ಬೆಂಗಳೂರು, ಜೂನ್ 07: ವಿಧಾನಸಭೆ ಚುನಾವಣೆ (Vidhan Sabha Election) ವೇಳೆ ಬಿಜೆಪಿ (BJP) ವಿರುದ್ಧ 40% ಸರ್ಕಾರ ಎಂದು ಅಪಪ್ರಚಾರ ಮಾಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandi) ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮಾಜಿ ಸಂಸದ ಡಿಕೆ ಸುರೇಶ್ (DK Suresh) ಅವರು ಶ್ಯೂರಿಟಿ ಸಲ್ಲಿಸಿದ್ದಾರೆ. ವಿಚಾರಣೆ ಜೂನ್ 30ಕ್ಕೆ ಮುಂದೂಡಲಾಗಿದೆ.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು 40 ಪರ್ಸೆಂಟ್ ಅಂತ ಬೊಮ್ಮಾಯಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ರೇಟ್ ಕಾರ್ಡ್ ಅಸ್ತ್ರ ಹೂಡಿದ್ದರು. ಇದಕ್ಕೆ ಸಿಡಿಮಿಡಿಗೊಂಡಿದ್ದ ಬಿಜೆಪಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಖಾಸಗಿ ದೂರು ದಾಖಲಿಸಿತ್ತು. ಹೀಗಾಗಿ ಇವತ್ತು ದೆಹಲಿಯಿಂದ ಆಗಮಿಸಿದ್ದ ರಾಹುಲ್ ಗಾಂಧಿ, ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದರು. ಜಾಮೀನು ಬಾಂಡ್‌ಗೆ ಸಹಿ ಹಾಕಿದ ರಾಹುಲ್‌ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 75 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಪತ್ರ ಭದ್ರತೆಯಾಗಿ ಸಲ್ಲಿಸಲಾಗಿದೆ. ಮಾಜಿ ಸಂಸದ ಡಿ.ಕೆ ಸುರೇಶ್ ಶ್ಯೂರಿಟಿ ನೀಡಿದ್ದಾರೆ.
ಇಂದು ಬೆಳಗ್ಗೆ 9:15ರ ಸುಮಾರಿಗೆ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಬಳಿಕ ನಾಯಕರು ಒಂದೇ ಕಾರಿನಲ್ಲಿ ಶಾಂಘ್ರಿಲಾ ಹೋಟೆಲ್ಗೆ ತೆರಳಿ ಉಪಹಾರ ಸೇವಿಸಿದರು.
ಇದಾದ ಬಳಿಕ ರಾಹುಲ್ ಕೋರ್ಟ್‌ಗೆ ಆಗಮಿಸಿದರು. ಜಾಮೀನು ಪಡೆದು ವಾಪಸ್ ತೆರಳವಾಗ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಇದಕ್ಕೂ ಮುನ್ನ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿಯವರು ರಾಹುಲ್ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ ಅಂತ ಕಿಡಿಕಾರಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ಪಿತೂರಿ; ಕಾಂಗ್ರೆಸ್ನ ಷೇರು ಮಾರ್ಕೆಟ್ ಆರೋಪಕ್ಕೆ ಬಿಜೆಪಿ ತಿರುಗೇಟು
ಜಾಮೀನು ಮಂಜೂರು ಆಗುತ್ತಿದ್ದಂತೆ ಸಂಸದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿದರು. ಕಚೇರಿಯಲ್ಲಿ ಕಾಂಗ್ರೆಸ್ನ ನೂತನ ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆಜೆ ಜಾರ್ಜ್, ಭೈರತಿ ಸುರೇಶ್, ದಿನೇಶ್ ಗುಂಡೂರಾವ್ ಸೇರಿ ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದರು.
ಗೆದ್ದ ಮತ್ತು ಸೋತ ಅಭ್ಯರ್ಥಿಗಳ ಜತೆ ಚರ್ಚೆ ನಡೆಸಿದ್ರು. ಸೋಲು, ಗೆಲುವಿಗೆ ಕಾರಣ, ಸೋತ ಕ್ಷೇತ್ರಗಳ ಬಗ್ಗೆ ಪರಾಮರ್ಶೆ ನಡೆಸಿದ್ರು. ಸೋತ ಅಭ್ಯರ್ಥಿಗಳಿಗೆ ಎದೆಗುಂದಬೇಡಿ ಅಂತ ಧೈರ್ಯ ಹೇಳಿದ ರಾಹುಲ್, ನೂತನ 9 ಸಂಸದರನ್ನು ಅಭಿನಂದಿಸಿದರು.
ಲೋಕಸಭೆ ಚುನಾವಣೆಯಲ್ಲಿ ಜನರು ನಮ್ಮ ಕೈ ಹಿಡಿದಿದ್ದಾರೆ. ಕೆಲ ಅಭ್ಯರ್ಥಿಗಳು ಸ್ವಲ್ಪದರಲ್ಲಿ ಸೋತಿದ್ದೀರಿ. ಎದೆಗುಂದಬೇಡಿ. ಸೋತವರು, ಗೆದ್ದವರು ಎಂಬ ಭೇದಭಾವ ಬೇಡ, ಒಟ್ಟಾಗಿ ಸೇರಿ ಪಕ್ಷ ಕಟ್ಟೋಣ. ಒಟ್ಟಾಗಿ ದುಡಿದರೆ ಮುಂದೆ ಅಧಿಕಾರಕ್ಕೆ ಬರುತ್ತೇವೆ. ವಿಶ್ವಾಸದಿಂದ ಮುನ್ನಡೆಯಿರಿ ಅಂತ ರಾಹುಲ್ ಗಾಂಧಿ ಧೈರ್ಯ ತುಂಬಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:15 am, Fri, 7 June 24