ಏಷ್ಯಾದ ಅತಿ ದೊಡ್ಡ ಮಾವು ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ ಆರಂಭ; ಪ್ರತಿ ದಿನ ಸಾವಿರಾರು ಟನ್‌ ವಹಿವಾಟು

ಹಣ್ಣುಗಳ ರಾಜ ಅಂದ್ರೆ ಅದು ಮಾವಿನ ಹಣ್ಣು. ಮಾವಿನ ಹಣ್ಣು ನೆನಪಿಸಿಕೊಂಡ್ರೆ ಸಾಕು ಬಾಯಲ್ಲಿ ನೀರು ಬಾರದಿರದು. ಈಗ ಮಾವಿನ ಹಣ್ಣಿನ ಸುಗ್ಗಿ ಕಾಲ ಬಂದಿದ್ದು, ಮಾವಿನ ನಗರಿ ಶ್ರೀನಿವಾಸಪುರದಲ್ಲಿ ವಿಧ ವಿಧವಾದ ಮಾವು ಮಾರುಕಟ್ಟೆಯತ್ತ ಲಗ್ಗೆಯಿಡುತ್ತಿದೆ. ಬರದಿಂದ ಫಸಲು ಕಡಿಮೆಯಾದ ಹಿನ್ನೆಲೆ ಹಣ್ಣುಗಳ ರಾಜನಿಗೆ ಡಿಮ್ಯಾಂಡ್ ಜೋರಾಗಿದೆ.

ಏಷ್ಯಾದ ಅತಿ ದೊಡ್ಡ ಮಾವು ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ ಆರಂಭ; ಪ್ರತಿ ದಿನ ಸಾವಿರಾರು ಟನ್‌ ವಹಿವಾಟು
ಏಷ್ಯಾದ ಅತಿ ದೊಡ್ಡ ಮಾವು ಮಾರುಕಟ್ಟೆ ಶ್ರೀನಿವಾಸಪುರದಲ್ಲಿ ಮಾವು ಸುಗ್ಗಿ ಆರಂಭ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:May 22, 2024 | 7:09 PM

ಕೋಲಾರ, ಮೇ. 22: ಜಿಲ್ಲೆಯ ಮಾವಿನ ನಗರಿಯೆಂದು ಪ್ರಸಿದ್ದಿ ಪಡೆದಿರುವ ಶ್ರೀನಿವಾಸಪುರ(Srinivaspur)ದಲ್ಲಿ ಇನ್ನೇನಿದ್ದರೂ 2 ತಿಂಗಳ ಕಾಲ ಹಣ್ಣುಗಳ ರಾಜ ಮಾವಿನ(Mango) ಸುಗ್ಗಿಯನ್ನು ಕಾಣಬಹುದಾಗಿದೆ. ಏಷ್ಯಾದಲ್ಲಿಯೇ ಅತೀ ದೊಡ್ಡ ಮಾವಿನ ಮಾರುಕಟ್ಟೆಯಾಗಿರುವ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಈಗ ತನ್ನ ವಹಿವಾಟು ಆರಂಭಿಸಿದೆ. ಈ ಎಪಿಎಂಸಿ ಮಾರುಕಟ್ಟೆ ಮಾವಿನ ವಹಿವಾಟಿನಲ್ಲಿ ವಿಶ್ವಪ್ರಸಿದ್ದ ಪಡೆದಿದ್ದು, ಪ್ರತಿ ದಿನ ಸಾವಿರಾರು ಟನ್‌ ಮಾವಿನ ವಹಿವಾಟು ನಡೆಯುತ್ತಿದೆ. ಇನ್ನು ಈ ಬಾರಿ ಬರ ಎದುರಾದ ಹಿನ್ನೆಲೆ ಮರಗಳಲ್ಲಿ ಮಾವು ಇಲ್ಲ, ಶೇ.15 ರಿಂದ 20 ರಷ್ಟು ಮಾವು ಮಾತ್ರ ಈ ಬಾರಿ ರೈತರಿಗೆ ಸಿಕ್ಕಿದೆ. ಪರಿಣಾಮ ಮಾವು ಈ ಬಾರಿ ದುಬಾರಿಯಾಗಿದ್ದು, ಮರುಕಟ್ಟೆಗೆ ಲಗ್ಗೆ ಇಟ್ಟಿದೆ.

10 ಕ್ಕೂ ಹೆಚ್ಚು ಬಗೆಯ ಮಾವು ಮಾರಾಟ

ಇನ್ನು ಕೋಲಾರ ಜಿಲ್ಲೆಯೊಂದರಲ್ಲಿಯೇ ಅಧೀಕೃತವಾಗಿ 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಹಾಗಾಗಿ ವಿವಿಧ ರಾಜ್ಯಗಳು, ದೇಶ-ವಿದೇಶಗಳಿಗೂ ಮಾವಿನ ಹಣ್ಣು ರಪ್ತು ಮಾಡಲಾಗುತ್ತದೆ. ಇದರಲ್ಲಿ ನಾನಾ ಬಗೆಯ ಅಂದ್ರೆ 10 ಕ್ಕೂ ಹೆಚ್ಚು ಬಗೆಯ ತೋತಾಪುರಿ, ರಸಪುರಿ, ಬೇನಿಶಾ, ಅಲ್ಫಾನ್ಸೋ, ಮಲ್ಲಿಕಾ, ಸಕ್ಕರೆಗುಟ್ಲಿ, ಬಾದಾಮಿ, ಸೇಂದುರಾ, ನೀಲಂ ನಂತಹ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುವುದು ವಿಶೇಷ.

