ಬೆಳಗಾವಿ: ಒಂದೇ ಕುಟುಂಬದ 19 ಮಂದಿಗೆ ಕೊರೊನಾ ಪಾಸಿಟಿವ್ ವರದಿಯಾಗಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿಯಲ್ಲಿ ವರದಿಯಾಗಿದೆ. ಬಾವನಸೌಂದತ್ತಿ ಗ್ರಾಮದಲ್ಲಿ 19 ಜನರಿಗೆ ಕೊರೊನಾ ದೃಢಪಟ್ಟಿದೆ. ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಕೊರೊನಾ ವಕ್ಕರಿಸಿದೆ. ನಿನ್ನೆ ಕುಟುಂಬದ ಐವರಿಗೆ ಕೊರೊನಾ ದೃಢವಾಗಿತ್ತು. ಇಂದು ಒಂದೇ ದಿನ 14 ಜನರಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ.
ಇದೀಗ, ಕುಟುಂಬದ 47 ಜನರ ಪೈಕಿ 19 ಮಂದಿಗೆ ಕೊರೊನಾ ವೈರಸ್ ವಕ್ಕರಿಸಿದೆ. ಹಾಗಾಗಿ, ಗ್ರಾಮದ 353 ಜನರಿಗೆ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಜೊತೆಗೆ, ಕೊರೊನಾ ಹಿನ್ನೆಲೆಯಲ್ಲಿ ಬಾವನಸೌಂದತ್ತಿ ಗ್ರಾಮದ ಸಂತೆಯನ್ನು ರದ್ದುಪಡಿಸಲಾಗಿದೆ.
ಇದೀಗ, ಇಡೀ ಗ್ರಾಮಕ್ಕೆ ಕೊರೊನಾತಂಕ ಎದುರಾಗಿದೆ. ಸದ್ಯ, ಐದು ಜನರಿಗೆ ರಾಯಬಾಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ 14ಮಂದಿಗೆ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಜ್ವರ, ಶೀತ ಲಕ್ಷಣಗಳಿದ್ದವರಿಗೆ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಇವರಿಗೆ ಮನೆಯಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ಜೊತೆಗೆ, ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 60ಕ್ಕೂ ಅಧಿಕ ಜನರಿಗೆ ಅಕ್ಕಪಕ್ಕದ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಇದೀಗ, ಒಂದು ಕುಟುಂಬದ 14 ಜನರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಬಾವನಸೌಂದತ್ತಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠರಿಂದ ಘೋಷಣೆಯಾಗಿದೆ.
ಮೊದಲು ಒಂದೇ ಕುಟುಂಬದ ಐವರಿಗೆ ವೈರಸ್ ದೃಢಪಟ್ಟಿತ್ತು. ಸೋಂಕಿತ ಕುಟುಂಬದವರು ಮಹಾರಾಷ್ಟ್ರಕ್ಕೆ ಹೋಗಿ ಬರ್ತಿದ್ರು. ಬಾವನಸೌಂದತ್ತಿ ಗ್ರಾಮದ 250 ಜನರ ಸ್ಯಾಂಪಲ್ ಪಡೆದಿದ್ದೆವು. RTPCR ಟೆಸ್ಟ್ನಲ್ಲಿ 14 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕರ್ನಾಟಕ ಗಡಿಯಲ್ಲಿ ತಪಾಸಣೆ ಮಾಡದೆ ನಿರ್ಲಕ್ಷ್ಯ ಎಸಗಿದ ವಿಚಾರವಾಗಿ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಮುತುವರ್ಜಿ ವಹಿಸುತ್ತೇವೆ. ನಾವು ದಿನಕ್ಕೆ 500 ಕೇಸ್ ಬಂದಾಗಲೂ ನಿಭಾಯಿಸಿದ್ದೆವು. 14 ಕೇಸ್ ಬಂದಾಗ ನಿಭಾಯಿಸುವುದು ದೊಡ್ಡ ಮಾತೇನಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿ
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದೆ. ಮಾ.31ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ನೀಡಿದೆ. ರಾತ್ರಿ 8ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಾಗಿದೆ. ಮಾ.31ರವರೆಗೂ ಮಾರುಕಟ್ಟೆಗಳನ್ನು ತೆರೆಯದಂತೆ ಆದೇಶ ಹೊರಡಿಸಲಾಗಿದೆ. ಜೊತೆಗೆ, ಕೇವಲ ಅಗತ್ಯವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿರುತ್ತೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ‘ಅಸ್ಸಾಂ ಲೇಡಿ’ಗಾಗಿ ಹುಡುಗರ ಗ್ಯಾಂಗ್ ವಾರ್.. ಗಲಾಟೆಯಲ್ಲಿ ಮಹಿಳೆಗೂ ಬಿತ್ತು ಎರಡು ಗೂಸಾ!
Published On - 7:40 pm, Sun, 14 March 21