ಬೆಂಗಳೂರು: ಆ್ಯಪಲ್ನ ಐಫೋನ್ ತಯಾರಕ ಕಂಪನಿಗಳಲ್ಲೊಂದಾದ ಫಾಕ್ಸ್ಕಾನ್ ಸಂಸ್ಥೆ (Foxconn) ಎಲ್ಲಿ ತನ್ನ ಘಟಕ ಸ್ಥಾಪನೆ ಮಾಡುತ್ತದೆ ಎಂಬುದು ಇನ್ನೂ ನಿಶ್ಚಿತವಾಗಿಲ್ಲ. ಕರ್ನಾಟಕ ಮತ್ತು ತೆಲಂಗಾಣ ಎರಡೂ ಸರ್ಕಾರಗಳೊಂದಿಗೆ ಫಾಕ್ಸ್ಕಾನ್ ಎಂಒಯು ಅಥವಾ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದು ಹೌದು. ಅಂತಿಮವಾಗಿ ಅವರ ರಾಜ್ಯದ ಸ್ಥಳವನ್ನು ಫಾಕ್ಸ್ಕಾನ್ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕು. ಆದರೆ, ಐಫೋನ್ ಫ್ಯಾಕ್ಟರಿ ಸ್ಥಾಪನೆಗೆ ಫಾಕ್ಸ್ಕಾನ್ ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಗಣನೆಗೆ ತೆಗೆದುಕೊಂಡಿರುವುದಂತೂ ಹೌದು. ಕರ್ನಾಟಕ ಈಗಾಗಲೇ ಫಾಕ್ಸ್ಕಾನ್ಗಾಗಿ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲು ಸಿದ್ಧವಾಗಿದೆ. ಏರ್ಪೋರ್ಟ್ನ ಸಮೀಪ ಇರುವ ದೊಡ್ಡಬಳ್ಳಾಪುರದ ಐಟಿಐಆರ್ (ITIR- Information Technology Investment Region) ಇಂಡಸ್ಟ್ರಿಯಲ್ ಏರಿಯಾದಲ್ಲಿ ಫಾಕ್ಸ್ಕಾನ್ಗೆ 300 ಎಕರೆ ಭೂಮಿಯನ್ನೂ ಸರ್ಕಾರ ಗುರುತಿಸಿಟ್ಟಿದೆ. ಇನ್ನೇನಿದ್ದರೂ ಫಾಕ್ಸ್ಕಾನ್ ಬಂದು ಐಫೋನ್ ಘಟಕ ಸ್ಥಾಪಿಸಬೇಕಷ್ಟೇ.
ಅಷ್ಟಕ್ಕೂ ಫಾಕ್ಸ್ಕಾನ್ ತನ್ನ ಘಟಕ ಸ್ಥಾಪಿಸಲು ಬೆಂಗಳೂರನ್ನು ಪರಿಗಣಿಸಲು ಏನು ಕಾರಣ? ಇಲ್ಲಿಯ ಹವಾಮಾನವಾ, ಐಟಿ ತಂತ್ರಜ್ಞರ ಸಂಪನ್ಮೂಲವಾ, ಎಂಜಿನಿಯರುಗಳ ಲಭ್ಯತೆಯಾ? ಫಾಕ್ಸ್ಕಾನ್ ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ಎಂಒಯು ಗಮನಿಸಿದರೆ ಬೆಂಗಳೂರಿನಲ್ಲಿ ಅದು ಯಾಕೆ ಐಫೋನ್ ಘಟಕ ಸ್ಥಾಪಿಸುವ ಮನಸು ಮಾಡಿದೆ ಎಂಬುದಕ್ಕೆ ಕಾರಣ ಸಿಗುತ್ತದೆ.
ತೈವಾನ್ ಮೂಲದ ಫಾಕ್ಸ್ಕಾನ್ (Hon Hai Technology Group) ಕಂಪನಿಯ ಹಿರಿಯ ಅಧಿಕಾರಿಗಳು ಮಾರ್ಚ್ 3ರಂದು ಬೆಂಗಳೂರಿಗೆ ಬಂದಿದ್ದರು. ಕಂಪನಿಯ ಸಿಇಒ ಕೂಡ ಈ ತಂಡದಲ್ಲಿದ್ದರು. ದೇವನಹಳ್ಳಿ ಏರ್ಪೋರ್ಟ್ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಎರಡನೇ ಟರ್ಮಿನಲ್ (T2) ನೋಡಿ ಫಾಕ್ಸ್ಕಾನ್ ಅಧಿಕಾರಿಗಳು ಬೆರಗಾದರಂತೆ. ಇಲ್ಲಿರುವ ಕಾರ್ಗೊ ಅಥವಾ ಸರಕು ಸಾಗಣೆ ಸೌಕರ್ಯ ಮತ್ತು ಸೌಲಭ್ಯಗಳು ಇವರಿಗೆ ಬಹಳ ಹಿಡಿಸಿವೆ.
