
ಮಂಗಳೂರು, ಮೇ 22: ಅವರೆಲ್ಲಾ ಅಂದು ನೂರಾರು ಕನಸು ಹೊತ್ತು ತಾಯ್ನಾಡಿಗೆ ಮರಳುತ್ತಿದ್ದರು. ಇನ್ನೇನು ತಮ್ಮ ಗೂಡು ಸೇರಿಕೊಳ್ಳಬೇಕು ಎನ್ನುವ ಹೊತ್ತಲ್ಲೇ ಭೀಕರ ದುರಂತವೊಂದು ನಡೆದು ಹೋಗಿತ್ತು. ಬೆಳ್ಳಂಬೆಳಗ್ಗೆಯೇ 158 ಮಂದಿ ಸಜೀವವಾಗಿ ದಹನವಾಗಿದ್ದರು. ಕರಾವಳಿಗರನ್ನ ಸದಾ ಕಾಡುತ್ತಿರುವ ಮಂಗಳೂರು ವಿಮಾನ ದುರಂತ (plane crash) ನಡೆದು ಇಂದಿಗೆ 14 ವರ್ಷವಾಗಿದೆ. ಆದರೆ ಆ ದುರಂತದ ಕಹಿ ನೆನಪು ಮಾತ್ರ ಇನ್ನು ಮಾಸಿಲ್ಲ.
2010ರ ಮೇ 22 ರಂದು ಬೆಳಗ್ಗೆ 6 ಗಂಟೆ 16 ನಿಮಿಷಕ್ಕೆ ಸುಮಾರು 166 ಮಂದಿಯನ್ನ ಹೊತ್ತು ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ IX 812 ವಿಮಾನ ಇನ್ನೇನು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಪೈಲಟ್ ಮಾಡಿದ ಸಣ್ಣ ಎಡವಟ್ಟಿನಿಂದಾಗಿ ದೊಡ್ಡ ಅನಾಹುತ ನಡೆದು, ವಿಮಾನ ರನ್ ವೇ ಕೊನೆಯಲ್ಲಿ ಪ್ರಪಾತಕ್ಕೆ ಉರುಳಿತ್ತು. ನೋಡ ನೋಡುತ್ತಿದ್ದಂತೆಯೇ ವಿಮಾನದಲ್ಲಿದ್ದ 158 ಮಂದಿ ಸಜೀವವಾಗಿ ದಹನವಾಗಿದ್ದರೆ, 8 ಮಂದಿ ಅದೃಷ್ಟವಶಾತ್ ಬದುಕುಳಿದಿದ್ದರು.
ಇದನ್ನೂ ಓದಿ: Mangalore Air Accident Anniversary: ಮಂಗಳೂರು ವಿಮಾನ ದುರಂತಕ್ಕೆ 13 ವರ್ಷ, ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ
ವಿಮಾನ ದುರಂತ ನಡೆದು ಬರೋಬ್ಬರಿ 14 ವರ್ಷಗಳೇ ಕಳೆದಿದೆ. ಆದರೆ ದುರಂತದ ಕಹಿ ನೆನಪನ್ನ ಮರೆಯೋದಕ್ಕೆ ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ಹೀಗಾಗಿ ದುರಂತ ನಡೆದ ದಿನವಾದ ಇಂದು ದುರಂತದಲ್ಲಿ ಮಡಿದ 158 ಮಂದಿಗೆ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು. ಮೃತರ ನೆನಪಿಗಾಗಿ ಮಂಗಳೂರು ನಗರದ ಕುಳೂರು ತಣ್ಣೀರುಬಾವಿ ರಸ್ತೆ ಬಳಿ ನಿರ್ಮಿಸಿರುವ ಸ್ಮಾರಕ ಬಳಿ ಜಿಲ್ಲಾಡಳಿತ, ವಿಮಾನನಿಲ್ದಾಣ ಪ್ರಾಧಿಕಾರ, ಎನ್.ಎಂ.ಪಿ.ಎ ಅಧಿಕಾರಿಗಳು ಮೃತರಾದವರಿಗೆ ಗೌರವ ಸಲ್ಲಿಸಿದ್ದರು. ಮೌನ ಪ್ರಾರ್ಥನೆ ಮಾಡಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.
ಈ ವಿಮಾನ ದುರಂತದಲ್ಲಿ ಮಡಿದ 158 ಮಂದಿಯಲ್ಲಿ 12 ಮಂದಿಯ ಗುರುತನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಆ 12 ಮೃತದೇಹಗಳನ್ನು ಇದೇ ಕುಳೂರು ತಣ್ಣೀರುಬಾವಿ ರಸ್ತೆ ಬಳಿ ನಿರ್ಮಾಣ ಮಾಡಿರುವ ಸ್ಮಾರಕದ ಬಳಿ ಜಿಲ್ಲಾಡಳಿತದ ವತಿಯಿಂದ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿತ್ತು. ಹೀಗಾಗಿ ಕಳೆದ ಹದಿನಾಲ್ಕು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಮೇ 22 ರಂದು ಪ್ರತಿವರ್ಷ ಶ್ರದ್ಧಾಂಜಲಿ ಸಲ್ಲಿಸಲಾಗುತ್ತೆ.
ಇದನ್ನೂ ಓದಿ: ಏರ್ಇಂಡಿಯಾ ವಿಮಾನದಿಂದ ಕೆಳಗೆ ಹಾರುತ್ತೇನೆ ಎಂದು ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನ
ಇಂದು ಕೂಡ ಘಟನೆಯ ಕಹಿ ನೆನಪಿಗೆ ಹದಿನಾಲ್ಕು ವರ್ಷ ಆದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಇನ್ನು ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಹನ್ನೆರಡು ಮಂದಿಯಲ್ಲಿ ಒಬ್ಬರ ಕುಟಂಬ ಸದಸ್ಯರು ಸಹ ಇವತ್ತಿನ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಳೆದುಕೊಂಡ ಕುಟುಂಬ ಸದಸ್ಯನನ್ನು ನೆನೆದು ಭಾವುಕರಾದರು.
ಈ ವಿಮಾನ ದುರಂತದ ಕಹಿ ಘಟನೆಯನ್ನು ಇಂದಿಗೂ ಯಾರಿಗೂ ಮರೆಯುವುದಕ್ಕೆ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಮಡಿದ ಜೀವಗಳಿಗಾಗಿ ನಿರ್ಮಿಸಿರುವ ಈ ಸ್ಮಾರಕ ಇಂದು ಕೂಡಾ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.