ಹಾವೇರಿ: ಏಲಕ್ಕಿಯ ನಾಡು ಎಂದಾಕ್ಷಣ ತಟ್ಟನೆ ನೆನಪಾಗುವುದು ಹಾವೇರಿ. ಹಾಗೆಂದ ಮಾತ್ರಕ್ಕೆ ಇಲ್ಲಿ ಏಲಕ್ಕಿಯನ್ನು ಹೇರಳವಾಗಿ ಬೆಳೆಯುತ್ತಾರೆ ಎಂದು ಕೊಂಡರೆ ಅದು ತಪ್ಪು. ಬದಲಾಗಿ ಹಾವೇರಿ ಏಲಕ್ಕಿ ವ್ಯಾಪಾರಕ್ಕೆ ಒಂದು ಕಾಲದಲ್ಲಿ ಫೇಮಸ್ ಆಗಿದ್ದು, ನಗರದಲ್ಲಿ ಎಲ್ಲೆಲ್ಲೂ ಏಲಕ್ಕಿ ಕಂಪು ಸೂಸುತ್ತಿತ್ತು. ಆದರೆ ಈಗ ಏಲಕ್ಕಿ ವ್ಯಾಪಾರಸ್ಥರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ರಾಜ್ಯದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಮೂಲ ಕಾರಣ.
ಹಿಂದೆ ನಗರದಲ್ಲಿ ಎಲ್ಲೆಲ್ಲೂ ಏಲಕ್ಕಿಯ ಕಂಪು ಸೂಸುತ್ತಿತ್ತು. ಘಮಘಮಿಸುವ ಏಲಕ್ಕಿಯನ್ನು ಗ್ರೇಡ್ಗಳಾಗಿ ಮಾಡುವಲ್ಲಿ ಮತ್ತು ಅವುಗಳನ್ನು ಮಾರಾಟ ಮಾಡುವಲ್ಲಿ ಸುಮಾರು 80 ರಿಂದ 90 ಮಂದಿ ವ್ಯಾಪಾರಸ್ಥರು ಭಾಗಿಯಾಗಿದ್ದರು. ಶಿರಸಿ, ಅರಸೀಕೆರೆ, ಮೂಡಿಗೆರೆ, ಮಡಿಕೇರಿ ಸೇರಿದಂತೆ ರಾಜ್ಯದಲ್ಲಿ ಹಲವೆಡೆ ರೈತರು ಬೆಳೆಯುತ್ತಿದ್ದ ಏಲಕ್ಕಿಯನ್ನು ತಂದು ಸಂಸ್ಕರಿಸಿ, ಗ್ರೇಡ್ಗಳನ್ನಾಗಿ ಮಾಡಿ ಇಲ್ಲಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ನಗರದಲ್ಲಿ ಎಲ್ಲೆಲ್ಲೂ ಏಲಕ್ಕಿಯ ವಾಸನೆ ಮೂಗಿಗೆ ತಾಗುತ್ತಿತ್ತು.
