ಬೆಂಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ (545 PSI Recruitment) ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮ ಪ್ರಕರಣ (Scam Case) ಸಂಬಂಧ ಸೋಮವಾರ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದ್ದು, ಇಂದು ಬೆಳಗ್ಗೆ ಸಿಐಡಿ ಅಧಿಕಾರಿಗಳು ಫುಲ್ ಗ್ರಿಲ್ ಮಾಡಲಿದ್ದಾರೆ. ನಿನ್ನೆ ರಾತ್ರಿ ಅಮೃತ್ ಪಾಲ್(Amrith Paul)ಗೆ ಯಾವುದೇ ವಿಚಾರಣೆ ನಡೆಸದ ಸಿಐಡಿ ಅಧಿಕಾರಿಗಳು ಇಂದು ಬೆಳಗ್ಗೆ 10.30ರ ನಂತರ ವಿಚಾರಣೆ ನಡೆಸಲಿದ್ದಾರೆ. ಸದ್ಯ ಅಮೃತ್ ಪಾಲ್ ಅವರು ಸಿಐಡಿ(CID)ಯ ವಿಚಾರಣಾ ಕೊಠಡಿಯಲ್ಲೇ ಇದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕ ಅಕ್ರಮ: ಕೊನೆಗೂ ಎಡಿಜಿಪಿ ಅಮೃತ್ ಪಾಲ್ ಅರೆಸ್ಟ್, ಬಂಧಿತ ಐಪಿಎಸ್ ಅಧಿಕಾರಿ ಸಿಐಡಿ ಕಸ್ಟಡಿಗೆ
ಏನಿದು ಪ್ರಕರಣ?
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ 545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಕಳೆದ ಅಕ್ಟೋಬರ್ 3 ರಂದು ಪಿಎಸ್ಐ ನೇಮಕಾತಿ ಪರೀಕ್ಷೆ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಈ ಪ್ರಕರಣ ಬೆಳಕಿಗೆ ಬಂದು ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿದೆ.
ಕೋಟಿ ಕೋಟಿ ಹಣ ಪತ್ತೆ ಹಿನ್ನೆಲೆ ಪ್ರಕರಣದ ಗಂಭೀರತೆಯನ್ನು ಅರಿತು ಸರ್ಕಾರತನಿಖೆಯನ್ನು ಸಿಐಡಿಗೆ ವಹಿಸಿತು. 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್ಗಳಿಗೂ ಹಣದ ಹೊಳೆ ಹರಿದಿದೆ. ತಿ ಬ್ರೋಕರ್ಗಳ ಹಂತದಲ್ಲಿಯೂ ಕನಿಷ್ಠ ಹತ್ತು ಲಕ್ಷ ಹಣ ಕೊಡಬೇಕಿತ್ತು. ನೇಮಕಾತಿ ವಿಭಾಗದ ಅಧಿಕಾರಿಗೆ ಮೂವತ್ತ ರಿಂದ ಮೂವತ್ತೈದು ಲಕ್ಷ ತಲುಪುತ್ತಿತ್ತು. ಮೂವರು ನಾಲ್ವರು ಬ್ರೋಕರ್ಗಳ ಹಂತದಲ್ಲಿ ಮೂವತ್ತು ನಲವತ್ತು ಲಕ್ಷ ಹಣ ನೀಡಲಾಗುತ್ತಿತ್ತು. ಅಷ್ಟೂ ಬ್ರೋಕರ್ಗಳ ಮೂಲಕ ಹಣ ಕೊನೆಗೆ ನೇಮಕಾತಿ ವಿಭಾಗದ ಅಧಿಕಾರಿಗಳ ಕೈಗೆ ಸೇರುತ್ತಿತ್ತು.
ಸದ್ಯ ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳಿಂದ ಹಿಡಿದು ರಾಜಕೀಯ ವ್ಯಕ್ತಿಗಳು ಅರೆಸ್ಟ್ ಆಗಿದ್ದಾರೆ. ಈಗಾಗಲೇ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಎಫ್ಡಿಎ ಹರ್ಷಾ, ಸಿಬ್ಬಂದಿಗಳಾದ ಶ್ರೀಧರ್, ಶ್ರೀನಿವಾಸ್ ಬಂಧಿತರಾಗಿದ್ದರು. ಪ್ರಕರಣ ಸಂಬಂಧ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪಾಲ್ ಹೆಸರು ಕೂಡ ಅಕ್ರಮದಲ್ಲಿ ಕೇಳಿಬಂದಿತ್ತು. ಇದರ ಬೆನ್ನಲ್ಲೆ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ಎತ್ತಂಗಡಿ ಮಾಡಲಾಗಿತ್ತು. ಅವರನ್ನು ನಾಲ್ಕನೇ ಬಾರಿಗೆ ಸೋಮವಾರ ಸಿಐಡಿ ವಿಚಾರಣೆಗೆ ಕರೆದು ವಿಚಾರಣೆ ನಡೆಸಿದೆ. ಅದರಂತೆ ಸಿಐಡಿ ಹಿರಿಯ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡು ಸೋಮವಾರ ಅರೆಸ್ಟ್ ಮಾಡಿದ್ದಾರೆ.
ಅಮೃತ್ ಪಾಲ್ ಬಂಧನ ಹಿನ್ನೆಲೆ ಕಾಂಗ್ರೆಸ್ ಸುದ್ದಿಗೋಷ್ಠಿ
ಪಿಎಸ್ಐ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಪ್ರಕರಣ ಸಂಬಂಧ ಈ ಹಿಂದೆ ಕಾಂಗ್ರೆಸ್ ಅಮೃತ್ ಪೌಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿತ್ತು. ಹೀಗಾಗಿ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ಕರೆದಿದ್ದಾರೆ. ಪಿಎಸ್‌ಐ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಭಾವಿಶಾಲಿಗಳ ಬಂಧನಕ್ಕೆ ಉಭಯ ನಾಯಕರು ಸುದ್ದಿಗೋಷ್ಠಿ ಮೂಲಕ ಆಗ್ರಹಿಸಲಿದ್ದಾರೆ.
Published On - 9:01 am, Tue, 5 July 22