ಮೈಸೂರು ಪ್ರವಾಸಿಗರ ಸ್ವರ್ಗ, ಸಾಂಸ್ಕೃತಿಕ ರಾಜಧಾನಿ. ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಮೈಸೂರು ಯೋಗದ ರಾಜಧಾನಿ ಎನ್ನುವ ವಿಷಯ ಬಹುತೇಕರಿಗೆ ಗೊತ್ತಿಲ್ಲ. ಮೈಸೂರು ಅಂದ ತಕ್ಷಣ ನಮ್ಮ ಕಣ್ಣಿನ ಮುಂದೆ ಬರುವುದು ವಿಶ್ವ ವಿಖ್ಯಾತ ಅರಮನೆ, ಅಪರೂಪದ ಮೃಗಾಲಯ, ನಾಡದೇವತೆ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟ, ವನ್ಯಜೀವಿಗಳ ಕಾನನ ಬಂಡೀಪುರ, ನಾಗರಹೊಳೆ, ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯ. ಆದರೆ ಯಾರಿಗೂ ಗೊತ್ತಿಲ್ಲದ ವಿಚಾರ ಅಂದರೆ ಮೈಸೂರಿನ ಯೋಗ ತರಬೇತಿ ಕೇಂದ್ರಗಳು. ಖಂಡಿತವಾಗಿಯೂ ಮೈಸೂರಿನ ಯೋಗ ಕೇಂದ್ರಗಳು (Mysuru Yoga) ಅತ್ಯಂತ ವಿಶೇಷವಾಗಿವೆ (International Yoga Day 2022).
ಯೋಗದ ಇತಿಹಾಸ
ಸಾಂಸ್ಕ್ರತಿಕ ನಗರಿ ಮೈಸೂರಿನ ಯೋಗಕ್ಕೆ ನೂರಾರು ವರ್ಷದ ಇತಿಹಾಸವಿದೆ. ಯೋಗವನ್ನು ಪ್ರೋತ್ಸಾಹಿಸಿ ಬೆಳೆಸಿದವರು ಮೈಸೂರಿನ ಯದುವಂಶದ ಅರಸರು. ಮೈಸೂರು ರಾಜ ಮನೆತನದ ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ರಚಿತ ವಿದ್ವತ್ಪೂರ್ಣ ಪುಸ್ತಕ ಶ್ರೀತತ್ತ್ವನಿಧಿಯಲ್ಲಿ ಯೋಗಾಸನದ 122 ಆಸನಗಳ ವಿವರಣೆಯನ್ನು ದಾಖಲಿಸಲಾಗಿದೆ. ಈ ಪುಸ್ತದ ಪ್ರಕಾರ ಮೈಸೂರು ಸಾಮ್ರಾಜ್ಯದಲ್ಲಿ ಯೋಗಕ್ಕೆ 225 ವರ್ಷಗಳಷ್ಟು ಹಿಂದಿನ ಪ್ರಾಚೀನ ಇತಿಹಾಸವಿರುವುದು ಸ್ಪಷ್ಟವಾಗುತ್ತದೆ.
ಅರಮನೆಯಲ್ಲಿ ಆರಂಭವಾದ ಯೋಗ
ಮೈಸೂರು ಅರಮನೆಯಲ್ಲಿ 1930 ರಲ್ಲಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ರಾಜಮನೆತನದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಯೋಗವನ್ನು ಕಲಿಸಬೇಕು ಎಂಬ ಮಹತ್ವದ ನಿರ್ಧಾರವನ್ನು ಕೈಗೊಂಡು ಯೋಗಶಾಲೆಯನ್ನು ಪ್ರಾರಂಭಿಸಿದರು. ಈ ಮೂಲಕ, ಯೋಗ ಶಿಕ್ಷಣ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದರು. ಮೈಸೂರು ಅರಮನೆಯಲ್ಲಿ ಯೋಗಶಾಲೆಯನ್ನು ಪ್ರಾರಂಭಿಸಿ ಯೋಗಾಭ್ಯಾಸವನ್ನು ಕಲಿಸುವ ಜವಾಬ್ದಾರಿಯನ್ನು ತಿರುಮಲೈ ಕೃಷ್ಣಮಾಚಾರ್ಯ ಅವರಿಗೆ ನೀಡಲಾಯಿತು. ಕೃಷ್ಣಮಾಚಾರ್ಯರನ್ನು ಆಧುನಿಕ ಯೋಗದ ಪಿತಾಮಹ ಎಂದು ಪರಿಗಣಿಸಲಾಗಿದೆ. ಅವರು ಅತ್ಯಂತ ಕ್ರಮಬದ್ದವಾಗಿ ಮೈಸೂರು ಅರಮನೆಯ ಯೋಗ ಶಾಲೆಯಲ್ಲಿ ಯೋಗವನ್ನು ಕಲಿಸಿದರು. ಅವರ ಶಿಸ್ತು ಶ್ರದ್ದೆ ಯೋಗದ ಬಗ್ಗೆ ಅವರ ಆಳವಾದ ಅಧ್ಯಯನವನ್ನು ಗುರುತಿಸಿದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಕೃಷ್ಣಮಾಚಾರ್ಯ ಅವರನ್ನು ಯೋಗದ ರಾಯಭಾರಿಯಾಗಿ ದೇಶದ ವಿವಿಧ ಭಾಗಗಳಿಗೆ ಕಳುಹಿಸಿದರು.
