು. ಶಿಕ್ಷಣ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳಲ್ಲಿ ಅತಿ ಅಗತ್ಯವಾದ ಗುಣಮಟ್ಟ, ಕೈಗೆಟುಕುವಿಕೆ ಮತ್ತು ಸಮಾನತೆಗಳನ್ನು ಸಾಧಿಸಲು ಈ ತಂತ್ರಜ್ಞಾನಗಳು ನಮಗೆ ಸಹಾಯ ಮಾಡಬಲ್ಲವು.

ಏಕೆಂದರೆ ನಮ್ಮ ಜನಸಂಖ್ಯೆಯು 2050ರ ವೇಳೆಗೆ 1.64 ಶತಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಪರಿಸರ ವಿನಾಶವನ್ನು ಹಿಮ್ಮೆಟ್ಟಿಸುವ ಮತ್ತು ಎಲ್ಲರನ್ನೂ ಸುರಕ್ಷಿತಗೊಳಿಸುವ ಶಕ್ತಿಯನ್ನೂ ತಂತ್ರಜ್ಞಾನಗಳು ಹೊಂದಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ತಂತ್ರಜ್ಞಾನದ ಪ್ರಣೀತ ಅಭಿವೃದ್ಧಿಯು ಉತ್ತಮ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಭಾರತವನ್ನು ರೂಪಿಸುವ ಸೂಕ್ತ ಮಾರ್ಗವಾಗಿದೆ.

ಮೂರು. ಈ ರೋಮಾಂಚಕಾರಿ ಸಾಧ್ಯತೆಗಳನ್ನು ನನಸಾಗಿಸುವುದು, ಭಾರತವು ಪರಿವರ್ತಕರ ದೇಶವಾಗಿ ಬದಲಾಗುವುದು. ಸಾಂಪ್ರದಾಯಿಕವಾಗಿ, ಕಡಿಮೆ ತಂತ್ರಜ್ಞಾನದ ಚಟುವಟಿಕೆಗಳಲ್ಲಿ ಭಾರತವು ಹೆಚ್ಚು ನಾವೀನ್ಯಪೂರ್ಣವಾಗಿದೆ. ಈಗ ನಾವು ಹೈಟೆಕ್ ಪರಿಕರಗಳನ್ನು ಬಳಸುವಲ್ಲಿಯೂ ಈ ಸಾಮರ್ಥ್ಯವನ್ನು ತೋರಬೇಕಾಗಿದೆ. ಇದರಿಂದ ನಾವೂ ವೇಗವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ಕೃಷ್ಟ ಗುಣಮಟ್ಟದ ಸೇವೆ ಮತ್ತು ಪರಿಹಾರಗಳನ್ನು ನೀಡಿ ಭಾರತದ ಅಗತ್ಯವನ್ನು ಪೂರೈಸಲು ನಾವೀನ್ಯತೆ ನಮ್ಮ ಉದ್ಯಮಿಗಳಿಗೆ ಸಹಾಯ ಮಾಡುತ್ತದೆ.

ಅವುಗಳನ್ನೇ ಹೆಚ್ಚಿನ ಬೆಲೆಯನ್ನು ಗಳಿಸಿಕೊಳ್ಳುವ ರಪ್ತು ಮಾರುಕಟ್ಟೆಗಳಿಗೂ ನೀಡಬಹುದಾಗಿದೆ. ಹೀಗೆ ಅಭಿವೃದ್ಧಿ ಹೊಂದಿದ ದೇಶಗಳಿಂದ ಸಂಪತ್ತು ಭಾರತಕ್ಕೆ ಹರಿದುಬರುತ್ತವೆ. ಈ ಗುರಿಯನ್ನು ಸಾಧಿಸಲು ನಮಗೆ ಅಗತ್ಯವಾಗಿ ಬೇಕಾಗಿರುವುದು ಉದ್ಯೋಗಿಗಳನ್ನು ತ್ವರಿತವಾಗಿ ಮರುಕೌಶಲಗೊಳಿಸುವುದು ಮತ್ತು ನಮ್ಮ ಮಕ್ಕಳು ಮತ್ತು ಯುವಕರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವುದಕ್ಕಾಗಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು. ವಿಶೇಷವಾಗಿ ನಾವು ತ್ವರಿತವಾಗಿ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು, ಸಂಶೋಧನಾ ಕೇಂದ್ರಗಳನ್ನು ನಿರ್ಮಿಸಬೇಕು ಮತ್ತು ಈಗಾಗಲೇ ಇರುವ ಶಿಕ್ಷಣ ಸಂಸ್ಥೆಗಳನ್ನು 21ನೇ ಶತಮಾನದ ಭಾರತದ ಅಗತ್ಯಗಳನ್ನು ಪೂರೈಸಲು ಅನುವಾಗುವಂತೆ ಉನ್ನತದರ್ಜೆಗೇರಿಸುವುದು.