ಇದನ್ನೂ ಓದಿ:ಧಾರವಾಡದಲ್ಲಿ ಮಾವು ಮೇಳ ಆರಂಭ; ಇಲ್ಲಿವೆ ವಿವಿಧ ಬಗೆಯ ಹಣ್ಣುಗಳು

ಎರಡು ತಿಂಗಳಲ್ಲಿ ಅಂದಾಜು ಎರಡು ಸಾವಿರ ಕೋಟಿಯಷ್ಟು ವ್ಯಾಪಾರ ವಹಿವಾಟು

ಕೋಲಾರ ಜಿಲ್ಲೆಯಲ್ಲಷ್ಟೆ ಅಲ್ಲ, ಪಕ್ಕದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಆಂಧ್ರದ ಮದನಪಲ್ಲಿ, ಕುಪ್ಪಂ ನಿಂದಲೂ ಇಲ್ಲಿಗೆ ಮಾವು ಮಾರಾಟ ಮಾಡಲು ರೈತರು ಬರುತ್ತಾರೆ. ಆದ್ರೆ, ಈ ಬಾರಿ ಬರದಿಂದ ಮಾವು ಉತ್ಪಾದನೆ ಕುಂಠಿತವಾದ ಕಾರಣ ಆಂಧ್ರದ ಚಿತ್ತೂರು ಮಾವು ಕೂಡ ಬರುತ್ತಿಲ್ಲ. ಎರಡು ತಿಂಗಳಷ್ಟೆ ನಡೆಯುವ ಈ ಮಾರುಕಟ್ಟೆಯಲ್ಲಿ ಅಂದಾಜು ಎರಡು ಸಾವಿರ ಕೋಟಿಯಷ್ಟು ವ್ಯಾಪಾರ ವಹಿವಾಟು ನಡೆಯುತ್ತದೆ. ಸಾವಿರಾರು ಮಂದಿಗೆ ಈ ಎರಡು ತಿಂಗಳು ಸುಗ್ಗಿಯ ಕಾಲ, ಕಳೆದೆರೆಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾವಿಗೆ ಒಳ್ಳೆಯ ಬೆಲೆ ಸಿಕ್ಕಿದೆ. ಟನ್ ಒಂದಕ್ಕೆ 80 ಸಾವಿರದಿಂದ 90 ಸಾವಿರದವರಗೆ ಬೆಲೆ ಇದ್ದು, ಫಸಲು ಕಡಿಮೆ ಎಂದು ರೈತರು ಹೇಳುತ್ತಿದ್ದಾರೆ.

ಇಳುವರಿ ಕಡಿಮೆ, ಬಿಸಿಲಿನ ಹೊಡೆತಕ್ಕೆ ಮಾವು ಇಳುವರಿ ಕುಸಿದಿದೆ. ರಾಜ್ಯದ ಮಾವಿನ ತವರಲ್ಲಿ ಈಗ ಮಾಗಿಯ ಸುಗ್ಗಿಕಾಲವಾದರೂ ರಣ ಬೇಸಿಗೆಯ ಬಿಸಿ ಮಾವಿನ ಮರಗಳನ್ನ, ಮಾವಿನ ಫಸಲನ್ನು ಅಕ್ಷರಶ: ಸುಟ್ಟು ಹಾಕಿದೆ. ಮೈತುಂಬಾ ಕಾಯಿ ಬಿಡುವ ಹೊತ್ತಲ್ಲಿ ರೋಗಕ್ಕೆ ತುತ್ತಾಗಿ ಖಾಲಿ ಖಾಲಿಯಾಗಿವೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತನಿಗೆ ಬಿಸಿಲು ಬರೆ ಎಳೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಬಾರಿ ಮಾವು ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಮಾವು ಬೆಳೆಗಾರರು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ವಿಶ್ವ ಪ್ರಸಿದ್ದ ಮಾವು ಮಾರುಕಟ್ಟೆ ಆರಂಭವಾಗುವ ಮೂಲಕ ಹಣ್ಣುಗಳ ರಾಜನ ದರ್ಬಾರ್ ಆರಂಭವಾಗಿದೆ. ಈ ಬಾರಿ ಬರಗಾಲಕ್ಕೆ ತುತ್ತಾದ ಕಾರಣ ಅದೃಷ್ಟದ ಬೆಳೆಯಾಗಬೇಕಿದ್ದ ಮಾವು ಗ್ರಾಹಕರಿಗೆ ಹೊರೆಯಾಗಿ, ವ್ಯಾಪಾರಸ್ಥರಲ್ಲಿ ಸಂತಸವಾಗಿದ್ರೆ, ಫಸಲಿಲ್ಲದೆ ರೈತರಿಗೆ ನಷ್ಟ ಉಂಟಾಗಿರುವುದು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 pm, Wed, 22 May 24