ಯೋಗದ ಪಿತಾಮಹ
ರಾಜಾಶ್ರಯವನ್ನು ಪಡೆದಿದ್ದ ಕೃಷ್ಣಮಾಚಾರ್ಯರು ಹಠ ಯೋಗವನ್ನು ಅಭಿವೃದ್ಧಿಪಡಿಸಿದರು ಮತ್ತು ಮೈಸೂರಿನಲ್ಲಿ ಮೊತ್ತ ಮೊದಲ ಹಠ ಯೋಗ ಶಾಲೆಯನ್ನು ಪ್ರಾರಂಭಿಸಿದರು. ಅವರ ಯೋಗ ಶಾಲೆಯ ಶಿಷ್ಯರಾಗಿದ್ದ ಅವರ ಮಗ ದೇಶಿಕಾಚಾರ್ ಅವರು ಯೋಗದಲ್ಲಿ ವಿನಿಯೋಗ ವಿಧಾನವನ್ನು ಅಭಿವೃದ್ಧಿಪಡಿಸಿದರು. ಬಿಕೆಎಸ್ ಅಯ್ಯಂಗಾರ್ ಎಂದೇ ಖ್ಯಾತಿ ಪಡೆದಿದ್ದ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಸಹಾ ಟಿ ಕೃಷ್ಣಮಾಚಾರ್ಯರ ಬಳಿಯೇ ಯೋಗವನ್ನು ಕಲಿತಿದ್ದು. ನಂತರ ಬಿಕೆಎಸ್ ಅಯ್ಯಂಗಾರ್ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಅಯ್ಯಂಗಾರ್ ಯೋಗವನ್ನು ಅಭಿವೃದ್ಧಿ ಪಡಿಸಿ ಪರಿಚಯಿಸಿದರು. ಮೈಸೂರಿನ ಇನ್ನೊಬ್ಬ ಯೋಗ ಗುರು ಅಂದರೆ ಅದು ಅಷ್ಟಾಂಗ ಯೋಗವನ್ನು ಅಭಿವೃದ್ಧಿಪಡಿಸಿದ ಯೋಗ ಗುರು ಕೆ ಪಟ್ಟಾಭಿ ಜೋಯಿಸ್ ಅವರ ಯೋಗವು ಇಂದು ಯೋಗ ಕಲಿಯುವ ಉತ್ಸಾಹಿಗಳಲ್ಲಿ ಜನಪ್ರಿಯವಾಗಿದೆ. ಹೀಗೆ ಈ ಯೋಗ ಗುರುಗಳು ಆರಂಭಿಸಿದ ಯೋಗ ಶಿಕ್ಷಣ ಇಂದು ದೊಡ್ಡ ಮಟ್ಟದಲ್ಲಿ ಮೈಸೂರಿಗೆ ಪ್ರಸಿದ್ದಿ ತಂದು ಕೊಟ್ಟಿದೆ.
