ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ತಲ್ವಾರ್: ಇಬ್ಬರು ದುಷ್ಕರ್ಮಿಗಳಿಂದ ವ್ಯಕ್ತಿ ಮೇಲೆ ದಾಳಿಗೆ ಯತ್ನ
ಓರ್ವ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ತಲ್ವಾರ್ ದಾಳಿಗೆ ಯತ್ನಿಸಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಜೂನ್ 14: ಕೋಮು ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ‘ಸ್ಪೆಷಲ್ ಆ್ಯಕ್ಷನ್ ಫೋರ್ಸ್’ (Special Action Force)ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದ್ದಾರೆ. ಈ ಮಧ್ಯೆ ನಗರದಲ್ಲಿ ಮತ್ತೆ ತಲವಾರು ಝಳಪಿಸಿದೆ. ಇಬ್ಬರು ದುಷ್ಕರ್ಮಿಗಳಿಂದ ವ್ಯಕ್ತಿ ಮೇಲೆ ತಲ್ವಾರ್ (talwar) ದಾಳಿಗೆ ಯತ್ನಿಸಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಜೂನ್ 11ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಜೀಪಮುನ್ನೂರಿನ ಉಮರ್ ಫಾರೂಕ್ ಮೇಲೆ ದಾಳಿಗೆ ಯತ್ನಿಸಲಾಗಿದೆ. ಉಮರ್ ಫಾರೂಕ್ ಘಟನೆ ನಡೆದ ದಿನ ಮುಂಜಾನೆ ಮನೆಯಿಂದ ಜೀಪ್ನಲ್ಲಿ ದೇರಳಕಟ್ಟೆಗೆ ತೆರಳುತ್ತಿದ್ದರು. ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ದಾಳಿಗೆ ಯತ್ನಿಸಲಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂತು ಸ್ಪೆಷಲ್ ಆ್ಯಕ್ಷನ್ ಫೋರ್ಸ್: ಗೃಹ ಸಚಿವ ಪರಮೇಶ್ವರ್ ಚಾಲನೆ
ತಲ್ವಾರ್ ತಗುಲಿ ಫಾರೂಕ್ ವಾಹನದ ಸೈಡ್ ಮಿರರ್ಗೆ ಹಾನಿ ಆಗಿದೆ. ಘಟನೆ ಬಗ್ಗೆ ನಿನ್ನೆ ಪೊಲೀಸರಿಗೆ ದೂರು ಉಮರ್ ಫಾರೂಕ್ ನೀಡಿದ್ದು, ಬಿಎನ್ಎಸ್ 109, 324(4) ಜೊತೆಗೆ 3(5) BNSರಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಮಾದಕ ದ್ರವ್ಯ ಗಾಂಜಾ ಮಾರಾಟಕ್ಕೆ ಯತ್ನ ಹಿನ್ನೆಲೆ ಶಿಕಾರಿಪುರದಲ್ಲಿ ಇಬ್ಬರನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ. ಯಾಸಿರ್ ಪಾಷಾ (27) ಹಾಗೂ ಸಾನಿಯಾ ಬೇಗಂ (52) ಬಂಧಿತ ಆರೋಪಿಗಳು. ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾ ವೀರರ ಹೆಡೆಮುರಿ ಕಟ್ಟಿದ ಮಂಗಳೂರು ಖಾಕಿ: ಆರು ಜನರ ಬಂಧನ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಂಬಾರಗುಂಡಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದರು. ಯಾಸೀರ್ ಪಾಷಾನಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50,000 ರೂ. ದಂಡ, ಸಾನಿಯಾ ಬೇಗಂ (52) ಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.