ಚಾಮರಾಜನಗರದಲ್ಲಿ ವ್ಯಾಘ್ರಗಳ ಸಾವು ಕೇಸ್: ಮೂವರ ಬಂಧನ, ಹುಲಿಗಳು ಸತ್ತಿದ್ದರಿಂದ ಸಂತಸ ಪಟ್ಟಿದ್ದ ಆರೋಪಿಗಳು
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಮೂವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಹಸುವನ್ನು ಹುಲಿ ಕೊಂದಿದ್ದಕ್ಕೆ ಪ್ರತೀಕಾರವಾಗಿ ವಿಷ ಹಾಕಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ದೃಢಪಡಿಸಿದ್ದು, ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣ ಸಾಕಷ್ಟು ಸಂಚಲನ ಮೂಡಿಸಿತ್ತು.

ಚಾಮರಾಜನಗರ, ಜೂನ್ 28: ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ (tiger) ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಖಚಿತವಾಗಿತ್ತು. ಆದರೆ ವಿಷವಿಟ್ಟವರು ಯಾರು ಅನ್ನೋದು ಗೊತ್ತಾಗಿರಲಿಲ್ಲ. ಇದೀಗ ಅದು ಕೂಡ ಬಯಲಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ (Arrested) ಎಂದು ಟಿವಿ9ಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಮಾದ ಅಲಿಯಾಸ್ ಮಾದುರಾಜು, ನಾಗರಾಜ್ ಮತ್ತು ಕೂನಪ್ಪ ಬಂಧಿತರು. ಸದ್ಯ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳಿಂದ ವಿಚಾರಣೆ ನಡಲಾಗುತ್ತಿದೆ.
ಮಾದ ಅಲಿಯಾಸ್ ಮಾದುರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ಬಲಿ ಪಡೆದಿತ್ತು. ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡು ಮಾದ ಕಣ್ಣೀರಿಟ್ಟಿದ್ದ. ಬಳಿಕ ಹಸು ಕೊಂದ ಹುಲಿ ಕೊಲ್ಲಲು ಇಬ್ಬರು ನಿರ್ಧರಿಸಿದ್ದರು. ಹಾಗಾಗಿ ಹುಲಿ ಕೊಲ್ಲಲು ಕ್ರಿಮಿನಾಶಕ ಕೂಡ ತಂದಿದ್ದರು. ಹುಲಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪಿಗಳಿಗೆ ಕೂನಪ್ಪ ನೆರವು ನೀಡಿದ್ದರು.
ಇದನ್ನೂ ಓದಿ: ಚಾಮರಾಜನಗರ: ಐದು ಹುಲಿಗಳ ನಿಗೂಢ ಸಾವು ಬೆನ್ನಲ್ಲೇ ಮತ್ತೊಂದು ಹುಲಿ ಸಾವು
ನಾಗರಾಜ್ ಮೃತ ಹಸುವಿಗೆ ಕ್ರಿಮಿನಾಶಕ ಹಾಕಿ ಬಂದಿದ್ದ. ಮರುದಿನ ವಿಷಪೂರಿತ ಹಸುವಿನ ಮಾಂಸ ತಿಂದು ಹುಲಿ ಮರಿಗಳು ಸತ್ತಿದ್ದವು. ಇತ್ತ ಹುಲಿಗಳು ಸತ್ತಿದ್ದನ್ನು ನೋಡಿ ಮಾದುರಾಜು ಸಂತಸ ಪಟ್ಟಿದ್ದ. ವಿಚಾರಣೆ ವೇಳೆ ಆರೋಪಿಗಳು ಒಂದೊಂದೆ ಸತ್ಯವನ್ನು ಬಾಯ್ಬಿಡುತ್ತಿದ್ದಾರೆ.
ಮಗನನ್ನು ಬಚಾವ್ ಮಾಡಲು ಮುಂದಾಗಿದ್ದ ತಂದೆ
ಪ್ರಕರಣ ಬೆನ್ನಲ್ಲೇ ಮಾದ ಅಲಿಯಾಸ್ ಮಾದುರಾಜು ಪರಾರಿಯಾಗಿದ್ದ. ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೊಪ್ಪ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಮಾದುರಾಜು ನನ್ನು ಬಂಧಿಸಲಾಗಿದೆ.
ಪೊಲೀಸರು ವಿಚಾರಣೆ ನಡೆಸಿದಾಗ ಮಾದ ಆರೋಪಿ ಎಂಬುದು ದೃಢವಾಗಿದ್ದು, ತನ್ನ ಹಸುವನ್ನ ಕೊಂದಿದ್ದಕ್ಕೆ ವಿಷ ಹಾಕಿರುವುದಾಗಿ ಮಾದ ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ್ದಾರೆ. ಆದರೆ ಪುತ್ರ ಮಾದನನ್ನು ಬಚಾವ್ ಮಾಡಲು ತಂದೆ ಶಿವಣ್ಣ ನಾನೇ ವಿಷ ಹಾಕಿರುವುದಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದರು. ಹಾಗಾಗಿ ಮಾದ ತಂದೆ ಶಿವಣ್ಣನನ್ನು ಪ್ರಕರಣದಿಂದ ಕೈಬಿಡಲಾಗಿದೆ.
ತನಿಖಾ ತಂಡದಲ್ಲಿ ಬದಲಾವಣೆ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ತನಿಖಾ ತಂಡದ ಮುಖ್ಯಸ್ಥರಾಗಿ ಪಿಸಿಸಿಎಫ್ ರವಿ ಬದಲಾಗಿ ಎಪಿಸಿಸಿಎಫ್ (APCCF) ಕುಮಾರ್ ಪುಷ್ಕರ್ ಅವರನ್ನು ನೇಮಕ ಮಾಡಲಾಗಿದೆ. ಪಿಸಿಸಿಎಫ್ ರವಿ ಕೋರಿಕೆ ಮೇರೆಗೆ ತನಿಖಾ ತಂಡದ ಮುಖ್ಯಸ್ಥರ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: 5 ಹುಲಿಗಳ ಅಂತ್ಯಕ್ರಿಯೆ: ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಎಪಿಸಿಸಿಎಫ್ ಶ್ರೀನಿವಾಸಲು, ಎನ್‌ಟಿಸಿಎ ಪ್ರತಿನಿಧಿ ಮಲ್ಲೇಶಪ್ಪ, ಮೈಸೂರು ಮೃಗಾಲಯದ ಪಶುವೈದ್ಯಾಧಿಕಾರಿ ಶಶಿಧರ್ ವನ್ಯಜೀವಿ ತಜ್ಞ ಡಾ.ಸಂಜಯ್‌ಗುಬ್ಬಿ ಅವರನ್ನು ತನಿಖಾ ತಂಡ ಒಳಗೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:54 am, Sat, 28 June 25