ಆರೋಗ್ಯ ವೃದ್ದಿಗೆ ರಾಮಬಾಣ ಯೋಗ
ಜೀವನ ಶೈಲಿ ಸಂಬಂಧಿಸಿದ ಸಮಸ್ಯೆಗಳಿಗೆ ಯೋಗ ರಾಮಬಾಣ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಎಷ್ಟೋ ವಾಸಿಯಾಗದ ಆರೋಗ್ಯ ಸಮಸ್ಯೆಗಳನ್ನು ಯೋಗದ ಮೂಲಕ ವಾಸಿ ಮಾಡಿಕೊಂಡ ಉದಾಹರಣೆ ಹೆಚ್ಚಾಗಿವೆ. ಇದೇ ಕಾರಣಕ್ಕೆ ಇಂದು ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೆ ಕಾರಣಕ್ಕೆ ವಿದೇಶಿಗರು ಸೇರಿದಂತೆ ಹಲವರು ಮೈಸೂರಿನತ್ತ ಮುಖ ಮಾಡಿದ್ದಾರೆ. ಅಷ್ಟಾಂಗ ಯೋಗ, ಹಠಯೋಗ ಜೊತೆಗೆ, ಹತ್ತಾರು ಆಧುನಿಕ ಯೋಗ ತರಬೇತಿ ಸಂಸ್ಥೆಗಳು ಇಂದು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಸಾಂಪ್ರದಾಯಿಕ ಶೈಲಿಯ ಬೋಧನೆ
ಮೈಸೂರು ಯೋಗ ಕೇಂದ್ರದಲ್ಲಿ ಎರಡು ಪ್ರಮುಖವಾದ ಯೋಗ ಶಾಲೆಗಳು ಅಂದರೆ ಟಿ ಕೆ ಬಡಾವಣೆಯಲ್ಲಿರುವ ಭರತ್ ಶೆಟ್ಟಿಯವರ ಇಂಡಿಯಾ ಯೋಗ ಶಾಲೆ ಹಾಗೂ ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ನಡೆಸುತ್ತಿರುವ ಯೋಗ ಶಾಲೆ. ಈ ಎರಡು ಯೋಗ ಕೇಂದ್ರಗಳು ಯೋಗಕ್ಕೆ ಸಂಬಂಧಿಸಿದ ಇಲಾಖೆಗಳು ನಿರ್ದಿಷ್ಟಪಡಿಸಿರುವ ನಿಯಮಾವಳಿಗಳನ್ನು ಅನುಸರಿಸಿ, ಸರ್ಕಾರದಿಂದ ಮಾನ್ಯತೆ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಈ ಯೋಗ ಸಂಸ್ಥೆಗಳಲ್ಲಿ ದಶಕಗಳ ಕಾಲ ಬೋಧನಾ ಅನುಭವವನ್ನು ಹೊಂದಿರುವ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಯೋಗ ಕೇಂದ್ರಗಳು ಪಾರಂಪರಿಕ ಶೈಲಿಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ಸಹಜವಾಗಿ ವಿದೇಶಿಯರನ್ನು ಆಕರ್ಷಿಸುತ್ತಿದೆ. ಈ ಕಟ್ಟಡಗಳ ವಾಸ್ತು ಶಿಲ್ಪಗಳು ಮೈಸೂರು ಸಾಮ್ರಾಜ್ಯದ ಗತ ವೈಭವನ್ನು ಸಾರುತ್ತಾ ಯೋಗಾಸಕ್ತರನ್ನು ತನ್ನೆಡೆಗೆ ಸೆಳೆಯುತ್ತಿವೆ. ಇಲ್ಲಿನ ಯೋಗ ಶಿಕ್ಷಕರು ತಮ್ಮ ದೈನಂದಿನ ಜೀವನದಲ್ಲಿ ಯೋಗ ನಿಯಮಗಳನ್ನು ವೈಯಕ್ತಿಕವಾಗಿ ಅನುಸರಿಸುತ್ತಿದ್ದಾರೆ. ಯೋಗದ ಶಿಸ್ತನ್ನು ಅವರ ಜೀವನದಲ್ಲೂ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಇವರು ತಲೆಮಾರುಗಳಿಂದ ಯೋಗ ಬೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಈ ವೃತ್ತಿ ಅವರಿಗೆ ವಿಷಯ ಪರಿಣತಿಯನ್ನೂ ಹಾಗು ಯೋಗವನ್ನು ಕಲಿಸುವ ಸೂಕ್ಷ್ಮ ವಿಚಾರಗಳ ಮೇಲೆ ಸಾಕಷ್ಟು ಹಿಡಿತವನ್ನು ಸಾಧಿಸುವಂತೆ ಮಾಡಿದೆ.
