ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳ (Pashu Sanjeevini Ambulance) ಲೋಕಾರ್ಪಣೆ ಮಾಡಲಾಗಿದೆ. ಕೇಂದ್ರ ಪಶುಸಂಗೋಪನಾ ಸಚಿವ ಪರಶೋತ್ತಮ್ ರೂಪಲಾ ಚಾಲನೆ ವಾಹನಗಳನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ಪಶುಸಂಗೋಪನಾ ಇಲಾಖೆಯ ಸಚಿವ ಪ್ರಭು ಚೌಹಾಣ್, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್ ಸೇರಿ ಹಲವರು ಉಪಸ್ಥಿತರಿದ್ದರು. ಪಶುಸಂಗೋಪನೆ ಇಲಾಖೆ ವಿವಿಧ ಕಾಮಗಾರಿಗಳಿಗೂ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘‘ವಿಧಾನಸಭೆಯಲ್ಲಿ ಕುಳಿತು ಚರ್ಚೆ ಮಾಡುವಾಗ ಮತ ಕೊಟ್ಟವರ ಬಗ್ಗೆ ಚರ್ಚೆ ಮಾಡ್ತೀವಿ. ಆದರೆ ನಿಸರ್ಗದಲ್ಲಿ ಪ್ರಾಣಿ ಸಂಕುಲದ ಬಗ್ಗೆ ಯಾವ ವಿಚಾರಗಳೂ ಮಾತನಾಡುವುದಿಲ್ಲ. ಯಾರು ವಿಧಾನಸಭೆಯಲ್ಲಿ ಬಂದು ಪ್ರತಿನಿಧಿಸುವುದಕ್ಕೆ ಸಾಧ್ಯವಿಲ್ಲ ಅಂತವರ ಬಗ್ಗೆ ಯೋಜನೆ ರೂಪಿಸಬೇಕಿದೆ. ಅದರ ಬಗ್ಗೆ ಚರ್ಚೆ ಆಗಬೇಕಾದ್ದು ಪರಿಪೂರ್ಣ ಪ್ರಜಾಪ್ರಭುತ್ವ ಲಕ್ಷಣ’’ ಎಂದಿದ್ದಾರೆ.
ರಾಜ್ಯದಲ್ಲಿ ಕ್ಷೀರ ಕ್ರಾಂತಿಯಾಗಲಿದೆ: ಸಿಎಂ ಬೊಮ್ಮಾಯಿ
‘‘ಕಾಮಧೇನು ಗೋವು, ಅದರ ಸಾಕಾಣಿಕೆಯಿಂದ ಇಡೀ ಪರಿವಾರ ನೆಮ್ಮದಿಯಿಂದ ಬಾಳಬಹುದು. ದೇವರು ಮನುಷ್ಯರಿಗಾಗಿಯೇ ಗೋವು ಸೃಷ್ಟಿ ಮಾಡಿದ್ದಾನೆ. ಕೆಲವರು ಬಹಳ ಚರ್ಚೆ ಮಾಡ್ತಾರೆ, ಯಾವ ಹಾಲನ್ನು ಕುಡಿದು ಬದುಕುತ್ತಿದ್ದೇವೋ ಅದರ ಬಗ್ಗೆಯೇ ಕೆಳಮಟ್ಟದ ಚರ್ಚೆ ಮಾಡ್ತಾರೆ ಕೆಲವರು. ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಬಹಳ ಪ್ರಶ್ನೆ ಕೇಳಿದರು. ರೈತ ಯಾವತ್ತೂ ಗೋವುಗಳನ್ನು ಹೊರೆ ಅಂತ ಅಂದುಕೊಂಡೇ ಇಲ್ಲ. ಆದರೆ ಇವರಿಗೆ ಅದರ ಚಿಂತೆ’’ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ ಬೊಮ್ಮಾಯಿ.
ಚರ್ಚೆ ಮಾಡುವುದಕ್ಕೂ ಜೀವನ ಮಾಡುವುದಕ್ಕೂ ಬಹಳ ವ್ಯತ್ಯಾಸ ಇದೆ. ೧೦೦ ಗೋಶಾಲೆಗಳ ನಿರ್ವಹಣೆಗೆ ವಿಶೇಷ ಎರಡು ಕಾರ್ಯಕ್ರಮ ರೂಪಿಸಿದ್ದೇವೆ. ಗೋಶಾಲೆಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತೇವೆ. ಗೋವುಗಳನ್ನು ದತ್ತು ನೀಡುವ ಪುಣ್ಯ ಕೋಟಿ ಕಾರ್ಯಕ್ರಮ ಮಾಡಿದ್ದೇವೆ. ನನ್ನ ಹುಟ್ಟಿದ ಹಬ್ಬಕ್ಕೆ 11 ಗೋವುಗಳನ್ನು ನಾನು ದತ್ತು ತೆಗೆದುಕೊಂಡಿದ್ದೇನೆ’’ ಎಂದು ಅವರು ಹೇಳಿದ್ದಾರೆ.
