ಹಂಪಿ : ವಿಶ್ವಕ್ಕೇ ಆರೋಗ್ಯದ ಮಹತ್ವ ತಿಳಿಸುವ, ಭಾರತದ ಪ್ರಾಚೀನ ಪರಂಪರೆಯನ್ನು ತಿಳಿಸುವ ವಿಶೇಷ ಯೋಗ ದಿನ ವಿಶ್ವದ ಅತ್ಯಪೂರ್ವವಾಗಿ ಪಾರಂಪರಿಕ ನಗರ, ಹಂಪಿಯಲ್ಲಿ(Yoga in Hampi) ನಡೆಯಿತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಡಿಕೆಗೆ ಸಿರಿ ಧಾನ್ಯ ಸುರಿದು ಯೋಗ ದಿನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ, ಯುನೆಸ್ಕೋ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದ ಹಂಪೆ, ವಿಶ್ವ ಯೋಗ ದಿನಾಚರಣೆ(International Yoga Day 2022) ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದೆ.
ಜೂನ್ 21ರ ವಿಶ್ವ ಯೋಗ ದಿನಾಚರಣೆ ನಿಮಿತ್ತ ದೇಶಾದ್ಯಂತ 75 ಪ್ರಮುಖ ಐತಿಹಾಸಿಕ, ಪಾರಂಪರಿಕ ಪ್ರದೇಶಗಳಲ್ಲಿ ಯೋಗ ದಿನಾಚರಣೆ ವಿಶೇಷವಾಗಿ ನಡೆದಿದ್ದು, ಹಂಪಿಯೂ ಈ ದಾಖಲೆಯಲ್ಲಿ ಸೇರಿಕೊಂಡಿದೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ನಿಮಿತ್ತ ದೇಶದ 75 ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ, ವಿಶ್ವಕ್ಕೆ ಯೋಗದ ಮಹತ್ವವನ್ನು ಹೇಳಿದ ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಬೇಕು. ಈ ಮೂಲಕ ವಿಶೇಷ ಸಂದೇಶವನ್ನು ರವಾನಿಸಬೇಕು ಎಂಬುದು ಪ್ರಧಾನಿ ಮೋದಿಯವರ ಆಶಯವಾಗಿತ್ತು. ಇದಕ್ಕಾಗಿ ಈ ಹಿಂದಿನ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಅವರು ಪ್ರಮುಖ ಸ್ಥಳಗಳಲ್ಲಿ ಯೋಗ ದಿನವನ್ನು ಆಚರಿಸುವಂತೆ, ಯೋಗ ದಿನಾಚರಣೆ ಮತ್ತು ಯೋಗ ನಡೆಸುವ ಸ್ಥಳಗಳ ಬಗ್ಗೆ ಎಲ್ಲೆಡೆ ಪ್ರಚಾರ ನಡೆಸುವಂತೆ ಕರೆ ದೇಶವಾಸಿಗಳಿಗೆ ನೀಡಿದ್ದರು. ಅದರಂತೆ ವಿಶ್ವಪ್ರಸಿದ್ಧ ಹಂಪೆಯಲ್ಲೂ ಯೋಗ ದಿನ ನಡೆದಿದೆ. ಇದನ್ನೂ ಓದಿ: International Yoga Day 2022: ಶತಶೃಂಗ ಪರ್ವತದ ಮೇಲೆ ಯೋಗ ಮಾಡಿ ದೇಶದ ಗಮನ ಸೆಳೆಯಲು ಕೋಲಾರ ಜಿಲ್ಲಾಡಳಿತದ ವಿಭಿನ್ನ ಪ್ರಯತ್ನ
ಇದೇ ಮೊದಲ ಬಾರಿಗೆ ಅತ್ಯದ್ಭುತ ರೀತಿಯಲ್ಲಿ ಹಂಪೆಯಲ್ಲಿ ಯೋಗದಿನದ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಹಂಪಿಯ ವಿರೂಪಾಕ್ಷ ದೇಗುಲದ ಆವರಣದಲ್ಲಿ ವಚನಾನಂದಶ್ರೀ ನೇತೃತ್ವದಲ್ಲಿ ಯೋಗಾಭ್ಯಾಸ ನಡೆದಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ ಜೋಶಿ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ , ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಸಂಸದ ದೇವೇಂದ್ರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಜಿಲ್ಲಾಡಳಿತ ಯೋಗದಲ್ಲಿ ಭಾಗಿಯಾಗಲು ಉಚಿತ ಬಸ್ ವ್ಯವಸ್ಥೆ ಮಾಡಿದೆ. ಮೈಸೂರಿನಲ್ಲಿ ಪ್ರಧಾನಿ ಮೋದಿ ಭಾಷಣದ ಲೈವ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ಮೋದಿಯವರ ಆಶಯದಂತೆ ಹಂಪಿಯ ಕಾರ್ಯಕ್ರಮದಲ್ಲಿ ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸುವುದರೊಂದಿಗೆ ಯೋಗದ ಮಹತ್ವ, ವಿವಿಧ ಯೋಗಾಸನಗಳನ್ನು ಮಾಡಲಾಯಿತು. ಜೊತೆಗೆ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಕೇಂದ್ರದ ಯೋಗಿಗಳು, ಆರ್ಟ್ ಆಫ್ ಲಿವಿಂಗ್ ನ ಯೋಗಪಟುಗಳು, ಬ್ರಹ್ಮಕುಮಾರಿ ಸಂಸ್ಥೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು , ಸಾರ್ವಜನಿಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು ವಿಶೇಷವಾಗಿತ್ತು.
