ಹುಲಿ, ಮಂಗ ಆಯ್ತು ಈಗ ಚಿರತೆ ಸರದಿ: ಚಾಮರಾಜನಗರ ಕೊತ್ತಲವಾಡಿ ಬಳಿ ಚಿರತೆ ಶವ ಪತ್ತೆ
ಚಾಮರಾಜನಗರ ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಸಾವಿನ ಸರಣಿ ಮುಂದುವರಿದಿದೆ. ಹುಲಿಗಳ ಹತ್ಯಾಕಾಂಡ, ಮಂಗಗಳ ಸಾವಿನ ಬೆನ್ನಲ್ಲೇ ಇದೀಗ ಚಿರತೆಯೊಂದರ ಶವ ಅರ್ಧ ಕೊಳೆತ ಸ್ಥಿತಿಯಲ್ಲಿ ಕೊತ್ತಲವಾಡಿ ಬಳಿ ಪತ್ತೆಯಾಗಿದೆ. ಜತೆಗೆ ನಾಯಿ, ಹಾಗೂ ಕರುವಿನ ಶವಗಳೂ ಅರ್ಧ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಚಾಮರಾಜನಗರ, ಜುಲೈ 11: ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ವಿಶಪ್ರಾಷನದಿಂದ ಮೃತಪಟ್ಟ ಕೆಲವೇ ದಿನಗಳ ನಂತರ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ 18 ಕೋತಿಗಳ ಶವ ಪತ್ತೆಯಾಗಿತ್ತು. ಅವುಗಳನ್ನೂ ವಿಷವಿಕ್ಕಿ ಕೊಂದಿರುವುದು ತಿಳಿದುಬಂದಿತ್ತು. ಇದೀಗ ಚಿರತೆಯ ಸರದಿ. ಚಾಮರಾಜನಗರ (Chamarajanagar) ತಾಲೂಕಿನ ಕೊತ್ತಲವಾಡಿ ಬಳಿ ಚಿರತೆ ಶವ ಶುಕ್ರವಾರ ಪತ್ತೆಯಾಗಿದೆ. ಗಣಿ ತ್ಯಾಜ್ಯದ ಕಲ್ಲು ಸಂಗ್ರಹಿಸಿರುವ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. 5 ವರ್ಷದ ಗಂಡು ಚಿರತೆ ಕಳೇಬರದ ಬಳಿ ನಾಯಿ ಮತ್ತು ಕರುವಿನ ಶವವೂ ಪತ್ತೆಯಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಥಳಕ್ಕೆ ಬಿಆರ್ಟಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಟಲ್ ಡಿಟೆಕ್ಟರ್ ಜೊತೆಗೆ ಶ್ವಾನದಳವೂ ಆಗಮಿಸಿ ತಪಾಸಣೆ ನಡೆಸಿದೆ. ಸದ್ಯ ಬಿಆರ್ಟಿ ಡಿಸಿಎಫ್ ಶ್ರೀಪತಿ ಹಾಗೂ ಸಿಸಿಎಫ್ ಹೀರಾಲಾಲ್ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಚಿರತೆ ಕಳೇಬರದ ಸುತ್ತಮುತ್ತ ಮೆಟಲ್ ಡಿಟೆಕ್ಟರ್ನಿಂದಲೂ ಶೋಧ ಮಾಡಲಾಗಿದ್ದು, ಯಾರಾದರೂ ಗುಂಡು ಹೊಡೆದು ಕೊಂದಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಚಿರತೆ ಕಳೇಬರದ ಪಕ್ಕದಲ್ಲೇ ಕರು ಹಾಗೂ ಒಂದು ಶ್ವಾನದ ಶವವೂ ಬಿದ್ದಿರುವುದು ಕಂಡುಬಂದಿದೆ. ಹೀಗಾಗಿ ಯಾರಾದರೂ ವಿಷ ಹಾಕಿ ಕೊಂದಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಕಲ್ಲು ಕ್ವಾರಿ ಪಕ್ಕದಲ್ಲೇ ಚಿರತೆ ಮೃತಪಟ್ಟಿರುವ ಹಿನ್ನಲೆ ಕಲ್ಲು ಕ್ವಾರಿ ಮಾಲೀಕನ ಮೇಲೆಯೂ ಅನುಮಾನ ವ್ಯಕ್ತವಾಗಿದೆ.
ವಿಷ ಹಾಕಿ ಕೊಂದಿರುವ ಶಂಕೆ: ಬಿಆರ್ಟಿ ಅರಣ್ಯಾಧಿಕಾರಿ ಶ್ರೀಪತಿ ಮಾಹಿತಿ
ಚಿರತೆಯನ್ನು ವಿಷ ಹಾಕಿ ಕೊಲೆ ಮಾಡಿರಬಹುದು ಎಂಬ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗಿದೆ ಎಂದು ಬಿಆರ್ಟಿ ಡಿಸಿಎಫ್ ಶ್ರೀಪತಿ ‘ಟಿವಿ9’ಗೆ ತಿಳಿಸಿದ್ದಾರೆ. ಚಿರತೆ ಕಳೇಬರದ ಪಕ್ಕದಲ್ಲೇ ನಾಯಿ, ಕರುವಿನ ಕಳೇಬರ ಪತ್ತೆಯಾಗಿದೆ. ಹಾಗಾಗಿ ಚಿರತೆಗೆ ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 5 ಹುಲಿಗಳ ಸಾವು ಪ್ರಕರಣ: ಉನ್ನತ ಸಮಿತಿಯ ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಅಂಶ ಬಯಲಿಗೆ
ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ, ನಾಯಿ, ಕರುವಿನ ಕಳೇಬರದ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಲ್ಯಾಬ್ಗೆ ಕಳುಹಿಸಲಾಗುತ್ತದೆ. ಎಫ್ಎಸ್ಎಲ್ ವರದಿ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.