‘‘ಈ ಕಾರ್ಯಕ್ರಮಕ್ಕೆ ಮತ್ತಷ್ಟು ಪುಷ್ಟಿ ಬೆಂಬಲ ಶಕ್ತಿ ತುಂಬುತ್ತೇವೆ. ಕರ್ನಾಟಕದಲ್ಲಿ ಕ್ಷೀರ ಕ್ರಾಂತಿ ಮಾಡುವ ಕೆಲಸ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಕ್ಷೀರ ಸಹಕಾರಿ ಬ್ಯಾಂಕ್ ನಿರ್ಮಾಣ ಮಾಡ್ತಿದ್ದೇವೆ. ಬರುವಂತ ದಿನಗಳಲ್ಲಿ ರಾಜ್ಯದಲ್ಲಿ ಕ್ಷೀರ ಆರ್ಥಿಕ ಕ್ರಾಂತಿಯಾಗಲಿದೆ. ಹಾಲು ಉತ್ಪಾದನೆಯ ಇಡೀ ದೇಶದ ಮಾರಾಟಕ್ಕಾಗಿ ಮೆಗಾ ಡೈರಿ ಮಾಡ್ತಿದ್ದೇವೆ. ಬಜೆಟ್ ಹಾಗೂ ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಕೆಲಸ ಮಾಡ್ತಿದ್ದೇವೆ. ಕೇಂದ್ರ ಸರ್ಕಾರ ಹೈನುಗಾರಿಕೆ, ಮೀನುಗಾರಿಕೆಗೆ ಬಹಳ ಒತ್ತು ಕೊಟ್ಟಿದೆ. ಯಾರ ಮನೆಯಲ್ಲಿ ಹೈನುಗಾರಿಕೆ ಇದೆ ಆ ಕುಟುಂಬ ಬಹಳ ಚೆನ್ನಾಗಿದೆ. ಕನ್ನಡ ನಾಡಿನ ತಲಾವಾರು ಆದಾಯ ಹೆಚ್ಚಳಕ್ಕಾಗಿ ಯೋಜನೆ ರೂಪಿಸುತ್ತಿದ್ದೇವೆ’’ ಎಂದು ಬೊಮ್ಮಾಯಿ ನುಡಿದಿದ್ದಾರೆ.
ಸಚಿವ ಪ್ರಭು ಚೌಹಾಣ್ ಹೇಳಿದ್ದೇನು?
ಸಚಿವ ಪ್ರಭು ಚೌಹಾಣ್ ಪ್ರಾಸ್ತಾವಿಕ ಭಾಷಣ ಮಾಡಿ, ‘‘275 ಪಶು ಚಿಕಿತ್ಸಾ ವಾಹನಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ. ಸಿಎಂ ಬೊಮ್ಮಾಯಿ ಯಾವತ್ತೂ ನಮ್ಮ ಗೋಮಾತಾ ರಕ್ಷಣೆಗೆ ಪ್ರೋತ್ಸಾಹ ನೀಡಿದ್ದಾರೆ. ಪ್ರಧಾನಿಗಳ ಕೃಪೆಯಿಂದ ಗೋಮಾತಾ ರಕ್ಷಣೆಗೆ ಬೆಂಬಲ ಸಿಕ್ಕಿದೆ. ನಮ್ಮ ಸರ್ಕಾರ ಬಂದಮೇಲೆ ಮೂಕಪ್ರಾಣಿ ಗೋಮಾತೆಗೆ ಮೊದಲ ಬಾರಿಗೆ ಪಶು ಸಹಾಯವಾಣಿ ಪ್ರಾರಂಭ ಮಾಡಿದೆವು. ಮೊಟ್ಟಮೊದಲು 15 ಅಂಬ್ಯುಲೆನ್ಸ್ ಮೊದಲು ಪ್ರಾರಂಭ ಮಾಡಿದೆವು. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಇದನ್ನು ನೋಡಿ ಕೇಂದ್ರ ಸರ್ಕಾರದ ಅನುದಾನ ನೀಡಲು ಮುಂದಾದರು. ಇಡೀ ದೇಶದಲ್ಲಿ ನಮ್ಮ ಪರಿಕಲ್ಪನೆ ಚಾಲೂ ಆಗುತ್ತಿದೆ. ಸಿಎಂ ಪ್ರೇರಣೆಯಿಂದ 275 ಪಶುವಾಹನಗಳನ್ನು ನೀಡುತ್ತಿದ್ದೇವೆ’’ ಎಂದಿದ್ದಾರೆ.
