ಬದುಕಲ್ಲಿ ಯಶಸ್ಸಿನ ಹಾದಿ ಬಲು ದುರ್ಗಮ. ಆದರೆ, ಸಾಧಿಸುವ ಛಲವೊಂದಿದ್ದರೆ ಎಂಥದ್ದೇ ಕಠಿಣ ಪರಿಸ್ಥಿತಿಯನ್ನ ಎದುರಿಸಿ ಗೆಲ್ಲಬಹುದು. ಇದಕ್ಕೆ ತಕ್ಕ ಉದಾಹರಣೆ ಹನುಮಂತ್ ರಾಮದಾಸ್ ಗಾಯಕ್ವಾಡ್. 10×10 ವಿಸ್ತೀರ್ಣದ ಪುಟ್ಟ ರೂಮ್ನ ಬಾಡಿಗೆದಾರನಾಗಿದ್ದ ಈತ ಇದೀಗ 1,000 ಕೋಟಿ ಮೌಲ್ಯದ ಕಂಪನಿಯ ಒಡೆಯ. ಈತನ ಯಶೋಗಾಥೆಯೇ ಬಲು ರೋಚಕ.
ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋರೆಗಾವ್ ಗ್ರಾಮದವರಾದ ಹನುಮಂತ್ ಗಾಯಕ್ವಾಡ್ ತೀರ ಬಡಕುಟುಂಬದಲ್ಲಿ ಜನಿಸಿದವರು. ಸ್ಥಳೀಯ ಕೋರ್ಟ್ನಲ್ಲಿ ಗುಮಾಸ್ತನಾಗಿದ್ದ ತಂದೆಯ ಸಂಬಳದಲ್ಲೇ ಕುಟುಂಬ ಬದುಕು ಸಾಗಿಸಬೇಕಿತ್ತು. ಆದರೆ, ಮಗನ ಓದಿನ ಮೇಲೆ ಇದರ ಪರಿಣಾಮ ಬೀರದಂತೆ ಹನುಮಂತ್ ತಂದೆ ನೋಡಿಕೊಂಡರು.
10X10 ರೂಮ್ನಲ್ಲೇ ಬದುಕು ಸಾಗಿಸಿದ ಕುಟುಂಬ
ಅಂತೆಯೇ ಹನುಮಂತ್ ಕೂಡ ಒಳ್ಳೆಯ ವಿದ್ಯಾರ್ಥಿಯಾಗಿದ್ದು ಶಿಷ್ಯವೇತನ ಗಿಟ್ಟಿಸಿಕೊಂಡು ತಂದೆಯ ಮೇಲೆ ಆರ್ಥಿಕ ಹೊರೆಯನ್ನ ಕಡಿಮೆ ಮಾಡಿದ್ದರು. 10X10 ವಿಸ್ತೀರ್ಣದ, ಕರೆಂಟ್ ಸೌಕರ್ಯ ಇಲ್ಲದ ಪುಟ್ಟ ರೂಮ್ನಲ್ಲಿ ಇಡೀ ಕುಟುಂಬ ವಾಸವಿದ್ದರೂ ಅವರಿಗೆ ಅದೇ ಸ್ವರ್ಗ. ಆದರೆ, ಅದೃಷ್ಟ ಅವರ ಕೈ ಹಿಡಿಯಲಿಲ್ಲ.
ಕೆಲಸದ ನಿಮಿತ್ತ ಗಾಯಕ್ವಾಡ್ ತಂದೆಗೆ ಮುಂಬೈಗೆ ವರ್ಗಾವಣೆಯಾಯ್ತು. ಆದರೆ, ಅಲ್ಲಿನ ಹವಾಮಾನಕ್ಕೆ ಒಗ್ಗದ ಅವರ ತಂದೆ ಬಲು ಬೇಗ ಕಾಯಿಲೆಗ್ರಸ್ಥರಾಗಿ ಕೊನೆಯುಸಿರೆಳೆದರು. ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬದ ಪರಿಸ್ಥಿತಿ ದುಸ್ತರವಾಯ್ತು. ಆದರೆ ಇದ್ಯಾವುದಕ್ಕೂ ಎದೆಗುಂದದ ಹನುಮಂತ್ ಛಲಬಿಡದೆ ಓದು ಮುಂದುವರೆಸಿದರು.