ಆದರೆ ಈಗ ರಾಜ್ಯದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಏಲಕ್ಕಿ ಬೆಳೆಯುತ್ತಿದ್ದ ಬಹುತೇಕ ರೈತರು ದುಬಾರಿ ಬೆಲೆಗೆ ಮಾರಾಟವಾಗುವ ಕಾಫಿ ಮತ್ತು ಮೆಣಸು ಬೆಳಿತಿದ್ದಾರೆ. ಹೀಗಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಬೆಳೆಯುವ ಏಲಕ್ಕಿ ತಂದು ವ್ಯಾಪಾರ ಮಾಡಬೇಕಾಗಿರುವುದರಿಂದ ಏಲಕ್ಕಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿದೆ. ಆದರೂ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ವ್ಯಾಪಾರವನ್ನು ಈಗಲೂ ನಗರದ 18 ಜನ ವ್ಯಾಪಾರಸ್ಥರು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಮೊದಲು ರೈತರಿಂದ ಏಲಕ್ಕಿ ತಂದು ಸಂಸ್ಕರಣೆ ಮಾಡಿ ನಂತರ ಅವುಗಳನ್ನು ಗ್ರೇಡ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಸಂಸ್ಕರಣೆ ಮಾಡುವುದು ನಿಂತು ಹೋಗಿದೆ. ಅದರ ಬದಲು ರೈತರಿಂದ ತಂದ ಹಸಿರು ಏಲಕ್ಕಿಯನ್ನ ತಂದು ಗ್ರೇಡ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಸುಮಾರು 5-6 ಗಾತ್ರದ ಏಲಕ್ಕಿ ಗ್ರೇಡ್ ಮಾಡಲಾಗುತ್ತಿದ್ದು, ಅದರ ಜೊತೆಗೆ ಬಾಯಿ ಬಿಟ್ಟಿರುವುದು, ಬಣ್ಣ ಇಲ್ಲದಿರುವುದು, ರೋಗ ಹತ್ತಿರುವುದು, ಏಲಕ್ಕಿ ಇದ್ದರೂ ಒಳಗೆ ಕಾಳು ಇಲ್ಲದೆ ಇರುವುದು, ಕಾಳಿದ್ದರೂ ಕಪ್ಪು ಬಣ್ಣದ ಬದಲು ಕೆಂಪು ಬಣ್ಣದ ಕಾಳು ಇರುವುದು ಹೀಗೆ ಇಂತಹವೆಲ್ಲವನ್ನು ತೆಗೆದು ಮಾರಾಟ ಮಾಡಲಾಗುತ್ತದೆ.
ರಾಜ್ಯದಲ್ಲಿ ರೈತರು ಏಲಕ್ಕಿ ಬೆಳೆಯುವುದು ಕಡಿಮೆಯಾಗುತ್ತಿದ್ದಂತೆ ತಮಿಳುನಾಡು, ಕೇರಳದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸದ್ಯ ತಮಿಳುನಾಡು ಮತ್ತು ಕೇರಳ ಭಾಗದಿಂದ ನೇರವಾಗಿ ಏಲಕ್ಕಿ ಎಲ್ಲಾ ಕಡೆಗಳಿಗೆ ಸರಬರಾಜು ಆಗುವುದರಿಂದ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿದೆ. ರಾಜ್ಯದಲ್ಲಿ ರೈತರು ಏಲಕ್ಕಿ ಬೆಳೆಯುವುದು ಕಡಿಮೆಯಾಗುತ್ತಿದ್ದಂತೆ ಹಾವೇರಿಯಲ್ಲಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿದ್ದು, ಏಲಕ್ಕಿಯ ಕಂಪು ಕೂಡ ಕಡಿಮೆಯಾಗುತ್ತಿದೆ.
ಒಟ್ಟಿನಲ್ಲಿ ಈಗ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿರುವುದರಿಂದ ಏಲಕ್ಕಿಯ ಕಂಪು ಕೆಲವೇ ಕೆಲವು ಪ್ರದೇಶಕ್ಕೆ ಸೀಮಿತವಾಗಿದ್ದು, ಆ ಮೂಲಕ ಹಾವೇರಿಯಲ್ಲಿ ಎಲ್ಲೆಲ್ಲೂ ಘಮಘಮಿಸುತ್ತಿದ್ದ ಏಲಕ್ಕಿಯ ಪರಿಮಳ ಈಗ ಕ್ಷೀಣಿಸುತ್ತಿದೆ.
ರಾಜ್ಯದಲ್ಲಿ ಏಲಕ್ಕಿ ಬೆಳೆಯೋರ ಸಂಖ್ಯೆ ಕಡಿಮೆ, ಘಮಘಮಿಸುತ್ತಿಲ್ಲ ಏಲಕ್ಕಿ!