ಜೂನ್ 20ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮನ; ಅರಮನೆಗೆ ಮೂರು ದಿನ ಪ್ರವೇಶ ನಿರ್ಬಂಧ
ಮೈಸೂರು ಪ್ರತಿ ರಸ್ತೆಯಲ್ಲೂ ಪೊಲೀಸರಿಂದ ಸರ್ಪಗಾವಲು ಮಾಡಲಾಗಿದದ್ದು, ಮೋದಿ ವಾಸ್ತವ್ಯ ಹೂಡುವ ಹೊಟೇಲ್ ಸುತ್ತಮುತ್ತ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮೈಸೂರು: ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (International Yoga Day) ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಬಾರಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಒಂದು ದಿನ ಮೊದಲು ಅಂದರೆ ಸೋಮವಾರ ರಾತ್ರಿ 8ಗಂಟೆ 10 ನಿಮಿಷಕ್ಕೆ ಸರಿಯಾಗಿ ಪ್ರಧಾನಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಜೂ 19ರಿಂದ ಜೂ 21ರವರೆಗೆ ಅರಮನೆಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಹಾಗೇ, ಜಿಲ್ಲೆಯ ಪ್ರತಿ ರಸ್ತೆಯಲ್ಲೂ ಪೊಲೀಸರಿಂದ ಸರ್ಪಗಾವಲು ಮಾಡಲಾಗಿದದ್ದು, ಮೋದಿ ವಾಸ್ತವ್ಯ ಹೂಡುವ ಹೋಟೆಲ್ ಸುತ್ತಮುತ್ತ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಅರಮನೆಗೆ ಮೂರು ದಿನ ಪ್ರವೇಶ ನಿರ್ಬಂಧ ಹೇರುವ ಕುರಿತು ಮಾಹಿತಿ ನೀಡಿದ ಅರಮನೆ ಆಡಳಿತ ಮಂಡಳಿ ನಿರ್ದೇಶಕ ಟಿ ಎಸ್ ಸುಬ್ರಮಣ್ಯ, ಜೂ 19ರಿಂದ ಜೂ 21ರವರೆಗೆ ನಿರ್ಬಂಧ ಹೇರಲಾಗಿದೆ. ಜೂ. 21ರ ಮಧ್ಯಾಹ್ನ 12 ಗಂಟೆಯವರೆಗೂ ನಿರ್ಬಂಧ ಇರುತ್ತದೆ. ಇಂದಿನಿಂದ ಜೂ. 22ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ ಆಗಮಿಸುವ ಮೋದಿ ನೇರವಾಗಿ ರ್ಯಾಡಿಸನ್ ಬ್ಲೂ ಹೊಟೇಲ್ಗೆ ಬಂದು ತಂಗುತ್ತಾರೆ. ರಾತ್ರಿ ವಿಶ್ರಾಂತಿ ಪಡೆದು ಮರುದಿನ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾಗುತ್ತಾರೆ. ಇನ್ನು ಪ್ರಧಾನಿ ಮೋದಿ ವಾಸ್ತವ್ಯ ಹೂಡುತ್ತಿರುವುದರಿಂದ ಸಿಬ್ಬಂದಿ ಹೊಟೇಲ್ನ ಬುಕಿಂಗ್ ಕ್ಲೋಸ್ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಹೊಟೇಲ್ಗೆ ಯಾರ ಪ್ರವೇಶವೂ ಇಲ್ಲ. ಮೋದಿ ಬರುವ 2 ದಿನ ಹಿಂದೆಯೇ ಜಿಲ್ಲಾಡಳಿತ ಹೊಟೇಲ್ ಬುಕಿಂಗ್ ಬಂದ್ ಮಾಡಿದೆ.
ಇದನ್ನೂ ಓದಿ: What India Thinks Today: ಅಗ್ನಿಪಥ್ ಯೋಜನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದೇನು?
ಮೋದಿ ಜೊತೆ ವೇದಿಕೆ ಹಂಚಿಕೊಳ್ಳುತ್ತಾರೆ ಯದುವೀರ್ ಒಡೆಯರ್: ಮೋದಿ ಅವರ ಜೊತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪ್ರಮೋದದೇವಿ ಒಡೆಯರ್ ವೇದಿಕೆ ಹಂಚಿಕೊಳ್ಳುತ್ತಾರೆ. ಈ ವೇಳೆ ಸಿಎಂ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಹಾಗೂ ಕೇಂದ್ರ ಆಯುಷ್ ಮಂತ್ರಿಗಳು ವೇದಿಕೆಯಲ್ಲಿ ಭಾಗಿಯಾಗಲಿದ್ದಾರೆ. ಯೋಗದ ನಂತರ ಮೈಸೂರು ಅರಮನೆಯಲ್ಲಿ ಮೋದಿ ಹಾಗೂ ಗಣ್ಯರಿಗೆ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಮೋದಿಗೆ ಮೈಸೂರು ಪಾಕ್ ತಯಾರಿ: ಮೈಸೂರಿನ ಕಲೆ, ಸಂಸ್ಕೃತಿ ತಿಳಿಸಲು ಮೈಸೂರು ಜನರು ಮುಂದಾಗಿದ್ದಾರೆ. ಗುರು ಸ್ವೀಟ್ ಮಾಲೀಕರು ಮೋದಿಗೆಂದು ಮೈಸೂರು ಪಾಕ್ ತಯಾರಿಸುತ್ತಿದ್ದಾರೆ. ಮೈಸೂರಿನಲ್ಲಿ ಮೈಸೂರು ಪಾಕ್ ವಿಶೇಷವಾದ ಸಿಹಿ ತಿಂಡಿ. ರಾಜರ ಕಾಲದಲ್ಲಿ ಮೈಸೂರು ಪಾಕ್ ತಯಾರಾಗುತ್ತಿತ್ತು. ಕಾಕಾಸುರ ಮಾದಪ್ಪ ಎಂಬುವವರು ಪಾಕದಿಂದ ಸಿಹಿ ತಿನಿಸು ಮಾಡಿದ್ದರು. ಅದಕ್ಕೆ ಮೈಸೂರು ಪಾಕ್ ಅಂತಾ ಕೃಷ್ಣರಾಜ ಒಡೆಯರ್ ಹೆಸರು ನೀಡಿದ್ದರು. ಇಂದಿಗೂ ಕಾಕಾಸುರ ಮಾದಪ್ಪ ಕುಟುಂಬ ಮೈಸೂರು ಪಾಕ್ ತಯಾರಿಸುತ್ತಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Sat, 18 June 22