ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ! ನಾನ್ ಸ್ಟಾಪ್ ಬಸ್ಗಳಿಗೆ ಭರ್ಜರಿ ಬೇಡಿಕೆ
ನಮ್ಮ ಮೆಟ್ರೋ ಯೆಲ್ಲೋ ಲೈನ್ ಮಾರ್ಗ ಉದ್ಘಾಟನೆಗೆ ಕಾಲವೇ ಕೂಡಿ ಬರುತ್ತಿಲ್ಲ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಎಂಟಿಸಿ, ಈ ಮಾರ್ಗಕ್ಕೆ ಭರ್ಜರಿ ಯೋಜನೆ ರೂಪಿಸಿ, ಹೆಚ್ಚು ಪ್ರಯಾಣಿಕರನ್ನು ಸೆಳೆಯುತ್ತಿದೆ. ಅದ್ಹೇಗೆ? ಅದೇನು ಯೋಜನೆ? ಇಲ್ಲಿದೆ ವಿವರ.

ಬೆಂಗಳೂರು, ಜುಲೈ 2: ಮೆಟ್ರೋ ಯೆಲ್ಲೋ (Namma Metro Yellow Line) ಮಾರ್ಗ ಉದ್ಘಾಟನೆ ಯಾವಾಗ ಎಂಬ ಸ್ಪಷ್ಟತೆ ಇನ್ನೂ ಇದ್ದ ಹಾಗೇ ಕಾಣಿಸುತ್ತಿಲ್ಲ. ಜನ ಕೂಡ ಈ ಬಗ್ಗೆ ನಂಬಿಕೆ ಬಿಟ್ಟಿದ್ದಾರೆ. ಆದರೆ, ಬಿಎಂಟಿಸಿ (BMTC) ಇದರ ಉಪಯೋಗ ಪಡೆಯಲು ಮುಂದಾಗಿದೆ. ಅದು ಕೂಡ ಹೊಸ ರೀತಿಯ ಬಸ್ ಮಾರ್ಗ ಪರಿಚಯಿಸುವ ಮೂಲಕ. ಹನ್ನೆರಡು ದಿನದ ಹಿಂದಷ್ಟೇ ಬಿಎಂಟಿಸಿ ಬೆಂಗಳೂರಿಗರ ಸಮಯ ಉಳಿತಾಯದ ಕಾರಣ ಹೊಸ ವೇಗದೂತ ಬಸ್ಗಳನ್ನು ಪರಿಚಯ ಮಾಡಿತ್ತು. ಸಾಮಾನ್ಯ ಬಸ್ ದರದಲ್ಲಿ ನಗರದ ಆಯ್ದ ಪ್ರದೇಶಗಳಿಗೆ ವೇಗದೂತ ಬಸ್ಗಳ ಸಂಪರ್ಕ ಒದಗಿಸಲು ಮುಂದಾಗಿತ್ತು. ಅಂದರೆ, ಒಂದು ಕಡೆಯಿಂದ ತಲುಪಬೇಕಿರುವ ಮತ್ತೊಂದು ಸ್ಥಳಕ್ಕೆ ಕೇವಲ ಎರಡ್ಮೂರು ಸ್ಟಾಪ್ ಮಾತ್ರ ಕೊಟ್ಟು, ಎರಡೂವರೆ ಗಂಟೆ ಸಮಯದ ಪ್ರಯಾಣವನ್ನು ಕೇವಲ 40 ನಿಮಿಷಕ್ಕೆ ಇಳಿಸುವ ಮೂಲಕ ವೇಗದ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿತ್ತು.
ಅದರಲ್ಲಿ ಯಾವಾಗಲೂ ಟ್ರಾಫಿಕ್, ಹೆಚ್ಚು ಜನಸಂದಣಿ ಇರುವ ಪ್ರದೇಶಗಳಾದ ನಮ್ಮ ಮೆಟ್ರೋದ ಉದ್ದೇಶಿತ ಯೆಲ್ಲೋ ಮಾರ್ಗ ಕೂಡ ಒಂದು. ಈ ಮಾರ್ಗದಲ್ಲಿ ಮೆಜೆಸ್ಟಿಕ್ ಟು ಅತ್ತಿಬೆಲೆ, ಬನಶಂಕರಿ ಟು ಅತ್ತಿಬೆಲೆ ಮಾರ್ಗಕ್ಕೆ ನಿತ್ಯ ನಾನ್ ಸ್ಟಾಪ್ 343 ಟ್ರಿಪ್ ಸೇವೆ ಒದಗಿಸುವ ಮೂಲಕ ಬಿಎಂಟಿಸಿ ಜನರಿಗೆ ನೆರವಾಗಿದೆ. ಇದರಿಂದ ಮೆಟ್ರೋ ಇಲ್ಲದೆ, ಸಾಮಾನ್ಯ ಬಸ್ನಲ್ಲಿ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗದ ಐಟಿ ಉದ್ಯೋಗಿಗಳಿಗೆ ಪ್ರಯೋಜನವಾಗಿದೆ. ಈ ಮೂಲಕ ಬಿಎಂಟಿಸಿ ಯೆಲ್ಲೋ ಲೈನ್ ಮೆಟ್ರೋ ಇಲ್ಲ ಅನ್ನುವ ಕೊರಗು ನೀಗಿಸುವ ಜೊತೆಗೆ, ಕಡಿಮೆ ಸಮಯದ ಪ್ರಯಾಣದ ಮೂಲಕ ಜನರನ್ನು ಆಕರ್ಷಣೆ ಮಾಡುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಆರ್ಟಿಓ ಅಧಿಕಾರಿಗಳು: ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋಗಳು ಸೀಜ್
ಎಕ್ಸ್ಪ್ರೆಸ್ ಮಾರ್ಗ ಆರಂಭವಾದ ಹದಿನೈದು ದಿನಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ ಎರಡು ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಈ ಎಕ್ಸ್ಪ್ರೆಸ್ ಬಸ್ಗಳಲ್ಲಿ ಪ್ರತಿದಿನ 13 ರಿಂದ 14 ಸಾವಿರ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, 48 ಬಸ್ಸುಗಳಿಂದ 343 ಟ್ರಿಪ್ ಮಾಡಲಾಗ್ತಿದೆ. ಈ ಬಸ್ ಸೇವೆ ಬಗ್ಗೆ ಪ್ರಯಾಣಿಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.