ಕಡಿಮೆ ವೆಚ್ಚಕ್ಕೆ ಮೈಸೂರು ಸೂಕ್ತ
ಬೇರೆ ನಗರಗಳಿಗೆ ಹೋಲಿಸಿದರೆ ಜೀವನ ನಡೆಸಲು ಬೇಕಾಗುವ ಖರ್ಚಿನ ವೆಚ್ಚ ಮೈಸೂರು ನಗರದಲ್ಲಿ ಕಡಿಮೆ ಇದೆ. ಇದೇ ಕಾರಣಕ್ಕೆ ವಿದೇಶಿಯರು ಹಾಗೂ ಇತರ ಯೋಗಾಸಕ್ತರು ಮೈಸೂರಿಗೆ ಆಗಮಿಸುತ್ತಾರೆ. ಹೆಚ್ಚು ಹಣವನ್ನು ವ್ಯಯಿಸದೆ ಯೋಗವನ್ನು ಇಲ್ಲಿ ಸುಲಭವಾಗಿ ಕೈಗೆಟಕುವ ದರದಲ್ಲಿ ಕಲಿಯಬಹುದು. ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಕಡಿಮೆ ದರದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸಬಹುದು. ಇತರೆ ಮಹಾನಗರಗಳಿಗೆ ಹೋಲಿಸಿದಾಗ ಇಲ್ಲಿ ಸಂಚಾರ ದಟ್ಟಣೆ ಸಹಾ ಕಡಿಮೆ ಇದೆ. ಟ್ರಾಫಿಕ್ ಜಾಮ್ ಕಿರಿಕಿರಿ ಇಲ್ಲ. ವಿದ್ಯಾರ್ಥಿಗಳು ಇತರೆ ಯಾವುದೇ ಸಮಸ್ಯೆ, ಒತ್ತಡಗಳಿಲ್ಲದೆ ನಿಶ್ಚಿಂತೆಯಾಗಿ ಯೋಗವನ್ನು ಕಲಿಯಬಹುದು. ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವೂ ಇಲ್ಲಿ ದೊರೆಯುತ್ತದೆ. ಒಟ್ಟಿನಲ್ಲಿ ಗುಣಮಟ್ಟದ ಯೋಗ ಶಿಕ್ಷಣವನ್ನು ದೊಡ್ಡ ಮೊತ್ತದ ಫೀಸು, ಹಾಸ್ಟೆಲ್ ಫೀಸು ಇತರೆ ಫೀಸುಗಳ ಆತಂಕವಿಲ್ಲದೆ ಮೈಸೂರಿನಲ್ಲಿ ಕಲಿಯಬಹುದಾಗಿದೆ.
ಯೋಗ ಕಲಿಕೆ – ವಿದೇಶಿಗರು ಹೆಚ್ಚು
ಹೌದು ಭರತ್ ಶೆಟ್ಟಿ ಹಾಗೂ ಶರತ್ ಜೋಯಿಸ್ ಅವರು ನಡೆಸುತ್ತಿರುವ ಯೋಗ ಕೇಂದ್ರದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 54ಕ್ಕೂ ಹೆಚ್ಚು ದೇಶದ ಪ್ರಜೆಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ. ಬೆಳಗ್ಗೆ 4 ಗಂಟೆಗೆ ಆರಂಭವಾಗುವ ಯೋಗ ತರಬೇತಿ ರಾತ್ರಿ 9 ಗಂಟೆಯವರೆಗೂ ನಡೆಯುತ್ತದೆ. ಅತ್ಯಂತ ಶಿಸ್ತುಬದ್ದವಾಗಿ ಶ್ರದ್ದಾ, ಭಕ್ತಿಯಿಂದ ಇವರೆಲ್ಲಾ ಯೋಗವನ್ನು ಕಲಿಯುತ್ತಿದ್ದಾರೆ. ಇವರೆಲ್ಲರು ಇಲ್ಲಿ ಯೋಗ ಕಲಿತ ನಂತರ ಅದನ್ನು ತಮ್ಮ ದೇಶದ ಜನರಿಗೆ ಕಲಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಮೈಸೂರಿನ ಯೋಗವನ್ನು ಜಗತ್ತಿನಾದ್ಯಂತ ಪಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ಪ್ರಧಾನಿ ಯೋಗ…!
