ಸೋಶಿಯಲ್ ಮೀಡಿಯಾ ವೀರರ ಹೆಡೆಮುರಿ ಕಟ್ಟಿದ ಮಂಗಳೂರು ಖಾಕಿ: ಆರು ಜನರ ಬಂಧನ
ಮಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುತ್ತಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ನಕಲಿ ಖಾತೆಗಳನ್ನು ಬಳಸಿಕೊಂಡು ಕೋಮು ದ್ವೇಷ ಹರಡಲು ಯತ್ನಿಸಿದ್ದರು. ವಿದೇಶದಿಂದಲೂ ಕೆಲ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ ಖಾತೆಗಳನ್ನು ನಿರ್ಬಂಧಿಸಿದ್ದಾರೆ.

ಮಂಗಳೂರು, ಜೂನ್ 07: ಸಾಲು ಸಾಲು ನಡೆದ ಕೊಲೆಗಳಿಂದ ಕಡಲನಗರಿ ಇನ್ನು ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ (social media) ಕೋಮು ಕಿಡಿ ಹಚ್ಚುತ್ತಿದ್ದರ ವಿರುದ್ಧ ಪೊಲೀಸರು ಸಮರ ಸಾರಿದ್ದು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ (Arrested). ಟ್ರೋಲ್ ಮಾಡಿದವರನ್ನ ರೋಸ್ಟ್ ಮಾಡಲಾಗಿದ್ದು, ಮಂಗಳೂರು ಪೊಲೀಸರ ಮೆಗಾ ಆಪರೇಷನ್ಗೆ ಟ್ರೋಲ್ ವೀರರು ನಲುಗಿ ಬೆಂಡಾಗಿದ್ದಾರೆ. ವಿದೇಶದಲ್ಲಿ ಕೂತು ನಾವು ಆಡಿದ್ದೇ ಆಟ ಎನ್ನುವವರಿಗೂ ಶಾಕ್ ನೀಡಿದ್ದಾರೆ.
ಆರು ಜನರ ಬಂಧನ
ಹೆಜಮಾಡಿಯ ಮೊಹಮ್ಮದ್ ಅಸ್ಲಾಂ, ಸುರತ್ಕಲ್ ಕಾಟಿಪಳ್ಳದ ಚೇತನ್, ನಿತಿನ್ ಅಡಪ, ಫರಂಗಿಪೇಟೆಯ ರಿಯಾಜ್ ಇಬ್ರಾಹಿಂ, ಬೆಂಗ್ರೆಯ ಜಮಾಲ್ ಝಾಕೀರ್ ಮತ್ತು ಹಳೆಯಂಗಡಿಯ ಗುರುಪ್ರಸಾದ್ ಬಂಧಿತರು. ಸೌದಿ ಅರೇಬಿಯಾದಲ್ಲಿ ಕೂತು ಪ್ರಚೋದನಾಕಾರಿ ಪೋಸ್ಟ್ ಹಾಕುತ್ತಿದ್ದ ಮೊಹಮ್ಮದ್ ಅಸ್ಲಾಂ, ರಿಯಾಜ್ ಇಬ್ರಾಹಿಂಗೆ ಲುಕ್ ಔಟ್ ನೋಟೀಸ್ ಜಾರಿ ಮಾಡಿ ಬಂಧಿಸಲಾಗಿದೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆ ಕೇಸ್: ಆರೋಪಿ ಅಬ್ದುಲ್ ರಜಾಕ್ ಬಂಧನ
ಮುಸ್ಲಿಂ ವ್ಯಕ್ತಿಯ ಹೆಸರಲ್ಲಿ ಸಿಮ್ ಕಾರ್ಡ್ ಖರೀದಿಸಿ ಚೇತನ್ ಪೋಸ್ಟ್ ಮಾಡುತ್ತಿದ್ದ. ಝಾಕೀರ್ ಎಂಬಾತನಿಂದ ರಹಿಮಾನ್ ಕೊಲೆಗೆ ಒಂದಕ್ಕೆರಡು ಎಂಬಂತೆ ಪ್ರತೀಕಾರದ ಪೋಸ್ಟ್ ಹಾಕಲಾಗಿತ್ತು. ಆದರೆ ಪೊಲೀಸರ ವಿಚಾರಣಾ ಶೈಲಿಗೆ ಹೆದರಿ ಕಣ್ಣೀರು ಹಾಕಿ ಇನ್ಮುಂದೆ ಈ ತರ ಮಾಡಲ್ಲ ಎಂದು ಕ್ಷಮೆಯಾಚಿಸಿದ್ದಾನೆ.
ಆರೋಪಿಗಳನ್ನೇ ಟ್ರೋಲ್ ಮಾಡಿದ ಮಂಗಳೂರು ಪೊಲೀಸರು
team_jokerzzz, team_karna_surathkal, Beary_royal_nawab, Troll_bengare_ro_makk, Guru dprasad Haleyangadi ಎಂಬ ಖಾತೆಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ದ್ವೇಷ ಹರಡಲು ಕಿಡಿಗೇಡಿಗಳು ಯತ್ನಿಸಿದ್ದರು. ಸೌದಿ ಅರೇಬಿಯಾದಲ್ಲಿ ಕೂತು ಮಂಗಳೂರಿನ ಕೋಮು ಸ್ವಾಸ್ತ್ಯ ಕದಡಿಸಲು ಕೆಲ ಪೇಜ್ಗಳಿಂದ ಸಂಚು ರೂಪಿಸಲಾಗಿತ್ತು. ಮಂಗಳೂರು, ಉಡುಪಿ, ಸುರತ್ಕಲ್, ಫರಂಗಿಪೇಟೆಯ ಐವರು ಕಿಡಿಗೇಡಿಗಳ ಇನ್ಸ್ಟಾಗ್ರಾಮ್ ಖಾತೆಗಳು ಬಂದ್ ಆಗಿವೆ.