ನಾಲ್ಕು. ಸಂಪತ್ತು ಮತ್ತು ಅದರ ಗಳಿಕೆಯ ಕುರಿತಾದ ನಮ್ಮ ಗ್ರಹಿಕೆಯನ್ನು ಬದಲಿಸಿಕೊಂಡು, ತಾಧ್ಯಾತ್ಮದಲ್ಲಿ ಬೇರೂರಿರುವ ಭಾರತದ ಪ್ರಾಚೀನ ಜ್ಞಾನದೊಟ್ಟಿಗೆ ಸೇರಿಸಿಕೊಳ್ಳಬೇಕಾದ ಅಗತ್ಯವಿದೆ. ಬಹಳ ಸಮಯದಿಂದ, ನಾವು ಸಂಪತ್ತನ್ನು ವೈಯಕ್ತಿಕ ಮತ್ತು ಆರ್ಥಿಕ ದೃಷ್ಟಿಯಿಂದ ಮಾತ್ರ ಅಳೆಯುತ್ತಿದ್ದೇವೆ. ‘ಸರ್ವರಿಗೂ ಶಿಕ್ಷಣ’, ‘ಸರ್ವರಿಗೂ ಆರೋಗ್ಯ’, ‘ಸರ್ವರಿಗೂ ಉದ್ಯೋಗ’, ‘ಸರ್ವರಿಗೂ ಉತ್ತಮ ಮನೆ’, ‘ಸರ್ವರಿಗೂ ಸುರಕ್ಷಿತ ಪರಿಸರ’, ‘ಸರ್ವರಿಗೂ ಕ್ರೀಡೆ, ಸಂಸ್ಕೃತಿ ಮತ್ತು ಕಲೆಯ ಲಭ್ಯತೆ’ ಮತ್ತು ‘ಸರ್ವರಿಗೂ ಸ್ವಯಂ ಅಭಿವೃದ್ಧಿಯ ಅವಕಾಶಗಳು’, ‘ಸರ್ವರಿಗೂ ಸಂತೋಷ’ –ಇವುಗಳನ್ನು ಸಾಧಿಸುವುದರಲ್ಲಿಯೇ ಭಾರತದ ನಿಜವಾದ ಸಂಪತ್ತು ಇದೆ ಎಂಬ ಸತ್ಯವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಅಭಿವೃದ್ಧಿಯ ಈ ಪುನರ್‌ವ್ಯಾಖ್ಯಾನದ ಮಾನದಂಡಗಳನ್ನು ಸಾಧಿಸಲು, ವ್ಯವಹಾರ ಮತ್ತು ಸಮಾಜದಲ್ಲಿ ನಾವು ಮಾಡುವ ಎಲ್ಲ ಕೆಲಸಗಳಲ್ಲಿಯೂ ಕಾಳಜಿ ಮತ್ತು ಸಹಾನುಭೂತಿಯ ತಿರುಳು ಇರುವಂತೆ ನೋಡಿಕೊಳ್ಳಬೇಕು.

ಇನ್ನೂ ಹೇಳಬೇಕೆಂದರೆ, ನಮ್ಮ ಜನರ ಅಭಿವೃದ್ಧಿ ಎಂಬ ಪರಿಕಲ್ಪನೆಯು ನಮ್ಮ ಗ್ರಹದ ಅಭಿವೃದ್ದಿಯಾಗಿ ವಿಸ್ತರಿಸಬೇಕಿದೆ. ಅದಿರಲಿ, ಎದೆಗುಂದಿಸುವ 2050 ಕ್ಲೈಮ್ಯಾಟ್ ಆಕ್ಷನ್ ಗುರಿಗಳನ್ನು ಸಾಧಿಸುವ ಸಲುವಾಗಿ ಜಾಗೃತಿ ಮೂಡಿಸಲು ಮುಂದಾಳತ್ವ ವಹಿಸುವಂತೆ ಭಾರತವನ್ನು ಕೇಳಿಕೊಳ್ಳಲಾಗಿದೆ. ಹಾಗಾಗಿಯೇ ರಿಲಯನ್ಸ್‌ನಲ್ಲಿ ನಮ್ಮ ನವೀನ ಮತ್ತು ಮಹತ್ವಾಕಾಂಕ್ಷೆಯ ವ್ಯಾಪಾರ ಉಪಕ್ರಮವು ‘ಕೈಗೆಟುಕುವ ಹಸಿರು ಇಂಧನ’ದ ಪರಿಹಾರವನನ್ನು ಭಾರತ ಮತ್ತು ಜಾಗತಿಕ ಮಾರುಕಟ್ಟೆಗೆ ನೀಡುವ ಗುರಿ ಹೊಂದಿದೆ.