ಮೈಸೂರಿನ ಯೋಗದ ಇತಿಹಾಸಕ್ಕೆ ಮೆರಗು ತಂದುಕೊಟ್ಟಿರುವುದು ಈ ಬಾರಿಯ ಅಂತರಾಷ್ಟ್ರೀಯ ಯೋಗ. ಹೌದು ಈ ವರ್ಷ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮೈಸೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಯೋಗ ವಿದ್ಯೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮೈಸೂರು ನಗರ ನೀಡಿದ ಕೊಡುಗೆಗಾಗಿ ವಿಶ್ವ ಯೋಗ ದಿನಾಚರಣೆಯ ಪ್ರಧಾನ ಸಮಾರಂಭವನ್ನು ಇಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಇದು ಇಡೀ ವಿಶ್ವವೇ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿದೆ. ಈ ಮೂಲಕ, ಇದೆ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಪ್ರಧಾನಿ ಮೋದಿಯವರು ಯೋಗ ದಿನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಮೈಸೂರಿನ ಯೋಗ ನಗರಿ ಎಂಬ ಕಿರೀಟಕ್ಕೆ ಹೊಸ ಗರಿ ಇದಾಗಿದೆ.
ಶರತ್ ಜೋಯಿಸ್ – ಯೋಗ ಗುರು, ಪಟ್ಟಾಭಿ ಜೋಯಿಸ್ ಮೊಮ್ಮಗ
ಯೋಗದ ಆರಂಭ ಆಸನಗಳಿಂದ ಆರಂಭವಾಗಿ ಮೆಡಿಟೇಸನ್ ಸೇರಿ ಹಲವು ಪ್ರಾಕಾರಗಳನ್ನು ಹೊಂದಿದೆ. ಯೋಗದ ಮೂಲಕ ಹತ್ತು ಹಲವು ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ನನ್ನ ಬಳಿ ಆರೋಗ್ಯದ ಸಮಸ್ಯೆಯಿಂದ ಬಂದ ಹಲವರು ಯೋಗದ ಮೂಲಕ ಅದಕ್ಕೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಈ ಯೋಗವನ್ನು ಉಳಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಮೈಸೂರಿನಲ್ಲಿ ಒಂದು ಯೋಗ ವಿವಿ ಮಾಡಬೇಕು. ಈ ಮೂಲಕ ಯೋಗವನ್ನು ಉಳಿಸಿ ಬೆಳೆಸಬಹುದಾಗಿದೆ.
ಭರತ್ ಶೆಟ್ಟಿ – ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಶಿಷ್ಯ
ಇಂದು ಯೋಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ಆದರೂ ಅದರ ಬೇರುಗಳಿರುವುದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಆದ್ದರಿಂದ ಮೈಸೂರಿನ್ನು ಯೋಗದ ಹಬ್ ಮಾಡಬೇಕು. ಮೈಸೂರಿನಲ್ಲಿ ಒಂದು ಯೋಗ ಗ್ರಾಮ ಮಾಡಿದರೆ ಎಲ್ಲಾ ಪ್ರಾಕಾರದ ಯೋಗವನ್ನು ಒಂದೇ ಕಡೆ ಕಲಿಸುವ ಕೆಲಸ ಮಾಡಬಹುದಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮೈಸೂರಿಗೆ ಯೋಗ ಕಾರ್ಯಕ್ರಮಕ್ಕೆ ಬರುತ್ತಿರುವುದು ನಮ್ಮ ಯೋಗ. ಅವರ ಈ ಭೇಟಿಯ ಮೂಲಕವಾದರೂ ಯೋಗ ಗ್ರಾಮದ ಕನಸು ನನಸಾಗಲಿ ಅನ್ನೋದೆ ನಮ್ಮ ಆಶಯ.
ಇದು ಮೈಸೂರಿನ ಯೋಗ ಪರಂಪರೆ ಇತಿಹಾಸ. ರಾಜರ ಕಾಲದಲ್ಲಿ ಆರಂಭವಾದ ಯೋಗ ಇಂದು ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ. ಮುಂದೆ ಇದು ಮತ್ತಷ್ಟು ಪ್ರಜ್ವಲಿ ಸುವದರಲ್ಲಿ ಯಾವುದೇ ಅನುಮಾನವಿಲ್ಲ. ಯೋಗದ ಜೊತೆ ನಮ್ಮ ನಾಡಿನ ಕೀರ್ತಿ ಪತಾಕೆಯೂ ಉತ್ತುಂಗಕ್ಕೇರಲಿ ಅನ್ನೋದೆ ನಮ್ಮ ಹಾರೈಕೆ.
– ರಾಮ್, ಟಿವಿ9, ಮೈಸೂರು