ಮುಸ್ಲಿಮರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಖರೀದಿಸಿ ಹಿಂದೂಗಳಿಗೆ ಪ್ರಚೋದನೆ ನೀಡಲಾಗಿದೆ. ಕೊಲೆ ಬೆದರಿಕೆ ಸಹಿತ ಪ್ರಚೋದನಕಾರಿ ಪೋಸ್ಟ್ ಹಾಕಲಾಗುತ್ತಿತ್ತು. ವಿದೇಶದಲ್ಲಿದ್ದರೂ ಬೆಂಬಿಡದೆ ಕಿಡಿಗೇಡಿಗಳ ಅಟ್ಟಹಾಸಕ್ಕೆ ಸದ್ಯ ಮಂಗಳೂರು ಖಾಕಿ ಬ್ರೇಕ್ ಹಾಕಿದೆ.
ಪ್ರಾಂತ ಬಜರಂಗದಳ ಸಂಯೋಜಕ ಪ್ರಭಂಜನ್ ಸೂರ್ಯ ಹೇಳಿದ್ದಿಷ್ಟು
ಇನ್ನು ಬಂಟ್ವಾಳ ರೆಹಿಮಾನ್ ಹತ್ಯೆ ಕೇಸ್ ವಿಚಾರವಾಗಿ ಮಂಗಳೂರಿನಲ್ಲಿ ಪ್ರಾಂತ ಬಜರಂಗದಳ ಸಂಯೋಜಕ ಪ್ರಭಂಜನ್ ಸೂರ್ಯ ಹೇಳಿಕೆ ನೀಡಿದ್ದು, ರೆಹಿಮಾನ್ ಹತ್ಯೆ ಕೇಸ್ನಲ್ಲಿ ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್ ಮಾಡಲಾಗುತ್ತಿದೆ. ಪೊಲೀಸರನ್ನ ಬಳಸಿ ಸಂಘಟನೆ ಕಾರ್ಯಕರ್ತರ ಮೇಲೆ ಸರ್ಕಾರ ಪ್ರಕರಣ ದಾಖಲಿಸುತ್ತಿದೆ. ಗಡೀಪಾರು, ರೌಡಿಶೀಟರ್ ಸೇರಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಪುತ್ತೂರು ಹಾಗೂ ಇತರೆಡೆ ಕಾರ್ಯಕರ್ತರ ಮನೆಗಳಿಗೆ ಪೊಲೀಸರು ಭೇಟಿ ನೀಡುತ್ತಿದ್ದಾರೆ. ಎಲ್ಲಾ ಕೇಸ್ ಗಳನ್ನ ಸಂಘಟನೆ ಮೇಲೆ ತರುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Viral : ಅಂದು ನಳಿನ್ ಕುಮಾರ್ ಕಟೀಲ್‌ಗೆ ಏನೆಲ್ಲ ಹೇಳಿಲ್ಲ ನೀವು , ಈಗ ಥ್ಯಾಂಕ್ಸ್ ಹೇಳಿ ಎಂದ ಪ್ರತಾಪ್ ಸಿಂಹ
ಕರಾವಳಿ ಭಾಗದಲ್ಲಿ ಹಿಂದೂ ಸಂಘಟನೆಗಳನ್ನ ಮಟ್ಟ ಹಾಕುವ ಕೆಲಸ ಆಗ್ತಿದೆ. ಆದರೆ ಇಂಥ ಕೆಲಸಕ್ಕೆ ಕೈ ಹಾಕಿದರೆ ನಾವು ಹೆದರುವುದಿಲ್ಲ. ರೆಹಿಮಾನ್ ಕೇಸ್ನಲ್ಲಿ ನಮ್ಮ ಕಾರ್ಯಕರ್ತರ ಸಿಲುಕಿಸುವ ಯತ್ನಿಸಲಾಗುತ್ತಿದೆ. ಭಜರಂಗದಳ ಸಂಯೋಜಕ ಎನ್ನುವ ಕಾರಣಕ್ಕಾಗಿ ಭರತ್ ಕುಮ್ಡೇಲು ಸಿಲುಕಿಸುವ ಯತ್ನ ಆಗುತ್ತಿದೆ. ಅದನ್ನ ಮುಂದಿಟ್ಟು ಭರತ್ ಮನೆ ಶೋಧ ಮಾಡಲಾಗಿದೆ. ರೆಹಿಮಾನ್ ಹತ್ಯೆ ವೈಯಕ್ತಿಕ ಹಾಗೂ ಮರಳು ದಂಧೆ ಕಾರಣಕ್ಕಾಗಿ ನಡೆದಿದೆ ಎನ್ನಲಾಗಿದೆ. ಹಾಗಾಗಿ ಅವುಗಳ ಬಗ್ಗೆ ಪೊಲೀಸರು ತನಿಖೆ ನಡೆಸಲಿ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರ ಸಿಲುಕಿಸಲು ಯತ್ನಿಸಿದರೆ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