ನಮ್ಮಲ್ಲಿ ಒಂದು ಮೋಹ ಇದೆ, ಭಾರತೀಯರು ಹೇಳಿದ್ರೆ ಕೆಲವರು ನಂಬಲ್ಲ
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ಹಂಪಿಯಲ್ಲಿ ಹಲವು ದಿನಗಳಿಂದ ಯೋಗ ಗುರು ವಚನಾನಂದ ಶ್ರೀಗಳು ಯೋಗ ಶಿಬಿರ ನಡೆಸಿ ಜಾಗೃತಿ ಮೂಡಿಸಿದ್ದಾರೆ. ಈಡೀ ಜಗತ್ತು, ವಿಶ್ವ ಸಂಸ್ಥೆ ಸೇರಿ 79 ದೇಶಗಳಲ್ಲಿ ಯೋಗ ದಿನವನ್ನ ಒಂದೇ ದಿನ ಆಚರಿಸುತ್ತಿದ್ದಾರೆ. 24 ಗಂಟೆಗಳ ಕಾಲವೂ ಒಂದಿಲ್ಲ ಒಂದು ದೇಶದಲ್ಲಿ ಯೋಗ ದಿನ ನಡೆಯುತ್ತಿದೆ. ಯೋಗ ಮತ್ತು ಯೋಗಾಸಾನ ಬೇರೆ ಅಂತಾ ನಮ್ಮಗೆ ಗೊತ್ತಿರಲಿಲ್ಲ. ಯೋಗ ಮತ್ತು ಆಸನ ಒಟ್ಟಿಗೆ ಸೇರಿ ಯೋಗಾಸನವಾಗುತ್ತೆ. ಭಾರತದ ಒಟ್ಟು ಪದ್ದತಿಗಳಲ್ಲಿ ನಮ್ಮ ಭಾಷೆ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಜೀವನ ಪದ್ದತಿ. ಕಲೆ ಸಂಗೀತ ಹಲವು ದೇಶಗಳಿಗೆ ಮಾದರಿಯಾಗಿದೆ. ಸಾವಿರ ಸಾವಿರ ವರ್ಷಗಳ ಅತಿಕ್ರಮಣ ನಂತರವೂ ಭಾರತದ ಸಂಸ್ಕೃತಿ ಇಂದಿಗೂ ಉಳಿದಿದೆ. ಅದ್ರಲ್ಲಿ ಯೋಗ ಕೂಡಾ ಒಂದಾಗಿದೆ. ನಮ್ಮಲ್ಲಿ ಒಂದು ಮೋಹ ಇದೆ. ಭಾರತೀಯರು ಹೇಳಿದ್ರೆ ಕೆಲವರು ನಂಬಲ್ಲ. ಆದ್ರೆ ಅದು ಇಂಗ್ಲಿಷ್ ನಲ್ಲಿ ಬಂದ್ರೆ. ಪಾಶ್ಚಾತ್ಯರು ಹೇಳಿದಾಗ ನಾವು ನಂಬುತ್ತೇವೆ. ಪ್ರಾಣಾಯಾಮ, ಯೋಗಸಾನದ ಮೂಲಕ ನಾವೂ ಆರೋಗ್ಯವನ್ನ ಕಾಪಾಡಿಕೊಳ್ಳಬಹುದಾಗಿದೆ. ನಾವು ಕೋವಿಡನ್ನು ಸಹ ಪ್ರಾಣಾಯಾಮದ ಮೂಲಕ ಗೆದ್ದಿದ್ದೇವೆ. ಇಟಲಿಯಲ್ಲಿ ಒಬ್ಬರು ಮೂರು ನಿಮಿಷದ ಪ್ರಾಣಾಯಾಮವನ್ನ ಸತತವಾಗಿ ಮಾಡಿ ಕೊವಿಡ್ ನಿಂದ ಪಾರಾಗಿದ್ದಾರೆ. ಅದನ್ನ ಅವರು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:10 am, Tue, 21 June 22