ಐದು. ಸಂಪತ್ತಿನ ಸೃಷ್ಟಿಯ ಭಾರತೀಯ ಮಾದರಿಯು ಉದ್ಯಮಶೀಲತೆಯನ್ನು ಪುನರ್‌ ಪರಿಗ್ರಹಿಸಬೇಕಾದ ಅಗತ್ಯ ಇದೆ. ನಾಳಿನ ಯಶಸ್ವಿ ಬ್ಯುಸಿನೆಸ್‌ಗಳು, ಆರೋಗ್ಯಕರ ಸ್ಪರ್ಧೆ ಮತ್ತು ಫಲಪ್ರದ ಸಹಯೋಗಗಳನ್ನು ಉತ್ತೇಜಿಸುವ ಪಾಲುದಾರಿಕೆ ಮತ್ತು ಪ್ಲಾಟ್‌ಫಾರ್ಮ್‌ಗಳಾಗಿರುತ್ತವೆ. ಅದಕ್ಕಿಂತ ಹೆಚ್ಚಾಗಿ, ಭವಿಷ್ಯದಲ್ಲಿ ನಡೆಯುವ ಉದ್ಯಮಗಳು ಏಕವ್ಯಕ್ತಿ ನಾಟಕಗಳಾಗಲು ಸಾಧ್ಯವಿಲ್ಲ ಎಂದು ಹೇಳಿದ ಅಂಬಾನಿ, ರಿಲಯನ್ಸ್‌ನಲ್ಲಿ ಇದು ವೃತ್ತಿಪರರು ಮತ್ತು ಉದ್ಯೋಗಿಗಳ ಜೊತೆಗೆ ಪಾಲುದಾರರು ಹಾಗೂ ಹೂಡಿಕೆದಾರರನ್ನೊಳಗೊಂಡ ‘ಮಾಲೀಕ ಮನಸ್ಥಿತಿ’ಗಳು ಸೇರಿದ ವಾದ್ಯವೃಂದದ ಹಾಗಿರುವುದನ್ನು ನೋಡಬಹುದು. ಅವರೆಲ್ಲರೂ, ಮಹಾತ್ಮಾ ಗಾಂಧಿಯವರು ‘ಅಂತ್ಯೋದಯ’ (ಕಟ್ಟಕಡೆಯ ವ್ಯಕ್ತಿಯ ಕಲ್ಯಾಣ ಮತ್ತು ಯೋಗಕ್ಷೇಮ) ಎಂದು ಕರೆದ ಒಂದೇ ಗುರಿಗಾಗಿ ದುಡಿಯುತ್ತಿರುತ್ತಾರೆ.

‘ನನ್ನ ವ್ಯಾಪಾರ ವೃತ್ತಿಜೀವನ ಆರಂಭವಾದಾಗ ಭಾರತವಿನ್ನೂ ಸುಧಾರಣಾಪೂರ್ವ ಯುಗದಲ್ಲಿತ್ತು. ನವ ಭಾರತದ ಉದಯದ ಬಗ್ಗೆ ನನಗೆ ಅತ್ಯಂತ ಭರವಸೆ ಮತ್ತು ವಿಶ್ವಾಸವಿದೆ. ಭಾರತದ ಚೈತನ್ಯ ಹಿಂದೆಂದೂ ಕಾಣದಷ್ಟು ಪುನರುಜ್ಜೀವನಗೊಂಡಿರುವುದನ್ನು ನಾನು ಕಾಣುತ್ತಿದ್ದೇನೆ’ ಎಂದು ಅಂಬಾನಿ ಹೇಳಿದರು.

‘ಸಕಾರಾತ್ಮಕತೆ, ಸದುದ್ದೇಶ ಮತ್ತು ಸದುತ್ಸಾಹಗಳಿಂದ ನಮ್ಮ ದೇಶದ ನಡಿಗೆಯ ವೇಗವನ್ನು ವರ್ಧಿಸೋಣ. ನಿಜ, ಮುಂದಿರುವ ದಾರಿ ಸುಲಭದ್ದಲ್ಲ. ಆದರೆ ಸಾಂಕ್ರಾಮಿಕ ಅಥವಾ ನಮ್ಮ ಶಕ್ತಿಗುಂದಿಸುವ, ಅಷ್ಟು ಮುಖ್ಯವಲ್ಲದ ಇತರೆ ವಿಷಯಗಳಂಥ ಅನಿರೀಕ್ಷಿತ ಮತ್ತು ತಾತ್ಕಾಲಿಕ ಸಮಸ್ಯೆಗಳಿಗೆ ವಿಚಲಿತರಾಗದಿರೋಣ. ನಮ್ಮ ಮಕ್ಕಳು ಮತ್ತು ಯುವಕರಿಗಾಗಿ, ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯುತ್ಕೃಷ್ಟವಾದದ್ದನ್ನು ಸಾಧಿಸುವ ಅವಕಾಶ ಮತ್ತು ಜವಾಬ್ದಾರಿ ಎರಡೂ ನಮ್ಮ ಮೇಲಿದೆ’ ಎಂದು ಅಂಬಾನಿ ಹೇಳಿದ್ದಾರೆ.

(India can achieve greater heights in next 30 years analysis RIL Chairman mukesh ambani)