ಇದನ್ನೂ ಓದಿ: Foxconn iPhone Factory: ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೋ ತೆಲಂಗಾಣಕ್ಕೋ? ಯಾಕಿಷ್ಟು ಗೊಂದಲ? ವಾಸ್ತವ ಏನು?
ಫಾಕ್ಸ್ಕಾನ್ಗೆ ಕಾರ್ಗೊ ಸೌಲಭ್ಯ ಬಹಳ ಮುಖ್ಯ. ಎಲೆಕ್ಟ್ರಾನಿಕ್ ವಸ್ತುಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸಲು ಅಥವಾ ದೂರದ ಸ್ಥಳಕ್ಕೆ ಸಾಗಿಸಲು ಹಡಗು ಅಥವಾ ಟ್ರಕ್ ಬದಲು ವಿಮಾನದ ಬಳಕೆ ಆಗುತ್ತದೆ. ಹೀಗಾಗಿ, ಸರಕು ಸಾಗಣೆ ವಿಮಾನಗಳು ಬಂದು ಹೋಗಲು ಸೂಕ್ತವಾಗಿರುವ ಏರ್ಪೋರ್ಟ್ ಇರುವುದು ಫಾಕ್ಸ್ಕಾನ್ಗೆ ಬಹಳ ಮುಖ್ಯ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ನಲ್ಲಿ ಕಾರ್ಗೊ ವಿಮಾನಗಳಿಗೆ ಅದ್ಭುತ ವ್ಯವಸ್ಥೆ ಇದೆ. ಯಾವುದೇ ಕಾರ್ಗೋ ವಿಮಾನ ಏರ್ಪೋರ್ಟ್ಗೆ ಬಂದು ಹೋಗಲು 2 ಗಂಟೆಯ ಟರ್ನರೌಂಡ್ ಟೈಮ್ ಆಗುತ್ತದೆ. ಇಷ್ಟು ಕ್ಷಿಪ್ರಗತಿಯಲ್ಲಿ ವ್ಯವಸ್ಥೆ ಇರುವುದು ಫಾಕ್ಸ್ಕಾನ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಫಾಕ್ಸ್ಕಾನ್ ಸಂಸ್ಥೆ ಕರ್ನಾಟಕ ಸರ್ಕಾರಕ್ಕೆ ಬರೆದಿರುವ ಲೆಟರ್ ಆಫ್ ಇಂಟೆಂಟ್ನಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿದೆ.
ಇನ್ಫ್ರಾಸ್ಟ್ರಕ್ಚರ್ ಮುಖ್ಯ ಎನ್ನುವುದು ಇದಕ್ಕೆಯೇ
ಸರ್ಕಾರ ಸರಿಯಾದ ಸೌಕರ್ಯವ್ಯವಸ್ಥೆ ಮಾಡಿದರೆ ಬಂಡವಾಳ ಸರಾಗವಾಗಿ ಹರಿದುಬರುತ್ತದೆ ಎನ್ನುವುದಕ್ಕೆ ಫಾಕ್ಸ್ಕಾನ್ ಅತ್ಯುತ್ತಮ ನಿದರ್ಶನ ಎನ್ನುತ್ತಾರೆ ತಜ್ಞರು. ಒಂದು ವೇಳೆ ಫಾಕ್ಸ್ಕಾನ್ ದೊಡ್ಡಬಳ್ಳಾಪುರದಲ್ಲಿ ಐಫೋನ್ ಅಸೆಂಬ್ಲಿಂಗ್ ಘಟಕ ಸ್ಥಾಪಿಸಿದಲ್ಲಿ ರಾಜ್ಯದಲ್ಲಿ 1 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ ಐಫೋನ್ ಹಬ್ ಆಗಿಯೂ ಬೆಂಗಳೂರು ಬೆಳೆಯಬಹುದು.