‘‘ರೈತರ ಸಲುವಾಗಿ 1962 ಸಂಖ್ಯೆಗೆ ಕರೆಮಾಡಬಹುದಅದ ಸಹಾಯವಾಣಿಯನ್ನು ಮಾಡಿದ್ದೇವೆ. ನಮ್ಮ ಗೋ ಮಾತೆಗಾಗಿ ರೈತರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡುತ್ತೇವೆ. ಪ್ರಾಣಿ ಸೇವೆ, ಪ್ರಾಣಿ ರಕ್ಷಣೆಗಾಗಿ ಪ್ರಾಣಿ ಕಲ್ಯಾಣ ಕೇಂದ್ರ ಕೂಡ ಪ್ರಾರಂಭ ಮಾಡಿದ್ದೇವೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಆಗಬೇಕು ಅಂತ ಸ್ವಾಮೀಜಿಗಳ ಜನರ ಬೇಡಿಕೆ ಇತ್ತು. ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರಿಂದಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಹಿಂದೆಯೂ ಆಗಿಲ್ಲ, ಮುಂದೆಯೂ ಆಗಲ್ಲ ಅಂತ ಕಾಯ್ದೆ ತಂದಿದ್ದೇವೆ. ರಾಜ್ಯದಲ್ಲಿ 100 ಗೋಶಾಲೆಗಳನ್ನು ಪ್ರಾರಂಭ ಮಾಡ್ತಿದ್ದೇವೆ. ಜಿಲ್ಲೆಗೆ ಒಂದು ಗೋಶಾಲಾ ಕಾನ್ಸೆಪ್ಟ್ ಇದೆ. ಮಾಜಿ ಸಿಎಂ ಯಡಿಯೂರಪ್ಪ 30 ಗೋಶಾಲೆ ನೀಡಿದರು, ಹಾಲಿ ಸಿಎಂ 70 ಗೋಶಾಲೆ ನೀಡಿದರು. ಎಲ್ಲ ಅಧಿಕಾರಿಗಳಿಗೆ ಬಡ್ತಿ ನೀಡುವ ಕೆಲಸ ಕೂಡ ಆಗ್ತಿದೆ. ಪಶು ಇಲಾಖೆ ಇನ್ನೂ ಮೇಲ್ದರ್ಜೆಗೆ ಏರಿಸಬೇಕು’’ ಎಂದಿದ್ದಾರೆ ಪ್ರಭು ಚೌಹಾಣ್.
ಇದೇ ವೇಳೆ ಅವರು ಆತ್ಮನಿರ್ಭರ ಗೋಶಾಲೆ ನಿರ್ಮಾಣ ಮಾಡ್ತೇವೆ. ಮುಖ್ಯಮಂತ್ರಿಗಳು ಸಚಿವರು ಗೋವುಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕೇಂದ್ರ ಸಚಿವರಿಗೆ ಇಲಾಖೆಗೆ ಸಂಬಂಧಿಸಿದ ಮನವಿ ಸಲ್ಲಿಸಿದ ಪ್ರಭು ಚೌಹಾಣ್, ಜಾನುವಾರು ಇನ್ಶುರೆನ್ಸ್ ಹೆಚ್ಚಳ ಮಾಡಬೇಕಿದೆ ಎಂದಿದ್ದಾರೆ.
ಪಶು ಸಂಚಾರಿ ವಾಹನಗಳ ವಿಶೇಷತೆಗಳೇನು? ಇಲ್ಲಿದೆ ನೋಡಿ
– ರಾಜ್ಯಕ್ಕೆ ಹೊಸದಾಗಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಮಂಜೂರು ಮಾಡಲಾಗಿದೆ
– ಇವತ್ತು 70 ಪಶು ಚಿಕಿತ್ಸಾ ಸಂಚಾರಿ ವಾಹನಗಳ ಲೋಕಾರ್ಪಣೆ ಮಾಡಲಾಗಿದೆ
– ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಟೋಲ್ ಫ್ರೀ ನಂಬರ್ ‘1962’
– ರಾಜ್ಯದಲ್ಲಿ 2.89 ಕೋಟಿ ಜಾನುವಾರುಗಳಿವೆ
– ಪ್ರತೀ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಪಶು ಚಿಕಿತ್ಸಾ ವಾಹನ
– ಕೇಂದ್ರದಿಂದ 100% ಸಹಾಯ ಧನದಲ್ಲಿ 44 ಕೋಟಿ ಅನುದಾನ
– ಇಂದು 11 ಜಿಲ್ಲೆಗಳಲ್ಲಿ ಒಟ್ಟು 70 ವಾಹನಗಳ ಸೇವೆಗೆ ಚಾಲನೆ
ಯಾವೆಲ್ಲಾ ಜಿಲ್ಲೆಗಳಲ್ಲಿ ಪಶು ಚಿಕಿತ್ಸಾ ವಾಹನದ ಸೌಲಭ್ಯವಿದೆ?
ಚಿಕ್ಕಬಳ್ಳಾಪುರ/ಚಿತ್ರದುರ್ಗ – 10 ವಾಹನಗಳು, ಮೈಸೂರು/ಹಾಸನ – 9, ಕೋಲಾರ/ಮಂಡ್ಯ – 8, ದಾವಣಗೆರೆ – 6,
ಬೆಂಗಳೂರು ಗ್ರಾಮಾಂತರ – 4, ಬೆಂಗಳೂರು – 3, ದಕ್ಷಿಣ ಕನ್ನಡ – 2, ಕೊಡಗು – 1
ಬ್ರೇಕಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Sat, 7 May 22