ಬೆಂಗಳೂರು, ಜುಲೈ 31: ಎಸ್ಎಸ್ಎಲ್ಸಿ (SSLC) ಮತ್ತು ದ್ವಿತೀಯ ಪಿಯುಸಿಯಲ್ಲಿ (2nd PUC) ಅನುತ್ತೀರ್ಣರಾದ ವಿದ್ಯಾರ್ಥಿಗಳು ಇಷ್ಟಪಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಅದೇ ತರಗತಿಗಳಿಗೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ರಾಜ್ಯ ಪಠ್ಯಕ್ರಮದ ತರಗತಿ ವಿದ್ಯಾರ್ಥಿಗಳು ಇಷ್ಟಪಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಯಾವುದೇ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ಅದೇ ತರಗತಿಗಳಿಗೆ ಮತ್ತೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದರು.
ಪ್ರತಿ ವರ್ಷ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಅಂತ ಈ ವಿಶೇಷ ಸೌಲಭ್ಯ ನೀಡಲಾಗಿದೆ. ರೆಗ್ಯುಲರ್ ವಿದ್ಯಾರ್ಥಿಗೆ ಸಿಗುವ ಎಲ್ಲ ಅನೂಕೂಲ ಈ ವಿದ್ಯಾರ್ಥಿಗಳಿಗೆ ಸಿಗುತ್ತೆ ಎಂದು ಹೇಳಿದರು.
ನನ್ನ ಇಲಾಖೆ ಅಡಿಯಲ್ಲಿ 46 ಸಾವಿರ ಶಾಲೆಗಳು ಹಾಗೂ ಕಾಲೇಜು ಬರುತ್ತವೆ. ಇದರಲ್ಲಿ 15 ಸಾವಿರ ಅನುದಾನಿತ ಶಾಲೆಗಳಿವೆ. 42 ಸಾವಿರ ಅತಿಥಿ ಶಿಕ್ಷಕರು ನೇಮಕ ಮಾಡಿದ್ದೇವೆ. 13,500 ಸಾವಿರ ಖಾಯಂ ಶಿಕ್ಷಕರ ನೇಮಕ ಮಾಡಿದ್ದೇವೆ. 11,400 ಸಾವಿರ ಜನರಿಗೆ ಖಾಯಂ ನೇಮಾತಿಯಾಗಿದೆ. 53 ಸಾವಿರ ಖಾಯಂ ಶಿಕ್ಷಕರ ನೇಮಕಾತಿಯಾಗಬೇಕಿದೆ. ಕಳೆದ 9 ವರ್ಷಗಳಲ್ಲಿ ಅನುದಾನಿತ ಶಾಲೆಗೆ ಒಬ್ಬ ಶಿಕ್ಷರನ್ನು ನೇಮಕ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಅನುದಾನಿತ ಶಾಲೆಗಳಿಗೆ 5 ಸಾವಿರ ಶಿಕ್ಷಕರ ನೇಮಕಾತಿ ಆಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪರಿಷ್ಕರಣೆಯಾಗುತ್ತಾ ಶಾಲಾ ಪಠ್ಯ ಪುಸ್ತಕ? ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು
ಅನುದಾನಿತ ಶಾಲೆಯ ಎಲ್ಲ ಹುದ್ದೆಗಳಿಗೂ ಮುಂದಿನ ಐದು ವರ್ಷಗಳಲ್ಲಿ ಖಾಯಂ ಶಿಕ್ಷಕರ ನೇಮಕಾತಿ ಆಗಲಿದೆ. ಅನುದಾನಿತ ಕನ್ನಡ ಮಾಧ್ಯಮ ಶಾಲೆ ಉಳಿಸಬೇಕಾಗಿದೆ. ಒಳ್ಳೆಯ ಶಿಕ್ಷಕರು ಇರುವುದು ಕನ್ನಡ ಮಾಧ್ಯಮ ಶಾಲೆಗಳಲ್ಲಿ. 8, 9, 10ನೇ ತರಗತಿ ಮಕ್ಕಳಿಗೆ ಮರು ಸಿಂಚನ (ವಿಶೇಷ ವಿಜ್ಞಾನ) ತರಗತಿ ಮಾಡಲಾಗುತ್ತಿದೆ. ಒಟ್ಟು 8 ಲಕ್ಷ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದರೆ.
