AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maruti Suzuki: ಚಿಪ್ ಕೊರತೆಯಿಂದ ಸತತ ಎರಡನೇ ತಿಂಗಳು ಮಾರುತಿ ಸುಜುಕಿ ಕಾರುಗಳ ಉತ್ಪಾದನೆ ಕುಂಠಿತ ಸಾಧ್ಯತೆ

ಎಲೆಕ್ಟ್ರಾನಿಕ್ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿರುವುದು ಹಾಗೂ ದೇಶವ್ಯಾಪಿ ಪೂರೈಕೆ ಸರಪಳಿಯಲ್ಲಿ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಚಿಪ್​ಗಳ ತೀವ್ರ ಕೊರತೆ ವಿಶ್ವದಾದ್ಯಂತ ಕಾಣಿಸಿಕೊಂಡಿದೆ

Maruti Suzuki: ಚಿಪ್ ಕೊರತೆಯಿಂದ ಸತತ ಎರಡನೇ ತಿಂಗಳು ಮಾರುತಿ ಸುಜುಕಿ ಕಾರುಗಳ ಉತ್ಪಾದನೆ ಕುಂಠಿತ ಸಾಧ್ಯತೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Oct 01, 2021 | 6:30 PM

Share

ಬೆಂಗಳೂರು: ಚಿಪ್​ಗಳ​ ಕೊರತೆಯಿಂದಾಗಿ ಅಕ್ಟೋಬರ್​ ತಿಂಗಳಲ್ಲಿ ಕಾರು ಉತ್ಪಾದನೆ ಪ್ರಮಾಣ ಶೇ 60ರಷ್ಟು ಕಡಿಮೆ ಆಗಬಹುದು ಎಂದು ಭಾರತದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಅಂದಾಜಿಸಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿರುವುದು ಹಾಗೂ ದೇಶವ್ಯಾಪಿ ಪೂರೈಕೆ ಸರಪಳಿಯಲ್ಲಿ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಚಿಪ್​ಗಳ ತೀವ್ರ ಕೊರತೆ ವಿಶ್ವದಾದ್ಯಂತ ಕಾಣಿಸಿಕೊಂಡಿದೆ. ಸೆಮಿಕಂಡಕ್ಟರ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಹಲವು ಪ್ರಮುಖ ಕಾರ್ ಕಂಪನಿಗಳು ಉತ್ಪಾದನೆಯ ಪ್ರಮಾಣವನ್ನು ಕಡಿತಗೊಳಿಸಿವೆ.

ಮಾರುತಿ ಜೊತೆಗೆ ಅದರ ಪ್ರತಿಸ್ಪರ್ಧಿ ಕಂಪನಿ ಮಹೀಂದ್ರ ಸಹ ಸೆಪ್ಟೆಂಬರ್ ತಿಂಗಳಲ್ಲಿ ಉತ್ಪಾದನೆ ಕುಂಠಿತವಾಗಿದೆ ಎಂದು ಹೇಳಿತ್ತು. ಮಾರುತಿ ಕಂಪನಿಯ ಹರ್ಯಾಣ ಘಟಕ ಮತ್ತು ಅದರಿಂದ ಗುತ್ತಿಗೆ ಪಡೆದಿರುವ ಸುಜುಕಿ ಮೋಟಾರ್ ಗುಜರಾತ್ ಪ್ರೈವೇಟ್ ಸಹ ಅಕ್ಟೋಬರ್ ತಿಂಗಳಲ್ಲಿ ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಅಂದಾಜಿಸಿದೆ. ಈ ವಿಚಾರವನ್ನು ಕಂಪನಿಯು ನಿಯಂತ್ರಕ ಸಂಸ್ಥೆಗೆ ಗುರುವಾರ ಸಲ್ಲಿಸಿರುವ ಮಾಹಿತಿಪತ್ರದಲ್ಲಿ ತಿಳಿಸಿದೆ.

ಸಾಮಾನ್ಯ ದಿನಗಳಲ್ಲಿ ಉತ್ಪಾದನೆಯಾಗುವ ಪ್ರಮಾಣದ ಹೋಲಿಕೆಯಲ್ಲಿ ಎರಡೂ ಸ್ಥಳಗಳ ಒಟ್ಟು ಉತ್ಪಾದನಾ ಸಾಮರ್ಥ್ಯದ ಶೇ40 ರಷ್ಟು ಪ್ರಮಾಣದ ಕಾರುಗಳ ಉತ್ಪಾದನೆ ಸೆಪ್ಟೆಂಬರ್ ತಿಂಗಳಲ್ಲಿ ಸಾಧ್ಯವಾಗಬಹುದು ಎಂದು ಆಗಸ್ಟ್ ತಿಂಗಳಲ್ಲಿ ಕಂಪನಿ ಅಂದಾಜಿಸಿತ್ತು. ಕೈಗಾರಿಕಾ ಘಟಕಗಳಲ್ಲಿ ಎದುರಾದ ಸಮಸ್ಯೆಗಳಿಂದಾಗಿ ಕಾರು ಉತ್ಪಾದಕರು ಅತಿಹೆಚ್ಚು ಲಾಭ ತಂದುಕೊಡುವ ದುಬಾರಿ ಕಾರುಗಳ ಮಾಡೆಲ್​ಗಳ ಉತ್ಪಾದನೆಗೆ ಮೊದಲ ಆದ್ಯತೆ ನೀಡಿದ್ದವು. ಕಾರುಗಳ ದರವನ್ನೂ ಹೆಚ್ಚಿಸಿದ್ದವು. 2021ರಲ್ಲಿ ಮಾರುತಿ, ಟಾಟಾ ಮೋಟಾರ್ಸ್​ ಮತ್ತು ಮಹೀಂದ್ರ ಕಂಪನಿಗಳು ಹಲವು ಬಾರಿ ದರ ಏರಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವದೆಲ್ಲೆಡೆ ಇದೇ ವಿದ್ಯಮಾನ ಕಂಡುಬರುತ್ತಿದೆ. ವಿಶ್ವದ ಪ್ರಮುಖ ಕಾರು ಉತ್ಪಾದಕ ಕಂಪನಿಗಳಾದ ಫೋರ್ಡ್​​, ಹೋಂಡಾ, ಜನರಲ್ ಮತ್ತು ವೋಲ್ಕ್ಸ್​ವ್ಯಾಗನ್ ಕಂಪನಿಗಳು ಚಿಪ್ ಕೊರತೆಯಿಂದಾಗಿ ಉತ್ಪಾದನೆ ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಿಸುತ್ತಿವೆ. ಈ ಕಂಪನಿಗಳ ಹಲವು ಘಟಕಗಳು ತಮ್ಮ ಪೂರ್ಣ ಸಾಮರ್ಥ್ಯದಷ್ಟು ಉತ್ಪಾದನೆ ಮಾಡುತ್ತಿಲ್ಲ.

(Due to Chip Shortage Maruti Suzuki India Warns Of Cut in Production of Cars)

ಇದನ್ನೂ ಓದಿ: Maruti Cars Price Hike: ಮಾರುತಿ ಕಾರುಗಳ ಎಲ್ಲ ಮಾಡೆಲ್​ಗಳ ಬೆಲೆಯಲ್ಲಿ ಸೆಪ್ಟೆಂಬರ್​ನಿಂದ ಆಗಲಿದೆ ಏರಿಕೆ

ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್​ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು

Published On - 9:55 pm, Thu, 30 September 21