ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ18 ಕೋತಿಗಳ ಶವ ಪತ್ತೆ, ವಿಷಪ್ರಾಶನ ಶಂಕೆ
ವ್ಯಾಘ್ರಗಳ ಹತ್ಯಾಕಾಂಡದ ಕಹಿ ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ಬಳಿ 18 ಕೋತಿಗಳ ಮೃತದೇಹ ಪತ್ತೆಯಾಗಿದೆ. ವಿಷವಿಕ್ಕಿ ಮಂಗಗಳನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಲಿಗಳಿಗೆ ವಿಷವಿಕ್ಕಿ ಹತ್ಯೆ ಮಾಡಿದ್ದು ದೃಢಪಟ್ಟಿದೆ. ಮಂಗಗಳಿಗೆ ಏನಾಯಿತು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಚಾಮರಾಜನಗರ, ಜುಲೈ 2: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ 18 ಕೋತಿಗಳ ಶವ (Monkey Dead Bodies) ಪತ್ತೆಯಾಗಿದೆ. ಕೋತಿಗಳನ್ನು ವಿಷವಿಕ್ಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೋತಿಗಳಿಗೆ ಬೇರೆಡೆ ವಿಷ ಹಾಕಿ ಕೊಂದು ನಂತರ ಇಲ್ಲಿ ತಂದು ಹಾಕಿರುವ ಅನುಮಾನವೂ ವ್ಯಕ್ತವಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ವಿಷವಿಕ್ಕಿ ಕೊಂದಿರುವುದು ಖಚಿತ: ಪಶು ವೈದ್ಯ ಡಾ. ಮಹದೇಶ್
ಕೋತಿಗಳಿಗೆ ವಿಷವಿಕ್ಕಿ ಕೊಲೆ ಮಾಡಿರುವುದು ಖಚಿತ ಎಂದು ವೈದ್ಯ ಡಾ. ಮಹದೇಶ್ ಹೇಳಿದ್ದಾರೆ. ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ ಅವರು, ಒಟ್ಟು 18 ಕೋತಿಗಳು ಸಾವನ್ನಪ್ಪಿವೆ. ಎರಡು ಕೋತಿಗಳು ಜೀವಂತವಾಗಿದ್ದವು. ನಿತ್ರಾಣಗೊಂಡ ಅವುಗಳನ್ನು ಈಗಾಗಲೇ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದೇವೆ. ಚಿಕಿತ್ಸೆ ಪಡೆಯುತ್ತಿರುವ ಕೋತಿಗಳು ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿವೆ. ಇನ್ನು ಮೂರು ಕೋತಿಗಳಿಗೆ ಪ್ರಜ್ಞೆಯಿದ್ದು ಪರಾರಿಯಾಗಿವೆ ಎಂದು ತಿಳಿಸಿದ್ದಾರೆ.
ಕೋತಿಗಳಿಗೆ ವಿಷಹಾಕಿ ಕೊಲೆ ಮಾಡಿ ಬಳಿಕ ಗೋಣಿ ಚೀಲದಲ್ಲಿ ತಂದು ಎಸೆಯಲಾಗಿದೆ. ಕಂದೇಗಾಲ ಗ್ರಾಮದ ಹೊರವಲಯದಲ್ಲಿ ಸದ್ಯ 18 ಕೋತಿಗಳ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಕೋತಿಗಳ ಮೃತದೇಹಗಳು ನೀಲಿ ಬಣ್ಣಕ್ಕೆ ತಿರುಗಿವೆ. ಈಗ ಮೃತಪಟ್ಟ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತೇವೆ. ಕೋತಿಗಳ ಅಂಗಾಂಗಗಳ ಸ್ಯಾಂಪಲ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ವರದಿ ಬಂದ ಬಳಿಕ ಯಾವ ವಿಷ ನೀಡಿ ಕೊಲ್ಲಲಾಗಿದೆ ಎಂಬುದು ತಿಳಿಯಲಿದೆ ಎಂದು ಪಶು ವೈದ್ಯ ಡಾ. ಮಹದೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಹುಲಿ ಹಂತಕರು 3 ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ
ಮಲೆಮಹದೇಶ್ವರಬೆಟ್ಟ ವನ್ಯಧಾಮ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಐದು ಹುಲಿಗಳು ಅಸಹಜವಾಗಿ ಸಾವನ್ನಪ್ಪಿದ್ದವು. ತನಿಖೆಯ ನಂತರ ಹುಲಿಗಳಿಗೆ ವಿಷವಿಕ್ಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ನಂತರ ಆರೋಪಿಗಳನ್ನು ಬಂಧಿಸಲಾಗಿತ್ತು. ಜೂನ್ 23ರಂದು ಕೊಳ್ಳೇಗಾಲದ ಮೀಣ್ಯಂ ಅರಣ್ಯದಲ್ಲಿ ಹಸುವೊಂದನ್ನು ಹುಲಿ ಬೇಟೆಯಾಡಿತ್ತು. ಆರೋಪಿಗಳು, ಅದೇ ಹಸುವಿನ ದೇಹಕ್ಕೆ ವಿಷ ಬೆರೆಸಿದ್ದರು. ವಿಷಬೆರೆತ ಹಸುವಿನ ದೇಹವನ್ನು ತಿಂದಿದ್ದರಿಂದಲೇ ಹುಲಿ ಮತ್ತು 4 ಮರಿಗಳು ಪ್ರಾಣಬಿಟ್ಟಿರುವುದು ಈಗಾಗಲೇ ದೃಢಪಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:16 am, Wed, 2 July 25







