ಕಾನೂನು ಸಚಿವರ ಕ್ಷೇತ್ರದಲ್ಲೇ ಕಾನೂನಿಗಿಲ್ಲ ಕಿಮ್ಮತ್ತು! ಕಿರಾಣಿ ಅಂಗಡಿ, ಹೋಟೆಲ್, ಮನೆಗಳಲ್ಲೂ ಮದ್ಯ ಮಾರಾಟ
ಕಾನೂನು ಸಚಿವರ ತವರು ಕ್ಷೇತ್ರದಲ್ಲೇ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಕಿರಾಣಿ, ಹೋಟೆಲ್, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಈ ಅಕ್ರಮದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ನಾವೇ ಅಂಗಡಿಗಳಿಗೆ ನುಗ್ಗಿ ಹೊಡೆಯುತ್ತೇವೆ ಎಂದು ಅಬಕಾರಿ ಇಲಾಖೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಗದಗ, ಜುಲೈ 2: ಕಾನೂನು ಸಚಿವ ಎಚ್ಕೆ ಪಾಟೀಲ್ (HK Patil) ತವರಾದ ಗದಗ (Gadag) ತಾಲೂಕಿನ ಮಲ್ಲಸಮುದ್ರ ಗ್ರಾದಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ. ಕಿರಾಣಿ ಅಂಗಡಿ, ಹೋಟೆಲ್ ಹಾಗೂ ಮನೆಗಳಲ್ಲಿ ಕದ್ದುಮುಚ್ಚಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಕುಡುಕರು ಎಲ್ಲಿದ್ದರೂ ಅಲ್ಲಿಗೇ ವಿತರಣೆ ಮಾಡುವ ವ್ಯವಸ್ಥೆಯೂ ಈ ಗ್ರಾಮದಲ್ಲಿದೆ! ಹೀಗಾಗಿ ಬೆಳಗ್ಗೆ ಎದ್ದರೆ ಸಾಕು ಇಲ್ಲಿನ ಗ್ರಾಮದ ಜನರು ಚಹಾ, ಹಾಲು ಕುಡಿಯುತ್ತಾರೋ ಇಲ್ಲವೋ ಗೋತ್ತಿಲ್ಲ. ಅಲ್ಕೋ ಹಾಲ್ ಮಾತ್ರ ಭರ್ಜರಿಯಾಗಿ ಏರಿಸುತ್ತಾರೆ. ದುಡಿದ ಹಣವೆಲ್ಲಾ ಎಣ್ಣೆ ಹೊಡೆಯಲು ಹಾಳು ಮಾಡುತ್ತಾರೆ. ಹೀಗಾಗಿ ಬಡ ಕುಟುಂಬಗಳು ಅಕ್ಷರಶಃ ವಿಲವಿಲ ಒದ್ದಾಡುವಂತಾಗಿದೆ.
ಸಾರಾಯಿ ಮುಕ್ತ ಗ್ರಾಮದಲ್ಲಿ ಮತ್ತೆ ಅಕ್ರಮ ಮದ್ಯ ಮಾರಾಟ ಹಾವಳಿ
ಕಳೆದ ಎರಡ್ಮೂರು ವರ್ಷ ಈ ಗ್ರಾಮ ಸಾರಾಯಿ ಮುಕ್ತವಾಗಿತ್ತು. ಆದರೆ, ಮತ್ತೆ ಈಗ ಮೂರು ತಿಂಗಳುಗಳಿಂದ ಅಕ್ರಮ ಮಧ್ಯ ಮಾರಾಟ ಬಲು ಜೋರಾಗಿದೆ. ಹೀಗಾಗಿ ಬಡ ಕುಟುಂಬಗಳ ಯಜಮಾನರು, ಯುವಕರು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬಗಳ ನೆಮ್ಮದಿಯೇ ಹಾಳಾಗಿ ಹೋಗಿದೆ. ಅಬಕಾರಿ ಇಲಾಖೆ ತಕ್ಷಣ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು. ಇಲ್ಲವಾದರೆ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳಿಗೆ ನಾವೇ ನುಗ್ಗಬೇಕಾಗುತ್ತೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿಗೆ ಮಹಿಳೆಯರ ಆಕ್ರೋಶ
ಜಿಲ್ಲಾಡಳಿತದ ಕೂಗಳತೆಯಲ್ಲಿರುವ ಮಲ್ಲಸಮುದ್ರ ಗ್ರಾಮ ಕಾನೂನು ಸಚಿವ ಎಚ್ಕೆ ಪಾಟೀಲ್ ಪ್ರತಿನಿಧಿಸುವ ಕ್ಷೇತ್ರ. ಕಾನೂನು ಸಚಿವರ ಕ್ಷೇತ್ರದಲ್ಲೇ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿರುವುದು ವಿಚಿತ್ರ ಆದರೂ ಸತ್ಯ. ಅಕ್ರಮ ಮದ್ಯ ಮಾರಾಟದ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಅಬಕಾರಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಕ್ರಮ ಆಗಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್ ಚಕ್ರ: ಮುಂದೇನಾಯ್ತು?
ಅಕ್ರಮದ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಅವರಿಗೆ ಸಚಿವರು, ಸರ್ಕಾರದ ಭಯವೇ ಇಲ್ಲದಂತೆ ಆಗಿದೆ ಎಂದು ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಕ್ಷೇತ್ರದ ಶಾಸಕರೂ ಆದ ಸಚಿವ ಎಚ್ಕೆ ಪಾಟೀಲ್ ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮೂಲಕ ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಬೇಕಿದೆ ಎಂದು ಮಹಿಳೆಯರು ಆಗ್ರಹಿಸಿದ್ದಾರೆ.







