
ಬೆಂಗಳೂರು, ಆಗಸ್ಟ್ 19: ಕರ್ನಾಟಕದಲ್ಲಿ (Karanataka) ಐದು ಹುಲಿ ಸಂರಕ್ಷಣಾ ಮೀಸಲು ಪ್ರದೇಶಗಳಿವೆ (Tiger Reserve Forest). ಬಂಡೀಪುರ, ಭದ್ರಾ, ನಾಗರಹೊಳೆ, ದಾಂಡೇಲಿ-ಅಂಶಿ ಮತ್ತು ಬಿ.ಆರ್.ಟಿ. ಹುಲಿ (Tiger) ಸಂರಕ್ಷಿತ ಪ್ರದೇಶಗಳು. ಇವುಗಳಲ್ಲಿ ಬಂಡೀಪುರ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ (2020 ರಿಂದ 2025) ರ ನಡುವೆ 75 ಹುಲಿಗಳು ಮೃತಪಟ್ಟಿವೆ ಎಂದು ವರದಿಯಾಗಿದೆ.
ಕರ್ನಾಟಕದ ಎರಡು ಪ್ರಸಿದ್ಧ ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆಯಲ್ಲಿ 26 ಮತ್ತು ಬಂಡೀಪುರದಲ್ಲಿ 22 ಹುಲಿಗಳು ಮೃತಪಟ್ಟಿವೆ. ಈ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ವರದಿಯಾದ ಎಲ್ಲ ಹುಲಿಗಳ ಸಾವಿನಲ್ಲಿ ಸುಮಾರು 3/2 ಭಾಗದಷ್ಟು ಹುಲಿಗಳು ಈ ಸಂರಕ್ಷಣಾ ಪ್ರದೇಶಗಳಲ್ಲಿ ಮೃತಪಟ್ಟಿವೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್ ವರದಿ ಮಾಡಿದೆ. ಬಿಳಿಗಿರಿ ರಂಗನಾಥ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ (ಎಂಎಂ) ಬೆಟ್ಟಗಳಂತಹ ಸಂರಕ್ಷಿತ ಪ್ರದೇಶಗಳಲ್ಲಿ ಕ್ರಮವಾಗಿ ಎಂಟು ಮತ್ತು ಐದು ಹುಲಿಗಳು ಸಾವನ್ನಪ್ಪಿವೆ.
ಈ ಸಂಬಂಧ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, 75 ರಲ್ಲಿ 62 ಹುಲಿಗಳು ನೈಸರ್ಗಿಕವಾಗಿ ಮೃತಪಟ್ಟಿವೆ. ಅಂದರೆ, ವಯೋಸಹಜ ಕಾಯಿಲೆ, ಹುಲಿಗಳ ನಡುವಿನ ಸಂಘರ್ಷ ಮತ್ತು ರೋಗಗಳಿಗೆ ತುತ್ತಾಗಿವೆ ಮೃತಪಟ್ಟಿವೆ ಎಂದು ಹೇಳಿದರು. ಇನ್ನುಳಿದ 13 ಹುಲಿಗಳು ಅಸ್ವಾಭಾವಿಕವಾಗಿ ಮೃತಪಟ್ಟಿದ್ದು, ಅರಣ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಸಾವು
ಮಲೆ ಮಹಾದೇಶ್ವರ ಬೆಟ್ಟದಲ್ಲಿ ವಿಷಪ್ರಾಶನದಿಂದ ಮೃತಪಟ್ಟ ಐದು ಹುಲಿಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು
13 ಹುಲಿಗಳು ಅಸ್ವಾಭಾವಿಕವಾಗಿ ಮೃತಪಟ್ಟಿವೆ. ಈ ಘಟನೆ ಅರಣ್ಯ ಇಲಾಖೆಯನ್ನು ಬೆಚ್ಚಿಬೀಳಿಸಿತ್ತು. ಮಲ ಮಹಾದೇಶ್ವರ ಬೆಟ್ಟದಲ್ಲಿ ಹುಲಿಗಳು ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ತನಿಖೆ ನಡೆಸಿ ಹುಲಿಗಳ ಸಾವಿಗೆ ಕಾರಣವನ್ನು ಪತ್ತೆಹಚ್ಚಿತ್ತು. ಹುಲಿಗಳಿಗೆ ವಿಷವಿಟ್ಟ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸೇಡು ತೀರಿಸಿಕೊಳ್ಳಲು ಹುಲಿ ದಾಳಿಯಿಂದ ಸತ್ತ ಹಸುವಿನ ಕಳೇಬರಕ್ಕೆ ರಾಸಾಯನಿಕ ಮಿಶ್ರಣ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ನಾಗರಹೊಳೆಯಲ್ಲಿ ಒಂದು ವೃದ್ಧ ಹೆಣ್ಣು ಹುಲಿ ಮತ್ತು ಬಂಡೀಪುರದಲ್ಲಿ ಒಂದು ಗಂಡು ಹುಲಿಗಳು ಕಾಡುಹಂದಿಗಳು ಅಥವಾ ಜಿಂಕೆಗಳಿಗಾಗಿ ಇಡಲಾಗುತ್ತಿದ್ದ ಬಲೆಗಳಲ್ಲಿ ಸಿಕ್ಕಿಬಿದ್ದು ಸಾವನ್ನಪ್ಪಿದವು. ಒಂದು ಹುಲಿ ವಿದ್ಯುತ್ ಸ್ಪರ್ಶಿಸಿ, ಎರಡು ಹುಲಿಗಳು ಗುಂಡಿಗೆ ಮತ್ತೆರಡು ಎರಡು ಹುಲಿಗಳುನ್ನು ಬೇಟೆಯಾಡಿ ಕೊಲ್ಲಲಾಯಿತು. ಮೈಸೂರು ವ್ಯಾಪ್ತಿಯಲ್ಲಿ ಕೇವಲ ಒಂದರಿಂದ ಎರಡು ವರ್ಷ ವಯಸ್ಸಿನ ಎಳೆಯ ಗಂಡು ಹುಲಿಯನ್ನು ಬೇಟೆಯಾಡಲಾಗಿದೆ ಎಂದು ವರದಿಯಾಗಿದೆ.
Published On - 10:59 am, Tue, 19 August 25