ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿಯಾದ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಶನಿವಾರದಂದು ತಿಳಿಸಿರುವಂತೆ, ಅದರ ಮಾಡೆಲ್ಗಳ ಬೆಲೆಯನ್ನು ಶೇ 4.3ರ ತನಕ ಏರಿಕೆ ಮಾಡಿದೆ. ಇನ್ಪುಟ್ ವೆಚ್ಚಗಳ ಹೆಚ್ಚಳದ ಹಿನ್ನೆಲೆಯಲ್ಲಿ ಅದನ್ನು ಭಾಗಶಃ ಸರಿತೂಗಿಸಬೇಕು ಎಂಬ ಕಾರಣಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ತೀರ್ಮಾನಕ್ಕೆ ಬರಲಾಗಿದೆ. ಕಂಪೆನಿಯ ವಿವಿಧ ಮಾಡೆಲ್ಗಳ ಕಾರುಗಳ ಬೆಲೆಯಲ್ಲಿ ಶೇ 0.1ರಿಂದ ಶೇ 4.3ರ ತನಕ ದರ ಹೆಚ್ಚಳ ಆಗಲಿದೆ. ವಿವಿಧ ಇನ್ಪುಟ್ ವೆಚ್ಚಗಳ ಏರಿಕೆ ಕಾರಣಕ್ಕೆ ಈ ಬೆಳವಣಿಗೆ ಆಗಲಿದೆ. “ವೇಯ್ಟೆಡ್ ಸರಾಸರಿ ಬೆಲೆಗಳ ಏರಿಕೆಯು ಎಕ್ಸ್- ಶೋರೂಮ್ ದರಗಳು (ದೆಹಲಿ) ಎಲ್ಲ ಮಾಡೆಲ್ಗಳಲ್ಲಿ ಶೇ 1.7. ಹೊಸ ಬೆಲೆಗಳು ಇಂದಿನಿಂದ (ಜನವರಿ 15) ಜಾರಿಗೆ ಬರಲಿದೆ,” ಎಂದು ಮಾರುತಿ ಸುಜುಕಿ ಇಂಡಿಯಾ ನಿಯಂತ್ರಕ ಫೈಲಿಂಗ್ನಲ್ಲಿ ಹೇಳಿದೆ.
ಮಾರುತಿ ಸುಜುಕಿಯಿಂದ ಆಲ್ಟೋದಿಂದ ಎಸ್-ಕ್ರಾಸ್ ತನಕ ಕಾರುಗಳ ಮಾರಾಟ ಮಾಡಲಾಗುತ್ತದೆ. ಅವುಗಳ ದರವು ಕ್ರಮವಾಗಿ ರೂ. 3.15 ಲಕ್ಷದಿಂದ ರೂ. 12.56 ಲಕ್ಷದ ತನಕ ಇದೆ. ಕಳೆದ ವರ್ಷ ಮಾರುತಿ ಸುಜುಕಿ ಮೂರು ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಜನವರಿಯಲ್ಲಿ ಶೇ 1.4ರಷ್ಟು, ಏಪ್ರಿಲ್ನಲ್ಲಿ ಶೇ 1.6ರಷ್ಟು, ಸೆಪ್ಟೆಂಬರ್ನಲ್ಲಿ ಶೇ 1.9ರಷ್ಟು ಹೀಗೆ ಒಟ್ಟಾರೆಯಾಗಿ ಶೇ 4.9ರಷ್ಟು ದರ ಇಳಿಕೆ ಮಾಡಲಾಗಿತ್ತು.
ಕಳೆದ ತಿಂಗಳು ಕಂಪೆನಿಯಿಂದ ಹೇಳಿದ ಪ್ರಕಾರ, ಅಗತ್ಯ ವಸ್ತುಗಳಾದ ಉಕ್ಕು, ಅಲ್ಯೂಮಿನಿಯಂ, ತಾಮ್ರ, ಪ್ಲಾಸ್ಟಿಕ್ ಮತ್ತು ಬೆಲೆಬಾಳುವ ಇತರ ಲೋಹಗಳ ಬೆಲೆಗಳು ಕಳೆದ ಒಂದು ವರ್ಷದಲ್ಲಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಆಗಿದೆ ಎಂದು ತಿಳಿಸಲಾಗಿತ್ತು.
ಇದನ್ನೂ ಓದಿ: Maruti Suzuki: ಚಿಪ್ ಕೊರತೆಯಿಂದ ಸತತ ಎರಡನೇ ತಿಂಗಳು ಮಾರುತಿ ಸುಜುಕಿ ಕಾರುಗಳ ಉತ್ಪಾದನೆ ಕುಂಠಿತ ಸಾಧ್ಯತೆ