ಮಲೆಮಹದೇಶ್ವರ ಅರಣ್ಯದಲ್ಲಿ ಹುಲಿಗಳ ಅಸಹಜ ಸಾವು ಪ್ರಕರಣ: ಐವರನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಹುಲಿಗಳ ಮೃತದೇಹಗಳ ಬಳಿ ವಿಷಪ್ರಾಶನಗೊಂಡ ಹಸುವಿನ ಶವ ಕಂಡುಬಂದಿದೆ. ಅರಣ್ಯ ಇಲಾಖೆ ಐದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಉನ್ನತ ಮಟ್ಟದ ತಂಡವನ್ನು ರಚಿಸಿದೆ. ಮರಣೋತ್ತರ ಪರೀಕ್ಷೆಯ ವರದಿ ನಿರೀಕ್ಷಿಸಲಾಗುತ್ತಿದೆ.

ಚಾಮರಾಜನಗರ, ಜೂನ್ 27: ಚಾಮರಾಜನಗರ (Chamarajnagara) ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು (Tiger) ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸಂಭಂದ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಆಶ್ವಾಸನೆ ನೀಡಿದೆ. ಹುಲಿಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದ್ದು, ವರದಿ ಕೈಸೇರಿದ ಬಳಿಕ ಸಾವಿಗೆ ನಿಖರ ಕಾರಣ ಏನೆಂಬುದು ಗೊತ್ತಾಗಲಿದೆ.
ಗ್ರಾಮಸ್ಥರ ವಿಚಾರಣೆ
ಹುಲಿ ಸಾವು ಸಂಬಂಧ ಮೀಣ್ಯಂ ಅರಣ್ಯ ಪ್ರದೇಶ ಸಮೀಪದ ಗ್ರಾಮಸ್ಥರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಗ್ರಾಮಸ್ಥರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ. ಹಸುವಿನ ಕಳೇಬರದ ಬಳಿ ಕರೆದುಕೊಂಡು ಹೋಗಿ ಯಾರು ಅದರ ಮಾಲೀಕರು ಎಂಬುದನ್ನೂ ವಿಚಾರಣೆ ಮಾಡಲಾಗುತ್ತಿದೆ.
ಹುಲಿಗಳ ಮೃತದೇಹಗಳು ದೊರೆತ ಸ್ಥಳದಲ್ಲಿಯೇ ಹಸುವಿನ ಶವ ಕೂಡ ಸಿಕ್ಕಿದ್ದು, ಹುಲಿಗಳಿಗೆ ವಿಶಪ್ರಾಷನ ಮಾಡಿಸಿರುವ ಶಂಕೆಗೆ ಕಾರಣವಾಗಿದೆ. ಹಸುವಿನ ಮೃತ ದೇಹದ ಬಾಲ ತುಂಡಾಗಿರುವುದು ಕಂಡು ಬಂದಿದೆ. ಹೀಗಾಗಿ, ಸತ್ತ ಹಸುವಿಗೆ ಯಾರೋ ವಿಷ ಸಿಂಪಡಿಸಿರುವ ಸಾಧ್ಯತೆ ಇದೆ. ಅದನ್ನು ತಿಂದು ಹುಲಿ ಮತ್ತು ಹುಲಿ ಮರಿಗಳು ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ನಂತರ ಸತ್ಯ ಏನೆಂಬುದು ಗೊತ್ತಾಗಲಿದೆ.
ಹೂಗ್ಯಂ ಅರಣ್ಯ ವಲಯದ ಮೀಣ್ಯಂ ಸಮೀಪ ಮಹದೇಶ್ವರ ಗುಡಿ ಬಯಲಿನಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳ ಮೃತದೇಹಗಳು ಕಂಡುಬಂದಿದ್ದವು. ಬುಧವಾರ ಅರಣ್ಯಸಿಬ್ಬಂದಿ ಗಸ್ತಿನ ವೇಳೆ ಹುಲಿಗಳ ಮೃತದೇಹಗಳು ಪತ್ತೆಯಾಗಿದ್ದು ಅನತಿ ದೂರದಲ್ಲಿ ಹಸುವೊಂದರ ಮೃತದೇಹವೂ ಕಂಡು ಬಂದಿತ್ತು.
ಇದನ್ನೂ ಓದಿ: ಮಲೆಮಹದೇಶ್ವರ ಅರಣ್ಯದಲ್ಲಿ 4 ಹುಲಿಗಳ ಅಸಹಜ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಸಚಿವರ ಆದೇಶ
ಐದು ಹುಲಿಗಳು ಒಮ್ಮಲೇ ಮೃತಪಟ್ಟಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ತನಿಖೆಗೆ ಪಿಸಿಸಿಎಫ್ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಿ ಗುರುವಾರ ಸಂಜೆ ಆದೇಶ ಹೊರಡಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಅಥವಾ ವಿಷಪ್ರಾಶನದಿಂದ ಮೃತಪಟ್ಟಿದ್ದರೆ ಅದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಚಿವರು ಈಗಾಗಲೇ ಆದೇಶಿಸಿದ್ದಾರೆ. ಸದ್ಯ ಆರು ಮಂದಿಯ ತನಿಖಾ ತಂಡ ತನಿಖೆ ನಡೆಸುತ್ತಿದೆ. ಪಿಸಿಸಿಎಫ್ ರವಿ,ಎಪಿಸಿಸಿಎಫ್ ಶ್ರೀನಿವಾಸಲು,ಸಿಎಫ್ ಹೀರಾಲಾಲ್, ಎನ್ಟಿಸಿಎ ಪ್ರತಿನಿಧಿ ಮಲ್ಲೇಶಪ್ಪ, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹಾಗೂ ಮೈಸೂರು ಮೃಗಾಲಯದ ಪಶು ವೈದ್ಯಾಧಿಕಾರಿಕಾರಿ ಈ ತಂಡದಲ್ಲಿದ್ದಾರೆ. 14 ದಿನಗಳ ಒಳಗೆ ವರದಿ ಸಲ್ಲಿಸಲು ತನಿಖಾ ತಂಡಕ್ಕೆ ಸೂಚಿಸಲಾಗಿದೆ.