12.50 ಕೋಟಿ ರೂ. ಅನುದಾನದಲ್ಲಿ 25 ಲಕ್ಷ ಮಕ್ಕಳಿಗೆ ನೀಟ್ ತರಬೇತಿ ನೀಡಲಾಗುತ್ತದೆ. ಬಡ ಮಕ್ಕಳ ಎಂಜನೀಯರಿಂಗ್ ಹಾಗೂ ವೈದ್ಯಕೀಯ ಕನಸ್ಸು ನನಸು ಮಾಡುವ ಉದ್ದೇಶವಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ. ಸಿಇಟಿ ತರಬೇತಿ ಕೂಡ ನೀಲಾಗುತ್ತದೆ ಎಂದರು.
ಅಂಗನವಾಡಿಯಲ್ಲೇ ಎಲ್ ಕೆಜಿ ಯುಕೆಜಿ ಪ್ರಾರಂಭ ಮಾಡಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಕಲ್ಯಾಣ ಕರ್ನಾಟಕದಲ್ಲಿಯೇ 1008 ಸಾವಿರ ಎಲ್ಕೆಜಿ ಹಾಗೂ ಯುಕೆಜಿ ನರ್ಸರಿ ತೆರೆಯಲಾಗುತ್ತದೆ. ಈಗಾಗಲೇ 30 ಸಾವಿರ ಮಕ್ಕಳು ದಾಖಲಾತಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಶಾಲೆಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದೇವೆ. ರಾಗಿ ಮಾರ್ಟ್ ಕೊಡುತ್ತಿದ್ದೇವೆ. ಹಾಲು ಕುಡಿಯೋಕೆ ಕಷ್ಟ ಆಗುತ್ತಿತ್ತು. ಈಗ ಆ ಸ್ಥಿತಿ ಇಲ್ಲ. ಅಜೀಂ ಪ್ರೇಮ್ ಜೀ ಮೊಟ್ಟೆ ಕೊಡಲು 1,500 ಕೋಟಿ ರೂ. ಕೊಟ್ಟಿದ್ದಾರೆ. ಆಗಸ್ಟ್ 15ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ. ಸೆಪ್ಟೆಂಬರ್ನಿಂದ ವಾರದ ಎಲ್ಲ ದಿನ ಮೊಟ್ಟೆ ಕೋಡಲು ಚಿಂತಿಸಲಾಗುತ್ತಿದೆ. ಮುಂದೆ ಅವರ ಹಣ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಆದರ್ಶ ಶಾಲೆಗಳಲ್ಲಿ ಪಿಯು ಕಾಲೇಜ್ ತೆರೆಯಲು ಅನುಮತಿ ನೀಡಲಾಗಿದೆ. ಇದರಿಂದ ಕಾಲೇಜು ಕೊರತೆ ನೀಗಿಸಲು ತೀರ್ಮಾನ ಮಾಡಿದ್ದೇವೆ. ತಿಂಗಳದ ಮೂರನೇ ಶನಿವಾರ ಬ್ಯಾಗ್ ಲೆಸ್ ಡೇ ಇರುತ್ತದೆ. ಶಿಕ್ಷಕರು ಕಡ್ಡಾಯವಾಗಿ ಇದನ್ನು ಪಾಲಿಸಬೇಕು, ಬ್ಯಾಗ್ ಲೆಸ್ ಮಾಡದೆ ಇದ್ದರೆ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ. ಬ್ಯಾಗ್ ಹೊರೆ ಕಡಿಮೆ ಮಾಡಲು ಪಾರ್ಟ್ – 1 ಪಾರ್ಟ್ – 2 ಅಂತ ಪಠ್ಯಕ್ರಮ ವಿಭಾಗ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Wed, 31 July 24