Mahindra CIE Workers Protest: ಬೆಂಗಳೂರಿನ ಮಹೀಂದ್ರ ಸಿಐಇ ಕಂಪನಿಯಲ್ಲಿ ಕೆಲಸ ಕಳೆದುಕೊಂಡ 50 ಮಂದಿ; ನೌಕರರ ಪ್ರತಿಭಟನೆ
Mahindra CIE Sacks 50 Employees: ಸುರಕ್ಷತೆ ಇಲ್ಲದೆ ಕೆಲಸ ಮಾಡಬೇಕೆಂದು ಒತ್ತಡ ಹಾಕುತ್ತಿರುವ ಮಹೀಂದ್ರ ಸಿಐಇ ಕಂಪನಿಯ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ಪರಿಣಾಮವಾಗಿ 50 ಮಂದಿಯನ್ನು ಕಂಪನಿಯ ಕೆಲಸದಿಂದ ಕಿತ್ತುಹಾಕಲಾಗಿದೆ ಎನ್ನುವ ಆರೋಪ ಇದೆ.
ಬೆಂಗಳೂರು: ಕಾರಿನ ಬಿಡಿಭಾಗಗಳನ್ನು ಉತ್ಪಾದಿಸುವ ಮಹೀಂದ್ರ ಸಿಐಇ ಕಂಪನಿಯ (Mahindra CIE) ಆಡಳಿತ ಮಂಡಳಿಯು 50 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ (Workers Sacked). ಯಾವುದೇ ನೋಟೀಸ್ ನೀಡದೇ ಏಕಾಏಕಿಯಾಗಿ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆನೇಕಲ್ ತಾಲೂಕಿನ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ಮಹೀಂದ್ರ ಸಿಐಇ ಕಂಪನಿಯ ಧೋರಣೆ ವಿರುದ್ಧ ನೌಕರರು ಫ್ಯಾಕ್ಟರಿ ಎದುರೇ ಪ್ರತಿಭಟನೆ ನಡೆಸಿದ್ದಾರೆ.
ಕಂಪನಿಯ ನಿರ್ಲಕ್ಷ್ಯ?
ಮಹೀಂದ್ರ ಸಿಐಇ ಕಂಪನಿಯ ಘಟಕದಲ್ಲಿ ಕಾರಿನ ಬಿಡಿಭಾಗಗಳನ್ನು (Automotive Components) ತಯಾರಿಸಲು ಹೊಸ ಮೆಷೀನ್ ತರಲಾಗಿತ್ತು. ಆದರೆ ಈ ಉಪಕರಣ ಚಲಾಯಿಸಲು ಅಗತ್ಯ ಸುರಕ್ಷತಾ ವ್ಯವಸ್ಥೆ ಒದಗಿಸಿ ಎಂದು ನೌಕರರು ಮಾಡಿಕೊಂಡ ಮನವಿಗೆ ಕಂಪನಿಯ ಆಡಳಿತ ಕಿವಿಗೊಟ್ಟಿಲ್ಲ ಎನ್ನುವ ಆರೋಪ ಮಾಡಲಾಗಿದೆ. ಕೈಗವುಸು (Hand Gloves) ಇತ್ಯಾದಿ ಸುರಕ್ಷತಾ ಸಾಧನೆಗಳು ಇಲ್ಲದೇ ಯಂತ್ರದಲ್ಲಿ ಕೆಲಸ ಮಾಡಿದರೆ ರಾಸಾಯನಿಕ ಸೋಂಕಿನಿಂದ ಚರ್ಮಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಬಹುದು ಎನ್ನುವ ಆತಂಕ ಇದೆ. ನೌಕರರ ಈ ಭಯ ನಿವಾರಿಸುವ ಪ್ರಯತ್ನ ಮಾಡದ ಕಂಪನಿ, ಸುರಕ್ಷತಾ ವ್ಯವಸ್ಥೆ ಇಲ್ಲದೆಯೇ ಕೆಲಸ ಮಾಡುವಂತೆ ನೌಕರರಿಗೆ ಒತ್ತಡ ಹೇರಿತ್ತು.
ಇದನ್ನೂ ಓದಿ: NBFC: ಶ್ರೀರಾಮ್ ಕ್ಯಾಪಿಟಲ್ ಸೇರಿದಂತೆ 17 ಎನ್ಬಿಎಫ್ಸಿಗಳ ಲೈಸೆನ್ಸ್ ರದ್ದು; ಇಲ್ಲಿದೆ ಪಟ್ಟಿ
ಇದರಿಂದ ಆಕ್ರೋಶಗೊಂಡಿರುವ ನೌಕರರು ಕಂಪನಿಯ ಮುಂಭಾಗವೇ ಪ್ರತಿಭಟನೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಆಡಳಿತ ಮಂಡಳಿಯು ಶಿಸ್ತಿನ ಕ್ರಮ ಹೆಸರಿನಲ್ಲಿ 50 ಮಂದಿ ನೌಕರರನ್ನು ಏಕಾಏಕಿಯಾಗಿ ಕೆಲಸದಿಂದ ಕಿತ್ತುಹಾಕಿದೆ ಎಂದು ಹೇಳಲಾಗಿದೆ. ಮಹೀಂದ್ರ ಸಿಐಇ ಕಂಪನಿಯ ಆಡಳಿತ ಮಂಡಳಿ ತೆಗೆದುಕೊಂಡ ಈ ಕ್ರಮದ ಬಳಿಕವೂ ನೌಕರರು ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ಸಾಧ್ಯತೆ ಇದೆ.
ಮಹೀಂದ್ರ ಸಿಐಇ ಕಂಪನಿ ಸ್ಪೇನ್ ಮೂಲದ ಸಿಐಇ ಆಟೊಮೋಟಿವ್ ಕಂಪನಿಯ ಅಂಗ ಸಂಸ್ಥೆಯಾಗಿದೆ. ಜಾಗತಿಕ ವಾಹನ ಮಾರುಕಟ್ಟೆಗೆ ಸಿಐಇ ವಿವಿಧ ಬಿಡಿಭಾಗಗಳನ್ನು ತಯಾರಿಸಿ ಪೂರೈಕೆ ಮಾಡುತ್ತದೆ. ಮಹೀಂದ್ರ ಸಿಐಇ ಕಂಪನಿಯ ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಷೇರುಪೇಟೆಗಳಲ್ಲಿ (Sensex and Nifty Stock Markets) ಲಿಸ್ಟ್ ಆಗಿದೆ. ಬೆಂಗಳೂರು ಮಾತ್ರವಲ್ಲ ಪುಣೆ ಇತ್ಯಾದಿ ಸೇರಿದಂತೆ ಭಾರತದ 10ಕ್ಕೂ ಹೆಚ್ಚು ಕಡೆ ಇದು ಘಟಕಗಳನ್ನು ಹೊಂದಿದೆ.
ಇನ್ನಷ್ಟು ಉದ್ಯಮಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Fri, 10 March 23