ಮಕ್ಕಳಿಗೆ ಟ್ಯೂಷನ್ ಕಲಿಸಿ ಹಾಗೂ ತಮ್ಮ ತಾಯಿ ಹೊಲಿದ ಬಟ್ಟೆಗಳನ್ನ ಮಾರಿ ಬಂದ ಹಣದಲ್ಲೇ ಇಂಜಿನಿಯರಿಂಗ್ ಪದವಿ ಗಳಿಸಿದರು. ನಂತರ 1994ನಲ್ಲಿ ಪುಣೆಯ ಟಾಟಾ ಮೋಟರ್ಸ್ನಲ್ಲಿ ಟ್ರೈನಿಯಾಗಿ ಸೇರಿಕೊಂಡ ಹನುಮಂತ್ ತಮ್ಮ ಶ್ರದ್ಧೆ ಹಾಗೂ ನಿಷ್ಠೆಯಿಂದ ಬಹುಬೇಗ ಕಂಪನಿಯಲ್ಲಿ ಗುರುತಿಸಿಕೊಂಡರು.
ಛಲವಾದಿಗೆ ದೊರಕಿತು ಟಾಟಾ ಸಂಸ್ಥೆಯ ನೆರವು
ಈ ಮಧ್ಯೆ ಅವರ ಗ್ರಾಮಸ್ಥರು ಟಾಟಾ ಕಂಪನಿಯಲ್ಲಿ ನೌಕರಿ ಕೊಡಿಸಲು ಮನವಿ ಮಾಡಲಾರಂಭಿಸಿದರು. ಆದರೆ, ಕಂಪನಿಯ ನಿಯಮಾವಳಿಯಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ತಾನೇ ಯಾಕೆ ಇವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬಾರದು ಎಂಬ ಆಲೋಚನೆ ಹುಟ್ಟಿತು. ಇವರ ಈ ಯೋಚನೆಗೆ ಸಾಥ್ ನೀಡಿದ ಟಾಟಾ ಮೋಟರ್ಸ್ ತಮ್ಮದೇ ಫೈನಾನ್ಸ್ ಸಂಸ್ಥೆಯಿಂದ 60 ಲಕ್ಷ ರೂಪಾಯಿ ಸಾಲ ಸಹ ಕೊಡಿಸಿತು. ಅಲ್ಲಿಂದ ಶುರುವಾಯ್ತು ಹನುಮಂತ್ರ ಯಶೋಮಾರ್ಗ.
65 ಸಾವಿರ ಜನರಿಗೆ ಉದ್ಯೋಗಾವಕಾಶ
2000ದಲ್ಲಿ ಭಾರತ್ ವಿಕಾಸ್ ಪ್ರತಿಷ್ಠಾನ ಎಂಬ ಸಂಸ್ಥೆಯನ್ನ ಹುಟ್ಟುಹಾಕಿದ ಹನುಮಂತ್ ಯುವಕರಲ್ಲಿ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂಥ ವ್ಯವಸ್ಥೆ ಕಲ್ಪಿಸಿದರು. ಕೇವಲ 8 ಸಿಬ್ಬಂದಿಯಿಂದ ಶುರುವಾದ ಸಂಸ್ಥೆ ಇದೀಗ ಸುಮಾರು 65 ಸಾವಿರ ಜನಕ್ಕೆ ಉದ್ಯೋಗ ನೀಡಿದೆ.
700 ಕಸ್ಟಮರ್ಗಳನ್ನು ಹೊಂದಿರುವ ಭಾರತ್ ವಿಕಾಸ್ ಗ್ರೂಪ್ ಇದೀಗ ರಾಷ್ಟ್ರಪತಿ ಭವನ, ಲೋಕಸಭೆ, ಪ್ರಧಾನಿ ಮೋದಿ ನಿವಾಸ ಸೇರಿದಂತೆ ಹಲವಾರು ಸರ್ಕಾರಿ ಸಂಸ್ಥೆಗಳ ನಿರ್ವಹಣೆ ಮತ್ತು ಹೌಸ್ಕೀಪಿಂಗ್ನ ಗುತ್ತಿಗೆ ಪಡೆದಿದೆ. ಜೊತೆಗೆ ಏಷಿಯಾದಲ್ಲೇ ಅತಿ ದೊಡ್ಡ ತುರ್ತು ವೈದ್ಯಕೀಯ ಸೇವೆ ಒದಗಿಸುವ ಕಂಪನಿಯೆಂಬ ಖ್ಯಾತಿ ಸಹ ಪಡೆದಿದೆ.
ಅಂದ ಹಾಗೆ, ತನ್ನ ಸ್ವಂತ ಪರಿಶ್ರಮದಿಂದ ಇಷ್ಟೆಲ್ಲಾ ಗಳಿಸಿರುವ ಹನುಮಂತ್ ಗಾಯಕ್ವಾಡ್ರ ಕಂಪನಿಯ ನಿವ್ವಳ ಮೌಲ್ಯ ಎಷ್ಟು ಗೊತ್ತಾ? ಬರೋಬ್ಬರಿ 1,000 ಕೋಟಿ ರೂಪಾಯಿಗಳು.
Published On - 4:54 pm, Wed, 15 July 20